ಗುರುವಾರ , ನವೆಂಬರ್ 21, 2019
21 °C
ಆಳ್ವಾಸ್‌ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ಮೋಹನ ಆಳ್ವ ವ್ಯಂಗ್ಯ

ಶಿಕ್ಷಕರನ್ನು ಸರ್ಕಾರ ಆಕಾಶದಿಂದ ಉದುರಿಸುತ್ತದೆಯೇ: ಮೋಹನ ಆಳ್ವ ವ್ಯಂಗ್ಯ

Published:
Updated:
Prajavani

ಬೆಂಗಳೂರು: ‘ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ 1ರಿಂದ 7ನೇ ತರಗತಿವರೆಗೆ ತಲಾ ಒಬ್ಬರು ಶಿಕ್ಷಕರನ್ನು ನೇಮಿಸಲು ಸಾಧ್ಯವಾಗದ ಸರ್ಕಾರವು ಇಂಗ್ಲಿಷ್‌ ಮಾಧ್ಯಮ ಶಾಲೆಗಳಿಗೆ ಶಿಕ್ಷಕರನ್ನು ಆಕಾಶದಿಂದ ಉದುರಿಸುತ್ತದೆಯೇ’ ಎಂದು ಮೂಡುಬಿದಿರೆಯ ಆಳ್ವಾಸ್‌ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ಎಂ. ಮೋಹನ್ ಆಳ್ವ ವ್ಯಂಗ್ಯವಾಡಿದರು.

ಕನ್ನಡ ಸಾಹಿತ್ಯ ಪರಿಷತ್ತು ನಗರದಲ್ಲಿ ಶನಿವಾರ ಆಯೋಜಸಿದ್ದ ‘ಸಾಧಕರೊಂದಿಗೆ ಸಂವಾದ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇರುವುದರಿಂದಲೇ ವಿದ್ಯಾರ್ಥಿಗಳು ಖಾಸಗಿ ಇಂಗ್ಲಿಷ್‌ ಮಾಧ್ಯಮ ಶಾಲೆಗಳ ಕಡೆಗೆ ಮುಖ ಮಾಡಿರುವುದು. ಆದರೆ, ಇದನ್ನು ಅರಿತುಕೊಳ್ಳುವಲ್ಲಿ ವಿಫಲವಾಗಿರುವ ಸರ್ಕಾರ ಹೊಸದಾಗಿ ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ಪ್ರಾರಂಭಿಸುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ವಿದ್ಯಾರ್ಥಿಗಳಿಲ್ಲ ಎಂಬ ಕಾರಣಕ್ಕೆ ಶಾಲೆಗಳನ್ನು ವಿಲೀನ ಮಾಡುವುದಕ್ಕೆ ವಿರೋಧವಿಲ್ಲ. ಆದರೆ, ಬಡ–ಮಧ್ಯಮ ವರ್ಗದ ಮಕ್ಕಳಿಗೆ ಇಂಗ್ಲಿಷ್‌ ಮಾಧ್ಯಮ ಶಿಕ್ಷಣ ದೊರೆಯುತ್ತಿಲ್ಲ ಎಂಬ ನೆಪದಿಂದ ಆರಂಭಿಸಿರುವ ಕರ್ನಾಟಕ ಪಬ್ಲಿಕ್‌ ಶಾಲೆಗಳಿಂದ ಮಕ್ಕಳ ಪ್ರಗತಿಗೆ ತೊಡಕಾಗಲಿದೆ’ ಎಂದರು.

‘ಮೌಲ್ಯಮಾಪನ ವ್ಯವಸ್ಥೆ ಕೂಡ ಬದಲಾಗಿದೆ. ಕೇಂದ್ರ ಪಠ್ಯಕ್ರಮ ಬೋಧನೆ ಮಾಡುವ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ನೀಡುವ ಅಂಕಕ್ಕೂ ರಾಜ್ಯ ಪಠ್ಯಕ್ರಮದ ಇಂಗ್ಲಿಷ್‌ ಮತ್ತು ಕನ್ನಡ ಮಾಧ್ಯಮ ಶಾಲೆಗಳಲ್ಲಿ ಅಂಕದ ಅನುಪಾತಕ್ಕೂ ವ್ಯತ್ಯಾಸವಿದೆ. ಕೇಂದ್ರ ಪಠ್ಯಕ್ರಮದಲ್ಲಿ ಕಡಿಮೆ ಅಂಕ ಗಳಿಸಿ ಉತ್ತೀರ್ಣರಾಗಬಹುದು. ಆದರೆ, ರಾಜ್ಯ ಪಠ್ಯಕ್ರಮದಲ್ಲಿ ಉತ್ತೀರ್ಣರಾಗಲು ಹೆಚ್ಚು ಅಂಕ ಪಡೆಯಬೇಕು. ಕನ್ನಡ ಮಾಧ್ಯಮ ಫಲಿತಾಂಶ ಕಡಿಮೆ ಎಂದು ಬಿಂಬಿಸುವ ಷಡ್ಯಂತ್ರವಿದು’ ಎಂದರು.

‘ಮನೆ ವೈದ್ಯನಾಗಿ ಮನೆಮಾತಾದೆ’

‘ಪಿಯುಸಿಯಲ್ಲಿ ಅನುತ್ತೀರ್ಣನಾಗಿ ಎರಡನೇ ಪ್ರಯತ್ನದಲ್ಲಿ ತೇರ್ಗಡೆಯಾದೆ. 28ನೇ ವರ್ಷಕ್ಕೆ ಪದವಿ ಶಿಕ್ಷಣ ಪೂರೈಸಿದೆ. ಆದರೆ, ಪಠ್ಯೇತರ ಚಟುವಟಿಕೆಯಲ್ಲಿ ಮುಂಚೂಣಿಯಲ್ಲಿದ್ದೆ. ಹಾಗಾಗಿಯೇ ಅಮೆರಿಕದ ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯವು ವಿಶ್ವದ ಪ್ರತಿಭಾವಂತ ವಿದ್ಯಾರ್ಥಿಗಳ ಜೊತೆ ನನ್ನನ್ನೂ ಸನ್ಮಾನಿಸಿತು’ ಎಂದು ಎಂ. ಮೋಹನ್ ಆಳ್ವ ಹಳೆಯ ದಿನಗಳನ್ನು ನೆನಪಿಸಿಕೊಂಡರು. 

‘ಮನೆವೈದ್ಯ ಆಗಬೇಕೆಂಬ ಕನಸಿನೊಂದಿಗೆ ₹ 1 ಲಕ್ಷ ಸಾಲ ಮಾಡಿ, ಮೂಡಬಿದರೆಯಲ್ಲಿ  ಕ್ಲಿನಿಕ್ ಆರಂಭಿಸಿದೆ. ವೈದ್ಯನಾಗಿ ಉತ್ತಮ ಹೆಸರನ್ನು ಸಂಪಾದಿಸಿದೆ. ನಂತರದ ದಿನಗಳಲ್ಲಿ ವೈದ್ಯಕೀಯ, ಶಿಕ್ಷಣ ಮತ್ತು ಸಾಂಸ್ಕೃತಿಕ ಲೋಕವನ್ನು ಕಟ್ಟಿದೆ. ಈ ಕಾರ್ಯಗಳಿಂದ ಸುಮಾರು ₹ 225 ಕೋಟಿ ಸಾಲಗಾರನಾಗಿದ್ದೇನೆ’ ಎಂದು ಹೇಳಿದರು.

ಪ್ರತಿಕ್ರಿಯಿಸಿ (+)