ಭಾನುವಾರ, ಆಗಸ್ಟ್ 1, 2021
27 °C
‘ಮೇಕ್ ಇನ್‌ ಇಂಡಿಯಾ’ ಕನಸಿಗೆ ಕೆಎಸ್‌ಎಸ್‌ಐಡಿಸಿ ತಣ್ಣೀರು

ಕೈಗಾರಿಕೆ ಸ್ಥಾಪನೆಗೆ ಭೂಮಿಗಾಗಿ ಅಲೆದಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದಲ್ಲಿ ಕೈಗಾರಿಕೆ ಆರಂಭಿಸಲು ಆಸಕ್ತಿ ತೋರಿ ಮುಂದೆ ಬಂದಿರುವ ಉದ್ಯಮಿಯೊಬ್ಬರು ಜಾಗ ಪಡೆಯಲು ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ (ಕೆಎಸ್‌ಎಸ್‌ಐಡಿಸಿ) ಕಚೇರಿಗೆ ಎರಡು ವರ್ಷಗಳಿಂದ ಅಲೆದಾಡಿ ಸುಸ್ತಾಗಿದ್ದಾರೆ. 

ಎಡಿಡಿ ಎಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ (ಎಇಸಿಪಿಎಲ್) ರಕ್ಷಣಾ ಕ್ಷೇತ್ರಗಳಿಗೆ ಉನ್ನತ ದರ್ಜೆಯ ಮೆಟಲ್ ಕಟ್ಟಿಂಗ್ ಟೂಲ್ಸ್ ಪೂರೈಕೆ ಮಾಡುತ್ತಿದೆ.

ಇದು ಜರ್ಮನಿಯ ಜಿಎಂಬಿಎಚ್‌ನ ಅಂಗಸಂಸ್ಥೆಯಾಗಿದ್ದು, ತನ್ನ ಉದ್ಯಮ ವನ್ನು ಬೆಂಗಳೂರಿನಲ್ಲಿ ವಿಸ್ತರಿಸಲು ಮುಂದೆ ಬಂದಿದೆ.

‘ನಮ್ಮ ಕಂಪನಿಯು ಎಚ್‍ಎಎಲ್‍, ಎಲ್‍ಸಿಎ ತೇಜಸ್ ಮತ್ತು ಎಂಜಿನ್ ಯೋಜನೆಗೆ ಮೆಟಲ್ ಕಟ್ಟಿಂಗ್ ಉಪಕರಣಗಳ ಪೂರೈಕೆ ಮಾಡಿದೆ. 515 ಆರ್ಮಿ ಬೇಸ್, ನ್ಯಾಷನಲ್ ಏರೋಸ್ಪೇಸ್ ಲ್ಯಾಬೊರೇಟರೀಸ್ ಮತ್ತು ಏರೋಸ್ಪೇಸ್‌ಗೆ ಸಂಬಂಧಿಸಿದ ಕಂಪನಿಗಳೊಂದಿಗೆ ನಿಕಟ ವ್ಯವಹಾರ ನಡೆಸಿಕೊಂಡು ಬಂದಿದೆ’ ಎಂದು ಕಂಪನಿಯ ನಿರ್ದೇಶಕ ಗಿರೀಶ್ ಲಿಂಗಣ್ಣ ಹೇಳಿದರು.

‘ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ’ಮೇಕ್ ಇನ್ ಇಂಡಿಯಾ’ ಉಪಕ್ರಮದಿಂದ ಪ್ರೇರಣೆಗೊಂಡ ನಾವು  ನೆಲಮಂಗಲ ಇಂಡಸ್ಟ್ರಿಯಲ್ ಎಸ್ಟೇಟ್‍ನಲ್ಲಿ ನಿವೇಶನಕ್ಕಾಗಿ (ಸಂಖ್ಯೆ ಡಿ143) ಅರ್ಜಿ ಸಲ್ಲಿಸಿದೆವು. ಆದರೆ, ಹಂಚಿಕೆ ಮಾಡಲು ನಿಗಮ ಯಾವುದೇ ಕ್ರಮ ಕೈಗೊಳ್ಳಲಿಲ್ಲ‘ ಎಂದು ಅವರು ದೂರಿದರು.

‘ಜಮೀನು ಮಂಜೂರು ಮಾಡುವಂತೆ ಕೋರಿ ಈ ಹಿಂದೆ ರಕ್ಷಣಾ ಸಚಿವರಾಗಿದ್ದ ನಿರ್ಮಲಾ ಸೀತಾರಾಮನ್ ಅವರಿಗೆ ಇ–ಮೇಲ್ ಕಳುಹಿಸಲಾಗಿತ್ತು. 2018ರ ಸೆಪ್ಟೆಂಬರ್ 6ರಂದು ಕೆಎಸ್‌ಎಸ್‌ಐಡಿಸಿಗೆ ಪತ್ರ ಬರೆದಿದ್ದ ಸಚಿವರು, ಆದ್ಯತೆ ಮೇರೆಗೆ ಭೂಮಿ ಮಂಜೂರು ಮಾಡಲು ಸೂಚನೆ ನೀಡಿದ್ದರು. ಆದರೂ, ಭೂಮಿ ಸಿಕ್ಕಿಲ್ಲ’ ಎನ್ನುತ್ತಾರೆ ಗಿರೀಶ್ ಲಿಂಗಣ್ಣ.

ಮತ್ತೊಂದು ಪತ್ರ ಬರೆದ ರಕ್ಷಣಾ ಇಲಾಖೆ, ‘ರಕ್ಷಣಾ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆಗೆ ಅವಕಾಶ ಕಲ್ಪಿಸಿ, ಆಸಕ್ತಿ ಇರುವವರ ಜತೆ ಚರ್ಚೆ ನಡೆಸಿ‘ ಎಂದು ಸೂಚನೆ ನೀಡಿದ್ದರು. ಅದಾದ ನಂತರವೂ ಭೂಮಿ ಸಿಕ್ಕಿಲ್ಲ’ಎಂದು ಅವರು ಬೇಸರ ವ್ಯಕ್ತಪಡಿಸಿದರು.

‘ಭೂಮಿ ಹಂಚಿಕೆ ವಿಚಾರ ನ್ಯಾಯಾಲಯದಲ್ಲಿದೆ ಎಂದು ಅಧಿಕಾರಿಗಳು ನೆಪ ಹೇಳುತ್ತಿದ್ದಾರೆ. ನಾವು ಎಕರೆಗಟ್ಟಲೆ ಜಾಗವನ್ನೂ ಕೇಳುತ್ತಿಲ್ಲ. ಬೆಂಗಳೂರಿನ ಯಾವುದೇ ಕೈಗಾರಿಕಾ ಪ್ರದೇಶದಲ್ಲಿ ಭೂಮಿ ಮಂಜೂರು ಮಾಡಿದರೂ ಪಡೆಯಲು ಸಿದ್ಧರಿದ್ದೇವೆ. ರಕ್ಷಣಾ ಕ್ಷೇತ್ರಕ್ಕೆ ಉಪಕರಣಗಳನ್ನು ನೀಡುವ ಕಂಪನಿಗಳಿಗೆ ಬೇರೆ ರಾಜ್ಯಗಳು ಕೈಬೀಸಿ ಕರೆಯುತ್ತಿವೆ. ಆದರೆ, ಬೆಂಗಳೂರಿನಲ್ಲೇ ಕೈಗಾರಿಕೆ ಆರಂಭಿಸಿ ಇಲ್ಲಿನ ಜನರಿಗೆ ಉದ್ಯೋಗ ನೀಡಬೇಕು ಎಂಬುದು ನಮ್ಮ ಉದ್ದೇಶ. ಅದಕ್ಕೆ ಕೆಎಸ್‌ಎಸ್‌ಐಡಿಸಿ ಸ್ಪಂದಿಸುತ್ತಿಲ್ಲ’ ಎಂದು ಅವರು ಆರೋಪಿಸಿದರು.

‘ಭೂ ಹಂಚಿಕೆ ವಿವಾದ ಕೋರ್ಟ್‌ನಲ್ಲಿ’
‘ನೆಲಮಂಗಲ ಮತ್ತು ಮುತ್ತುಗದಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಜಾಗ ಸಿದ್ಧ ಇದೆ. ಭೂಮಿ ಹಂಚಿಕೆ ವಿವಾದ ಹೈಕೋರ್ಟ್‌ನಲ್ಲಿ ಇರುವ ಕಾರಣ ವಿಳಂಬ ಆಗುತ್ತಿದೆ’ ಎಂದು ಕೆಎಸ್‌ಎಸ್‌ಐಡಿಸಿ ವ್ಯವಸ್ಥಾಪಕ ನಿರ್ದೇಶಕ ಮಹೇಶ್ ಬಿ. ಶಿರೂರ್ ಹೇಳಿದರು.

‘ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಹೆಚ್ಚಿನ ನಿವೇಶನ ಹಂಚಿಕೆಯಾಗಿದೆ ಎಂದು ಆರೋಪಿಸಿ ವ್ಯಕ್ತಿಯೊಬ್ಬರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ’ ಎಂದು ವಿವರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು