ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Krishi Mela 2023 | ‘ಬಿಳಿ ನೊಣ’ ಬಾಧೆ ನಿಯಂತ್ರಣಕ್ಕೆ ಬೇವಿನ ಎಣ್ಣೆ ಮದ್ದು!

ಬೆಳೆ ರಕ್ಷಣೆಗೆ ‘ಪರಿಸರ ಸ್ನೇಹಿ’ ವಿಧಾನಗಳು...
Published 18 ನವೆಂಬರ್ 2023, 0:34 IST
Last Updated 18 ನವೆಂಬರ್ 2023, 0:34 IST
ಅಕ್ಷರ ಗಾತ್ರ

ಬೆಂಗಳೂರು: ಪ್ರತಿ ಲೀಟರ್ ನೀರಿಗೆ 5 ಮಿ.ಲೀ ಬೇವಿನೆಣ್ಣೆ, 1 ಮಿಲೀ ಸೋಪ್ ಆಯಿಲ್ ಬೆರೆಸಿ, ಹದಿನೈದು ದಿನಕ್ಕೊಮ್ಮೆ ಬಿಳಿ ನೊಣ ಬಾಧಿತ ತೆಂಗಿನ ಗರಿಗಳ ಕೆಳಭಾಗಕ್ಕೆ ಸಿಂಪಡಿಸಿದರೆ, ನೊಣಗಳ ಬಾಧೆ ಕ್ರಮೇಣ ಕಡಿಮೆಯಾಗುತ್ತದೆ...

ನಗರದ ಕೃಷಿ ವಿಶ್ವವಿದ್ಯಾಲಯದಲ್ಲಿ ಶುಕ್ರವಾರದಿಂದ ಆರಂಭವಾದ ಕೃಷಿಮೇಳದಲ್ಲಿ ಕೀಟಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರಕಾಶ್, ಅವರು ಮಳಿಗೆಗೆ ಭೇಟಿ ನೀಡಿದ ರೈತರಿಗೆ ತೆಂಗು ಮತ್ತಿತರ ಬೆಳೆಗಳಿಗೆ ತಗಲುವ ಬಿಳಿನೊಣ ಬಾಧೆ ಹಾಗೂ ಅದನ್ನು ನಿವಾರಿಸುವ ವಿಧಾನವನ್ನು ವಿವರಿಸಿದರು.

ಪ್ರದರ್ಶನಕ್ಕಿಟ್ಟಿದ್ದ ಬಿಳಿ ನೊಣ ಬಾಧಿತ ತೆಂಗಿನ ಗರಿಗಳನ್ನು ರೈತರಿಗೆ ತೋರಿಸಿ ವಿವರಣೆ ನೀಡಿದ ಪ್ರಕಾಶ್ ಅವರು, ‘ಇದು ತೆಂಗಿಗಷ್ಟೇ ಅಲ್ಲದೇ, ಅದರೊಂದಿಗೆ ಬೆಳೆಯುವ ಅಡಿಕೆ, ಬಾಳೆಯಂತಹ ಬೆಳೆಗಳನ್ನು ಬಾಧಿಸುತ್ತದೆ. ಈ ನೊಣಗಳು ಎಲೆಗಳಲ್ಲಿರುವ ರಸ ಹೀರುತ್ತವೆ. ಇದರಿಂದ ಗಿಡಗಳು ಸೊರಗುತ್ತವೆ. ಕೀಟಬಾಧೆ ಪತ್ತೆಯಾದ ಆರಂಭದಲ್ಲೇ ಬೇವಿನೆಣ್ಣೆ–ಸೋಪ್ ಆಯಿಲ್ ಮಿಶ್ರಣ, ಸಿಂಪಡಿಸಿದರೆ ಬಾಧೆಯನ್ನು ಹತೋಟಿಗೆ ತರಬಹುದು’ ಎಂದು ಸಲಹೆ ನೀಡಿದರು.

‘ಈ ಮಿಶ್ರಣವನ್ನು ಸಿಂಪಡಿಸುತ್ತಿದ್ದರೆ, ಬಿಳಿ ನೊಣದ ಬಾಧೆ ನಿವಾರಣೆಯಾಗುವ ಜೊತೆಗೆ, ಈ ನೊಣವನ್ನು ತಿನ್ನುವ ಸ್ವಾಭಾವಿಕ ಕೀಟಗಳು ಅಭಿವೃದ್ಧಿಯಾಗುತ್ತವೆ. ಮಿಶ್ರಣ ಸಿಂಪಡಿಸುವವರು ಕಡ್ಡಾಯವಾಗಿ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಬೇಕು’ ಎಂದು ಸಲಹೆ ನೀಡಿದರು.

’ಬಿಳಿ ನೊಣ ಗಾಳಿಯಿಂದ ಹರಡುತ್ತದೆ. ಹಾಗಾಗಿ, ಈ ಮಿಶ್ರಣ ಸಿಂಪಡಿಸುವ ವಿಧಾನವನ್ನು ಸಾಮೂಹಿಕವಾಗಿ ಅನುಸರಿಸುವುದು ಒಳ್ಳೆಯದು ಎಂದು ರೈತರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ನವಿಲು ಹಾವಳಿ ತಡೆಯುವುದು ಹೇಗೆ? ಮೇಳದಲ್ಲಿದೆ ಸುಲಭ ಉಪಾಯ:

ಬೆಳೆ ಹಾಗೂ ಬಿತ್ತಿದ ಬೀಜಗಳ ಕುರುಹೂ ಉಳಿಯದಂತೆ ತಿಂದು ಮುಗಿಸುವ ನವಿಲುಗಳ ಹಾವಳಿಯನ್ನು ತಡೆಯುವುದು ಹೇಗೆ..?

ಇದು ಹಲವು ರೈತರು ಎದುರಿಸುತ್ತಿರುವ ಸಮಸ್ಯೆ. ಈ ಸಮಸ್ಯೆಗೆ ಕೃಷಿ ವಿಶ್ವವಿದ್ಯಾಲಯದ ಕಶೇರುಕ ಪ್ರಾಣಿ ಪೀಡಾ ನಿರ್ವಹಣಾ ಯೋಜನೆ ವಿಭಾಗದ ವಿಜ್ಞಾನಿಗಳು ‘ಪರಿಸರ ಸ್ನೇಹಿ’ ಪರಿಹಾರವೊಂದನ್ನು ರೂಪಿಸಿದ್ದಾರೆ. ಈ ಪರಿಹಾರದ ಕಿರು ಮಾದರಿಯನ್ನು ಮೇಳದಲ್ಲಿ ಪ್ರದರ್ಶನಕ್ಕಿಟ್ಟಿದ್ದಾರೆ.

ಬೆಳೆ ಬಿತ್ತಿದ ನಂತರ ಹೊಲದ ಸುತ್ತ ಆರು ಅಡಿ ಎತ್ತರದ ಕಂಬಗಳನ್ನು ನೆಟ್ಟು, ಎರಡು ಅಡಿ ಅಂತರದಲ್ಲಿ ಮೂರು ಸಾಲು (ಅಡ್ಡ–ಕಂಬಸಾಲುಗಳಲ್ಲಿ) ಸೆಣಬು ಅಥವಾ ತೆಂಗಿನ ದಾರವನ್ನು ಕಟ್ಟಬೇಕು. ಈ ವಿಧಾನದಿಂದ ನವಿಲುಗಳು ತಾಕಿಗೆ ನುಗ್ಗಿ ಅಥವಾ ಹಾರಿ ಬರುವುದನ್ನು ತಡೆಯಬಹುದು. ಇದರಿಂದ ನವಿಲಿಗೂ ಹಾನಿಯಾಗುವುದಿಲ್ಲ, ಬೆಳೆಯೂ ಉಳಿಯುತ್ತದೆ.

ಇದೇ ವಿಧಾನದಲ್ಲಿ ದಾರದ ಬದಲಿಗೆ ಪ್ರತಿಫಲಿಸುವ ಟೇಪ್‌ಗಳನ್ನು ಸುತ್ತಿದರೆ, ಟೇಪ್‌ಮೇಲೆ ಬಿದ್ದ ಬೆಳಕು ಪ್ರತಿಫಲಿಸಿ ಪ್ರಾಣಿಗಳ ಕಣ್ಣಿಗೆ ತಾಕುತ್ತದೆ. ಇದರಿಂದ ಅವು ಬೆಳೆಗಳ ಮೇಲೆ ದಾಳಿ ಮಾಡಲಾಗುವುದಿಲ್ಲ’ ಎನ್ನುವುದು ವಿಜ್ಞಾನಿಗಳ ಅಭಿಪ್ರಾಯ.

ಇಲಿ ರಕ್ಷಣೆಗೆ ಪಾಲಿಥೀನ್ ಪರದೆ ಗೋಡೆ:
ಇಲಿಗಳಿಂದ ಭತ್ತದ ಬೆಳೆ ರಕ್ಷಿಸಲು, ತಾಕಿನ ಸುತ್ತ ಕಂಬಗಳ ಆಶ್ರಯ ದೊಂದಿಗೆ ಪಾಲಿಥೀನ್(ಮೊದಲು ಫಿಲಿಪ್ಪೀನ್ಸ್‌ನಲ್ಲಿ ಇದನ್ನು ಪ್ರಯತ್ನಿಸಿದ್ದಾರೆ) ಶೀಟ್‌ ಪರದೆ ಅಳವಡಿಸಬೇಕು. ಪರದೆಯ ಕೆಳಭಾಗದಲ್ಲಿ ಒಂದೆರಡು ಕಡೆ ರಂಧ್ರ ಮಾಡಿ ತಾಕಿನ ಒಳಭಾಗದಿಂದ ಇಲಿ ಬೋನ್‌ ಇಡಬೇಕು. ತಾಕು ಸುತ್ತಾಡುವ ಇಲಿ, ರಂಧ್ರವಿರುವ ಜಾಗದಲ್ಲಿ ನುಸುಳಿ, ಬೋನ್‌ಲ್ಲಿ ಸಿಲುಕುತ್ತದೆ. ಇಲಿ ಹಾವಳಿ ನಿಯಂತ್ರಣವಾಗುತ್ತದೆ. ‘ಭತ್ತದ ಸಸಿ ಮಡಿ ಸುತ್ತ ಪಾಲಿಥೀನ್ ಗೋಡೆ ಮಾಡಿದರೆ, ಬಹಳ ಉಪಯುಕ್ತವಾಗುತ್ತದೆ’ ಎನ್ನುತ್ತಾರೆ ವಿಭಾಗದ ಮುಖ್ಯಸ್ಥ ಮೋಹನ್ ಐ. ನಾಯಕ್.

ನಿರುಪಯುಕ್ತ ಸೀರೆಯ ತಡೆಗೋಡೆ: ಕಾಡು ಹಂದಿಗಳಿಂದ ಬೆಳೆಗಳನ್ನು ರಕ್ಷಿಸಿಕೊಳ್ಳಲು ಕೆಲವು ಭಾಗದ ರೈತರು ಹಳೆಯ ಸೀರೆಗಳನ್ನು ತಾಕಿನ ಸುತ್ತಾ ಪರದೆ ಕಟ್ಟುತ್ತಿದ್ದಾರೆ. ಆದರೆ, ತಳಭಾಗದಲ್ಲಿ ಸ್ವಲ್ಪ ಜಾಗ ಬಿಡುವುದರಿಂದ ಹಂದಿಗಳು ಅಲ್ಲಿಂದಲೇ ತಾಕಿಗೆ ನುಗ್ಗಿ ಬೆಳೆ ಹಾನಿ ಮಾಡುತ್ತಿರುವ ಉದಾಹರಣೆಗಳಿವೆ.

‘ನಾವು ಈ ವಿಧಾನವನ್ನು ತುಸು ಸುಧಾರಿಸಿದ್ದೇವೆ. ಪರದೆಯಾಗಿಸುವ ಸೀರೆಯನ್ನು ಒಂದೂವರೆ ಅಡಿಯಷ್ಟನ್ನು ಮಣ್ಣೊಳಗೆ ಸೇರಿಸುತ್ತೇವೆ. ಸುತ್ತ ಮಣ್ಣು ಮುಚ್ಚುತ್ತೇವೆ. ಹೀಗಾಗಿ ಅದಕ್ಕೆ ಒಳ ನುಗ್ಗುವುದು ಸಾಧ್ಯವಿಲ್ಲ’ ಎಂದು ಮೋಹನ್ ನಾಯಕ್ ವಿವರಿಸಿದರು.

ಈ ವಿಧಾನಗಳನ್ನು ಕೆವಿಕೆ, ವಿ.ವಿ ಆವರಣದಲ್ಲಿ ಮೂರ್ನಾಲ್ಕು ವರ್ಷ ಪ್ರಯೋಗ ಮಾಡಿದ್ದೇವೆ. ಮಾಗಡಿ, ದೊಡ್ಡಬಳ್ಳಾಪುರ ಭಾಗದ ರೈತರ ಜಮೀನುಗಳಲ್ಲೂ ಪ್ರಾಯೋಗಿಕವಾಗಿ ಅಳವಡಿಸಿ ನೋಡಿದ್ದು, ಫಲಿತಾಂಶ ಸಕಾರಾತ್ಮಕವಾಗಿದೆಯಂತೆ.

ತೆಂಗಿನ ಬೆಳೆಗೆ ತಗಲುವ ಬಿಳಿ ನೊಣ ಬಾಧೆ ನಿಯಂತ್ರಿಸುವ ಕುರಿತು ರೈತರಿಗೆ ಮಾಹಿತಿ ನೀಡಿದ ಕೀಟಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರಕಾಶ್.

ತೆಂಗಿನ ಬೆಳೆಗೆ ತಗಲುವ ಬಿಳಿ ನೊಣ ಬಾಧೆ ನಿಯಂತ್ರಿಸುವ ಕುರಿತು ರೈತರಿಗೆ ಮಾಹಿತಿ ನೀಡಿದ ಕೀಟಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರಕಾಶ್.

–ಪ್ರಜಾವಾಣಿ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT