ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲ್ಲಸಂದ್ರದಲ್ಲಿ ಕೆಂಪೇಗೌಡ ಉದ್ಯಾನ ಉದ್ಘಾಟನೆ: ಜೆಡಿಎಸ್‌–ಬಿಜೆಪಿ ಜಟಾಪಟಿ

Last Updated 29 ಆಗಸ್ಟ್ 2020, 20:00 IST
ಅಕ್ಷರ ಗಾತ್ರ

ಪೀಣ್ಯ ದಾಸರಹಳ್ಳಿ: ಮಲ್ಲಸಂದ್ರ ವಾರ್ಡ್‌ನಲ್ಲಿ ಕೆಂಪೇಗೌಡ ಉದ್ಯಾನ ಹಾಗೂ ವಿವಿಧ ಕಟ್ಟಡಗಳ ಉದ್ಘಾಟನೆ ಶನಿವಾರ ನಡೆಯಿತು. ಉದ್ಯಾನ ಕಾಮಗಾರಿಯಲ್ಲಿ ಹಗರಣ ನಡೆದಿದೆ ಎಂದು ಆರೋಪಿಸಿ ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಬಾಲಗಂಗಾಧರನಾಥ ಸ್ವಾಮೀಜಿ ಒಳಾಂಗಣ ಕ್ರೀಡಾಂಗಣ, ಶಿವಕುಮಾರ ಸ್ವಾಮೀಜಿ ಯೋಗ ಹಾಗೂ ಧ್ಯಾನ ಮಂದಿರ, ಬಯಲು ರಂಗಮಂದಿರ, ಪೌರಕಾರ್ಮಿಕರ ವಿಶ್ರಾಂತಿಗೃಹ, ವಿವಿಧೋದ್ದೇಶ ಕಟ್ಟಡ ನಿರ್ಮಾಣ, ಕೆಂಪೇಗೌಡ ಕೋಟೆ, ಸಂಗೊಳ್ಳಿ ರಾಯಣ್ಣ ಪ್ರತಿಮೆ, ಕಿತ್ತೂರು ರಾಣಿ ಚನ್ನಮ್ಮ ಪ್ರತಿಮೆ ನಿರ್ಮಾಣ ಮಾಡಲಾಗಿದೆ. ಇವುಗಳನ್ನು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಉದ್ಘಾಟಿಸಿದರು.

‘ವಿಧಾನಸೌಧ ಮತ್ತು ವಿಕಾಸಸೌಧಕ್ಕೆ ಕಲ್ಲುಗಳನ್ನು ಪೂರೈಕೆ ಮಾಡಿದ ಮಲ್ಲಸಂದ್ರ ಬಂಡೆ ಖರಾಬು ಜಾಗ ವಿವಾದದಲ್ಲಿ ಸಿಲುಕಿ ಹಲವು ವರ್ಷಗಳೇ ಕಳೆದಿದ್ದು, ಕಾಮಗಾರಿಯಲ್ಲಿ ಅಕ್ರಮ ನಡೆದಿದೆ’ ಎಂದು ಆರೋಪಿಸಿ ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಕೆ.ಕುಮಾರ ಸ್ವಾಮಿ, ಶಾಸಕ ಆರ್‌.ಮಂಜುನಾಥ್, ವಿಧಾನ ಪರಿಷತ್ ಸದಸ್ಯ ತಿಪ್ಪೇಸ್ವಾಮಿ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ವಿಧಾನ ಪರಿಷತ್‌ ಸದಸ್ಯ ಎಂ.ನಾರಾಯಣಸ್ವಾಮಿ ನೇತೃತ್ವದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಪ್ರತಿಭಟನೆಗೆ ಕೈಜೋಡಿಸಿದರು. ಪ್ರತಿಭಟನಕಾರರು ‘ನಮ್ಮ ತೆರಿಗೆ ಅವರ ಸುಲಿಗೆ‘, ‘ಆಗಲೇಬೇಕು ತನಿಖೆ’, ‘ಅಭಿವೃದ್ಧಿ ಬೇಕು ಹಗರಣ ಸಾಕು’ ಎಂಬ ಫಲಕಗಳನ್ನು ಪ್ರದರ್ಶಿಸಿದರು. ‘ಸ್ಥಳೀಯ ಶಾಸಕರಿಗೆ ಹಾಗೂ ವಿಧಾನ ಪರಿಷತ್‌ ಸದಸ್ಯರಿಗೆ ಕಾರ್ಯಕ್ರಮಕ್ಕೆ ಆಹ್ವಾನ ನೀಡದೆ ಶಿಷ್ಟಾಚಾರ ಉಲ್ಲಂಘಿಸಲಾಗಿದೆ’ ಎಂದೂ ಆರೋಪಿಸಿದರು. ಕಾರ್ಯಕ್ರಮಕ್ಕೆ ಅಡ್ಡಿಪಡಿಸಲು ಯತ್ನಿಸಿದ ಪ್ರತಿಭಟನಕಾರರನ್ನು ಪೊಲೀಸರು ಬಂಧಿಸಿ ಕರೆದೊಯ್ದರು.

ಸ್ಥಳೀಯ ಪಾಲಿಕೆ ಸದಸ್ಯ ಎನ್. ಲೋಕೇಶ್ ಪ್ರತಿಕ್ರಿಯಿಸಿ, ‘ಎಸ್ ಮುನಿರಾಜು ಅವರ ನೇತೃತ್ವದಲ್ಲಿ ಕೈಗೊಂಡ ಕೆಂಪೇಗೌಡ ಉದ್ಯಾನ ಇಂದು ಕೈಗೂಡಿದೆ. ಇದರಲ್ಲಿ ಕಳಪೆ, ಅಕ್ರಮ ನಡೆದಿಲ್ಲ. ಹಾಗೇನಾದರೂ ಕಂಡುಬಂದಲ್ಲಿ ಸ್ಪಷ್ಟಪಡಿಸಲಿ. ಯಾವುದೇ ತನಿಖೆಗೂ ಸಿದ್ಧ’ ಎಂದರು.

ಕಾರ್ಯಕ್ರಮದಲ್ಲಿ ಮೇಯರ್‌ ಎಂ. ಗೌತಮ್‌ ಕುಮಾರ್‌, ವಿಧಾನ ಪರಿಷತ್‌ ಸದಸ್ಯ ಅ. ದೇವೇಗೌಡ, ಉಪ ಮೇಯರ್‌ ಸಿ.ಆರ್‌. ರಾಮಮೋಹನ್ ರಾಜು, ಬಿಜೆಪಿ ಮುಖಂಡ ಎಸ್‌.ಮುನಿರಾಜು, ತೋಟಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷೆ ಉಮಾದೇವಿ ನಾಗರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT