ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಜುತ್ತಾ ಆತ್ಮವಿಶ್ವಾಸವನ್ನೇ ಗೆದ್ದ ವಿಶ್ವಾಸ್‌

Last Updated 22 ಡಿಸೆಂಬರ್ 2021, 20:05 IST
ಅಕ್ಷರ ಗಾತ್ರ

ಬೆಂಗಳೂರು: ಬದ್ಧತೆ ಹಾಗೂ ತಾಳ್ಮೆಯನ್ನು ಮೈಗೂಡಿಸಿಕೊಂಡಿರುವ ಕೆ.ಎಸ್‌.ವಿಶ್ವಾಸ್‌, ಅಂತರರಾಷ್ಟ್ರೀಯ ಪ್ಯಾರಾ ಈಜು ಚಾಂಪಿಯನ್‌ಷಿಪ್‌ಗಳಲ್ಲಿ ಇದುವರೆಗೆ 15 ರಾಷ್ಟ್ರೀಯ ಹಾಗೂ 7 ಅಂತರರಾಷ್ಟ್ರೀಯ ಪದಕಗಳನ್ನು ಜಯಗಳಿಸಿದ್ದಾರೆ. ಆಕಸ್ಮಿಕವಾಗಿ ಸಂಭವಿಸಿದ ಅವಘಡದಲ್ಲಿ ಎರಡು ಕೈಗಳನ್ನೂ ಕಳೆದುಕೊಂಡಿದ್ದರೂ ಎದೆಗುಂದದ ಅವರು ದೈಹಿಕ ನ್ಯೂನತೆಗಳನ್ನು ಮೀರಿ ಈ ಸಾಧನೆ ಮಾಡಿರುವುದು ವಿಶೇಷ.

ಕೋಲಾರದ ಕಾಳಹಸ್ತಿಪುರದವರಾದ ವಿಶ್ವಾಸ್ 21 ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಇವರ ತಂದೆ ಸತ್ಯನಾರಾಯಣ ಮೂರ್ತಿ, ತಾಯಿ ಉಷಾ.ವಿಶ್ವಾಸ್ ಹುಟ್ಟುತ್ತಲೇ ಅಂಗವಿಕಲರಾಗಿರಲಿಲ್ಲ. ಆದರೆ ದಿಢೀರ್‌ ಎದುರಾದ ದುರಂತವೊಂದು ಅವರ ಬದುಕನ್ನೇ ಕತ್ತಲೆಗೆ ತಳ್ಳಿತ್ತು.ಕಠಿಣ ಪರಿಶ್ರಮದಿಂದಾಗಿ ಅವರ ಬದುಕಿನ ದಿಕ್ಕೇ ಬದಲಾಯಿತು.

ನಾಲ್ಕನೇ ತರಗತಿಯಲ್ಲಿದ್ದಾಗ ಹೊಸ ಮನೆ ನಿರ್ಮಿಸುವ ಕೆಲಸ ಕಾರ್ಯಗಳು ನಡೆಯುತ್ತಿದ್ದವು. ತಾರಸಿಯ ಕಾಂಕ್ರಿಟ್‌ಗೆ ನೀರುಣಿಸಲು ಮೇಲೆ ಹೋಗಿದ್ದ ವಿಶ್ವಾಸ್ ಆಯ ತಪ್ಪಿ ಬಿದ್ದರು. ಆಧಾರಕ್ಕಾಗಿ ಎರಡೂ ಕೈಗಳಿಂದ ವಿದ್ಯುತ್ ತಂತಿಯನ್ನು ಹಿಡಿದುಕೊಂಡರು. ಇವರನ್ನು ಕಾಪಾಡಲು ಬಂದ ಇವರ ತಂದೆ ವಿದ್ಯುತ್ ಸ್ಪರ್ಶದಿಂದಾಗಿ ಸ್ಥಳದಲ್ಲೇ ಸಾವಿಗೀಡಾದರು. ಬಾಲಕ ವಿಶ್ವಾಸ್, ಸುಮಾರು ಎರಡು ತಿಂಗಳ ಕಾಲ ಕೋಮಾದಲ್ಲಿದ್ದರು. ಪ್ರಜ್ಞೆ ಬಂದಾಗ ಅವರ ಎರಡೂ ಕೈಗಳನ್ನು ಕತ್ತರಿಸಿ ತೆಗೆಯಲಾಗಿತ್ತು. ಎರಡೂ ಕೈಗಳನ್ನು ಕಳೆದುಕೊಂಡ ವಿಶ್ವಾಸ್‌, ಪ್ರತಿಯೊಂದು ಕಾರ್ಯಕ್ಕೂ ಇತರರನ್ನು ಅವಲಂಬಿಸಬೇಕಾಗಿತ್ತು.

ಬೆಂಗಳೂರಿನಲ್ಲಿ ಬಿ.ಕಾಂ ಪದವಿ ಪಡೆದ ವಿಶ್ವಾಸ್‌, ಉದ್ಯೋಗಕ್ಕಾಗಿ ಅಲೆದಾಡಿದರು. ಪ್ರತಿ ಹಂತದಲ್ಲೂ ಅಂಗವೈಕಲ್ಯ ಅಡ್ಡಿಯಾಯಿತು. ಉದ್ಯೋಗ ಸಿಗದೆ ಖಿನ್ನತೆಗೂ ಒಳಗಾದರು.

‘ತಂದೆ ಪ್ರಾಣ ತ್ಯಾಗ ಮಾಡಿ ನನ್ನನ್ನು ಬದುಕಿಸಿದ್ದಾರೆ. ಮೊದಲು ನನ್ನನ್ನುನಾನು ಒಪ್ಪಿಕೊಳ್ಳಬೇಕು. ಏನನ್ನಾದರೂ ಸಾಧಿಸಿ ಜನರು ನನ್ನನ್ನು ಒಪ್ಪಿಕೊಳ್ಳುವಂತೆ ಮಾಡಬೇಕು ಎಂದು ನಿರ್ಧರಿಸಿದೆ. ಆಗ ಈಜು ಕಲಿತು ಸ್ಪರ್ಧೆಗಳಲ್ಲಿ ಭಾಗವಹಿಸಲು ನಿರ್ಧರಿಸಿದೆ. ವಿಜಯನಗರದ ಆಕ್ವಾಟಿಕ್ ಸೆಂಟರ್ ಈಜು ತರಬೇತಿ ಸಂಸ್ಥೆ ಸೇರಿದೆ’ ಎಂದು ವಿಶ್ವಾಸ್‌ ತಮ್ಮ ಬದುಕಿನ ಅನುಭವ ಬಿಚ್ಚಿಟ್ಟರು.

‘ತರಬೇತಿ ಕಠಿಣವಾಯಿತ್ತು. ಕೆಲವೊಮ್ಮೆ ತರಬೇತಿ ಮುಗಿದ ನಂತರ ಅಲ್ಲೇ ನಿದ್ರೆ ಮಾಡುತ್ತಿದ್ದೆ. ಎಸ್‌.ಆರ್‌.ಸಿಂಧ್ಯಾ ಅವರು ಒಂದು ರೂಪಾಯಿಯನ್ನೂ ಪಡೆಯದೇ ತರಬೇತಿ ನೀಡಿದರು. ಅವರು ನನ್ನ ಗಾಡ್‌ಫಾದರ್. ಜತೆಗೆ, ಆಸ್ಥಾ ಸಂಸ್ಥೆಯ ಸುನಿಲ್ ಜೈನ್‌ ಪ್ರೋತ್ಸಾಹಿಸಿದರು. ಕಷ್ಟದಲ್ಲಿದ್ದಾಗ ನನ್ನ ಅಣ್ಣ ಹಾಗೂ ಕುಟುಂಬದ ಎಲ್ಲ ಸದಸ್ಯರು ನೆರವಾಗಿದ್ದಾರೆ. ಬಾಳಿನಲ್ಲಿ ಜೊತೆಯಾಗಿರುವ ಪತ್ನಿ ಲಕ್ಷ್ಮೀ ಸದಾ ಪ್ರೋತ್ಸಾಹ ನೀಡುತ್ತಿದ್ದಾರೆ’ ಎಂದು ಅವರು ತಿಳಿಸಿದರು.

ಮಾರ್ಷಲ್‌ ಆರ್ಟ್ಸ್‌ ಮತ್ತು ನೃತ್ಯವನ್ನೂ ವಿಶ್ವಾಸ್‌ ಅಭ್ಯಾಸ ಮಾಡಿದ್ದಾರೆ. ‘ನಾಟ್ಯಲೋಕ’ದ ಆನಂದ್ ನೃತ್ಯ ಕಲಿಸಿದ್ದಾರೆ.

ಹಲವು ಪ್ರಶಸ್ತಿಗಳು ವಿಶ್ವಾಸ್‌ ಅವರನ್ನು ಅರಸಿ ಬಂದಿವೆ. 2018ರಲ್ಲಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರಿಂದ ‘ನ್ಯಾಷನಲ್ ರೋಲ್‌ ಮಾಡೆಲ್’ ಪ್ರಶಸ್ತಿ ಸ್ವೀಕರಿಸಿದ್ದಾರೆ. ಅಮೆರಿಕದ ‘ಸ್ಪೆಷಲ್ ಗೋಲ್ಡನ್ ಅಚೀವರ್’ ಪ್ರಶಸ್ತಿಯೂ ಇವರಿಗೆ ಸಂದಿದೆ.

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕೆಂಪೇಗೌಡ ಪ‍್ರಶಸ್ತಿ, ವಿಶ್ವೇಶ್ವರಯ್ಯ ರತ್ನ ಪ್ರಶಸ್ತಿ, ರಾಜ್ಯ ಅಂಗವಿಕಲ ಸಂಸ್ಥೆಯಿಂದ ರಾಜ್ಯಮಟ್ಟದ ಪ್ರಶಸ್ತಿ ಹಾಗೂ ಮುಂಬೈನ ಆ್ಯಂಪಲ್ ಮಿಷನ್ ’ಶೂರ್‌ ವೀರ್ ಪ್ರಶಸ್ತಿ’ಗೆ ಭಾಜನರಾಗಿದ್ದಾರೆ.

‘ನಾವು ಕೈಗೆತ್ತಿಕೊಂಡಿರುವ ಕಾರ್ಯವನ್ನು ಆತ್ಮವಿಶ್ವಾಸದಿಂದ ಹಾಗೂ ಇಷ್ಟಪಟ್ಟು ಮಾಡಬೇಕು. ಆಗ ಯಶಸ್ಸು ಲಭಿಸುತ್ತದೆ’ ಎಂದು ವಿಶ್ವಾಸ್‌ ಹೇಳುತ್ತಾರೆ.

ಸಾಧನೆಯ ಪಥ

*ಬೆಳಗಾವಿಯಲ್ಲಿ 2015ರಲ್ಲಿ ನಡೆದ ರಾಷ್ಟ್ರೀಯ ಪ್ಯಾರಾಲಿಂಪಿಕ್‌ ಕ್ರೀಡಾಕೂಟದ ಈಜು ಸ್ಪರ್ಧೆಯಲ್ಲಿ ಮೂರು ವಿಭಾಗಗಳಲ್ಲಿ ಬೆಳ್ಳಿ ಪದಕ

*2016ರಲ್ಲಿ ಕೆನಡಾದಲ್ಲಿ ನಡೆದ ಅಂತರರಾಷ್ಟ್ರೀಯ ಪ್ಯಾರಾ ಈಜು ಚಾಂಪಿಯನ್‌ಶಿಪ್‌ನಲ್ಲಿ ಎರಡು ಬೆಳ್ಳಿ ಹಾಗೂ ಒಂದು ಕಂಚು

*2017ರಲ್ಲಿ ಉದಯಪುರದಲ್ಲಿ ನಡೆದ ರಾಷ್ಟ್ರೀಯ ಪ್ಯಾರಾ ಈಜು ಚಾಂಪಿಯನ್‌ಶಿಪ್‌ನಲ್ಲಿ ಎರಡು ಬೆಳ್ಳಿ ಹಾಗೂ 1 ಸ್ವರ್ಣ ಪದಕ

*2017 ಮತ್ತು 2018ರಲ್ಲಿ ಜರ್ಮನಿಯಲ್ಲಿ ನಡೆದ ಅಂತರಾಷ್ಟ್ರೀಯ ಪ್ಯಾರಾ ಈಜು ಚಾಂಪಿಯನ್‌ಶಿಪ್‌ನಲ್ಲಿ ಸ್ಪರ್ಧಿಸಿ ಬೆಳ್ಳಿ ಮತ್ತು ಕಂಚು ಪದಕ

*2018ರಲ್ಲಿ ಬೆಂಗಳೂರಿನಲ್ಲಿ ನಡೆದ ಇಂಡಿಯನ್ ಓಪನ್ ಸ್ವಿಮ್ಮಿಂಗ್‌ ಸ್ಪರ್ಧೆಯಲ್ಲಿ 5 ಸ್ವರ್ಣ ಪದಕಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT