ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಂಗೇರಿಯಲ್ಲಿ ರಸ್ತೆ ದಾಟುವ ಸರ್ಕಸ್

ಮೆಟ್ರೊ ರೈಲು, ಬಿಎಂಟಿಸಿ ಬಸ್ ಹತ್ತಲು ರಸ್ತೆ ದಾಟುವುದು ಅನಿವಾರ್ಯ; ಪ್ರಯಾಣಿಕರ ಪರದಾಟ
Last Updated 20 ಜನವರಿ 2022, 18:36 IST
ಅಕ್ಷರ ಗಾತ್ರ

ಬೆಂಗಳೂರು: ಅಡ್ಡಾದಿಡ್ಡಿ ನಿಲ್ಲುವ ಬಸ್‌ಗಳು, ಕಾಣೆಯಾಗಿರುವ ಪಾದಚಾರಿ ಮಾರ್ಗ, ಜೀವ ಬಿಗಿ ಹಿಡಿದು ರಸ್ತೆ ದಾಟುವ ಪಾದಚಾರಿಗಳು...

ಇದು ಕೆಂಗೇರಿಯ ಬಿಎಂಟಿಸಿ ಮತ್ತು ಮೆಟ್ರೊ ರೈಲು ನಿಲ್ದಾಣದ ಆಸುಪಾಸಿನ ದೃಶ್ಯ. ಮೈಸೂರು ರಸ್ತೆ ಮೂಲಕ ನಗರ ಪ್ರವೇಶಿಸುವವರಿಗೆ ಕೆಂಗೇರಿ ಜಂಕ್ಷನ್ ಹೆಬ್ಬಾಗಿಲು. ವಾಹನಗಳ ದಟ್ಟಣೆ ಇಲ್ಲಿ ಸಾಮಾನ್ಯವಾದ ದೃಶ್ಯ.

ಕೆಂಗೇರಿ ತನಕ ಮೆಟ್ರೊ ರೈಲು ಸಂಚಾರ ಆರಂಭವಾಗಿದೆ. ಮೆಟ್ರೊ ರೈಲು ನಿಲ್ದಾಣದ ಪಕ್ಕದಲ್ಲೇ ಬಿಎಂಟಿಸಿ ಟರ್ಮಿನಲ್ ಕೂಡ ಇದೆ. ಈ ಟಿಟಿಎಂಸಿ ಪ್ರವೇಶಿಸಿದರೆ ವಿಶಾಲವಾದ ನಿಲ್ದಾಣ ಇದೆ. ಈ ನಿಲ್ದಾಣದ ಒಳಕ್ಕೆ ನೆಪಮಾತ್ರಕ್ಕೆ ಪ್ರವೇಶಿಸುವ ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ ಬಸ್‌ಗಳು ಪ್ರಯಾಣಿಕರನ್ನು ಹತ್ತಿಸಿಕೊಳ್ಳುವುದು ನಿಲ್ದಾಣದ ಹೊರಗಿನ ಮೈಸೂರು ರಸ್ತೆಯಲ್ಲೇ.

ನಿಲ್ದಾಣದಿಂದ ಹೊರಗೆ ಬರುವ ಪ್ರವೇಶ ದ್ವಾರದಲ್ಲೇ ಬಸ್‌ಗಳು ಅಡ್ಡಾದಿಟ್ಟಿಯಾಗಿ ನಿಲ್ಲುತ್ತವೆ. ಪಾದಚಾರಿಗಳು ನಿಲ್ದಾಣ ಪ್ರವೇಶಿಸಲು ಈ ಬಸ್‌ಗಳ ಸಂದುಗಳಲ್ಲಿ ನುಸಳಿ ಸರ್ಕಸ್ ಮಾಡಿ ಸಾಗಬೇಕು. ಪಾದಚಾರಿ ಮಾರ್ಗ ಇದ್ದರೂ ಅದರ ಮೇಲೆ ವ್ಯಾಪಾರ ವಹಿವಾಟು ವಿಸ್ತರಿಸಿಕೊಂಡಿದೆ.

ಮೈಸೂರು, ಮಂಡ್ಯ, ರಾಮನಗರ ಕಡೆಯಿಂದ ಬರುವ ಎಲ್ಲಾ ಕೆಎಸ್‌ಆರ್‌ಟಿಸಿ ಮತ್ತು ಖಾಸಗಿ ಬಸ್‌ಗಳಿಗೂ ಕೆಂಗೇರಿಯಲ್ಲಿ ನಿಲುಗಡೆಗೆ ಅವಕಾಶ ಇದೆ. ಅಲ್ಲಿ ಬಸ್ ಇಳಿದು ಬಿಎಂಟಿಸಿ ಬಸ್ ಅಥವಾ ಮೆಟ್ರೊ ರೈಲು ನಿಲ್ದಾಣ ಪ್ರವೇಶಿಸಬೇಕೆಂದರೆ ರಸ್ತೆ ದಾಟಲೇಬೇಕು.

ಮಕ್ಕಳ ಜೊತೆಗೆ ಬ್ಯಾಗ್ ಹಿಡಿದು ಅಥವಾ ಚೀಲಗಳನ್ನು ಹೊತ್ತು ಬರುವ ಪ್ರಯಾಣಿಕರಂತೂ ರಸ್ತೆ ದಾಟಲು ಹರಸಾಹಸವನ್ನೇ ಮಾಡಬೇಕು. ಮೈಸೂರು ಕಡೆಯಿಂದ ಬರುವ ರೈಲುಗಳಲ್ಲಿ ಕೆಂಗೇರಿ ನಿಲ್ದಾಣದಲ್ಲೇ ಸಾಕಷ್ಟು ಪ್ರಯಾಣಿಕರು ಇಳಿದು ಬೇರೆ ಕಡೆಗೆ ಸಾಗಲು ಬಿಎಂಟಿಸಿ ಬಸ್ ಮತ್ತು ಮೆಟ್ರೊ ರೈಲು ನಿಲ್ದಾಣದತ್ತ ಹೋಗುತ್ತಾರೆ. ಈ ಎಲ್ಲ ಪ್ರಯಾಣಿಕರು ಪ್ರಯಾಸದಲ್ಲಿ ರಸ್ತೆ ದಾಟಬೇಕಾದ ಅನಿವಾರ್ಯತೆ ಇದೆ.

‘ಮೈಸೂರು ಕಡೆಗೆ ಸಾಗುವ ಲಾರಿ ಮತ್ತು ಕಾರುಗಳು ವೇಗವಾಗಿ ಸಾಗುತ್ತವೆ. ಸ್ವಲ್ಪ ದೂರದಲ್ಲೇ ಸಂಚಾರ ಸಿಗ್ನಲ್ ಇದೆ. ಆ ಸಿಗ್ನಲ್‌ನಲ್ಲಿ ಹಸಿರು ದೀಪಗಳಿದ್ದರೆ ಕಾರು ಮತ್ತು ಲಾರಿ ಚಾಲಕರು ಪಾದಚಾರಿಗಳನ್ನು ಗಮನಿಸದೆ ವೇಗವಾಗಿ ಚಾಲನೆ ಮಾಡಿಕೊಂಡು ಸಾಗುತ್ತಾರೆ. ಬೆಳಿಗ್ಗೆ ಮತ್ತು ಸಂಜೆ ವೇಳೆಯಂತೂ ಪಾದಚಾರಿಗಳು ರಸ್ತೆ ದಾಟಲು ಪರಾದಾಟ ತಪ್ಪಿದಲ್ಲ’ ಎಂದು ಅಳಲು ತೋಡಿಕೊಳ್ಳುತ್ತಾರೆ ಸ್ಥಳೀಯರು.

ಅರ್ಧಕ್ಕೆ ನಿಂತ ಪಾದಚಾರಿ ಮೇಲ್ಸೇತುವೆ ಕಾಮಗಾರಿ

ಪಾದಚಾರಿಗಳು ರಸ್ತೆ ದಾಟಲು ಅನುಕೂಲ ಆಗುವಂತೆ ಪಾದಚಾರಿ ಮೇಲ್ಸೇತುವೆ ನಿರ್ಮಾಣ ಕಾರ್ಯವನ್ನು ಬಿಬಿಎಂಪಿ ಆರಂಭಿಸಿ ಅರ್ಧಕ್ಕೆ ನಿಲ್ಲಿಸಿದೆ.

ರಸ್ತೆಯ ಎರಡೂ ಬದಿ ಮತ್ತು ರಸ್ತೆ ವಿಭಜಕದ ಮೇಲೆ ಕಬ್ಬಿಣದ ಕಂಬಗಳನ್ನು ನಿಲ್ಲಿಸಲಾಗಿದೆ. ಪಾದಚಾರಿ ಮಾರ್ಗ ಅಳವಡಿಕೆ ಮಾಡಲು ಸಿದ್ಧಪಡಿಸಿ ತಂದಿರುವ ಸಲಕರಣೆಗಳನ್ನು ರಸ್ತೆ ಬದಿಯಲ್ಲೇ ಬಿಸಾಡಲಾಗಿದೆ.

‘ಇಡೀ ಜಂಕ್ಷನ್‌ನಲ್ಲಿ ಸದಾ ಗಿಜಿಗುಡುವ ವಾತಾವರಣ ಇರುತ್ತದೆ. ಪಾದಚಾರಿ ಮಾರ್ಗವೂ ಇಲ್ಲ, ರಸ್ತೆ ದಾಟಲು ಅನುಕೂಲವೂ ಇಲ್ಲ. ಮೈಸೂರು ಕಡೆಯಿಂದ ಬರುವ ಬಸ್ ಮತ್ತು ರೈಲು ಪ್ರಯಾಣಿಕರಿಗೆ ಇದು ಪ್ರಮುಖ ಜಂಕ್ಷನ್‌. ಇಲ್ಲಿನ ಎಲ್ಲ ಸಮಸ್ಯೆಗಳನ್ನು ಸಮಗ್ರವಾಗಿ ಸರಿಪಡಿಸಬೇಕು. ಪಾದಚಾರಿ ಮೇಲ್ಸೇತುವೆಯನ್ನು ತುರ್ತಾಗಿ ನಿರ್ಮಿಸಬೇಕು’ ಎಂದು ರೈಲ್ವೆ ಹೋರಾಟಗಾರ ಕೃಷ್ಣ ಪ್ರಸಾದ್ ಒತ್ತಾಯಿಸಿದರು.

ಪಾದಚಾರಿ ಮಾರ್ಗದ ಕಾಮಗಾರಿ ಅರ್ಧಕ್ಕೆ ನಿಂತಿರುವ ಬಗ್ಗೆ ಪ್ರತಿಕ್ರಿಯೆ ಪಡೆಯಲು ಬಿಬಿಎಂಪಿ ಅಧಿಕಾರಿಗಳನ್ನು ಸಂಪರ್ಕಿಸಲು ಪ್ರಯತ್ನಿಸಲಾಯಿತು. ಅಧಿಕಾರಿಗಳು ಸಂಪರ್ಕಕ್ಕೆ ಬರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT