ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಪಿಎಸ್‌ಸಿ ಪರೀಕ್ಷೆ; ‘ಬ್ಲೂ ಟೂತ್’ ಬಳಸುತ್ತಿದ್ದ ಅಭ್ಯರ್ಥಿ ಬಂಧನ

ಲೋಕೋಪಯೋಗಿ ಇಲಾಖೆ ಎಂಜಿನಿಯರ್ ನೇಮಕಾತಿ ಪರೀಕ್ಷೆ
Last Updated 15 ಡಿಸೆಂಬರ್ 2021, 17:27 IST
ಅಕ್ಷರ ಗಾತ್ರ

ಬೆಂಗಳೂರು: ಲೋಕೋಪಯೋಗಿ ಇಲಾಖೆಯ ಸಹಾಯಕ ಎಂಜಿನಿಯರ್‌ (ಎಇ) ಹಾಗೂ ಕಿರಿಯ ಎಂಜಿನಿಯರ್‌ (ಜೆಇ) ಹುದ್ದೆಗಳ ನೇಮಕಾತಿಗಾಗಿ ನಡೆದ ಪರೀಕ್ಷೆ ವೇಳೆ ‘ಬ್ಲೂ ಟೂತ್’ ಎಲೆಕ್ಟ್ರಾನಿಕ್ ಉಪಕರಣ ಬಳಸುತ್ತಿದ್ದ ಅಭ್ಯರ್ಥಿಯೊಬ್ಬರು ಮೇಲ್ವಿಚಾರಕರ ಕೈಗೆ ಸಿಕ್ಕಿಬಿದ್ದಿದ್ದಾರೆ.

‘ಕರ್ನಾಟಕ ಲೋಕಸೇವಾ ಆಯೋಗದಿಂದ (ಕೆಪಿಎಸ್‌ಸಿ) ಬುಧವಾರ ಪರೀಕ್ಷೆ ನಡೆಸಲಾಗುತ್ತಿತ್ತು. ಅಕ್ರಮವಾಗಿ ಉಪಕರಣ ಬಳಸಿ ಪ್ರಶ್ನೆಗಳಿಗೆ ಉತ್ತರ ಬರೆಯುತ್ತಿದ್ದ ಆರೋಪಿ ವೀರಣ್ಣಗೌಡ ಡಿ. ಚಿಕ್ಕೇಗೌಡ (30) ಎಂಬುವರನ್ನು ಮೇಲ್ವಿಚಾರಕರೇ ಹಿಡಿದುಕೊಟ್ಟಿದ್ದಾರೆ. ಅವರನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಲಾಗಿದೆ’ ಎಂದು ಅನ್ನಪೂರ್ಣೇಶ್ವರಿನಗರ ಠಾಣೆ ಪೊಲೀಸರು ಹೇಳಿದರು.

‘ಆರೋಪಿ ವಿರುದ್ಧ ಪರೀಕ್ಷೆ ಮೇಲ್ವಿಚಾರಕರು ದೂರು ನೀಡಿದ್ದಾರೆ. ಕ್ರಿಮಿನಲ್‌ ಪಿತೂರಿ ( ಐಪಿಸಿ 120 ಬಿ), ನಂಬಿಕೆ ದ್ರೋಹ (ಐಪಿಸಿ 406) , ವಂಚನೆ (ಐಪಿಸಿ 420), ನಕಲಿ ದಾಖಲೆಗಳನ್ನು ಅಸಲಿ ಎಂದು ಬಳಸಿದ (ಐಪಿಸಿ 471) ಆರೋಪದಡಿ ಹಾಗೂ ಕರ್ನಾಟಕ ಶಿಕ್ಷಣ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಪ್ರಕರಣದಲ್ಲಿ ಮತ್ತಷ್ಟು ಮಂದಿ ಕೈವಾಡವಿರುವ ಮಾಹಿತಿ ಇದ್ದು, ಆರೋಪಿಯ ವಿಚಾರಣೆ ಮುಂದುವರಿಸಲಾಗಿದೆ’ ಎಂದೂ ತಿಳಿಸಿದರು.

ಉಪಕರಣದ ಶಬ್ದದಿಂದ ಸಿಕ್ಕಿಬಿದ್ದ: ‘ಅನ್ನಪೂರ್ಣೇಶ್ವರಿನಗರ ಠಾಣೆ ವ್ಯಾಪ್ತಿ ಸೇಂಟ್ ಜಾನ್ಸ್ ಪ್ರೌಢಶಾಲೆ ಕೇಂದ್ರದಲ್ಲಿ ಬುಧವಾರ ಪರೀಕ್ಷೆ ನಡೆಸಲಾಗುತ್ತಿತ್ತು. ಕಲಬುರ್ಗಿಯ ಆರೋಪಿ ವೀರಣ್ಣಗೌಡ, ಪರೀಕ್ಷೆಗೆ ಹಾಜರಾಗಿದ್ದರು’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಪರೀಕ್ಷೆ ಆರಂಭವಾಗುತ್ತಿದ್ದಂತೆ ಅಭ್ಯರ್ಥಿಗಳಿಗೆ ಪ್ರಶ್ನೆಪತ್ರಿಕೆ ಹಾಗೂ ಒಎಮ್‌ಆರ್‌ ನೀಡಲಾಗಿತ್ತು. ಉತ್ತರ ಬರೆಯಲು ಆರಂಭಿಸಿದ್ದ ಆರೋಪಿ, ಉಪಕರಣ ಆನ್ ಮಾಡಿದಾಗ ‘ಬೀಪ್’ ಶಬ್ದ ಬಂದಿತ್ತು. ಪರೀಕ್ಷೆ ಕೊಠಡಿ ಮೇಲ್ವಿಚಾರಕರು ಪರಿಶೀಲಿಸಿದಾಗಲೇ ಉಪಕರಣ ಪತ್ತೆ ಆಯಿತು’ ಎಂದೂ ತಿಳಿಸಿವೆ.

ಜಾಮರ್‌ನಿಂದಾಗಿ ಆನ್ ಆಗದ ಉಪಕರಣ: ‘ಆರೋಪಿ ವೀರಣ್ಣಗೌಡ ಹಾಗೂ ಇತರರು, ಸಂಘಟಿತರಾಗಿ ಕೃತ್ಯ ಎಸಗುತ್ತಿದ್ದ ಸಂಗತಿ ಗೊತ್ತಾಗಿದೆ. ಉಳಿದ ಆರೋಪಿಗಳ ಪತ್ತೆಗೂ ಕ್ರಮ ಕೈಗೊಳ್ಳಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ನೀಲಿ ಬಣ್ಣದ ಬನಿಯನ್‌ನಲ್ಲಿ ಬ್ಲೂ ಟೂತ್ ಅಳವಡಿಸಿದ್ದ ಆರೋಪಿ, ಕಿವಿಯೊಳಗೆ ಮೈಕ್ರೊಸ್ಪೀಕರ್‌ ಹಾಕಿಕೊಂಡಿದ್ದರು. ಉಪಕರಣ ಒತ್ತಿದರೆ, ಹೊರಗಿನ ವ್ಯಕ್ತಿಗಳು ಹೇಳುತ್ತಿದ್ದ ಉತ್ತರಗಳು ಕಿವಿಯಲ್ಲಿ ಕೇಳಿಸುತ್ತಿದ್ದವು. ಆದರೆ, ಈ ಬಾರಿ ಪರೀಕ್ಷೆ ಕೇಂದ್ರದಲ್ಲಿ ಜಾಮರ್ ಅಳವಡಿಸಿದ್ದರಿಂದ ಉಪಕರಣ ಆನ್ ಹಾಕಿರಲಿಲ್ಲ. ಆರೋಪಿ, ಜೋರಾಗಿ ಉಪಕರಣ ಒತ್ತಿದ್ದರಿಂದ ಶಬ್ದ ಬಂದಿತ್ತು’ ಎಂದೂ ತಿಳಿಸಿವೆ.

‘ದೂರದಲ್ಲಿ ಕುಳಿತ ಕೆಲವರು, ಆರೋಪಿಗೆ ಕಿವಿಯಲ್ಲಿ ಉತ್ತರ ಹೇಳಲು ಸಜ್ಜಾಗಿದ್ದರು. ಆದರೆ, ಅದು ಯಶಸ್ವಿಯಾಗಿಲ್ಲ. ಇದೇ ರೀತಿಯಲ್ಲೇ ಮತ್ತಷ್ಟು ಅಭ್ಯರ್ಥಿಗಳು ಬ್ಲೂ ಟೂತ್ ಉಪಕರಣ ಬಳಸಿರುವ ಮಾಹಿತಿಯೂ ಇದೆ’ ಎಂದೂ ಹೇಳಿದರು.

‘ಕೇಂದ್ರ ಬದಲಿಸಿದರೂ ಅಕ್ರಮ’
‘ಬ್ಲೂ ಟೂತ್ ಉಪಕರಣ ಬಳಸಿ ಪರೀಕ್ಷೆಯಲ್ಲಿ ಅಕ್ರಮ ಎಸಗುವ ಬಗ್ಗೆ ಕೆಪಿಎಸ್‌ಸಿ ಅಧಿಕಾರಿಗಳಿಗೆ ಈ ಹಿಂದೆಯೇ ಅನುಮಾನ ಬಂದಿತ್ತು. ಹೀಗಾಗಿ, ಪರೀಕ್ಷೆ ಕೇಂದ್ರಗಳನ್ನು ಬದಲಾಯಿಸಲಾಗಿತ್ತು. ಅಭ್ಯರ್ಥಿಗಳಿಗೆ ಅವರ ಜಿಲ್ಲೆಯ ಬದಲು ಬೇರೆ ಜಿಲ್ಲೆಯಲ್ಲಿ ಪರೀಕ್ಷೆ ಬರೆಯುವಂತೆ ಮಾಡಲಾಗಿತ್ತು. ಇಷ್ಟಾದರೂ ಅಭ್ಯರ್ಥಿಯೊಬ್ಬರು ಅಕ್ರಮ ಎಸಗಿದ್ದಾರೆ’ ಎಂದೂ ಪೊಲೀಸ್ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT