ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮಾಜಿಕ ಸ್ವಾತಂತ್ರ್ಯ ಲಭಿಸಲಿ: ಮೊಯಿಲಿ

ಡಾ.ಎಚ್‌. ಲಕ್ಷ್ಮಿನಾರಾಯಣಸ್ವಾಮಿ ಅವರ ‘ನೂಲ ಏಣಿಯ ನಡಿಗೆ’ ಕೃತಿ ಲೋಕಾರ್ಪಣೆ
Last Updated 27 ಜೂನ್ 2022, 21:19 IST
ಅಕ್ಷರ ಗಾತ್ರ

ಬೆಂಗಳೂರು: ‘ವ್ಯಕ್ತಿಯ ಬದುಕಿನಲ್ಲಿ ಸಾಮಾಜಿಕ ಸ್ವಾತಂತ್ರ್ಯ ಬರಬೇಕಿದೆ’ ಎಂದು ಕಾಂಗ್ರೆಸ್ ಮುಖಂಡ ಎಂ.ವೀರಪ್ಪ ಮೊಯಿಲಿ ಪ್ರತಿಪಾದಿಸಿದರು.

ನಗರದಲ್ಲಿ ಭಾನುವಾರ ಕೇಂದ್ರ ಸಾಹಿತ್ಯ ಅಕಾಡೆಮಿಯ ಯುವ ಪುರಸ್ಕಾರ ಪ್ರಶಸ್ತಿ ಪುರಸ್ಕೃತ ಡಾ.ಎಚ್‌. ಲಕ್ಷ್ಮಿನಾರಾಯಣಸ್ವಾಮಿ ಅವರ ‘ನೂಲ ಏಣಿಯ ನಡಿಗೆ’ (ಡಾ.ಎಲ್‌.ಹನುಮಂತಯ್ಯ ಅವರ ಸಮಗ್ರ ಸಾಹಿತ್ಯ ಕೃತಿಗಳ ಪಿಎಚ್‌.ಡಿ ಮಹಾಪ್ರಬಂಧ) ಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

‘ಸಾಮಾಜಿಕ ಸ್ವಾತಂತ್ರ್ಯ ಸಿಗದಿದ್ದರೆ ಸಮಾನತೆ ಹಾಗೂ ಸಂವಿಧಾನದ ಆಶಯಕ್ಕೆ ಅರ್ಥವೇ ಇರುವುದಿಲ್ಲ. ವರ್ತಮಾನ ಕಾಲದಲ್ಲಿ ಸ್ವಾತಂತ್ರ್ಯ ಹಾಗೂ ಮೂಲ ಹಕ್ಕು ಕಸಿಯುವ ಪ್ರಯತ್ನಗಳು ನಡೆಯುತ್ತಿವೆ. ಪಟ್ಟಭದ್ರರ ವಿರುದ್ಧ ಎಚ್ಚರಿಕೆ ವಹಿಸುವುದು ಅನಿವಾರ್ಯ’ ಎಂದು ಸಲಹೆ ನೀಡಿದರು.

‘ಮಾನಸಿಕ ಜಾಢ್ಯದಿಂದ ಬಿಡುಗಡೆ ಪಡೆಯಬೇಕಿದೆ. ರಾಷ್ಟ್ರದಲ್ಲಿ ದೊಡ್ಡ ಸಂಖ್ಯೆಯಲ್ಲಿ ಚಿಂತಕರು ಹಾಗೂ ಅವತಾರ ಪುರುಷರು ಜನಿಸಿದರೂ ಅಸಂತೋಷದ ವಾತಾವರಣ ಇದೆ. ಅದಕ್ಕೆ ಕಾರಣ ಹುಡುಕುವ ತುರ್ತು ಇದೆ’ ಎಂದರು. ಲಕ್ಷ್ಮಿನಾರಾಯಣಸ್ವಾಮಿ ಅವರು ಹನುಮಂತಯ್ಯ ಅವರ ವ್ಯಕ್ತಿತ್ವವನ್ನೇ ಕೃತಿಯಲ್ಲಿ ಸಮಗ್ರವಾಗಿ ಕಟ್ಟಿಕೊಟ್ಟಿದ್ದಾರೆ. ಇದು ಹೊಸ ಆಯಾಮದ ಕೃತಿ. ಒಳಗಿನ ಹಾಗೂ ಸಮಾಜದ ನೋವಿಗೆ ಬರಹದ ಸ್ವರೂಪ ಸಿಕ್ಕರೆ ಸಹಜತೆ ಹಾಗೂ ಸ್ಪಷ್ಟತೆ ಇರುತ್ತದೆ ಎಂದು ಹೇಳಿದರು. ಸಂಸ್ಕೃತಿಯಿಂದಲೇ ವ್ಯಕ್ತಿ ಗುರುತಿಸಿಕೊಳ್ಳಬೇಕು. ಸಾಮಾಜಿಕ ಆಂದೋಲನಗಳು ಹೊಸ ಕಲ್ಪನೆ ರೂಪಿಸುತ್ತವೆ. ಹಾಗೆಯೇ ಪರಿವರ್ತನೆ ತರುತ್ತವೆ ಎಂದರು.

ಮಹಾರಾಣಿ ಕ್ಲಸ್ಟರ್‌ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಡಾ.ಎಂ.ಎನ್‌.ಆಶಾದೇವಿ ಮಾತನಾಡಿ, ‘ವಿನಾಶದ ಮಾದರಿಗಳು ಮನೆ ಹೊಕ್ಕಿವೆ. ಅದರಿಂದ ಪಾರು ಮಾಡುವ ದಾರಿ ಹುಡುಕಬೇಕಿದೆ’ ಎಂದು ಎಚ್ಚರಿಸಿದರು.

ದಲಿತ, ಬಂಡಾಯ ಸಾಹಿತ್ಯದ ಬಗ್ಗೆ ಉತ್ಸಾಹ ಮಾತುಗಳೇ ಕೇಳಿಬರುತ್ತಿವೆ. ಅದರೆ, ಸಾಹಿತ್ಯ ಮೀಮಾಂಸೆಯನ್ನು ತಾತ್ವಿಕ ನೆಲೆಗಟ್ಟಿನಲ್ಲಿ ಕಟ್ಟಲು ಆಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ವಿಮರ್ಶಕ ಡಾ.ಎಚ್‌.ಎಸ್‌.ರಾಘವೇಂದ್ರರಾವ್‌ ಅಧ್ಯಕ್ಷತೆ ವಹಿಸಿದ್ದರು. ರಾಜ್ಯಸಭಾ ಸದಸ್ಯ ಡಾ.ಎಲ್‌. ಹನುಮಂತಯ್ಯ, ಬೆಂಗಳೂರು ವಿಶ್ವವಿದ್ಯಾಲಯದ ಡಾ.ಬಾಬು ಜಗಜೀವನರಾಮ್‌ ಅಧ್ಯಯನ ಮತ್ತು ಸಂಶೋಧನ ಕೇಂದ್ರದ ನಿರ್ದೇಶಕ ಪ್ರೊ.ಬಿ.ಗಂಗಾಧರ, ಅನ್ನಪೂರ್ಣ ಪಬ್ಲಿಷಿಂಗ್‌ ಹೌಸ್‌ ಮಾಲೀಕರಾದ ಬಿ.ಕೆ.ಸುರೇಶ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT