ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವನಗುಡಿ ಕ್ಷೇತ್ರ ಸ್ಥಿತಿ-ಗತಿ| ಬಿಜೆಪಿ ಭದ್ರ ನೆಲೆ ವಶಕ್ಕೆ ಕಸರತ್ತು

ಕರ್ನಾಟಕ ವಿಧಾನಸಭಾ ಚುನಾವಣೆ 2023
Last Updated 22 ಜನವರಿ 2023, 22:17 IST
ಅಕ್ಷರ ಗಾತ್ರ

ಬೆಂಗಳೂರು: ಬಸವನಗುಡಿ ಕ್ಷೇತ್ರ ಕಳೆದ ಕೆಲವು ಚುನಾವಣೆಗಳಿಂದ ಬಿಜೆಪಿಯ ಭದ್ರ ನೆಲೆಯಾಗಿ ಬದಲಾಗಿದ್ದು, ಈ ಬಾರಿ ಚುನಾವಣೆಯಲ್ಲಿ ಬಿಜೆಪಿಯ ಬಂಡಾಯದ‌ ಲಾಭ ಪಡೆಯಲು ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಮುಂದಾಗಿವೆ.

2013 ಹಾಗೂ 2018ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಹಿಂದಿಕ್ಕಿ ಜೆಡಿಎಸ್‌ ಎರಡನೇ ಸ್ಥಾನಕ್ಕೆ ಬಂದಿದೆ. ಹೀಗಾಗಿ, ಚುನಾವಣೆ ದಿನಾಂಕ ಘೋಷಣೆಗೂ ಮುನ್ನವೇ ಜೆಡಿಎಸ್‌ ಅಭ್ಯರ್ಥಿಯ ಹೆಸರು ಘೋಷಿಸಿದೆ. ಕ್ಷೇತ್ರದಲ್ಲಿ ಅರಮನೆ ಶಂಕರ್‌ ಸಂಚಾರ ಆರಂಭಿಸಿದ್ದಾರೆ. ಕಾಂಗ್ರೆಸ್‌ ಮಾತ್ರ ಅಭ್ಯರ್ಥಿಯ ಹುಡುಕಾಟದಲ್ಲಿದೆ.

ಬೆಂಗಳೂರಿನ ಹಳೇ ಮಾದರಿ ಉಳಿಸಿಕೊಂಡೇ ಆಧುನಿಕತೆಗೆ ತೆರೆದುಕೊಂಡಿರುವ ಕ್ಷೇತ್ರದಲ್ಲಿ ಇಂದಿಗೂ ಕಡಲೆ ಕಾಯಿ ಪರಿಷೆ ಹಾಗೂ ದೇವರ ಉತ್ಸವಗಳು ನಡೆಯುತ್ತಿವೆ. ಕ್ಷೇತ್ರ ಮೇಲ್ನೋಟಕ್ಕೆ ಶಾಂತವಾಗಿ ಕಂಡರೂ ರಾಜಕೀಯವು ಅಷ್ಟೇ ಜಿದ್ದಾಜಿದ್ದಿನಿಂದ ಕೂಡಿದೆ.

ಬಸವನಗುಡಿಯಲ್ಲಿ ಬಿಜೆಪಿ ಐದು ಬಾರಿ ಜಯಿಸಿದೆ. ಅದರಲ್ಲಿ ಹಾಲಿ ಶಾಸಕ ರವಿ ಸುಬ್ರಹ್ಮಣ್ಯ ಅವರೇ ಸತತ ಮೂರು ಬಾರಿ ಆಯ್ಕೆಯಾಗಿ ಕ್ಷೇತ್ರದ ಮೇಲೆ ಹಿಡಿತ ಸಾಧಿಸಿದ್ದಾರೆ.

ರವಿ ಸುಬ್ರಹ್ಮಣ್ಯ ಮತ್ತೊಮ್ಮೆ ಬಿಜೆಪಿಯಿಂದ ಕಣಕ್ಕಿಳಿಯಲು ಪ್ರಬಲ ಆಕಾಂಕ್ಷಿ. ಅವರ ವಿರುದ್ಧ ಸ್ವಪಕ್ಷದಲ್ಲೇ ಅಸಮಾಧಾನವಿದೆ. ಕೋವಿಡ್‌ ವೇಳೆ ಲಸಿಕೆ ಮಾರಾಟ ಪ್ರಕರಣ, ಖಾಸಗಿ ಆಸ್ಪತ್ರೆಗಳಲ್ಲಿ ಹಾಸಿಗೆ ಕಾಯ್ದಿರಿಸಿದ ಪ್ರಕರಣಗಳು ಇಲ್ಲಿ ದೊಡ್ಡ ಸದ್ದು ಮಾಡಿದ್ದವು. ‘ಒಂದೇ ಕುಟುಂಬಕ್ಕೆ ಎರಡು ಸ್ಥಾನಗಳು ಬೇಡ’ ಎನ್ನುವ ಸೂತ್ರಕ್ಕೆ ಬಿಜೆಪಿ ಮೊರೆ ಹೋದರೆ ಸಂಸದ ತೇಜಸ್ವಿ ಸೂರ್ಯ ಅವರ ಸಂಬಂಧಿಕರೂ ಆಗಿರುವ ರವಿ ಅವರಿಗೆ ಟಿಕೆಟ್‌ ಕೈತಪ್ಪುವ ಸಾಧ್ಯತೆಯಿದೆ ಎಂಬ ಮಾತು ಬಿಜೆಪಿಯಲ್ಲಿ ಕೇಳಿಬರುತ್ತಿದೆ.

ಕೇಂದ್ರದ ಮಾಜಿ ಸಚಿವ ದಿವಂಗತ ಅನಂತ ಕುಮಾರ್‌ ಅವರ ಪತ್ನಿ ತೇಜಸ್ವಿನಿ ಅನಂತಕುಮಾರ್‌ ಬಿಜೆಪಿ ಟಿಕೆಟ್‌ ನಿರೀಕ್ಷೆಯಲ್ಲಿದ್ದಾರೆ. ಕಳೆದ ವಿಧಾನಸಭೆ, ಲೋಕಸಭಾ ಚುನಾವಣೆಯಲ್ಲೂ ಅವರಿಗೆ ಟಿಕೆಟ್‌ ಸಿಕ್ಕಿರಲಿಲ್ಲ. ಇದರಿಂದ ಅವರು ಅಸಮಾಧಾನಗೊಂಡಿದ್ದರು. ಸುದ್ದಿ ವಾಹಿನಿಯ ಮುಖ್ಯಸ್ಥರೊಬ್ಬರ ಹೆಸರೂ ಈ ಕ್ಷೇತ್ರದ ಬಿಜೆಪಿ ಟಿಕೆಟ್‌ ಆಕಾಂಕ್ಷಿಗಳ ಪಟ್ಟಿಯಲ್ಲಿ ಸುಳಿದಾಡುತ್ತಿದೆ. ಚಕ್ರವರ್ತಿ ಸೂಲಿಬೆಲೆ ಅವರಿಗೆ ಬಸವನಗುಡಿ ಕ್ಷೇತ್ರಕ್ಕೆ ಟಿಕೆಟ್‌ ನೀಡಬೇಕೆಂದು ಕಾರ್ಯಕರ್ತರೇ ಒತ್ತಡ ಹೇರುತ್ತಿದ್ದಾರೆ ಎಂದು ಮುಖಂಡರೊಬ್ಬರು ಹೇಳಿದರು.

ಕೆಪಿಸಿಸಿ ವಕ್ತಾರ ಡಾ. ಶಂಕರ ಗುಹಾ, ವಿಧಾನ ಪರಿಷತ್‌ ಸದಸ್ಯ ಯು.ಬಿ .ವೆಂಕಟೇಶ್‌, 2004ರ ಚುನಾವಣೆಯಲ್ಲಿ ಗೆದ್ದಿದ್ದ ಕೆ. ಚಂದ್ರಶೇಖರ್‌ ಕಾಂಗ್ರೆಸ್‌ ಟಿಕೆಟ್‌ ಬಯಸಿ ಕೆಪಿಸಿಸಿಗೆ ಅರ್ಜಿ ಸಲ್ಲಿಸಿದ್ದಾರೆ. ಗುಹಾ ಅವರು ಸಹಕಾರ ಬ್ಯಾಂಕ್‌ಗಳ ಹಗರಣದಲ್ಲಿ ಗ್ರಾಹಕರ ಪರ ನಿರಂತರ ಹೋರಾಟ ನಡೆಸುತ್ತಿದ್ದಾರೆ. ಶ್ರೀನಗರ ವಾರ್ಡ್‌ ವ್ಯಾಪ್ತಿಯ ಮದ್ದೂರಮ್ಮ ಮೈದಾನದಲ್ಲಿ ಶಾಲೆ ನಿರ್ಮಾಣ ವಿರೋಧಿಸಿ ನಡೆದ ಹೋರಾಟದ ಮುಂದಾಳತ್ವವನ್ನೂ ಅವರು ವಹಿಸಿದ್ದರು.

ಆಮ್‌ ಆದ್ಮಿ ಪಕ್ಷದಿಂದ (ಎಎಪಿ) ಭಾಸ್ಕರ್‌ ರಾವ್‌ ಅವರು ಸ್ಪರ್ಧಿಸುವ ಸಾಧ್ಯತೆಯಿದೆ ಎಂದು ಮೂಲಗಳು ಹೇಳಿವೆ. ಬ್ರಾಹ್ಮಣರು ಹಾಗೂ ಒಕ್ಕಲಿಗರು ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿದ್ದಾರೆ. ರಾಜಕೀಯ ಪಕ್ಷಗಳೂ ಜಾತಿ ಲೆಕ್ಕಾಚಾರ ಆಧರಿಸಿಯೇ ಈ ಕ್ಷೇತ್ರಕ್ಕೆ ಟಿಕೆಟ್‌ ಹಂಚಿಕೆ ಮಾಡುವ ಸಾಧ್ಯತೆಯಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT