ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಂಡ್ ಟನಲ್ ರಸ್ತೆ ವಿಸ್ತರಣೆ: ಒಂದೇ ಯೋಜನೆಯ ಹಣ 102 ಕಾಮಗಾರಿಗೆ ಹಂಚಿಕೆ

₹65 ಕೋಟಿ ಮೊತ್ತದ ಯೋಜನೆ ರದ್ದು
Last Updated 22 ಜನವರಿ 2022, 20:07 IST
ಅಕ್ಷರ ಗಾತ್ರ

ಬೆಂಗಳೂರು: ಬೆಳ್ಳಂದೂರು ವಾರ್ಡ್‌ನ ವಿಂಡ್ ಟನಲ್ ರಸ್ತೆ ಅಭಿವೃದ್ಧಿ ಯೋಜನೆಗೆ ರಕ್ಷಣಾ ಇಲಾಖೆಯಿಂದ (ಎಚ್‌ಎಎಲ್‌) ಭೂಮಿ ಪಡೆದುಕೊಳ್ಳಲು ವಿಫಲವಾಗಿರುವ ಬಿಬಿಎಂಪಿ, ಈ ಯೋಜನೆಯನ್ನೇ ರದ್ದುಪಡಿಸಿದೆ. ನಿಗದಿ ಮಾಡಿದ್ದ ₹65 ಕೋಟಿ ಮೊತ್ತವನ್ನು ಮಹದೇವಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 102 ಕಾಮಗಾರಿಗಳಿಗೆ ಹಂಚಿಕೆ ಮಾಡಿದೆ.

ಹೊರ ವರ್ತುಲ ರಸ್ತೆಗೆ ಸಂಪರ್ಕ ಕಲ್ಪಿಸಲು ಹಳೆ ವಿಮಾನ ನಿಲ್ದಾಣ ರಸ್ತೆಗೆ ಪರ್ಯಾಯವಾಗಿ ವಿಂಡ್ ಟನಲ್ ರಸ್ತೆ ಇದೆ. ಅತೀ ಕಿರಿದಾಗಿರುವ ಈ ರಸ್ತೆ ವಿಸ್ತರಣೆ ಮಾಡಲು 2018ರಲ್ಲಿ ಪ್ರಸ್ತಾಪಿಸಲಾಗಿತ್ತು. ‘ಮುಖ್ಯಮಂತ್ರಿಗಳ ನವ ಬೆಂಗಳೂರು’ ಯೋಜನೆಯಡಿ 2019ರಲ್ಲಿ ₹65 ಕೋಟಿಗೆ ಅನುಮೋದನೆಯನ್ನೂ ಸರ್ಕಾರ ನೀಡಿತ್ತು.

ರಸ್ತೆ ವಿಸ್ತರಣೆ ಮಾಡಿ ಅಭಿವೃದ್ಧಿಪಡಿಸಲು ಬಿಬಿಎಂಪಿ ಯೋಜನಾ ವಿಭಾಗವು ಯೋಜನೆಯನ್ನೂ ಸಿದ್ಧಪಡಿಸಿತ್ತು. ಭೂಸ್ವಾಧೀನ ಪ್ರಕ್ರಿಯೆಯನ್ನೂ ಆರಂಭಿಸಲಾಗಿತ್ತು. ರಕ್ಷಣಾ ಸಚಿವರಾಗಿದ್ದ ನಿರ್ಮಲಾ ಸೀತಾರಾಮನ್ ಅವರೂ ಈ ರಸ್ತೆ ವಿಸ್ತರಣೆ ಸಂಬಂಧ ಸಭೆ ನಡೆಸಿದ್ದರು. ಬಿಬಿಎಂಪಿ ಮತ್ತು ಎಚ್‌ಎಎಲ್‌ ನಡುವೆ ಒಪ್ಪಂದವೂ
ಏರ್ಪಟ್ಟಿತ್ತು.

ಆದರೆ, ರಸ್ತೆ ವಿಸ್ತರಣೆಗೆ ಅಗತ್ಯ ಇರುವ ಜಾಗ ಬಿಟ್ಟುಕೊಡಲು ಎಚ್‌ಎಎಲ್ ಒಪ್ಪದ ಕಾರಣ ರಸ್ತೆ ವಿಸ್ತರಣೆ ಯೋಜನೆ ನನೆಗುದಿಗೆ ಬಿದ್ದಿತ್ತು. ಈ ನಡುವೆ 2021ರ ಡಿಸೆಂಬರ್‌ 30ರಂದು ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಪತ್ರ ಬರೆದಿದ್ದ ಮಹದೇವಪುರ ಶಾಸಕ ಅರವಿಂದ ಲಿಂಬಾವಳಿ ಅವರು, ನಿಗದಿಯಾಗಿರುವ ಅನುದಾನವನ್ನು 110 ಹಳ್ಳಿ ಯೋಜನೆಯ ಕಾಮಗಾರಿಗೆ ವರ್ಗಾಯಿಸುವಂತೆ ಕೋರಿದ್ದರು. ಅದನ್ನು ಆಧರಿಸಿ ಮುಖ್ಯ ಆಯುಕ್ತರು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ವಿಂಡ್ ಟನಲ್ ರಸ್ತೆ ವಿಸ್ತರಣೆ ಯೋಜನೆಯನ್ನು ರದ್ದುಪಡಿಸಿರುವ ಸರ್ಕಾರ, ₹65 ಕೋಟಿ ಮೊತ್ತವನ್ನು ಮಹದೇವಪುರ ಕ್ಷೇತ್ರ ವ್ಯಾಪ್ತಿಯ 102 ಕಾಮಗಾರಿಗಳಿಗೆ ಹಂಚಿಕೆ ಮಾಡಿ ಜ.18ರಂದು ಸರ್ಕಾರ ಆದೇಶ ಹೊರಡಿಸಿದೆ.

‘ಒಂದು ಕಾಮಗಾರಿಗೆ ನಿಗದಿಯಾಗಿದ್ದ ಅನುದಾನವನ್ನು 102 ಕಾಮಗಾರಿಗಳಿಗೆ ಹಂಚಿಕೆ ಮಾಡಿಕೊಳ್ಳಲಾಗಿದೆ ಎಂದರೆ ಇದರ ಹಿಂದಿನ ಉದ್ದೇಶ ಬೇರೆಯೇ ಇದೆ. ಕೇಂದ್ರ ಮತ್ತು ರಾಜ್ಯದಲ್ಲಿ ಎರಡೂ ಕಡೆ ಬಿಜೆಪಿಯೇ ಆಡಳಿತದಲ್ಲಿದೆ. ಡಬಲ್ ಎಂಜಿನ್ ಸರ್ಕಾರ ಎಂದು ಹೇಳಿಕೊಳ್ಳುವವರು ಸಾರ್ವಜನಿಕರಿಗೆ ಅನುಕೂಲ ಆಗುತ್ತಿದ್ದ ರಸ್ತೆ ವಿಸ್ತರಣೆಗೆ ಜಮೀನು ಬಿಟ್ಟುಕೊಡುವಂತೆ ರಕ್ಷಣಾ ಇಲಾಖೆಯನ್ನು ಒಪ್ಪಿಸಲು ಆಗಲಿಲ್ಲ ಎಂದರೆ ಏನರ್ಥ’ ಎಂಬುದು ಸ್ಥಳೀಯರ ಪ್ರಶ್ನೆ.

ಹಳೇ ವಿಮಾನ ನಿಲ್ದಾಣ ರಸ್ತೆಯಲ್ಲಿ ಸದಾ ವಾಹನ ದಟ್ಟಣೆ ಇರುತ್ತದೆ. ಹೊರ ವರ್ತುಲ ರಸ್ತೆಗೆ ಹೋಗಲು ಈಗ ಮಾರತಹಳ್ಳಿ ಜಂಕ್ಷನ್‌ಗೆ ಹೋಗಿಯೇ ಮುಂದೆ ಸಾಗಬೇಕಿದೆ. ಈ ರಸ್ತೆ ವಿಸ್ತರಣೆಯಾಗಿದ್ದರೆ ಐ.ಟಿ ಕಂಪನಿಗಳಿಗೆ ತೆರಳುವ ವಾಹನಗಳು ವಿಂಡ್ ಟನಲ್ ರಸ್ತೆ ಬಳಸಲು ಅವಕಾಶ ಸಿಗುತ್ತಿತ್ತು’ ಎನ್ನುತ್ತಾರೆ ಸ್ಥಳೀಯರು.

‘ಬೆಂಗಳೂರಿನ ಐ.ಟಿ ಕಾರಿಡಾರ್ ಎನಿಸಿಕೊಂಡರೂ ಬೆಳ್ಳಂದೂರು ಯಾವುದೇ ಪ್ರಮುಖ ಮೂಲಸೌಕರ್ಯಗಳನ್ನು ಹೊಂದಿಲ್ಲ. ರಸ್ತೆ ವಿಸ್ತರಣೆ ಯೋಜನೆಗಳಿಗೆ ಭೂಸ್ವಾಧೀನವೇ ದೊಡ್ಡ ತೊಡಕಾಗಿ ಕಾಡುತ್ತಿದೆ. ವಿಂಡ್ ಟನಲ್ ರಸ್ತೆ ವಿಸ್ತರಣೆ ಯೋಜನೆಗೂ ಇದೇ ಕಾರಣಕ್ಕೆ ಹಿನ್ನಡೆ ಆಗಿದೆ. ಸರ್ಜಾಪುರ ರಸ್ತೆ, ಕಸವನಹಳ್ಳಿ ರಸ್ತೆ, ಹರಳೂರು ರಸ್ತೆಯ ಮೇಲ್ಸೇತುವೆ ಯೋಜನೆಗಳಿಗೂ ಇದೇ ರೀತಿಯ ಅಡ್ಡಿಗಳಿವೆ. ಭೂಸ್ವಾಧೀನ ಸಮಸ್ಯೆ ಪರಿಹಾರಕ್ಕೆ ಟಿಡಿಆರ್ ನೀತಿಯನ್ನು ಪರಿಷ್ಕರಿಸಿ ಡಿಸೆಂಬರ್ ವೇಳೆಗೆ ಜಾರಿಗೆ ತರುವ ಬಗ್ಗೆ ಕಳೆದ ಸೆಪ್ಟೆಂಬರ್‌ನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಧಾನಸಭೆ ಅಧಿವೇಶನದಲ್ಲಿ ಭರವಸೆ ನೀಡಿದ್ದರು. ಆದರೆ, ಏನೂ ಆಗಿಲ್ಲ. ಟಿಡಿಆರ್ ನೀತಿಯನ್ನು ಕೂಡಲೇ ಪರಿಷ್ಕರಿಸಿ ಜಾರಿಗೆ ತರಬೇಕು’ ಎಂದು ಕಸವನಹಳ್ಳಿ ವಿಷ್ಣುಪ್ರಸಾದ್ ಅವರು ಒತ್ತಾಯಿಸಿದರು.

‘ಎಲ್ಲ ರೀತಿಯ ಪ್ರಯತ್ನ ನಡೆದಿತ್ತು’

‘ರಸ್ತೆ ವಿಸ್ತರಣೆಗೆ ಎಚ್‌ಎಎಲ್‌ನಿಂದ ಭೂಮಿ ಪಡೆಯಲು ಎಲ್ಲ ರೀತಿಯ ಪ್ರಯತ್ನ ನಡೆಸಲಾಯಿತು. ಆದರೆ, ಅಲ್ಲಿನ ಅಧಿಕಾರಿಗಳು ಒಪ್ಪಲಿಲ್ಲ. ಆದ್ದರಿಂದ ನಿಗದಿಯಾಗಿದ್ದ ಅನುದಾನವನ್ನು ಸರ್ಕಾರ ಬೇರೆ ಕಾಮಗಾರಿಗೆ ವರ್ಗಾಯಿಸಿದೆ’ ಎಂದು ಬಿಬಿಎಂಪಿ ಮುಖ್ಯ ಎಂಜಿನಿಯರ್‌ (ಯೋಜನೆ) ಎಂ. ಲೋಕೇಶ್ ಸ್ಪಷ್ಟಪಡಿಸಿದರು.

‘ಜಾಗ ಬಿಟ್ಟುಕೊಡಲು ಎಚ್‌ಎಎಲ್ ಅಧಿಕಾರಿಗಳು ಮೊದಲಿಗೆ ಒಪ್ಪಿಗೆ ಸೂಚಿಸಿದ್ದರು. ರಸ್ತೆ ಅವರಿಗೆ ಅಗತ್ಯ ಇಲ್ಲ ಎನಿಸಿದ್ದರಿಂದ ಜಾಗ ಬಿಟ್ಟುಕೊಡಲು ಮನಸು ಮಾಡಲಿಲ್ಲ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT