ಗುರುವಾರ , ಫೆಬ್ರವರಿ 27, 2020
19 °C
ಕೆರೆಗಳ ಒತ್ತುವರಿ ತೆರವಿಗೆ ಎಂಟು ವಾರಗಳ ಹೆಚ್ಚುವರಿ ಕಾಲಾವಕಾಶ ನೀಡಿದ ಲೋಕಾಯುಕ್ತ

76 ಕೈಗಾರಿಕೆ ಮುಚ್ಚಲು ಕೆಎಸ್‌ಪಿಸಿಬಿ ನೋಟಿಸ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜಕಾಲುವೆಗಳಿಗೆ ತ್ಯಾಜ್ಯವನ್ನು ಹರಿಬಿಡುವ 76 ಕೈಗಾರಿಕೆಗಳನ್ನು ಮುಚ್ಚುವಂತೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ನೋಟಿಸ್‌ ನೀಡಿದೆ.

ಪ್ರಮುಖ ಕೈಗಾರಿಕಾ ಪ್ರದೇಶಗಳಿಂದ ಕೈಗಾರಿಕಾ ತ್ಯಾಜ್ಯ ಹರಿದುಬರುತ್ತಿದೆ ಎಂದು ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಐಎಡಿಬಿ) ಲೋಕಾಯುಕ್ತಕ್ಕೆ ವರದಿ ನೀಡಿದೆ. ಈ ಬಗ್ಗೆ ಪರಿಶೀಲಿಸಿ ಕ್ರಮ ತೆಗೆದುಕೊಳ್ಳುವಂತೆ ಕೆಎಸ್‌ಪಿಸಿಬಿಗೆ ಲೋಕಾಯುಕ್ತ ಆದೇಶಿಸಿತ್ತು.

ಲೋಕಾಯುಕ್ತದ ಆದೇಶದ ಹೊರತಾಗಿಯೂ ಚಿಕ್ಕಬಾಣಾವರ ಕೆರೆ ಒತ್ತುವರಿ ತೆರವಿಗೆ ತಹಶೀಲ್ದಾರ್‌ (ಬೆಂಗಳೂರು ಉತ್ತರ) ಮುಂದಾಗಿಲ್ಲ. ಒತ್ತುವರಿ ತೆರವುಗೊಳಿಸುವಂತೆ ಲೋಕಾಯುಕ್ತರು ಆದೇಶ ನೀಡಿ 14 ತಿಂಗಳು ಕಳೆದಿದೆ. ಅಲ್ಲದೆ, ಭೂ ದಾಖಲೆಗಳ ಇಲಾಖೆಯ ಜಂಟಿ ನಿರ್ದೇಶಕರು ಸರ್ವೇ ವರದಿಯನ್ನೂ ಸಲ್ಲಿಸಿದ್ದಾರೆ. ಆದರೂ ತಹಶೀಲ್ದಾರ್‌ ಕ್ರಮ ತೆಗೆದುಕೊಂಡಿಲ್ಲ’ ಎಂದು ‘ನಮ್ಮ ಬೆಂಗಳೂರು’ ಪ್ರತಿಷ್ಠಾನ ಆರೋಪಿಸಿದೆ.

‘ವಸಂತಪುರ ಜನಾರ್ದನ, ಹೊರಮಾವು ಅಗರ ಮತ್ತು ಹೊರಮಾವು ಜಯಂತಿನಗರ ಕೆರೆ ಒತ್ತುವರಿಯನ್ನು ತೆರವುಗೊಳಿಸುವಂತೆ ತಹಶೀಲ್ದಾರ್‌ಗೆ ಈಗಾಗಲೇ ಆದೇಶ ನೀಡಿದೆ. ಆದರೂ ಕ್ರಮ ಆಗಿಲ್ಲ. ಇದೀಗ ಲೋಕಾಯುಕ್ತ ಮತ್ತೆ ಎಂಟು ವಾರಗಳ ಕಾಲಾವಕಾಶ ನೀಡಿದೆ. ವಸಂತಪುರ ಜನಾರ್ದನ ಕೆರೆಯ ಪುನರುಜ್ಜೀವನಕ್ಕೆ ಬಿಬಿಎಂಪಿ ಮೂರು ಎಕರೆ ಜಾಗ ಮಂಜೂರು ಮಾಡಿದೆ. ಈ ಕಾಮಗಾರಿಗೆ ಟೆಂಡರ್‌ ಕರೆಯಲಾಗಿದೆ’ ಎಂದೂ ಪ್ರತಿಷ್ಠಾನ ತಿಳಿಸಿದೆ.

‘ನಮ್ಮ ಬೆಂಗಳೂರು’ ಪ್ರತಿಷ್ಠಾನದ ಪ್ರಧಾನ ವ್ಯವಸ್ಥಾಪಕ ಹರೀಶ್‌ಕುಮಾರ್‌ ಮಾತನಾಡಿ, ‘ಒತ್ತುವರಿ ತೆರವು ವಿಷಯದಲ್ಲಿ ತಹಶೀಲ್ದಾರ್‌ಗಳು ಗಂಭೀರ ಪ್ರಯತ್ನ ಮಾಡುತ್ತಿಲ್ಲ. ಅವರಿಗೆ ಲೋಕಾಯುಕ್ತ ಹೆಚ್ಚುವರಿ ಕಾಲಾವಕಾಶ ನೀಡುತ್ತಿದೆ. ಆದರೂ ಎಚ್ಚೆತ್ತುಕೊಳ್ಳದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು’ ಎಂದು ಆಗ್ರಹಿಸಿದ್ದಾರೆ.

13 ಕೆರೆಗಳ ಸಮೀಕ್ಷೆ: ಕೆರೆಗಳ ಸಂರಕ್ಷಣೆಯ ಬಗ್ಗೆ ‘ಯುನೈಟೆಡ್‌ ಬೆಂಗಳೂರು’ ಸಂಘಟನೆ ಜಾಗೃತಿ ಮೂಡಿಸುತ್ತಿದ್ದು, 23 ಕೆರೆಗಳ ಸ್ಥಿತಿಗತಿಯನ್ನು ಪರಿಶೀಲನೆ ನಡೆಸಿದೆ. ಈ ವರದಿ ಆಧಾರತದಲ್ಲಿ ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ. ಲೋಕಾಯುಕ್ತ ಅವರ ಆದೇಶದ ಅನ್ವಯ ಈವರೆಗೆ 13 ಕೆರೆಗಳ ಸಮೀಕ್ಷೆ ಪೂರ್ಣಗೊಂಡಿದೆ.

ಲೋಕಾಯುಕ್ತಕ್ಕೆ 2 ವರ್ಷದ ಹಿಂದೆಯೇ ದೂರು
ಬೆಂಗಳೂರಿನಲ್ಲಿ ನಶಿಸುತ್ತಿರುವ ಕೆರೆಗಳ ಪುನರುಜ್ಜೀವನ ಮತ್ತು ರಕ್ಷಣೆಗಾಗಿ ಎಚ್‌.ಎಸ್‌. ದೊರೆಸ್ವಾಮಿ ನೇತೃತ್ವದಲ್ಲಿ 2017ರಲ್ಲಿ ‘ನಮ್ಮ ಬೆಂಗಳೂರು’ ಪ್ರತಿಷ್ಠಾನ ಅಭಿಯಾನ ಆರಂಭಿಸಿದೆ. ಪ್ರತಿಷ್ಠಾನ ಮತ್ತು ‘ಯುನೈಟೆಡ್‌ ಬೆಂಗಳೂರು’ ತಂಡ ಜಂಟಿಯಾಗಿ 2017ರ ಆಗಸ್ಟ್‌ 3ರಂದು 23 ಕೆರೆಗಳ ವಸ್ತುಸ್ಥಿತಿ ಕುರಿತು ಲೋಕಾಯುಕ್ತಕ್ಕೆ ದೂರು ಸಲ್ಲಿಸಿತ್ತು. ಅದರಲ್ಲಿ ಚಿಕ್ಕಬಾಣಾವರ ಮತ್ತು ಮಲ್ಲಸಂದ್ರ ಕೆರೆಗಳಿಗೆ ಸಂಬಂಧಿಸಿದ ದೂರು ಕೂಡಾ ಇದ್ದವು.

‘ಲೋಕಾಯುಕ್ತದ ಆದೇಶದ ಅನ್ವಯ ಬೈರಮಂಗಲ ಕೆರೆಗೆ ಸಂಬಂಧಿಸಿದಂತೆ ಜಲಮಂಡಳಿ, ಬಿಬಿಎಂಪಿ, ಕಾವೇರಿ ನೀರಾವರಿ ನಿಗಮ, ಸಣ್ಣ ನೀರಾವರಿ ಇಲಾಖೆ ಮತ್ತು ಕೆಐಎಡಿಬಿ ಅಧಿಕಾರಿಗಳ ಜೊತೆ ಕೆಎಸ್‌ಪಿಸಿಬಿ ಸಭೆ ನಡೆಸಿತ್ತು. ಬಳಿಕ, ಲೋಕಾಯುಕ್ತಕ್ಕೆ ವರದಿಯನ್ನೂ ಸಲ್ಲಿಸಿತ್ತು. ಆದರೆ, ಬೈರಮಂಗಲ ಕೆರೆಯ ಪುನರುಜ್ಜೀವನ ಸಂಬಂಧಿಸಿದಂತೆ ಕ್ರಿಯಾ ಯೋಜನೆ ಸಲ್ಲಿಸಲು ಬಿಬಿಎಂಪಿ ವಿಫಲವಾಗಿದೆ. ಅಲ್ಲದೆ, ವರದಿ ನೀಡಲು ಎಂಟು ವಾರಗಳ ಹೆಚ್ಚುವರಿ ಕಾಲಾವಕಾಶ ನೀಡಿದೆ’ ಎಂದು ಪ್ರತಿಷ್ಠಾನ ತಿಳಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು