ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಭಾಪತಿ ವಿರುದ್ಧ ಅವಿಶ್ವಾಸ ಮಂಡನೆ ಸರಿಯಲ್ಲ: ಬಸವರಾಜ ಹೊರಟ್ಟಿ

ನಿರ್ಗಮಿತ ಶಂಕರಮೂರ್ತಿಗೆ ಅಭಿನಂದನೆ
Last Updated 23 ಜೂನ್ 2018, 19:06 IST
ಅಕ್ಷರ ಗಾತ್ರ

ಬೆಂಗಳೂರು: ‘ವಿಧಾನಸಭೆಯಂತೆ ವಿಧಾನಪರಿಷತ್‌ನಲ್ಲೂ ಧಿಕ್ಕಾರ ಕೂಗುವುದು, ಗದ್ದಲ ಉಂಟು ಮಾಡುವುದು ನಾಚಿಕೆ ತರುವ ಸಂಗತಿ’ ಎಂದು ಹಂಗಾಮಿ ಸಭಾಪತಿ ಬಸವರಾಜ ಹೊರಟ್ಟಿ ಬೇಸರ ವ್ಯಕ್ತಪಡಿಸಿದರು.

ನಿರ್ಗಮಿತ ಸಭಾಪತಿ ಡಿ.ಎಚ್‌. ಶಂಕರಮೂರ್ತಿ ಅವರಿಗೆ ವಿಧಾನಪರಿಷತ್ ಸಚಿವಾಲಯದ ವತಿಯಿಂದ ಶನಿವಾರ ಆಯೋಜಿಸಲಾಗಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಹೊರಟ್ಟಿ, ‘ಸಭಾಪತಿ ಹುದ್ದೆ ಗೌರವಾನ್ವಿತವಾದುದು. ಸಭಾಪತಿ ಅವರನ್ನು ಕೆಳಗಿಳಿಸಲು ಅವಿಶ್ವಾಸ ಮಂಡಿಸುವಂಥ ಕ್ರಮ ಸರಿಯಲ್ಲ. ಇಂಥ ಕ್ರಮವನ್ನು ಈ ಹಿಂದೆಯೂ ವಿರೋಧಿಸಿದ್ದೆ’ ಎಂದರು.

ಸಿಹಿ ಘಟನೆ ಮೆಲುಕು: ಅಭಿನಂದನೆ ಸ್ವೀಕರಿಸಿ ಮಾತನಾಡಿದ ಶಂಕರಮೂರ್ತಿ ‘ವಿಧಾನಪರಿಷತ್‌ನಲ್ಲಿ 30 ವರ್ಷ ಸದಸ್ಯನಾಗಿ, ಎಂಟು ವರ್ಷ ಸಭಾಪತಿಯಾಗಿ ಕಾರ್ಯನಿರ್ವಹಿಸಿದ್ದೇನೆ. ಈ ಅವಧಿಯಲ್ಲಿನ ಕಹಿಘಟನೆಗಳನ್ನು ಮರೆತು ಸಿಹಿ ಘಟನೆಗಳನ್ನಷ್ಟೇ ಮೆಲುಕು ಹಾಕುತ್ತೇನೆ’ ಎಂದರು.

‘ಮೇಲ್ಮನೆ ಬೇಕೆ ಬೇಡವೇ ಎಂದು ಚರ್ಚೆ ಮಾಡುವವರು, ಇದನ್ನು ಸ್ಥಾಪಿಸುವ ಸಂದರ್ಭದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಹಾಗೂ ಸರ್ದಾರ್ ವಲ್ಲಭಭಾಯಿ ಪಟೇಲರು ಆಡಿದ ಮಾತನ್ನು ಗಮನಿಸಬೇಕು.‌ ವಿಧಾನಸಭೆಗೆ ಪ್ರೋತ್ಸಾಹಕ ಶಕ್ತಿಯಾಗಿ ಮೇಲ್ಮನೆ ಕೆಲಸ ಮಾಡಬೇಕು ಎಂಬುದು ಅವರ ಉದ್ದೇಶವಾಗಿತ್ತು’ ಎಂದರು.

‘ಚುನಾವಣಾ ರಾಜಕಾರಣದಿಂದ ವಿರಮಿಸುತ್ತೇನೆ. ಆದರೆ, ಸಾರ್ವಜನಿಕ ಜೀವನದಲ್ಲಿ ಇರುತ್ತೇನೆ’ ಎಂದು ಭಾವುಕರಾದರು.

ಪ್ರೊ.ಬಿ.ಕೆ. ಚಂದ್ರಶೇಖರ್ ಮಾತನಾಡಿ, ‘ಸಮಕಾಲೀನ ವಿಷಯಗಳ ಗಂಭೀರ ಚರ್ಚೆಗೆ ವೇದಿಕೆಯಾಗುವ ಮೇಲ್ಮನೆಯ ಗೌರವಕ್ಕೆ ಧಕ್ಕೆ ಬರದಂತೆ ಸದಸ್ಯರು ನಡೆದುಕೊಳ್ಳಬೇಕು’ ಎಂದು ಸಲಹೆ ನೀಡಿದರು. ಸಮಾರಂಭದಲ್ಲಿ ಶಂಕರಮೂರ್ತಿ ಜೊತೆ ಅವರ ಪತ್ನಿ ಸತ್ಯವತಿ ಕೂಡಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT