ಬಾಲಬ್ರೂಯಿಯಲ್ಲಿ ಕಾನ್ಸ್ಟಿಟ್ಯೂಷನ್ ಕ್ಲಬ್: ಹೈಕೋರ್ಟ್ ಅಸ್ತು

ಬೆಂಗಳೂರು: ನಗರದ ಹೃದಯಭಾಗದಲ್ಲಿನ ಪಾರಂಪರಿಕ ಕಟ್ಟಡವೆನಿಸಿದ ಬಾಲಬ್ರೂಯಿ ಅತಿಥಿ ಗೃಹದಲ್ಲಿ ‘ಕಾನ್ಸ್ಟಿಟ್ಯೂಷನ್ ಕ್ಲಬ್’ ಆರಂಭಿಸುವ ರಾಜ್ಯ ಸರ್ಕಾರದ ಪ್ರಸ್ತಾವಕ್ಕೆ ಹೈಕೋರ್ಟ್ ಹಸಿರು ನಿಶಾನೆ ತೋರಿದೆ.
ಮೆಟ್ರೊ ಕಾಮಗಾರಿಗಾಗಿ ಮರ ಕಡಿಯುವುದನ್ನು ಪ್ರಶ್ನಿಸಿ ಪರಿಸರ ತಜ್ಞರೂ ಆದ ಬೆಂಗಳೂರು ಪರಿಸರ ಟ್ರಸ್ಟ್ ಮುಖ್ಯಸ್ಥ ದತ್ತಾತ್ರೇಯ ಟಿ.ದೇವರೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಜೊತೆ ದಾಖಲಿಸಲಾಗಿದ್ದ ಈ ಸಂಬಂಧದ ಮಧ್ಯಂತರ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಳೆ ಹಾಗೂ ಅಶೋಕ್ ಎಸ್.ಕಿಣಗಿ ಅವರಿದ್ದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.
ಸರ್ಕಾರದ ಪರ ವಕೀಲೆ ಪ್ರತಿಮಾ ಹೊನ್ನಾಪುರ, ‘ಬಾಲಬ್ರೂಯಿಯ ಪಾರಂಪರಿಕ ಕಟ್ಟಡದ ಸ್ವರೂಪಕ್ಕೆ ಯಾವುದೇ ಧಕ್ಕೆ ಆಗದಂತೆ ನೋಡಿಕೊಳ್ಳಲಾಗುವುದು. ಅತಿಥಿ ಗೃಹದ ಆವರಣದಲ್ಲಿರುವ 159 ಮರಗಳನ್ನು ಕಡಿಯುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ದೆಹಲಿಯಲ್ಲೂ ಇದೇ ಮಾದರಿಯ ಕ್ಲಬ್ ಇದೆಯಲ್ಲವೇ’? ಎಂದು ಪ್ರಶ್ನಿಸಿತಲ್ಲದೇ, ‘ಕಾನ್ಸ್ಟಿಟ್ಯೂಷನ್ ಕ್ಲಬ್‌ನಲ್ಲಿ ಒಳ್ಳೆಯ ಗ್ರಂಥಾಲಯ ಹಾಗೂ ಉತ್ತಮ ಕಾಫಿ ಸಿಗುವಂತಾಗಲಿ’ ಎಂದು ಆಶಿಸಿ ಸರ್ಕಾರದ ಪ್ರಸ್ತಾವಕ್ಕೆ ಅನುಮತಿ ನೀಡಿತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.