ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕ ಬಂದ್‌ ವಿರೋಧಿಸಿ 28ಕ್ಕೆ ಧರಣಿ

ಬಂದ್ ಕೈಬಿಡುವಂತೆ ಕೆಲ ಕನ್ನಡ ಪರ ಸಂಘಟನೆಗಳು ಒತ್ತಾಯ
Last Updated 26 ನವೆಂಬರ್ 2020, 20:36 IST
ಅಕ್ಷರ ಗಾತ್ರ

ಬೆಂಗಳೂರು: ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆ ವಿರೋಧಿಸಿ ಡಿ.5ರಂದು ವಾಟಾಳ್ ನಾಗರಾಜ್‌ ಕರೆ ನೀಡಿರುವ ಕರ್ನಾಟಕ ಬಂದ್‌ಗೆ ಕೆಲ ಕನ್ನಡ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದು, ಈ ಬಂದ್‌ ಕೈಬಿಡುವಂತೆ ಒತ್ತಾಯಿಸಿ ಇದೇ 28ರಂದು ಪುರಭವನದ ಬಳಿ ಧರಣಿ ಹಮ್ಮಿಕೊಂಡಿವೆ.

ಗುರುವಾರ ಇಲ್ಲಿ ಬಂದ್ ವಿರೋಧಿ ಹೋರಾಟ ಸಮಿತಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಭರತ್ ಶೆಟ್ಟಿ ಮಾತನಾಡಿ, ‘ಕರ್ನಾಟಕ ಬಂದ್‌ಗೆ ರಾಜ್ಯದ ಜನತೆಯ ಸಹಮತವಿಲ್ಲ. ವಾಟಾಳ್ ನಾಗಾರಾಜ್ ಅವರು ತಮ್ಮ ಸ್ವಾರ್ಥಕ್ಕಾಗಿ ಈ ಬಂದ್‌ಗೆ ಕರೆ ನೀಡಿದ್ದಾರೆ. ಅವರು ರಾಜ್ಯದ ಜನತೆಯ ಹಿತದೃಷ್ಟಿಯಿಂದ ತಮ್ಮ ನಿರ್ಧಾರದಿಂದ ಹಿಂದೆ ಸರಿಯಬೇಕು. ಕೋವಿಡ್‌ನಿಂದ ಜನರು ಈಗಾಗಲೇ ಸಂಕಷ್ಟಕ್ಕೀಡಾಗಿದ್ದಾರೆ. ಈ ಪರಿಸ್ಥಿತಿಯಲ್ಲಿ ಬಂದ್ ಮಾಡಿದಲ್ಲಿ ದಿನದ ದುಡಿಮೆಯನ್ನು ನಂಬಿಕೊಂಡ ವರ್ಗವು ಇನ್ನಷ್ಟು ಸಮಸ್ಯೆ ಎದುರಿಸಲಿದೆ. ಹೀಗಾಗಿ ಬಂದ್ ವಿರೋಧಿಸಿ ಧರಣಿ ನಡೆಸಲಾಗುತ್ತಿದೆ’ ಎಂದು ತಿಳಿಸಿದರು.

ನಿಗಮ ರದ್ದುಗೊಳಿಸಿ: ಅಂಬೇಡ್ಕರ್ ಸೇನೆಯ ರಾಜ್ಯ ಘಟಕದ ಅಧ್ಯಕ್ಷ ಪಿ. ಮೂರ್ತಿ ಮಾತನಾಡಿ, ‘ಮರಾಠ ಅಭಿವೃದ್ಧಿ ನಿಗಮವನ್ನು ಸ್ಥಾಪಿಸುವ ಅಗತ್ಯ ಇರಲಿಲ್ಲ. ಮುಂದಿನ ದಿನಗಳಲ್ಲಿ ಇಲ್ಲಿ ನೆಲೆಸಿರುವ ಅನ್ಯ ಭಾಷಿಗರು, ಹಿಂದುಳಿದ ಪಂಗಡದವರು ತಮಗೂ ನಿಗಮ ಬೇಕೆಂದು ದಂಬಾಲು ಬೀಳುವ ಸಾಧ್ಯತೆಯಿದೆ. ಆದ್ದರಿಂದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮರಾಠ ನಿಗಮ ಸ್ಥಾಪನೆಯನ್ನು ರದ್ದುಗೊಳಿಸಬೇಕು‘ ಎಂದರು.

ಕರ್ನಾಟಕ ಸಂರಕ್ಷಣಾ ವೇದಿಕೆ, ಅಖಿಲ ಭಾರತ ಕಾರ್ಮಿಕ ಹಿತರಕ್ಷಣಾ ವೇದಿಕೆ, ಅಖಿಲ ಭಾರತ ಕಾರ್ಮಿಕರ ಕ್ರಿಯಾ ಹಿತರಕ್ಷಣಾ ವೇದಿಕೆ, ಜಯ ಭಾರತ ರಕ್ಷಣಾ ವೇದಿಕೆ, ರಾಷ್ಟ್ರೀಯ ಮಹಿಳಾ ನ್ಯಾಯಪರ ವೇದಿಕೆ, ಕೃಷಿ ಮತ್ತು ಕಾರ್ಮಿಕ ರಕ್ಷಣಾ ವೇದಿಕೆ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT