ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಡಪ್ರಭು ಕೆಂಪೇಗೌಡ ಬಡಾವಣೆ: ಕಾಮಗಾರಿಗೆ ‘ಆಮೆ’ವೇಗ

Published 11 ಸೆಪ್ಟೆಂಬರ್ 2023, 23:40 IST
Last Updated 11 ಸೆಪ್ಟೆಂಬರ್ 2023, 23:40 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ) 2010ರಲ್ಲಿ ಕೈಗೆತ್ತಿಕೊಂಡಿದ್ದ ನಾಡಪ್ರಭು ಕೆಂಪೇಗೌಡ ಬಡಾವಣೆ ನಿರ್ಮಾಣ ಕಾರ್ಯವು ನಿಧಾನಗತಿಯಲ್ಲಿ ಸಾಗುತ್ತಿದ್ದು, ಬಡಾವಣೆಗೆ ಅಗತ್ಯವಿರುವ ಜಮೀನು ಸ್ವಾಧೀನಕ್ಕೆ ಈಗ ಸಿಬ್ಬಂದಿ ಕೊರತೆ ಎದುರಾಗಿದೆ.

ವಿಶೇಷ ಭೂಸ್ವಾಧೀನ ಅಧಿಕಾರಿಗಳು, ಎಂಜಿನಿಯರ್‌ಗಳು, ಭೂಮಾಪಕರ ಕೊರತೆಯಿಂದ 1,300 ಎಕರೆಯಷ್ಟು ಭೂಸ್ವಾಧೀನ ಕಾರ್ಯವು ನನೆಗುದಿಗೆ ಬಿದ್ದಿದೆ. ಬಡಾವಣೆ ಸೊರಗಿದೆ.

13 ವರ್ಷಗಳ ಹಿಂದೆ ಕೆಂಪೇಗೌಡ ಬಡಾವಣೆ ನಿರ್ಮಾಣಕ್ಕೆ 12 ಗ್ರಾಮಗಳ ವ್ಯಾಪ್ತಿಯ 4,040 ಎಕರೆ ಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಲಾಗಿತ್ತು. ಅದರಲ್ಲಿ 2,694 ಎಕರೆ ಸ್ವಾಧೀನ ಪಡಿಸಿಕೊಂಡು ಬಡಾವಣೆಯಲ್ಲಿ 9 ಬ್ಲಾಕ್‌ ನಿರ್ಮಿಸಲಾಗಿದೆ. 26 ಸಾವಿರ ನಿವೇಶನ ಹಂಚಿಕೆ ಮಾಡಲಾಗಿದೆ. 1,346 ಎಕರೆ ಸ್ವಾಧೀನ ಬಾಕಿ ಉಳಿದಿದ್ದು ಬಡಾವಣೆ ನಿರ್ಮಾಣಕ್ಕೆ ಅಡಚಣೆ ಎದುರಾಗಿದೆ. 

‘ಭೂಸ್ವಾಧೀನಕ್ಕೆ ಸರ್ಕಾರ ಅಧಿಸೂಚನೆ ಹೊರಡಿಸಿ ಒಂದು ದಶಕವೇ ಕಳೆದಿದೆ. ಆದರೆ, ಎಂಜಿನಿಯರ್ ವಿಭಾಗದಲ್ಲಿ ಪ್ರಸ್ತುತ ಒಬ್ಬ ಇಇ, ಇಬ್ಬರು ಎಇಇ, ಹಾಗೂ ಒಬ್ಬ ಎಇ ಮಾತ್ರವೇ ಇದ್ದಾರೆ. ಕೆಂಪೇಗೌಡ ಬಡಾವಣೆಯ ಭೂಸ್ವಾಧೀನ ವಿಭಾಗದಲ್ಲಿ ಇಬ್ಬರು ವಿಶೇಷ ಭೂಸ್ವಾಧೀನ ಅಧಿಕಾರಿ ಹಾಗೂ ಒಬ್ಬ ಭೂಮಾಪಕರು ಇದ್ದಾರೆ. ಸಿಬ್ಬಂದಿ ಕೊರತೆಯಿಂದ ಬಡಾವಣೆ ಸಮಗ್ರ ಅಭಿವೃದ್ಧಿ ಕಾಣುತ್ತಿಲ್ಲ’ ಎಂದು ಬಡಾವಣೆ ಮುಕ್ತ ವೇದಿಕೆ ಸದಸ್ಯರು ಅಳಲು ತೋಡಿಕೊಳ್ಳುತ್ತಾರೆ.

12 ಗ್ರಾಮಗಳಿಗೆ ಕನಿಷ್ಠವೆಂದರೂ ಏಳು ಭೂಸ್ವಾಧೀನ ಅಧಿಕಾರಿಗಳು, ಆರು ಮಂದಿ ಭೂಮಾಪಕರ ಅಗತ್ಯವಿದೆ. ಅಷ್ಟು ಪ್ರಮಾಣದ ಸಿಬ್ಬಂದಿ ಇಲ್ಲ ಎಂದು ನಿವೇಶನದಾರರು ಮಾಹಿತಿ ನೀಡಿದ್ದಾರೆ.

‘ಅದೇ ಶಿವರಾಮ ಕಾರಂತ ಬಡಾವಣೆ ನಿರ್ಮಾಣ ಕಾರ್ಯಕ್ಕೆ 2008ರಲ್ಲಿ ಸರ್ಕಾರವು ಅಧಿಸೂಚನೆ ಹೊರಡಿಸಿತ್ತು. 2013ರ ತನಕ ಯಾವುದೇ ಕಾಮಗಾರಿ ನಡೆದಿರಲಿಲ್ಲ. ಅದಾದ ಮೇಲೆ ರೈತರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಸುಪ್ರೀಂ ಕೋರ್ಟ್‌ ಆದೇಶದಂತೆ ಮೇಲುಸ್ತುವಾರಿ ಸಮಿತಿ ನೇತೃತ್ವದಲ್ಲಿ ಬಡಾವಣೆಯಲ್ಲಿ ಕಾಮಗಾರಿಗಳು ಪ್ರಗತಿಯಲ್ಲಿವೆ. ಈಗ ಶೇ. 90ರಷ್ಟು ಕೆಲಸಗಳು ಮುಕ್ತಾಯವಾಗಿವೆ. ಭೂಮಿ ಸ್ವಾಧೀನ ಪಡಿಸಿಕೊಂಡ 17 ಗ್ರಾಮಗಳಿಗೂ ಕೆಎಎಸ್‌ ಅಧಿಕಾರಿಗಳ ನೇಮಕ ಮಾಡಲಾಗಿತ್ತು. ಎಂಜಿನಿಯರಿಂಗ್‌ ವಿಭಾಗದಲ್ಲೂ ಸಾಕಷ್ಟು ಸಿಬ್ಬಂದಿ ಇದ್ದರು. ಹೀಗಾಗಿ, ಕೆಲಸಗಳು ವೇಗವಾಗಿ ನಡೆದಿದ್ದವು. ಕೆಂಪೇಗೌಡ ಬಡಾವಣೆಗೆ ಸಂಬಂಧಿಸಿದಂತೆ ಯಾವುದೇ ವ್ಯವಸ್ಥೆ ಇಲ್ಲವಾಗಿದೆ’ ಎಂದು ಮುಕ್ತ ವೇದಿಕೆ ವಕ್ತಾರ ಸೂರ್ಯಕಿರಣ್‌ ದೂರಿದ್ದಾರೆ.

ಸಮಸ್ಯೆಗಳ ಆಗರ ಬಡಾವಣೆ: ಬಡಾವಣೆಯಲ್ಲಿ ಸಾಕಷ್ಟು ಸಮಸ್ಯೆಗಳಿವೆ. ನ್ಯಾಯಾಲಯದ ಪ್ರಕರಣ ಹೊರತು ಪಡಿಸಿ ಉಳಿಕೆ ಜಮೀನನ್ನು ಸ್ವಾಧೀನಕ್ಕೆ ತೆಗೆದುಕೊಂಡು ಅಭಿವೃದ್ಧಿ ಪಡಿಸಿದ್ದರೆ ಸುಸಜ್ಜಿತ ಲೇಔಟ್ ತಲೆಯೆತ್ತಿತ್ತು. ಒಳಚರಂಡಿ ವ್ಯವಸ್ಥೆ, ರಸ್ತೆ, ವಿದ್ಯುತ್‌ ಸಂಪರ್ಕ ಎಲ್ಲವೂ ಅರೆಬರೆ ಕಾಮಗಾರಿ ನಡೆದಿದೆ. 9 ಬ್ಲಾಕ್‌ಗಳಲ್ಲಿ ಸಿವಿಲ್‌ ಕಾಮಗಾರಿ ಗುತ್ತಿಗೆಯನ್ನು 2018ರಲ್ಲಿ ಎರಡು ಕಂಪನಿಗಳಿಗೆ ನೀಡಲಾಗಿತ್ತು. ಇನ್ನೂ ಮೂಲಸೌಕರ್ಯ ಕಲ್ಪಿಸಿಲ್ಲ ಎಂದು ವೇದಿಕೆ ಸದಸ್ಯರು ಹೇಳುತ್ತಾರೆ.

‘ಮತ್ತೆ ಗಡುವು ವಿಸ್ತರಣೆ ಬೇಡ’

ಸ್ವಾಧೀನ ಪಡಿಸಿಕೊಂಡಿರುವ ಸ್ಥಳದಲ್ಲಿ ಮೂಲಸೌಕರ್ಯ ಕಲ್ಪಿಸುವುದನ್ನು ಬಿಡಿಎ ಎಂಜಿನಿಯರಿಂಗ್‌ ವಿಭಾಗವು ವಿಸ್ತರಿಸುತ್ತಲೇ ಇದೆ. 2024ರ ಡಿಸೆಂಬರ್‌ಗೆ ವೇಳೆಗೆ ಕಾಮಗಾರಿ ಮುಗಿಸುವ ಭರವಸೆ ನೀಡಲಾಗಿದೆ. ನ್ಯಾಯಾಲಯದಲ್ಲಿ ಪ್ರಕರಣವಿದೆ ಎಂಬ ನೆಪ ಹೇಳಿಕೊಂಡು ಗಡುವು ವಿಸ್ತರಣೆ ಮಾಡುವುದು ಸರಿಯಲ್ಲ. ಕೋರ್ಟ್‌ ಪ್ರಕರಣ ಹೊರತು ಪಡಿಸಿ ಉಳಿದ ಸ್ಥಳದಲ್ಲಿ ಪೂರ್ಣ ಪ್ರಮಾಣದ ಕಾಮಗಾರಿ ನಡೆಸಲಿ. –ಸೂರ್ಯಕಿರಣ್‌ ವಕ್ತಾರ ಕೆಂಪೇಗೌಡ ಬಡಾವಣೆ ಮುಕ್ತ ವೇದಿಕೆ

ಬೇರೆ ಯೋಜನೆಗೆ ಹಣ

‘2016 2018ರ ನಿವೇಶನ ಹಂಚಿಕೆ 2021ರಲ್ಲಿ ನಡೆದ ಮೂಲೆ ನಿವೇಶನಗಳ ಹರಾಜಿನಿಂದ ಬಂದ ಹಣವನ್ನು ಪ್ರತ್ಯೇಕವಾಗಿ (ಎಸ್ಕ್ರೊ ಖಾತೆ) ನಿರ್ವಹಣೆ ಮಾಡಬೇಕಿತ್ತು. ಆ ನಿಯಮ ಪಾಲನೆಯಾಗಿಲ್ಲ. ಬಂದ ಆದಾಯವನ್ನು ಇದೇ ಬಡಾವಣೆಗೆ ಖರ್ಚು ಮಾಡಬೇಕಿತ್ತು. ಆದಾಯವನ್ನು ಬೇರೆ ಯೋಜನೆಗೆ ಬಿಡಿಎ ಬಳಸಿರುವ ಕಾರಣಕ್ಕೆ ಬಡಾವಣೆ ಸೊರಗಿದೆ. –ಎನ್‌.ಶ್ರೀಧರ್ ಅಧ್ಯಕ್ಷ ಮುಕ್ತ ವೇದಿಕೆ ‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT