ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಲಕೇಶಿನಗರ: ‘ಕೈ’ಕೊಟ್ಟು ಸವಾರಿಗಿಳಿದ ‘ಆನೆ’

ಸಾಕ್ಷಾತ್ ಸಮೀಕ್ಷೆ: ಕಾಂಗ್ರೆಸ್‌ಗೆ ತಿರುಗೇಟು ನೀಡಲು ‘ಅಖಂಡ’ ಪೈಪೋಟಿ
Published 7 ಮೇ 2023, 21:54 IST
Last Updated 7 ಮೇ 2023, 21:54 IST
ಅಕ್ಷರ ಗಾತ್ರ

ಬೆಂಗಳೂರು: ಕೆ.ಜಿ. ಹಳ್ಳಿ, ಡಿ.ಜೆ. ಹಳ್ಳಿಯಲ್ಲಿ 2020ರಲ್ಲಿ ನಡೆದ ಗಲಭೆಯಿಂದ ಸುದ್ದಿಯಾದ ಕ್ಷೇತ್ರ ಪುಲಕೇಶಿ ನಗರ. 2018ರ ವಿಧಾನಸಭೆ ಚುನಾವಣೆಯಲ್ಲಿ ಇಡೀ ರಾಜ್ಯದಲ್ಲಿಯೇ ಅತೀ ಹೆಚ್ಚು 81,626 ಮತಗಳ ಅಂತರದಿಂದ ಗೆಲುವು ಕಂಡಿದ್ದ ಅಖಂಡ ಶ್ರೀನಿವಾಸಮೂರ್ತಿ ಅವರಿಗೆ ಈ ಘಟನೆಯ ಕಾರಣಕ್ಕೆ ಈ ಬಾರಿ ಕಾಂಗ್ರೆಸ್‌ ಟಿಕೆಟ್‌ ನಿರಾಕರಿಸಿದೆ.

ತನ್ನದಲ್ಲದ ತಪ್ಪಿಗೆ ಪಕ್ಷದ ನಾಯಕರು ಶಿಕ್ಷೆ ಕೊಟ್ಟಿದ್ದಾರೆಂದು ಮುನಿಸಿಕೊಂಡಿರುವ ಅಖಂಡ, ಕಾಂಗ್ರೆಸ್‌ಗೆ ಕೈಕೊಟ್ಟು ‘ಆನೆ’ಯೇರಿ (ಬಿಎಸ್‌ಪಿ) ಕ್ಷೇತ್ರದಲ್ಲಿ ಸವಾರಿಗಿಳಿದಿದ್ದಾರೆ. ಹೀಗಾಗಿ, ಪರಿಶಿಷ್ಟರಿಗೆ ಮೀಸಲಾದ ಈ ಕ್ಷೇತ್ರದ ಚುನಾವಣಾ ರೋಚಕತೆಯ ಕಾವು ಏರಿದೆ.

ದೇವನಹಳ್ಳಿ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಯಾಗಿದ್ದ ಎ.ಸಿ. ಶ್ರೀನಿವಾಸ್‌ ಅವರನ್ನು ಇಲ್ಲಿಗೆ ಕರೆದುಕೊಂಡು ಬಂದು ಕಾಂಗ್ರೆಸ್‌ ಕಣಕ್ಕೆ ಇಳಿಸಿದೆ. ಕಳೆದ ಮೂರೂ ಚುನಾವಣೆಗಳಲ್ಲಿ ಠೇವಣಿ ಉಳಿಸಿಕೊಳ್ಳಲು ಸಾಧ್ಯವಾಗದ ಬಿಜೆಪಿ, ಈ ಬಾರಿ ತನ್ನ ಬಲ ಪ್ರದರ್ಶಿಸಲು ಹೋರಾಟ ನಡೆಸುತ್ತಿದ್ದು, ಎ. ಮುರುಳಿ ಅವರನ್ನು ಕಣಕ್ಕೆ ಇಳಿಸಿದೆ. ಆದರೆ, ಪೈಪೋಟಿ ಮಾತ್ರ ಬಿಎಸ್‌ಪಿ– ಕಾಂಗ್ರೆಸ್‌ ನಡುವೆ ಇದೆ. ಕ್ಷೇತ್ರದಲ್ಲಿ ಮುಸ್ಲಿಂ ಮತ್ತು ಪರಿಶಿಷ್ಟರ ಮತಗಳೇ ನಿರ್ಣಾಯಕ. ಹೀಗಾಗಿ, ಎಸ್‌ಡಿಪಿಐ ಕೂಡ ಕಣ್ಣಿಟ್ಟಿದ್ದು, ಭಾಸ್ಕರ್‌ ಪ್ರಸಾದ್‌ ಅವರನ್ನು ಕಣಕ್ಕಿಳಿಸಿದೆ. ಮಹಿಳೆಗೆ ಜೆಡಿಎಸ್‌ ಟಿಕೆಟ್‌ ನೀಡಿದ್ದು, ಅನುರಾಧಾ ಕಣದಲ್ಲಿದ್ದಾರೆ.

ಪರಿಶಿಷ್ಟರು ಮತ್ತು ಮುಸ್ಲಿಂ ಸಮುದಾಯದಲ್ಲಿ ಅಖಂಡ ತಮ್ಮದೇ ಆದ ಹಿಡಿತ ಹೊಂದಿದ್ದಾರೆ. ಕೆ.ಜಿ. ಹಳ್ಳಿ, ಡಿ.ಜೆ. ಹಳ್ಳಿ ಗಲಭೆ ನಂತರ ಮುಸ್ಲಿಮರು ಅಖಂಡ ಅವರಿಂದ ಅಂತರ ಕಾಯ್ದುಕೊಂಡಿದ್ದಾರೆ ಎನ್ನುವುದು ಕಾಂಗ್ರೆಸ್‌ ನಾಯಕರ ಭಾವನೆ. ಆದರೆ, ಪರಿಶಿಷ್ಟರು ಅಖಂಡಗೆ ‘ಆನೆ’ ಬಲ ಕೊಡುವ ಸಾಧ್ಯತೆ ಇದೆ ಎನ್ನುವುದು ಕ್ಷೇತ್ರ ಹಲವರ ಅಭಿಪ್ರಾಯ.

ಕ್ಷೇತ್ರ ಮತ ಸಮೀಕರಣವನ್ನು ಅಳೆದು ತೂಗಿ ಎ.ಸಿ. ಶ್ರೀನಿವಾಸ್‌ ಅವರನ್ನು ಕಾಂಗ್ರೆಸ್‌ ಕಣಕ್ಕಿಳಿಸಿದೆ. ‘ಅಖಂಡ ಅವರಿಗೆ ಮುಸ್ಲಿಂ ಸಮುದಾಯ ಟಿಕೆಟ್‌ ನೀಡಬೇಡಿ ಎಂದಿದ್ದಕ್ಕೆ ಕಾಂಗ್ರೆಸ್‌ ಟಿಕೆಟ್‌ ನೀಡಿಲ್ಲ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಮುಸ್ಲಿಂ, ದಲಿತ ಮತಗಳು ಕಾಂಗ್ರೆಸ್‌ ಪಾಲಾಗಬಹುದು ಎಂಬ ನಿರೀಕ್ಷೆಯಲ್ಲಿ ಕಾಂಗ್ರೆಸ್‌ ನಾಯಕರಿದ್ದಾರೆ. ಬಿಜೆಪಿಗೆ ಇಲ್ಲಿ ನೆಲೆಯೇ ಇಲ್ಲ. ಕಳೆದ ಮೂರು ಚುನಾವಣೆಗಳಲ್ಲಿಯೂ ಬಿಜೆಪಿ ಠೇವಣಿ ಕಳೆದುಕೊಂಡಿದೆ. ಈ ಬಾರಿ ತಮಿಳು ಮತಗಳ ಮೇಲೆ ಕಣ್ಣಿಟ್ಟಿರುವ ಬಿಜೆಪಿ, ಇಲ್ಲಿ ತಮಿಳುನಾಡಿನ ಪಕ್ಷ ಎಐಎಡಿಎಂಕೆ ಬೆಂಬಲ ಪಡೆದಿದೆ. ಹೀಗಾಗಿ, ಎಐಎಡಿಎಂಕೆಯಿಂದ ನಾಮಪತ್ರ ಸಲ್ಲಿಸಿದ್ದ ಅನ್ಬರಸನ್‌ ನಾಮಪತ್ರ ಹಿಂಪಡೆದಿದ್ದಾರೆ.

ಪುಲಿಕೇಶಿನಗರ ಸೇರಿದಂತೆ ಅವಿಭಜಿತ ಯಲಹಂಕ ಕ್ಷೇತ್ರವನ್ನು ಬೂಸಾ ಚಳವಳಿಯ ಹರಿಕಾರ ದಿವಂಗತ ಬಸವಲಿಂಗಪ್ಪ ಪ್ರತಿನಿಧಿಸಿದ್ದರು. ಅದಾದ ಬಳಿಕ 2008ರಲ್ಲಿ ಕಾಂಗ್ರೆಸ್‌ನಿಂದ ಅವರ ಪುತ್ರ ಬಿ. ಪ್ರಸನ್ನ ಕುಮಾರ್‌ ಗೆದ್ದಿದ್ದರೆ, 2013 ಮತ್ತು 2018ರಲ್ಲಿ ಅಖಂಡ ಶ್ರೀನಿವಾಸ ಮೂರ್ತಿ ಸತತವಾಗಿ ಜೆಡಿಎಸ್‌ ಮತ್ತು ಕಾಂಗ್ರೆಸ್‌ನಿಂದ ಗೆಲುವು ಸಾಧಿಸಿದ್ದಾರೆ. ಈ ಬಾರಿ ಕಾಂಗ್ರೆಸ್‌ ಹಾಗೂ ಬಿಎಸ್‌ಪಿ ನಡುವೆ ದಲಿತ ಮತಗಳು ವಿಭಜನೆ ಆಗುವ ಸಾಧ್ಯತೆ ಇದೆ. ಬಿಜೆಪಿ, ಎಸ್‌ಡಿಪಿಐ ಪಡೆಯುವ ಮತಗಳ ಆಧಾರದಲ್ಲಿ ಕಾಂಗ್ರೆಸ್‌, ಬಿಎಸ್‌ಪಿ ಸೋಲು– ಗೆಲುವು ನಿರ್ಧಾರವಾಗಲಿದೆ ಎನ್ನುವುದು ಮತದಾರರ ಮಾತು.

ಎ.ಸಿ. ಶ್ರೀನಿವಾಸ್
ಎ.ಸಿ. ಶ್ರೀನಿವಾಸ್

ಕಣದಲ್ಲಿರುವ ಒಟ್ಟು ಅಭ್ಯರ್ಥಿಗಳು– 15

ಒಟ್ಟು ಮತದಾರರು- ‌239055

ಪುರುಷರು–120303

ಮಹಿಳೆಯರು–118714

ಇತರರು–38

ಫಲಿತಾಂಶದ ಹಿನ್ನೋಟ ಕ್ಷೇತ್ರ

ಪುಲಕೇಶಿ ನಗರ 2008– ಕಾಂಗ್ರೆಸ್, 2013– ಜೆಡಿಎಸ್, 2018– ಕಾಂಗ್ರೆಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT