ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗಿನ ಪ್ರವಾಹಪೀಡಿತರಿಗೆ ಮಿಡಿದ ಹೃದಯಗಳು

ಸಂತ್ರಸ್ತರಿಗೆ ವಿವಿಧೆಡೆಗಳಿಂದ ಹರಿದುಬಂದ ಪರಿಹಾರ ಸಾಮಗ್ರಿ ಮತ್ತು ಆರ್ಥಿಕ ನೆರವು
Last Updated 19 ಆಗಸ್ಟ್ 2018, 19:35 IST
ಅಕ್ಷರ ಗಾತ್ರ

ಬೆಂಗಳೂರು: ಭಾರಿ ಮಳೆಗೆ ನಲುಗಿಹೋಗಿರುವ ಕೊಡಗು ಜಿಲ್ಲೆಯ ಜನರಿಗೆ ರಾಜಧಾನಿ ಸಹಾಯಹಸ್ತ ಚಾಚಿದೆ. ಸರ್ಕಾರದ ವಿವಿಧ ಸಂಘಟನೆಗಳು, ಸಾರ್ವಜನಿಕರು, ರಾಜಕೀಯ ಪಕ್ಷಗಳು ಸೇರಿದಂತೆ ವಿವಿಧೆಡೆಗಳಿಂದ ಪರಿಹಾರ ಸಾಮಗ್ರಿಗಳನ್ನು ರವಾನಿಸಲಾಗುತ್ತಿದೆ.

ಶಿಕ್ಷಕರ ವೇತನ

ಮಳೆ ಸಂತ್ರಸ್ತ ಜಿಲ್ಲೆಗಳಿಗೆ ನೆರವಾಗಲು ಮುಂದಾಗಿರುವ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಹಾಗೂ ಕಾಲೇಜು ಶಿಕ್ಷಕರ ಸಂಘಟನೆಗಳು ತಮ್ಮ ಒಂದು ದಿನದ ವೇತನವನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಲಿವೆ.

‘ರಾಜ್ಯದಲ್ಲಿ 1.7 ಲಕ್ಷ ಪ್ರಾಥಮಿಕ ಶಾಲಾ ಶಿಕ್ಷಕರಿದ್ದಾರೆ. ಅವರ ಒಂದು ದಿನದ ವೇತನ ₹1,500ರಿಂದ ₹2,000 ಇದೆ. ಇದರ ಅಂದಾಜು ಮೊತ್ತ ₹40 ಕೋಟಿ ಆಗುತ್ತದೆ’ ಎಂದುರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಎನ್‌.ಎಸ್‌.ಚಂದ್ರಶೇಖರ್‌ ತಿಳಿಸಿದರು.

‘ವಿಶ್ವವಿದ್ಯಾಲಯ ಮತ್ತು ಕಾಲೇಜುಗಳಲ್ಲಿ 10 ಸಾವಿರ ಪ್ರಾಧ್ಯಾಪಕರಿದ್ದಾರೆ. ಅವರ ವೇತನವೆಲ್ಲ ಸೇರಿ ಸುಮಾರು ₹5 ಕೋಟಿ ಹಣ ಸಂಗ್ರಹವಾಗಬಹುದು’ ಎಂದುಕಾಲೇಜು ಶಿಕ್ಷಕರ ಸಂಘಟನೆ ಅಧ್ಯಕ್ಷ ಬಿ.ಜಿ. ಭಾಸ್ಕರ್‌ ಹೇಳಿದರು.

ಕೆ.ಆರ್‌.ಪುರದಿಂದ ನೆರವು: ಕ್ಷೇತ್ರದ ವಿವಿಧ ಟ್ರಸ್ಟ್, ಸಂಘ ಸಂಸ್ಥೆಗಳು, ವಿದ್ಯಾಸಂಸ್ಥೆಗಳು ಸಾರ್ವಜನಿಕರು ನೀಡುವ ಕಂಬಳಿ, ಬಿಸ್ಕೆಟ್, ಅಕ್ಕಿ, ನೂಡಲ್ಸ್, ಹಾಲಿನ ಪುಡಿ, ಗ್ಲೂಕೋಸ್ ಪ್ಯಾಕೇಟ್, ಸೊಳ್ಳೆಬತ್ತಿ, ಟಾರ್ಚ್‌, ರೈನ್ ಕೋಟ್, ಮೇಣದ ಬತ್ತಿ, ಮಕ್ಕಳ ಬಟ್ಟೆಗಳು, ಹೊಸ ಉಡುಪುಗಳು, ಅಡುಗೆ ಎಣ್ಣೆ, ಪಾತ್ರೆಗಳಂತಹ ಅಗತ್ಯ ವಸ್ತುಗಳನ್ನು ಸಂಗ್ರಹಿಸಿ ಮಳೆ ಸಂತ್ರಸ್ತರಿಗೆ ತಲುಪಿಸಲು ಮುಂದಾಗಿದ್ದಾರೆ.

ಸಾಧನ ವಿದ್ಯಾಕೇಂದ್ರ ಶಾಲೆಯ ವಿದ್ಯಾರ್ಥಿಗಳು ಕೆ.ನಾರಾಯಣಪುರ ಹಾಗೂ ಹೆಗಡೆ ನಗರದಲ್ಲಿ ನೆರವು ಕೇಂದ್ರ ಸ್ಥಾಪಿಸಿ ಕೊಡಗಿನ ಜನರಿಗೆ ದೇಣಿಗೆ ರೂಪದಲ್ಲಿ ಹಣ, ಹಾಗೂ ದಿನಬಳಕೆಗೆ ಅಗತ್ಯವಿರುವ ವಸ್ತುಗಳನ್ನು ಶನಿವಾರದಿಂದ ಸಂಗ್ರಹಿಸುತ್ತಿದ್ದು, ಸೋಮವಾರ ಅಲ್ಲಿಗೆ ತಲುಪಿಸಲು ಸಿದ್ಧತೆ ನಡೆಸಿದ್ದಾರೆ.

ಶಾಸಕರು, ಪಾಲಿಕೆ ಸದಸ್ಯರ ನೆರವು

ನೆರೆ ಪರಿಹಾರಕ್ಕಾಗಿ ನಗರದ ಬಿಜೆಪಿ ಶಾಸಕರು, ವಿಧಾನ ಪರಿಷತ್‌ ಸದಸ್ಯರು ಹಾಗೂ ಬಿಬಿಎಂಪಿ ಸದಸ್ಯರು ಎರಡು ತಿಂಗಳ ವೇತನ ನೀಡಲು ನಿರ್ಧರಿಸಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ಭಾನುವಾರ ನಡೆದ ಶಾಸಕರು, ಪಾಲಿಕೆ ಸದಸ್ಯರು ಹಾಗೂ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಶಾಸಕ ಆರ್‌.ಅಶೋಕ, ‘ಪಾಲಿಕೆ ಸದಸ್ಯರು ನೀಡುವ ಮೊತ್ತ ₹15 ಲಕ್ಷ. ಇತರ ಪದಾಧಿಕಾರಿಗಳು ಕನಿಷ್ಠ ₹10 ಸಾವಿರ ನೀಡಬೇಕು’ ಎಂದು ಮನವಿ ಮಾಡಿದರು. ಸಭೆಯಲ್ಲೇ ಶಾಸಕರು ಹಾಗೂ ಪಾಲಿಕೆ ಸದಸ್ಯರು ₹11.56 ಲಕ್ಷ ನೀಡಿದರು.

‘ನಗರದ ಮುಖಂಡರು ಹಾಗೂ ಕಾರ್ಯಕರ್ತರು 28 ಕ್ಷೇತ್ರಗಳಲ್ಲಿ ‍ಪ್ರವಾಸ ಮಾಡಿ ನಿಧಿ ಸಂಗ್ರಹಿಸುವರು. ಪ್ರತಿ ಕುಟುಂಬಕ್ಕೆ ಕನಿಷ್ಠ 15 ದಿನಕ್ಕೆ ಬೇಕಾಗುವಷ್ಟು ಸಾಮಗ್ರಿ ಸಂಗ್ರಹಿಸಿ ಕೊಡಬೇಕು ಎಂಬುದು ನಮ್ಮ ಉದ್ದೇಶ. ನೆರವು ನೀಡುವಂತೆ ಮಿತ್ರರಲ್ಲಿ ಮನವಿ ಮಾಡಿದ್ದೆ. ಒಂದೇ ದಿನದಲ್ಲಿ 20ಕ್ಕೂ ಹೆಚ್ಚು ಲಾರಿಯಷ್ಟು ಅಗತ್ಯ ಸಾಮಗ್ರಿಗಳು ಸಂಗ್ರಹವಾಗಿವೆ. ಈ ಸಾಮಗ್ರಿಗಳ ಜತೆಗೆ ಸೋಮವಾರ ಮಡಿಕೇರಿಗೆ ತೆರಳುತ್ತೇನೆ’ ಎಂದರು.

‘ಕೊಡಗು ಜಿಲ್ಲೆಯ ಶಾಸಕರ ಜತೆಗೆ ಸಂಪರ್ಕದಲ್ಲಿದ್ದು, ಅಲ್ಲಿನ ಅಗತ್ಯ ತಿಳಿದು ನೆರವು ನೀಡಲಾಗುತ್ತದೆ. ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಹಾಗೂ ಮುಖಂಡರ ಜತೆಗೆ ಸಮಾಲೋಚನೆ ನಡೆಸಿದ ಬಳಿಕ ಕೊಡಗಿನಲ್ಲಿ ಕಾಯಂ ಮೂಲಸೌಕರ್ಯ ಒದಗಿಸುವ ಬಗ್ಗೆಯೂ ನಿರ್ಧರಿಸಲಾಗುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT