ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ‘ನಮ್ಮ ಜಾತ್ರೆ’ಗೆ ರಂಗು ತುಂಬಿದ ಕಲಾತಂಡಗಳು

ಆಕರ್ಷಿಸಿದ ಪ್ರದರ್ಶನ, ಗಮನಸೆಳೆದ ವಸ್ತು ಪ್ರದರ್ಶನ
Published 10 ಡಿಸೆಂಬರ್ 2023, 14:49 IST
Last Updated 10 ಡಿಸೆಂಬರ್ 2023, 14:49 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಭಾನುವಾರ ನಡೆದ ‘ನಮ್ಮ ಜಾತ್ರೆ’ಯಲ್ಲಿ ನಾಡಿನ ಕಲಾತಂಡಗಳ ಸಂಗಮವೇ ಆಗಿತ್ತು. ಸಂಭ್ರಮ ಮೇಳೈಸುವ ಜೊತೆಗೆ ಕಲಾತಂಡಗಳ ಪ್ರದರ್ಶನ ಆಕರ್ಷಿಸಿತು. ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದಿದ್ದ ಕಲಾತಂಡಗಳು, ಜಾನಪದ ಸಂಭ್ರಮವನ್ನು ಕಳೆಗಟ್ಟುವಂತೆ ಮಾಡಿದವು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆವತಿಯಿಂದ ‘ಕರ್ನಾಟಕ ಸಂಭ್ರಮ–50’ರ ಅಂಗವಾಗಿ ಅನ್ ಬಾಕ್ಸಿಂಗ್ ಬೆಂಗಳೂರು ಭಾಗವಾಗಿ ವಿಧಾನಸೌಧ ಮೆಟ್ಟಿಲು ಬಳಿ ಆಯೋಜಿಸಿದ್ದ ‘ನಮ್ಮ ಜಾತ್ರೆ’ ಮೆರವಣಿಗೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಚಾಲನೆ ನೀಡಿದರು.

ನೂರಾರು ಕಲಾವಿದರು ಮೆರವಣಿಗೆಯ ಉದ್ದಕ್ಕೂ ಪ್ರದರ್ಶನ ನೀಡಿದರು. ವಿಧಾನಸೌಧದ ಆವರಣದಿಂದ ಆರಂಭವಾದ ಮೆರವಣಿಗೆ ಮಧ್ಯಾಹ್ನ 12ರ ವೇಳೆಗೆ ರವೀಂದ್ರ ಕಲಾಕ್ಷೇತ್ರ ತಲುಪಿತು.

ಮೆರವಣಿಗೆಯಲ್ಲಿ ‘ನಮ್ಮ ಜಾತ್ರೆ’ಯ ಫಲಕ ಹೊತ್ತು ಆನೆ ಸಾಗಿತು. ಕಹಳೆ, ಡೊಳ್ಳು, ಮಂಗಳ ವಾದ್ಯ, ಎತ್ತಿನ ಗಾಡಿಗಳು, ಹಗಲು ವೇಷಧಾರಿಗಳು, ಲಂಬಾಣಿ ನೃತ್ಯ, ನಂದಿ ಧ್ವಜ, ವೀರಗಾಸೆ, ಪಟ ಕುಣಿತ, ಹಲಗೆ, ಕೀಲು ಕುದುರೆ, ಮರಗಾಲು ಕುಣಿತ ಗಮನ ಸೆಳೆಯಿತು. ನೂರಾರು ಯುವತಿಯರು ಪೂರ್ಣಕುಂಭ ಹಿಡಿದು ಸಾಗಿದರು. ತಮಟೆಯ ಅಬ್ಬರಕ್ಕೆ ಯುವಕ–ಯುವತಿಯರು ಹೆಜ್ಜೆ ಹಾಕಿದರು.

ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ಕರಕುಶಲ ವಸ್ತುಗಳ ಮಾರಾಟ, ಪ್ರದರ್ಶನ ಮಳಿಗೆ ಸ್ಥಾಪಿಸಲಾಗಿತ್ತು. ಖಾದಿ ಬಟ್ಟೆ, ಕರಕುಶಲ ವಸ್ತುಗಳು, ಕಡಲೇಕಾಯಿ, ಮಂಡ್ಯದ ಬೆಲ್ಲ, ಕೊಡಗಿನ ಜೇನು ಹಾಗೂ ವೈನ್‌... ಹೀಗೆ ನಾನಾ ಪದಾರ್ಥಗಳನ್ನು ಮಾರಾಟಕ್ಕೆ ಇಡಲಾಗಿತ್ತು. ಜಾತ್ರೆಗೆ ಬಂದವರು ಉತ್ತರ ಕರ್ನಾಟಕದ ಊಟ ಸವಿಯಲು ಅವಕಾಶವಿದ್ದು ಸೋಮವಾರ ಸಹ ನಮ್ಮ ಜಾತ್ರೆ ನಡೆಯಲಿದೆ.

ವೇದಿಕೆ ಸಮಾರಂಭದಲ್ಲಿ ನಟಿ ಪೂಜಾ ಗಾಂಧಿ ಮಾತನಾಡಿ, ‘ಪ್ರತಿನಿತ್ಯ ಕನ್ನಡ ಜಾತ್ರೆ ನಡೆಯಬೇಕು. ಕನ್ನಡ ಭಾಷೆಯೆಂದರೆ ಸೌಂದರ್ಯ ಹಾಗೂ ಸೊಗಸು. ರಾಜ್ಯದಲ್ಲಿ ನೆಲೆಸಿರುವ ಅನ್ಯಭಾಷಿಕರೂ ಕನ್ನಡ ಕಲಿಯುವಂತೆ ಆಗಬೇಕು. ಕನ್ನಡ ನನಗೆ ಬದುಕು ಕೊಟ್ಟಿದೆ. ಕನ್ನಡದಿಂದ ನಾನು ಚಿತ್ರರಂಗದಲ್ಲಿ ಇದ್ದೇನೆ’ ಎಂದರು.

ತಮ್ಮ ಮಾತಿನಲ್ಲಿ ಬಸವೇಶ್ವರರ ವಚನವನ್ನು ಉಲ್ಲೇಖಿಸಿದ ಅವರು, ಕನ್ನಡ ನಾಡಿನಲ್ಲಿರುವ ಪ್ರತಿಯೊಬ್ಬರು ಕನ್ನಡದ ಬಗ್ಗೆ ಗೌರವ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಮಾತನಾಡಿ, ಕರ್ನಾಟಕ ನಾಮಕರಣದ ಸುವರ್ಣ ಮಹೋತ್ಸವದ ಅಂಗವಾಗಿ 12 ತಿಂಗಳು ಇಂತಹ ದೊಡ್ಡ ಕಾರ್ಯಕ್ರಮ ಆಯೋಜಿಸಲು ತೀರ್ಮಾನಿಸಲಾಗಿದೆ.

ನಾಲ್ಕು ಕಂದಾಯ ವಿಭಾಗಗಳಲ್ಲಿಯೂ ಮುಂದಿನ ನಾಲ್ಕು ತಿಂಗಳಲ್ಲಿ ಕಾರ್ಯಕ್ರಮ ಆಯೋಜಿಸಲಾಗುವುದು. ಆ ನಂತರ, ಬೆಂಗಳೂರಿನಲ್ಲಿ ದೊಡ್ಡ ಮಟ್ಟದಲ್ಲಿ ಮತ್ತೊಂದು ಸುವರ್ಣ ಸಂಭ್ರಮ ಕಾರ್ಯಕ್ರಮ ನಡೆಸಲಾಗುವುದು ಎಂದರು.

ಕನ್ನಡ ನಾಡಿನ ಭಾಷೆ ಮತ್ತು ಸಂಸ್ಕೃತಿ ಎಲ್ಲರನ್ನು ಆಕರ್ಷಿಸುವಂತಹದ್ದು. ಆದರೆ, ನಾವು ಬೆಂಗಳೂರಿನಲ್ಲಿ ಕನ್ನಡ ಭಾಷಾ ಬಳಕೆಯನ್ನು ಕಡಿಮೆ ಮಾಡಿದ್ದೇವೆ. ಅನ್ಯ ಭಾಷೆಯ ವ್ಯಮೋಹ ಬಿಡದೆ ಇದ್ದರೆ ಬೆಂಗಳೂರಿನಲ್ಲಿ ಕನ್ನಡದ ಬೆಳವಣಿಗೆ ಆಗಲಾರದು ಎಂದು ಎಚ್ಚರಿಸಿದರು.

ದೂರದ ಪಂಜಾಬಿನಿಂದ ಬಂದಿರುವ ನಟಿ ಪೂಜಾ ಗಾಂಧಿ ಅವರು ಕನ್ನಡ ಕಲಿತಿದ್ದಾರೆ. ಅವರಂತೆಯೇ ಕನ್ನಡ ಸಿನಿಮಾದಲ್ಲಿ ನಟಿಸುವ ಅನ್ಯಭಾಷೆಯ ಕಲಾವಿದರೂ ಕನ್ನಡ ಕಲಿಯಬೇಕು ಎಂದು ಮನವಿ ಮಾಡಿದರು.

ಸನಿವೃತ್ತ ಐಎಎಸ್‌ ಅಧಿಕಾರಿ ಚಿರಂಜೀವಿ ಸಿಂಗ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿ ಎನ್. ಮಂಜುಳಾ, ನಿರ್ದೇಶಕಿ ಧರಣಿ ದೇವಿ ಮಾಲಗತ್ತಿ, ಕಾದಂಬರಿ ಟ್ರಸ್ಟ್ ಸಂಸ್ಥಾಪಕರಾದ ಚಂದ್ರಜೈನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT