ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಎಎ ಗಲಭೆಯಲ್ಲಿ ಆಸ್ತಿ ಹಾನಿ| ಉ.ಪ್ರದೇಶ ಮಾದರಿ ದಂಡಕ್ಕೆ ಚಿಂತನೆ: ಆರ್‌. ಅಶೋಕ್‌

Last Updated 26 ಡಿಸೆಂಬರ್ 2019, 21:37 IST
ಅಕ್ಷರ ಗಾತ್ರ

ಬೆಂಗಳೂರು: ‘ಪ್ರತಿಭಟನೆ ಹೆಸರಲ್ಲಿ ದಂಗೆ ನಡೆಸಿ ಸಾರ್ವಜನಿಕ ಆಸ್ತಿಪಾಸ್ತಿ ನಾಶ ಮಾಡಿದವರ ಸ್ವತ್ತನ್ನು ಮುಟ್ಟುಗೋಲು ಹಾಕಿಕೊಳ್ಳುತ್ತಿರುವ ಉತ್ತರ ಪ್ರದೇಶದ ಕ್ರಮವನ್ನೇ ನಾವು ಅನುಸರಿಸಬೇಕು’ಎಂದು ಕಂದಾಯ ಸಚಿವ ಆರ್‌.ಅಶೋಕ ಹೇಳಿದರು.

‘ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸಿದಾಗ ಸಾರ್ವಜನಿಕ ಆಸ್ತಿಪಾಸ್ತಿಗೆ ಬೆಂಕಿ ಇಟ್ಟು ನಾಶ ಮಾಡಲಾಗಿದೆ. ಇದನ್ನು ಸಹಿಸಿಕೊಂಡು ಸುಮ್ಮನಿರಲು ಸಾಧ್ಯವಿಲ್ಲ’ ಎಂದು ಅವರು ತಮ್ಮನ್ನು ಗುರುವಾರ ಭೇಟಿ ಮಾಡಿದ ಸುದ್ದಿಗಾರರಿಗೆ ತಿಳಿಸಿದರು.

‘ಈ ಸಂಬಂಧ ಕಾನೂನು ರೂಪಿಸಲು ಗೃಹ ಸಚಿವರಿಗೆ ಮನವಿ ಮಾಡುತ್ತೇನೆ. ಮಂಗಳೂರು ಗಲಭೆ ಪೂರ್ವನಿಯೋಜಿತ ಎಂಬುದು ಸಿ.ಸಿ.ಟಿ.ವಿಕ್ಯಾಮೆರಾಗಳ ಬಹುತೇಕ ದೃಶ್ಯಾವಳಿಗಳಿಂದ ಗೊತ್ತಾಗುತ್ತದೆ. ದಂಗೆಕೋರರಿಂದಲೇ ದಂಡ ವಸೂಲಿ ಮಾಡಬೇಕು’ ಎಂದುಹೇಳಿದರು.

‘ಉತ್ತರ ಪ್ರದೇಶ ಸರ್ಕಾರ ಸಾರ್ವಜನಿಕ ಸ್ವತ್ತುಗಳಿಗೆ ಬೆಂಕಿ ಇಟ್ಟು ನಾಶ ಮಾಡಿದವರನ್ನು ಪತ್ತೆ ಮಾಡಿ ಅವರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುತ್ತಿದೆ. ಅದೇ ಮಾದರಿಯಲ್ಲಿ ನಮ್ಮ ರಾಜ್ಯದಲ್ಲೂ ಕಾನೂನು ಜಾರಿ ಮಾಡಬೇಕು. ಈ ನೆಲದ ಕಾನೂನನ್ನು ಎಲ್ಲರೂ ಗೌರವಿಸಬೇಕು. ತಪ್ಪು ಮಾಡಿದವರು ಶಿಕ್ಷೆ ಅನುಭವಿಸಲೇಬೇಕು’ ಎಂದು ಹೇಳಿದರು.

ಭಾರತ ಧರ್ಮಛತ್ರವಲ್ಲ

ಅನ್ಯ ದೇಶಗಳಿಂದ ಅಕ್ರಮವಾಗಿ ನುಸುಳಿಕೊಂಡು ಬಂದು ನೆಲೆಸಿದವರಿಗೆ ಆಶ್ರಯ ನೀಡಲು ಭಾರತ ಧರ್ಮ ಛತ್ರವಲ್ಲ. ಕೇಂದ್ರ ಸರ್ಕಾರ ಅನುಷ್ಠಾನಗೊಳಿಸಿರುವ ಪೌರತ್ವ ತಿದ್ದುಪಡಿ ಕಾಯ್ದೆ ಸರಿಯಾಗಿಯೇ ಇದೆ. ಪಾಕಿಸ್ತಾನ, ಬಾಂಗ್ಲಾದೇಶೀಯರಿಗೆ ಭಾರತ ಎಂದಿಗೂ ಧರ್ಮಛತ್ರವಾಗಲು ಸಾಧ್ಯವಿಲ್ಲ ಎಂದು ಅಶೋಕ ಸ್ಪಷ್ಟಪಡಿಸಿದರು.

ದಾಖಲೆ ಕೊಡದಿದ್ದರೆ ಬಿಡಲಿ

ಕೆಲ ಶಾಸಕರು ಮತ್ತು ಮಾಜಿ ಸಚಿವರು ದಾಖಲೆಗಳನ್ನು ಕೊಡುವುದಿಲ್ಲ ಎನ್ನುತ್ತಿದ್ದಾರೆ. ದಾಖಲೆ ಕೊಡದಿದ್ದರೆ ಒಳ್ಳೆಯದೇ ಆಯಿತು. ಅವರು ಹಾಗೆಯೇ ಮಾಡಲಿ ಎಂದು ಡಿ.ಕೆ.ಶಿವಕುಮಾರ್‌ ಅವರಿಗೆ ಅಶೋಕ ಸಲಹೆ ನೀಡಿದರು.

‘ದಾಖಲೆಗಳನ್ನು ಕೊಡದೇ ಇದ್ದರೆ, ಅವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಆಗುವುದಿಲ್ಲ. ಆಗ ಓಡಿ ಬಂದು ಬೇಕಾದ ದಾಖಲೆಗಳನ್ನು ನೀಡುತ್ತಾರೆ. ಈ ರೀತಿಯ ದರ್ಪದ ಮಾತುಗಳು ನಡೆಯುವುದಿಲ್ಲ. ದೇಶದಲ್ಲಿ ಕಾನೂನು ಎಲ್ಲರಿಗೂ ಒಂದೇ’ ಎಂದು ಹೇಳಿದರು.

ಮಂಗಳೂರು ಗೋಲಿಬಾರ್‌ನಲ್ಲಿ ಮೃತಪಟ್ಟವರಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮೊದಲು ಪರಿಹಾರ ಘೋಷಿಸಿ, ಬಳಿಕ ಅದನ್ನು ತಡೆ ಹಿಡಿದ ಕ್ರಮವನ್ನು ಅವರು ಸಮರ್ಥಿಸಿಕೊಂಡರು. ‘ಗೋಲಿಬಾರ್‌ ನಡೆದ ಸಂದರ್ಭದಲ್ಲಿ ಸತ್ತವರು ಅಮಾಯಕರು ಎಂದು ಬಿಂಬಿಸಲಾಗಿತ್ತು. ಅದಕ್ಕಾಗಿ ಪರಿಹಾರ ಘೋಷಿಸಲಾಗಿತ್ತು. ಆದರೆ, ಸಿಸಿ ಕ್ಯಾಮೆರಾ ದೃಶ್ಯಾವಳಿಗಳಲ್ಲಿ ಅವರು ಗಲಭೆಕೋರರು ಎಂಬುದು ಮೇಲ್ನೋಟಕ್ಕೆ ಗೊತ್ತಾಗಿದೆ. ಆ ಕಾರಣದಿಂದ ಪರಿಹಾರ ತಡೆಹಿಡಿಯಲಾಗಿದೆ. ತನಿಖೆಯಿಂದ ಸತ್ಯ ಸಂಗತಿ ಬಯಲಿಗೆ ಬರಲಿದೆ’ ಎಂದರು.

ದಂಗೆಕೋರರಿಂದಲೇ ವಸೂಲಿ ಮಾಡಬೇಕು: ಸಂಸದೆ ಶೋಭಾ

ಗಲಭೆಯ ಸಂದರ್ಭದಲ್ಲಿ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮಾಡಿದ ದಂಗೆಕೋರರಿಂದಲೇ ಆಗಿರುವ ನಷ್ಟವನ್ನು ವಸೂಲಿ ಮಾಡಬೇಕು ಎಂದುಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.

ಉತ್ತರ ಪ್ರದೇಶ ಮಾದರಿ ಜಾರಿಗೆ ಬರಬೇಕು: ಸಿ.ಟಿ.ರವಿ

ಸಾರ್ವಜನಿಕ ಆಸ್ತಿ ನಷ್ಟ ಮಾಡಿದವರ ಆಸ್ತಿ ಜಪ್ತಿ ಮಾಡುವ ಉತ್ತರ ಪ್ರದೇಶ ಮಾದರಿಯನ್ನು ಅನುಸರಿಸುವಂತೆ ಮುಖ್ಯಮಂತ್ರಿಗೆ ಮನವಿ ಮಾಡುತ್ತೇನೆ ಎಂದು ಸಚಿವ ಸಿ.ಟಿ. ರವಿ ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT