ಶನಿವಾರ, 14 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೋರಮಂಗಲ | ಪ್ರಜ್ಞೆ ತಪ್ಪಿಸಿ ಅತ್ಯಾಚಾರ ಶಂಕೆ: ಯುವತಿ ದೂರು

Published : 15 ಡಿಸೆಂಬರ್ 2023, 15:38 IST
Last Updated : 15 ಡಿಸೆಂಬರ್ 2023, 15:38 IST
ಫಾಲೋ ಮಾಡಿ
Comments

ಬೆಂಗಳೂರು: ‘ಪಬ್‌ಗೆ ಹೋಗಿದ್ದ ಸಂದರ್ಭದಲ್ಲಿ ನನ್ನ ಪ್ರಜ್ಞೆ ತಪ್ಪಿಸಿ ಅತ್ಯಾಚಾರ ಎಸಗಿರುವ ಶಂಕೆ ಇದ್ದು, ಈ ಬಗ್ಗೆ ತನಿಖೆ ನಡೆಸಿ’ ಎಂದು ಯುವತಿಯೊಬ್ಬರು ಕೋರಮಂಗಲ ಠಾಣೆಗೆ ದೂರು ನೀಡಿದ್ದು, ಅಪರಿಚಿತರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

‘ಡಿ. 12ರಂದು ರಾತ್ರಿ ನಡೆದಿರುವ ಘಟನೆ ಬಗ್ಗೆ ಯುವತಿ ದೂರು ನೀಡಿದ್ದಾರೆ. ಅತ್ಯಾಚಾರ (ಐಪಿಸಿ 376) ಆರೋಪದಡಿ ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ಪುರಾವೆಗಳನ್ನು ಕಲೆಹಾಕಲಾಗುತ್ತಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

ಪಬ್‌ಗೆ ಹೋಗಿದ್ದ ಯುವತಿ: ‘ನಗರದ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವ ಯುವತಿ, ಡಿ. 12ರಂದು ರಾತ್ರಿ ಕೋರಮಂಗಲದ ಪಬ್‌ವೊಂದಕ್ಕೆ ಹೋಗಿದ್ದರು. ಇದೇ ಸಂದರ್ಭದಲ್ಲಿ ಮದ್ಯ ಕುಡಿದಿದ್ದರೆಂಬ ಮಾಹಿತಿ ಇದೆ. ಇದಾದ ನಂತರ, ಯುವತಿ ಏಕಾಏಕಿ ಪ್ರಜ್ಞೆ ತಪ್ಪಿ ಬಿದ್ದಿದ್ದರು. ಡಿ. 13ರಂದು ನಸುಕಿನಲ್ಲಿ ಪ್ರಜ್ಞೆ ವಾಪಸು ಬಂದಾಗ ಅವರು ಆಡುಗೋಡಿ ಬಳಿ ರಸ್ತೆ ಪಕ್ಕದಲ್ಲಿ ಬಿದ್ದಿದ್ದರು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಪ್ರಜ್ಞೆ ಬಂದಾಗ ಯುವತಿ ಕೈಗಳ ಮೇಲೆ ಪರಚಿದ ಗಾಯಗಳಿದ್ದವು. ಮನೆಯೊಂದಕ್ಕೆ ಹೋಗಿದ್ದ ಯುವತಿ, ಅವರ ಸಹಾಯದಿಂದ ನಿಯಂತ್ರಣ ಕೊಠಡಿಗೆ ಕರೆ ಮಾಡಿದ್ದರು. ಆಡುಗೋಡಿ ಠಾಣೆಯ ಹೊಯ್ಸಳ ಗಸ್ತು ವಾಹನದ ಸಿಬ್ಬಂದಿ ಸ್ಥಳಕ್ಕೆ ಹೋಗಿ ಘಟನೆ ಬಗ್ಗೆ ಮಾಹಿತಿ ಪಡೆದಿದ್ದರು. ನಂತರ, ಘಟನೆ ನಡೆದ ಸ್ಥಳದ ಆಧಾರದಲ್ಲಿ ಕೋರಮಂಗಲ ಠಾಣೆಗೆ ಮಾಹಿತಿ ತಿಳಿಸಿದ್ದರು’ ಎಂದು ಹೇಳಿವೆ.

ಅತ್ಯಾಚಾರವೆಂಬ ಶಂಕೆ: ‘ರಾತ್ರಿಯಿಂದ ನಸುಕಿನವರೆಗೆ ನನಗೆ ಪ್ರಜ್ಞೆ ಇರಲಿಲ್ಲ. ಇದೇ ಅವಧಿಯಲ್ಲಿ ಅಪರಿಚಿತರು ನನ್ನ ಮೇಲೆ ಅತ್ಯಾಚಾರ ನಡೆಸಿರುವ ಅನುಮಾನವಿದೆ’ ಆರೋಪಿ ಯುವತಿ ದೂರಿನಲ್ಲಿ ಆರೋಪಿಸಿದ್ದಾರೆ. ದೂರಿಗೆ ಸಂಬಂಧಪಟ್ಟಂತೆ ಘಟನಾ ಸ್ಥಳಗಳಲ್ಲಿ ಪರಿಶೀಲನೆ ನಡೆಸಲಾಗಿದ್ದು, ಸದ್ಯಕ್ಕೆ ಯಾವುದೇ ಪುರಾವೆ ಸಿಕ್ಕಿಲ್ಲವೆಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಯುವತಿ ಪಬ್‌ಗೆ ಹೋಗಿ ಮದ್ಯ ಕುಡಿದಿದ್ದು ಹಾಗೂ ಮದ್ಯದ ನಶೆಯಲ್ಲಿ ಅಲ್ಲಿಂದ ಹೊರಗೆ ಬಂದಿದ್ದ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಜೊತೆಗೆ, ರಸ್ತೆಯಲ್ಲಿ ಯುವತಿ ನಡೆದುಕೊಂಡು ಹೋಗುವಾಗ ಆಯತಪ್ಪಿ ಬಿದ್ದಿದ್ದ ದೃಶ್ಯಗಳು ಲಭ್ಯವಾಗಿವೆ. ಬಿದ್ದ ಸ್ಥಳದಲ್ಲಿಯೇ ಯುವತಿ ಪ್ರಜ್ಞೆ ತಪ್ಪಿದ್ದರು. ನಸುಕಿನಲ್ಲೇ ಅವರೇ ಎದ್ದು ಸಮೀಪದ ಮನೆಗೆ ಹೋಗಿದ್ದರೆಂಬುದು ಗೊತ್ತಾಗಿದೆ’ ಎಂದು ಮೂಲಗಳು ಹೇಳಿವೆ.

‘ಅತ್ಯಾಚಾರಕ್ಕೆ ಸಂಬಂಧಪಟ್ಟಂತೆ ಯಾವುದೇ ಪುರಾವೆಗಳು ಸಿಕ್ಕಿಲ್ಲ. ಯುವತಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ಅದರ ವರದಿ ಬಂದ ನಂತರ ನಿಖರ ಮಾಹಿತಿ ತಿಳಿಯಲಿದೆ’ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT