ಮಂಗಳವಾರ, ಜನವರಿ 18, 2022
27 °C

ಕಾರು, ಬೈಕ್‌ ಮೇಲೆ ಟಿಪ್ಪರ್ ಪಲ್ಟಿ: ಆರು ಮಂದಿ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಜಲ್ಲಿ ಕಲ್ಲು ಸಾಗಿಸುತ್ತಿದ್ದ ಟಿಪ್ಪರ್‌ವೊಂದು ನಿಯಂತ್ರಣ ತಪ್ಪಿ ಎರಡು ಕಾರು ಹಾಗೂ ಬೈಕೊಂದರ ಮೇಲೆ ಉರುಳಿ ಬಿದ್ದಿದ್ದು, ಘಟನೆಯಲ್ಲಿ ಆರು ಮಂದಿ ಮೃತಪಟ್ಟಿದ್ದಾರೆ. ಕುಂಬಳಗೋಡು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

‘ಕಾರಿನಲ್ಲಿದ್ದ ನಿಖಿತಾ ರಾಣಿ (29), ವೀಣಮ್ಮ (42), ಇಂದ್ರಕುಮಾರ್‌ (14), ಕೀರ್ತಿಕುಮಾರ್‌ (40), ಟೊಯೊಟಾ ಕಂಪನಿಯ ಸಿಬ್ಬಂದಿ ಟಿ.ಜೆ.ಶಿವಪ್ರಕಾಶ್‌ ಹಾಗೂ ಬೈಕ್‌ ಸವಾರ ಜಿತಿನ್ ಬಿ ಜಾರ್ಜ್‌ ಎಂಬುವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ’ ಎಂದು ಪೊಲೀಸರು ಹೇಳಿದ್ದಾರೆ.

‘ರಸ್ತೆ ಕಾಮಗಾರಿ ಪ್ರಗತಿಯಲ್ಲಿ‌ತ್ತು. ಹೀಗಿದ್ದರೂ ಟಿಪ್ಪರ್‌ (ಕೆಎ 42, ಎ–2723) ಚಾಲಕ ವೇಗವಾಗಿ ಚಾಲನೆ ಮಾಡಿಕೊಂಡು ಬಂದಿದ್ದಾನೆ. ಟಿಪ್ಪರ್‌ ನಿಯಂತ್ರಣ ತಪ್ಪಿ ಕಾರುಗಳು ಹಾಗೂ ಬೈಕ್‌ ಮೇಲೆ ಉರುಳಿದೆ. ಅದರ ರಭಸಕ್ಕೆ ಕೆಂಪು ಹಾಗೂ ಶ್ವೇತ ವರ್ಣದ ಕಾರುಗಳು ನಜ್ಜುಗುಜ್ಜಾಗಿದ್ದವು. ಜಲ್ಲಿಕಲ್ಲುಗಳ ರಾಶಿಯ ಅಡಿಯಲ್ಲಿ ಅವು ಸಿಲುಕಿದ್ದವು. ಜೆಸಿಬಿ ಮೂಲಕ ಜಲ್ಲಿಕಲ್ಲು ತೆರವು ಮಾಡಲಾಯಿತು’ ಎಂದು ತಿಳಿಸಿದ್ದಾರೆ.  

‘ಮೃತದೇಹಗಳನ್ನೆಲ್ಲಾ ರಾಜರಾಜೇಶ್ವರಿ ಆಸ್ಪತ್ರೆಗೆ ರವಾನಿಸಲಾಗಿದೆ. ಅಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತದೆ. ಎರಡು ಕಾರುಗಳಲ್ಲಿ ತಲಾ 5 ಮಂದಿ ಪ್ರಯಾಣಿಸುತ್ತಿದ್ದರು ಎಂಬುದು ಗೊತ್ತಾಗಿದೆ. ಇಬ್ಬರಿಗೆ ಗಂಭೀರ ಗಾಯಗಳಾಗಿವೆ. ಚಿಕಿತ್ಸೆಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ’ ಎಂದರು.  

‘ವೀಣಮ್ಮ, ನಿಖಿತಾ, ಇಂದ್ರಕುಮಾರ್‌ ಹಾಗೂ ಕೀರ್ತಿಕುಮಾರ್‌ ಅವರು ಕೆಎ 02, ಎಂಎಂ 7749 ನೋಂದಣಿ ಸಂಖ್ಯೆಯ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಟಿಪ್ಪರ್‌ನಲ್ಲಿ ಸುಮಾರು 20 ಟನ್‌ ಜಲ್ಲಿಕಲ್ಲು ಸಾಗಿಸಲಾಗುತ್ತಿತ್ತು. ಕೆಎ 05, ಎಂ.ಜೆ.9924 ನೋಂದಣಿ ಸಂಖ್ಯೆಯ ಕಾರು ಕೂಡ ಜಖಂ ಆಗಿದೆ. ಕಾರಿನಲ್ಲಿದ್ದವರೆಲ್ಲಾ ಮಾಗಡಿ ನಿವಾಸಿಗಳು ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ’ ಎಂದು ಹೇಳಿದ್ದಾರೆ. 

10 ಕಿ.ಮೀ.ನಷ್ಟು ಟ್ರಾಫಿಕ್‌: ಅಪಘಾತದಿಂದಾಗಿ ಸುಮಾರು 10 ಕಿ.ಮೀ.ನಷ್ಟು ದೂರದವರೆಗೂ ಸಂಚಾರ ದಟ್ಟಣೆ ಏರ್ಪಟ್ಟಿತ್ತು. ದಟ್ಟಣೆ ನಿಯಂತ್ರಿಸಲು ‍ಪೊಲೀಸರು ಹರಸಾಹಸ ಪಡುತ್ತಿದ್ದ ದೃಶ್ಯ ಕಂಡುಬಂತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.