ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಿಗೇಹಳ್ಳಿ: ಜನರ ನೆಮ್ಮದಿ ಕಸಿದ ಅಂಡರ್‌ಪಾಸ್

ಆರು ವರ್ಷಗಳಿಂದ ದೊರೆಯದ ಮುಕ್ತಿ: ದೂಳಿನ ನಡುವೆ ಜೀವನ
Last Updated 5 ಅಕ್ಟೋಬರ್ 2020, 20:09 IST
ಅಕ್ಷರ ಗಾತ್ರ

ಬೆಂಗಳೂರು: ಮಳೆ ಬಂದರೆ ಈಜುಕೊಳವಾಗುವ ಅಂಡರ್‌ಪಾಸ್, ಕಾಮಗಾರಿ ಮುಗಿದರೂ ಈಡೇರದ ಉದ್ದೇಶ, ಅಂಡರ್‌ಪಾಸ್ ಹೆಸರಿನಲ್ಲಿ ಅಗೆದ ರಸ್ತೆಗಳಿಗೆ ಆರು ವರ್ಷಗಳಿಂದ ದೊರೆಯದ ಮುಕ್ತಿ...

ಇದು ಕೊಡಿಗೇಹಳ್ಳಿ ರೈಲ್ವೆ ಅಂಡರ್‌ ಪಾಸ್ ಕಾಮಗಾರಿಯ ಕಥೆ. ಮಳೆ ಬಂದರೆ ನೀರಿನಲ್ಲಿ ಮುಳುಗುವುದು, ಬಿಸಿಲಾದರೆ ದೂಳು ಮುಕ್ಕುವುದು ಇಲ್ಲಿನ ಜನರಿಗೆ ಅನಿವಾರ್ಯ.

ರೈಲು ಬಂದಾಗ ಗೇಟ್ ಹಾಕ ಬೇಕಾಗಿದ್ದ ಸ್ಥಿತಿ ತಪ್ಪಿಸಲು ಆರಂಭವಾದ ರೈಲ್ವೆ ಅಂಡರ್‌ಪಾಸ್‌ 2019ರ ಏಪ್ರಿಲ್‌ನಲ್ಲಿ ಉದ್ಘಾಟನೆ ಆಗಿದೆ. ಆದರೆ, ವಾಸ್ತವದ ಸ್ಥಿತಿಯೇ ಬೇರೆ ಇದೆ.

ಸೇತುವೆಯ ಅಡಿಯಲ್ಲಿ ಸಂಚಾರಕ್ಕೆ ಮುಕ್ತಗೊಳಿಸಲಾಗಿರುವುದನ್ನು ಬಿಟ್ಟರೆ ಸರ್ವಿಸ್ ರಸ್ತೆಗಳು, ಮುಂಭಾಗದ ರಸ್ತೆಗಳು ಅಭಿವೃದ್ಧಿಯನ್ನೇ ಕಂಡಿಲ್ಲ. ದೂಳಿನಲ್ಲಿ ಮಿಂದೇಳುವ ವಾಹನ ಸವಾರರು, ಸುತ್ತಮುತ್ತಲ ನಿವಾಸಿಗಳ ಪಾಡು ಹೇಳತೀರದಾಗಿದೆ.

ಕೊಡಿಗೇಹಳ್ಳಿಯಿಂದ ತಿಂಡ್ಲು, ಸಹಕಾರ ನಗರಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆ ಇದಾಗಿದ್ದು, ರೈಲ್ವೆ ಇಲಾಖೆ ಮತ್ತು ಬಿಬಿಎಂಪಿ ಸಹಭಾಗಿತ್ವದಲ್ಲಿ 2014ರಲ್ಲಿ ಕಾಮಗಾರಿ ಆರಂಭ ಗೊಂಡಿತ್ತು. ಭೂಸ್ವಾಧೀನ ವಿಳಂಬ, ಅಮೆಗತಿಯಲ್ಲಿ ನಡೆದ ಕಾಮಗಾರಿಯ ಫಲವಾಗಿ ಐದು ವರ್ಷಗಳ ಬಳಿಕ 2019ರಲ್ಲಿ ಸಂಚಾರಕ್ಕೆ ಮುಕ್ತವಾಯಿತು.

ನಾಲ್ಕು ಕಡೆಯ ಸರ್ವೀಸ್ ರಸ್ತೆ ಮತ್ತು ಸೇತುವೆ ಕಡೆಯಿಂದ ಕೊಡಿಗೇಹಳ್ಳಿ ಕಡೆಗೆ ಇರುವ ರಸ್ತೆ ಕಾಮಗಾರಿ ಅಂದಿನಿಂದ ಅಭಿವೃದ್ಧಿಯನ್ನೇ ಕಾಣಲಿಲ್ಲ. ಐದಾರು ವರ್ಷಗಳಿಂದ ದೂಳಿನ ನಡುವೆಯೇ ಸ್ಥಳೀಯರು ಜೀವನ ನಡೆಸಿದ್ದಾರೆ. ರಸ್ತೆ ಬದಿಯಲ್ಲಿರುವ ಕಟ್ಟಡಗಳ ಬಣ್ಣವೇ ಬದಲಾಗಿದೆ. ಅಂಗಡಿ–ಮುಂಗಟ್ಟುಗಳಲ್ಲಿ ದೂಳು ‌ತುಂಬಿಕೊಂಡಿದೆ.

‘ಕೊರೊನಾ ಸೋಂಕು ಬಂದ ನಂತರ ಎಲ್ಲರೂ ಮಾಸ್ಕ್ ಹಾಕುತ್ತಿದ್ದಾರೆ. ಆದರೆ, ನಾವು ಕಳೆದ ಐದು ವರ್ಷಗಳಿಂದ ಮುಖಕ್ಕೆ ಬಟ್ಟೆ ಕಟ್ಟಿಕೊಂಡೇ ಅಂಗಡಿ ನಡೆಸುತ್ತಿದ್ದೇವೆ. ಅಂಡರ್‌ಪಾಸ್ ಹೆಸರಿನಲ್ಲಿ ನಮಗೆ ನರಕವನ್ನೇ ಸರ್ಕಾರಗಳು ತೋರಿಸಿದವು’ ಎಂದು ಚಿಲ್ಲರೆ ಅಂಗಡಿ ನಡೆಸುವ ಸುರೇಶ್ ಅಸಮಾಧಾನ ವ್ಯಕ್ತಪಡಿಸಿದರು.

‘ದೂಳುಮಯವಾದ ಕಾರಣ ಅಂಗಡಿಯಲ್ಲಿ ವ್ಯಾಪಾರ ಕಡಿಮೆ ಆಯಿತು. ರೋಗಗಳು ಆವರಿಸಿ ಕೊಂಡವು. ಯಾರಿಗೆ ಹೇಳಿದರೂ ಸಮಸ್ಯೆ ಪರಿಹಾರವಾಗಲಿಲ್ಲ. ಈ ದುಸ್ಥಿತಿ ನೆನೆದು ಎಷ್ಟೋ ಬಾರಿ ಕಣ್ಣೀರು ಹಾಕಿದ್ದೇವೆ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

‘ಉಳಿದ ಕೆಲಸವನ್ನು ಬಿಬಿಎಂಪಿ ನಿರ್ವಹಿಸುತ್ತಿದೆ. ಇದೀಗ ಜೆಲ್ಲಿ ಸುರಿದು ಹೋಗಿದ್ದಾರೆ. ಮತ್ತೆ ಯಾವಾಗ ಬರುತ್ತಾರೋ ಗೊತ್ತಿಲ್ಲ. ಸದ್ಯಕ್ಕೆ ದೂಳು ಮುಕ್ಕುವ ಸ್ಥಿತಿ ಮುಂದುವರಿದಿದೆ. ನಮಗೆ ಅದ್ಯಾವಾಗ ದೂಳಿನಿಂದ ಮುಕ್ತಿ ಸಿಗುವುದೋ ಗೊತ್ತಿಲ್ಲ’ ಎಂದರು.

ಈಜುಕೊಳವಾಗುವ ಅಂಡರ್‌ಪಾಸ್

ಮಳೆ ಬಂದರೆ ಅಂಡರ್‌ಪಾಸ್ ಈಜುಕೊಳವಾಗಿ ಮಾರ್ಪಡುತ್ತದೆ. ಬಿಬಿಎಂಪಿ ಮತ್ತು ರೈಲ್ವೆ ಇಲಾಖೆ ಪಾಲುದಾರಿಕೆಯಲ್ಲಿ ಕೈಗೊಂಡ ಯೋಜನೆಯನ್ನು ರೈಲ್ವೆ ಇಲಾಖೆ ನಿರ್ವಹಿಸಿದೆ. ಅಂಡರ್‌ಪಾಸ್‌ಗೆ ಹರಿದು ಬರುವ ನೀರು ಮುಂದೆ ಹೋಗಲು ಜಾಗವನ್ನೇ
ಕಲ್ಪಿಸಿಲ್ಲ. ಮಳೆ ಬಂದಾಗಲೆಲ್ಲಾ ಅಂಡರ್‌ಪಾಸ್ ತುಂಬಿ ಹೋಗುತ್ತದೆ.

‘ತಿಂಡ್ಲು, ವಿದ್ಯಾರಣ್ಯಪುರ, ಸಹಕಾರನಗರ ಕಡೆಗೆ ಹೋಗಬೇಕಾದ ಜನರು ಕೆನರಾ ಬ್ಯಾಂಕ್ ಲೇಔಟ್‌ ಕಡೆಯಿಂದ ಮೂರ್ನಾಲ್ಕು ಕಿಲೋ ಮೀಟರ್ ಸುತ್ತಬೇಕಾದ ಸ್ಥಿತಿ ಇದೆ. ನೀರು ತುಂಬಿಕೊಂಡಾಗ ಬಿಬಿಎಂಪಿ ಮತ್ತು ಜಲಮಂಡಳಿ ಸಿಬ್ಬಂದಿ ಮೋಟಾರ್‌ಗಳನ್ನು ತಂದು ನೀರು ಹೊರ ಹಾಕುತ್ತಾರೆ. ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಂಡಿಲ್ಲ. ಹೀಗಾಗಿ, ಅಂಡರ್‌ಪಾಸ್‌ ಯೋಜನೆಯ ಉದ್ದೇಶವೇ ಬುಡಮೇಲಾಗಿದೆ’ ಎಂದು ಸ್ಥಳೀಯರು ಹೇಳುತ್ತಾರೆ.

‘ರೈಲ್ವೆ ಇಲಾಖೆ ನಿರ್ವಹಿಸಿದ ಕಾಮಗಾರಿಯಾಗಿದ್ದು, ನೀರು ಹೊರ ಹೋಗುವಂತೆ ಚರಂಡಿನಿರ್ಮಾಣ ಆಗಬೇಕಾಗಿದೆ. ರಸ್ತೆ ಕಾಮಗಾರಿ ಯಾವ ಹಂತದಲ್ಲಿದೆ ಎಂಬುದನ್ನು ಪರಿಶೀಲಿಸುತ್ತೇನೆ’ ಎಂದು ಬಿಬಿಎಂಪಿ ಆಯುಕ್ತ ಎನ್. ಮಂಜುನಾಥಪ್ರಸಾದ್ ತಿಳಿಸಿದರು.

ಅಂಕಿ–ಅಂಶ

₹120 ಕೋಟಿ – ಯೋಜನೆಯ ಒಟ್ಟು ಮೊತ್ತ

73 – ಸ್ವಾಧೀನಪಡಿಸಿಕೊಂಡಿರುವ ಆಸ್ತಿ (ಕಟ್ಟಡಗಳು)

₹ 8,689 – ಪ್ರತಿ ಚದರ ಮೀಟರ್‌ಗೆ ನೀಡಿರುವ ಪರಿಹಾರ ಮೊತ್ತ

80 ಅಡಿ – ಅಂಡರ್‌ಪಾಸ್‌ನ ಅಗಲ

2014 – ಕಾಮಗಾರಿ ಆರಂಭವಾದ ವರ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT