ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿಸಾನ್ ಸಮ್ಮಾನ್ ಹಣ ಖಾತೆಗೆ ಶೀಘ್ರ: ಕೃಷಿ ಸಚಿವ ಬಿ.ಸಿ.ಪಾಟೀಲ

Last Updated 13 ಫೆಬ್ರುವರಿ 2020, 18:32 IST
ಅಕ್ಷರ ಗಾತ್ರ

ಬೆಂಗಳೂರು: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಈವರೆಗೂ ಹಣ ಪಾವತಿಯಾಗದ ರೈತರಿಗೆ ಎರಡು ವಾರಗಳಲ್ಲಿ ವಿತರಿಸಲು ಕ್ರಮಕೈಗೊಳ್ಳಲಾಗಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಗುರುವಾರ ತಿಳಿಸಿದರು.

ಸಚಿವರಾದ ಬಳಿಕ ಇಲಾಖೆ ಹಿರಿಯ ಅಧಿಕಾರಿಗಳ ಸಭೆ ನಡೆಸಿದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಕಿಸಾನ್ ಸಮ್ಮಾನ್ ಯೋಜನೆಯಲ್ಲಿ 52.81 ಲಕ್ಷ ರೈತರು ನೋಂದಾಯಿಸಿಕೊಂಡಿದ್ದು, ಪ್ರತಿ ರೈತರಿಗೆ ₹6 ಸಾವಿರ ನೀಡಲಾಗುತ್ತಿದೆ. ಈವರೆಗೆ49.05 ಲಕ್ಷ ಮಂದಿಗೆ ₹2,706 ಕೋಟಿ ಪಾವತಿಸಲಾಗಿದೆ’ ಎಂದರು.

ಕೇಂದ್ರದ ನೆರವಿನ ಜತೆಗೆ ರಾಜ್ಯ ಸರ್ಕಾರ ಸಹ ₹4 ಸಾವಿರ ಕೊಡುತ್ತಿದೆ. ಮೊದಲ ಕಂತಿನ ₹2 ಸಾವಿರವನ್ನು 41.27 ಲಕ್ಷ ರೈತರ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಲಾಗಿದೆ ಎಂದು ಅವರು ಹೇಳಿದರು.

ತಹಶೀಲ್ದಾರ್ ಕಚೇರಿ, ಖಾಸಗಿ ಏಜೆನ್ಸಿಗಳಲ್ಲಿ ನೋಂದಾಯಿಸಿಕೊಂಡ ರೈತರಿಗೆ ಹಣ ಪಾವತಿಸುವುದನ್ನೇ ಅಧಿಕಾರಿಗಳು ಮರೆತಿದ್ದಾರೆ. ಈಗ ವ್ಯವಸ್ಥೆ ಮಾಡಿದ್ದು 15 ದಿನಗಳಲ್ಲಿ ರೈತರ ಖಾತೆಗೆ ಹಣ ಪಾವತಿಯಾಗಲಿದೆ. ಇದರಿಂದ ತೊಂದರೆಗೆ ಸಿಲುಕಿದವರ ಕ್ಷಮೆ ಕೇಳುತ್ತೇನೆ’ ಎಂದರು.

ಜಾಗೃತ ದಳ: ‘ನಕಲಿ ಬಿತ್ತನೆ ಬೀಜ ಮಾರಾಟ ತಡೆಯುವ ಸಲುವಾಗಿ ಜಿಲ್ಲಾ ಮಟ್ಟದಲ್ಲಿ ಜಾಗೃತ ದಳ ರಚಿಸಲಾಗಿದ್ದು, ಕಟ್ಟುನಿಟ್ಟಿನ ಕ್ರಮಕ್ಕೆ ಸೂಚಿಸಿದ್ದೇನೆ. ನನ್ನ ಅವಧಿಯಲ್ಲಿ ಯಾವುದೇ ಕಾರಣಕ್ಕೂ ನಕಲಿ ಬಿತ್ತನೆ ಬೀಜ ವಿತರಣೆಯಾಗಬಾರದು ಎಂದು ಎಚ್ಚರಿಸಿದ್ದೇನೆ. ರಸಗೊಬ್ಬರ ಕೊರತೆಯಾಗದಂತೆ ನೋಡಿಕೊಂಡಿದ್ದು, ಅಗತ್ಯ ಪ್ರಮಾಣದಲ್ಲಿ ದಾಸ್ತಾನು ಮಾಡಲಾಗಿದೆ’ ಎಂದು
ತಿಳಿಸಿದರು.

ಮುಂಗಾರಿನಿಂದ ಇಸ್ರೇಲ್ ಕೃಷಿ

ಈ ಬಾರಿಯ ಮುಂಗಾರು ಹಂಗಾಮಿನ ಸಮಯದಲ್ಲಿ ಇಸ್ರೇಲ್ ಮಾದರಿಯ ಕೃಷಿಯನ್ನು ಪ್ರಾಯೋಗಿಕವಾಗಿ ಜಾರಿಗೆ ತರಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಕೃಷಿ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ ಹೇಳಿದರು. ಇಸ್ರೇಲ್ ಮಾದರಿಯನ್ನು ರಾಜ್ಯದಲ್ಲಿ ಅಳವಡಿಸಿಕೊಳ್ಳುವ ಬಗ್ಗೆ ಸಾಕಷ್ಟು ಕೆಲಸಗಳು ನಡೆದಿವೆ. ಕೃಷಿ ವಿಶ್ವವಿದ್ಯಾಲಯಗಳು, ತಜ್ಞರ ಜತೆಗೆ ಚರ್ಚಿಸಿದ್ದು, ಅಗತ್ಯ ಸಿದ್ಧತೆ ಮಾಡಿಕೊಳ್ಳಲು ಸೂಚಿಸಲಾಗಿದೆ ಎಂದರು.

‘ರೈತರಿಗಾಗಿ ಜೈಲಿಗೆ ಹೋಗಿದ್ದೆ’

‘ರೈತರ ಪರವಾಗಿ ಹೋರಾಟ ಮಾಡಿ ಈ ಹಿಂದೆ 9 ದಿನ ಜೈಲಿನಲ್ಲಿ ಇದ್ದೆ. ಅರಣ್ಯ ಖಾತೆ ಬದಲು ಜನರ ಜತೆಗೆ ಸ್ಪಂದಿಸಲು ಸಾಧ್ಯವಿರುವ ಕೃಷಿ ಖಾತೆ ಕೊಡುವಂತೆ ಮುಖ್ಯಮಂತ್ರಿಯನ್ನು ಕೇಳಿ ಪಡೆದುಕೊಂಡಿದ್ದೇನೆ. ಕೃಷಿ ಕುಟುಂಬದಿಂದ ಬಂದಿರುವುದರಿಂದ ರೈತರ ಕಷ್ಟಗಳು ಗೊತ್ತಿದ್ದು, ನಿರ್ವಹಣೆ ಸುಲಭವಾಗುತ್ತದೆ’ ಎಂದು ಬಿ.ಸಿ.ಪಾಟೀಲ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT