ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದುಳಿದ ಜಿಲ್ಲೆ ‘ಕಲ್ಯಾಣ’ ಆಮೆಗತಿ: 93 ಕಾಮಗಾರಿ ಮಾತ್ರ ಪೂರ್ಣ

ಕೆಕೆಆರ್‌ಡಿಬಿ: ಜ. 15ರವರೆಗೆ ಶೇ 27ರಷ್ಟು ಮಾತ್ರ ಗುರಿ ಸಾಧನೆ l93 ಕಾಮಗಾರಿ ಮಾತ್ರ ಪೂರ್ಣ
Last Updated 22 ಜನವರಿ 2023, 21:36 IST
ಅಕ್ಷರ ಗಾತ್ರ

ಬೆಂಗಳೂರು: ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಲ್ಲಿ ಪ್ರಸಕ್ತ ಹಣಕಾಸು ಸಾಲಿನಲ್ಲಿ (2022-23) ಅಭಿವೃದ್ಧಿ ಕಾಮಗಾರಿಗಳ ವೇಗ ಆಮೆಗತಿಯಲ್ಲಿ ಸಾಗಿದೆ. ‘ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ’ಯಲ್ಲಿ (ಕೆಕೆಆರ್‌ಡಿಬಿ) ಈ ವರ್ಷ ಅಭಿವೃದ್ಧಿಗೆ ಲಭ್ಯವಿರುವ ₹ 3,783.59 ಕೋಟಿಯಲ್ಲಿ ಇದುವರೆಗೆ ₹ 1,037.41 ಕೋಟಿ ಯಷ್ಟೇ ವೆಚ್ಚವಾಗಿದೆ. ವಾರ್ಷಿಕ ಕೇವಲ ಶೇ 27ರಷ್ಟು ಗುರಿ ಸಾಧನೆ ಆಗಿದೆ.

ಪ್ರಸಕ್ತ ವರ್ಷ, ಮಂಡಳಿ ವ್ಯಾಪ್ತಿಯ ಕೊಪ್ಪಳ, ಕಲಬುರಗಿ, ಯಾದಗಿರಿ, ಬೀದರ್‌, ರಾಯಚೂರು, ಬಳ್ಳಾರಿ, ವಿಜಯನಗರ –ಈ ಏಳು ಜಿಲ್ಲೆಗಳಿಗೆ 2,277 ಕಾಮಗಾರಿಗಳು ಮಂಜೂರಾಗಿವೆ. ಈ ಪೈಕಿ, ಪೂರ್ಣಗೊಂಡಿರುವುದು 93 ಮಾತ್ರ. ಅದಕ್ಕೆ ₹ 134.55 ಕೋಟಿ ವೆಚ್ಚವಾಗಿದೆ.

‘ವಾರ್ಷಿಕ ಗುರಿ ಸಾಧನೆಯಲ್ಲಿ ಕೊಪ್ಪಳ ಜಿಲ್ಲೆ ಪ್ರಥಮ (ಶೇ 49) ಮತ್ತು ಕಲಬುರಗಿ ಜಿಲ್ಲೆ ಕೊನೆಯ ಸ್ಥಾನದಲ್ಲಿದೆ (ಶೇ 22). ಯಾದಗಿರಿ (ಶೇ 30), ಬೀದರ್‌ (33), ರಾಯಚೂರು (ಶೇ 24), ಬಳ್ಳಾರಿ (ಶೇ 36), ವಿಜಯನಗರ (ಶೇ 24) ಸಾಧನೆ ಮಾಡಿವೆ’ ಎಂದು ಕೆಕೆಆರ್‌ಡಿಬಿ ಕಾರ್ಯದರ್ಶಿ ಅನಿರುದ್ಧ ಶ್ರವಣ್ ‘ಪ್ರಜಾವಾಣಿ’ಗೆ ತಿಳಿಸಿದರು.

ಆದರೆ, ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಅವರ ಅಧ್ಯಕ್ಷತೆಯಲ್ಲಿ ಜ.5ರಂದು ಮಂಡಳಿಯ ಪ್ರಗತಿ ಪರಿಶೀಲನೆ ಸಭೆಗೆ ಮಂಡಿಸಿದ್ದ ವರದಿಯಲ್ಲಿ ಈ ಜಿಲ್ಲೆಗಳಲ್ಲಿ ಕಾಮಗಾರಿಗಳಿಗೆ ಬಿಡುಗಡೆಯಾದ₹ 1,010.29 ಕೋಟಿ ಅನುದಾನ ವನ್ನು ವೆಚ್ಚವೆಂದು ತೋರಿಸಿ ಶೇ 45.23 ರಷ್ಟು ಸಾಧನೆ ಎಂದು ಬಿಂಬಿಸ ಲಾಗಿದೆ. ಪ್ರಗತಿ ಪರಿಶೀಲನೆ ಸಭೆಯ ನಡಾವಳಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

ಕೆಕೆಆರ್‌ಡಿಬಿಗೆ ಪ್ರಸಕ್ತ ಸಾಲಿಗೆ ₹ 3 ಸಾವಿರ ಕೋಟಿ ನಿಗದಿಪಡಿಸಲಾಗಿದೆ. ಅದರಲ್ಲಿ ಆರ್ಥಿಕ ಇಲಾಖೆ ಈವರೆಗೆ ಎರಡು ಕಂತುಗಳಲ್ಲಿ ₹1,450 ಕೋಟಿ ಬಿಡುಗಡೆ ಮಾಡಿದೆ.

‘ಬಿಡುಗಡೆ ಮಾಡಿದ ಮೊತ್ತದಲ್ಲಿ ಶೇ 75ರಷ್ಟು ವೆಚ್ಚ ಮಾಡಿದರೆ ಮಾತ್ರ ಮೂರನೇ ಕಂತಿನ ಅನುದಾನ ಬಿಡುಗಡೆಯ ಪ್ರಸ್ತಾವಕ್ಕೆ ಆರ್ಥಿಕ ಇಲಾಖೆ ಒಪ್ಪಿಗೆ ನೀಡುತ್ತದೆ. ಆ ಗುರಿ ಸಾಧನೆ ಆಗದಿರುವುದರಿಂದ ಕೆಕೆಆರ್‌ಡಿಬಿಗೆ ಮುಂದಿನ ಕಂತು ಬಿಡುಗಡೆ ಆಗಿಲ್ಲ’ ಎಂದು ಆರ್ಥಿಕ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

ವಾಸ್ತವ ಮಾಹಿತಿಗೆ ಸೂಚನೆ: ಜ. 5ರಂದು ನಡೆದ ಪ್ರಗತಿ ಪರಿಶೀಲನೆ ಸಭೆಯ ಮಾಹಿತಿ ಹಂಚಿಕೊಂಡ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲಾಧಿಕಾರಿಯೊಬ್ಬರು, ‘ಬಿಡುಗಡೆಯಾದ ಅನುದಾನವನ್ನು ವೆಚ್ಚವೆಂದು ತೋರಿಸಿರುವುದು ಸರಿಯಾದ ಕ್ರಮ ಅಲ್ಲ. ವಾಸ್ತವ ವೆಚ್ಚವನ್ನು ನಮೂದಿಸಬೇಕು. ಅನುಷ್ಠಾನ ಅಧಿಕಾರಿಗಳು ಭಾಗಶಃ ವೆಚ್ಚ ಮಾಡಿರುವುದನ್ನು ನಮೂದಿಸಲು ಮಂಡಳಿ ವ್ಯಾಪ್ತಿಯ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯಿತಿ ಸಿಇಒಗಳು ಮತ್ತು ಮಂಡಳಿ ಕಾರ್ಯದರ್ಶಿ ಕ್ರಮ ವಹಿಸಬೇಕು ಎಂದು ಶಾಲಿನಿ ರಜನೀಶ್‌ ಸೂಚಿಸಿದ್ದಾರೆ’ ಎಂದರು.

‘ಪ್ರಗತಿಯ ವೇಗ ಹೆಚ್ಚಿಸುವ ಅಗತ್ಯವಿದೆ. ನಿಮ್ಮ ಪ್ರಗತಿಯ ವೇಗದ ಆಧಾರದಲ್ಲಿ ಮುಂದಿನ ಸಾಲಿನಲ್ಲಿ ₹ 5 ಸಾವಿರ ಕೋಟಿ ನೀಡಲು ಮುಖ್ಯಮಂತ್ರಿ ಉದ್ದೇಶಿಸಿದ್ದಾರೆ. ಪ್ರಗತಿ ತೃಪ್ತಿಕರವಾಗಿ ಇಲ್ಲದೇ ಇದ್ದರೆ ಅನುದಾನ ನೀಡಲು ಸಾಧ್ಯವಾಗುವುದಿಲ್ಲ ಎನ್ನುವ ಅಂಶವನ್ನು ಗಮನಿಸಬೇಕು. ಇನ್ನೂ ಆರಂಭವಾಗದ ಎಲ್ಲ ಕಾಮಗಾರಿಗಳನ್ನು ಜನವರಿ ಅಂತ್ಯದೊಳಗೆ ಆರಂಭಿಸಬೇಕು ಎಂದೂ ಅವರು ಸೂಚಿಸಿದ್ದಾರೆ’ ಎಂದರು.

1,296 ಕಾಮಗಾರಿ ಆರಂಭವೇ ಆಗಿಲ್ಲ: 2022–23ನೇ ಸಾಲಿನಲ್ಲಿ 2,277 ಕಾಮಗಾರಿಗಳ ಆರಂಭಕ್ಕೆ ಅನುಮೋದನೆ ನೀಡಲಾಗಿದೆ. ಅದರಲ್ಲಿ 93 ಕಾಮಗಾರಿಗಳು ಮಾತ್ರ ಪೂರ್ಣಗೊಂಡಿದೆ. 888 ಕಾಮಗಾರಿಗಳು ಪ್ರಗತಿಯಲ್ಲಿದೆ. 1,296 ಕಾಮಗಾರಿಗಳು ಆರಂಭವೇ ಆಗಿಲ್ಲ. 2020–21ನೇ ಸಾಲಿನಲ್ಲಿ ಅನುಮೋದನೆ ನೀಡಿದ್ದ 2,275 ಕಾಮಗಾರಿಗಳಲ್ಲಿ 117 ಕಾಮಗಾರಿಗಳು ಎರಡು ವರ್ಷ ದಾಟಿದ್ದರೂ ಆರಂಭ ಆಗಿಲ್ಲ. ಆ ಕಾಮಗಾರಿಗಳನ್ನು ಕೈಬಿಡಲು ಸಚಿವ ಮುನಿರತ್ನ ಸೂಚಿಸಿದ್ದಾರೆ.

ಎರಡು ವರ್ಷ ಕಳೆದರೂ ಆರಂಭವಾಗದ ಕಾಮಗಾರಿಗಳ ಪಟ್ಟಿಯನ್ನು ಮಂಡಳಿಯ ಕಾರ್ಯದರ್ಶಿ ತಕ್ಷಣ ಸರ್ಕಾರಕ್ಕೆ ಸಲ್ಲಿಸಬೇಕು. ಹೀಗೆ ಕೈಗೊಳ್ಳದ ಕಾಮಗಾರಿಗಳಿಂದ ಉಳಿತಾಯವಾಗುವ ಅನುದಾನ
ವನ್ನು ಮರುವಿನಿಯೋಗಿಸಲು ಪ್ರತ್ಯೇಕ ಆದೇಶ ಹೊರಡಿಸಲಾಗುವುದು ಎಂದೂ ಸಭೆಯ ನಡಾವಳಿಯಲ್ಲಿ ತಿಳಿಸಲಾಗಿದೆ.

ಅಧಿಕಾರಿಗಳಿಂದ ‘ಮುಚ್ಚಳಿಕೆ ಪತ್ರ’!

ಅಕ್ಟೋಬರ್‌ 20ರಂದು ನಡೆದ ಮಂಡಳಿಯ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅನುದಾನ ವೆಚ್ಚ ಆಗದಿರುವ ಬಗ್ಗೆ ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದ ಯೋಜನೆ ಮತ್ತು ಸಾಂಖ್ಯಿಕ ಸಚಿವ ಮುನಿರತ್ನ, ಅಧಿಕಾರಿಗಳಿಂದ ಮುಚ್ಚಳಿಕೆ ಪತ್ರವನ್ನು ಬರೆಸಿಕೊಂಡಿದ್ದರು.

‘ಸರ್ಕಾರದ ಆದೇಶದಂತೆ ಅನುಮೋದನೆ ನೀಡಿರುವ ಕಾಮಗಾರಿಗಳಿಗೆ ಅಂದಾಜು ತಯಾರಿಸಿ ತಾಂತ್ರಿಕ ಮತ್ತು ಆಡಳಿತಾತ್ಮಕ ಅನುಮೋದನೆ ಪಡೆದು ಟೆಂಡರ್‌ ಕರೆದು ಕಾರ್ಯಾದೇಶ ನೀಡಿ, ನ. 30ರೊಳಗೆ ಕಾಮಗಾರಿ
ಗಳನ್ನು ಆರಂಭಿಸುತ್ತೇನೆ. ತಪ್ಪಿದರೆ ಸರ್ಕಾರ ನನ್ನ ಮೇಲೆ ಅಗತ್ಯ ಶಿಸ್ತು ಕ್ರಮ ಕೈಗೊಳ್ಳಬಹುದು’ ಎಂಬ ಮುಚ್ಚಳಿಕೆಗೆ ಎಲ್ಲ ಅಧಿಕಾರಿಗಳು ಸಹಿ ಹಾಕಿದ್ದರು. ಆದರೂ ಹಲವು ಕಾಮಗಾರಿಗಳು ಆರಂಭವಾಗಿಲ್ಲ ಎಂದು ತಿಳಿಸಿವೆ.

***

ಅಭಿವೃದ್ಧಿಯ ಆಮೆಗತಿಗೆ ಹಲವು ಕಾರಣಗಳಿವೆ. ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸದಿದ್ದರೆ ಮುಂದೆ ಅನುಷ್ಠಾನ ಏಜೆನ್ಸಿಯಿಂದಲೇ ದಂಡ ವಸೂಲು ಮಾಡಲಾಗುವುದು

- ಅನಿರುದ್ಧ ಶ್ರವಣ್‌, ಕಾರ್ಯದರ್ಶಿ, ಕೆಕೆಆರ್‌ಡಿಬಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT