ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಮುದ್ವತಿ ಪುನರುಜ್ಜೀವನ: ಎರಡನೇ ಹಂತಕ್ಕೆ ಚಾಲನೆ

Last Updated 28 ಮೇ 2019, 20:01 IST
ಅಕ್ಷರ ಗಾತ್ರ

ಬೆಂಗಳೂರು:ಆರ್ಟ್ ಆಫ್ ಲಿವಿಂಗ್ ಅಂತರರಾಷ್ಟ್ರೀಯ ಕೇಂದ್ರವು ಕುಮುದ್ವತಿ ನದಿ ಪುನಶ್ಚೇತನ ಯೋಜನೆಯ ಎರಡನೇ ಹಂತದ ಕಾಮಗಾರಿಯನ್ನು ಕೈಗೆತ್ತಿಕೊಂಡಿದ್ದು, ರೈತರ ಹೊಲಗಳು ಹಾಗೂ ಜನವಸತಿ ಪ್ರದೇಶಗಳಲ್ಲಿ ಮರುಪೂರಣ ಬಾವಿಗಳನ್ನು ನಿರ್ಮಿಸಲಿದೆ.

2013ರಲ್ಲಿ ಮೊದಲ ಹಂತದ ಯೋಜನೆಗೆ ಚಾಲನೆ ನೀಡಲಾಗಿತ್ತು. ಆರು ವರ್ಷಗಳ ಅವಧಿಯಲ್ಲಿ 3 ಸಾವಿರಕ್ಕೂ ಹೆಚ್ಚು ಮರುಪೂರಣ ಬಾವಿಗಳನ್ನು ನಿರ್ಮಿಸಲಾಗಿತ್ತು. ಇದರಿಂದಾಗಿ, ಕುಮುದ್ವತಿ ಜಲಾನಯನ ಪ್ರದೇಶದ ಅಂತರ್ಜಲ ಮಟ್ಟದಲ್ಲಿ ಶೇ 2ರಷ್ಟು ಹೆಚ್ಚಳವಾಗಿತ್ತು. ಇದುವರೆಗೆ ನದಿಯ ಹರಿವಿನ ದಾರಿಯಲ್ಲಿ ಕೆಲಸ ನಡೆದಿತ್ತು.

‘ಎರಡನೇ ಹಂತದಲ್ಲಿ ರೈತರ ಹೊಲಗಳಿಗೆ ಮತ್ತು ಜನವಸತಿ ಪ್ರದೇಶಗಳಿಗೆ ಕಾಮಗಾರಿ ವಿಸ್ತರಿಸಲಾಗುತ್ತಿದೆ. ಮರುಪೂರಣದ ಒಟ್ಟು ಪ್ರದೇಶವನ್ನು ರೈತರ ಹೊಲಗಳಿಗೂ ವಿಸ್ತರಿಸಬೇಕಾಗಿದೆ. ಇದರಿಂದ ರೈತರಿಗೆ ತಕ್ಷಣದ ಪ್ರಯೋಜನಗಳು ದೊರೆಯಲಿವೆ’ ಎಂದು ಆರ್ಟ್ ಆಫ್ ಲಿವಿಂಗ್ ಅಂತರರಾಷ್ಟ್ರೀಯ ಕೇಂದ್ರದ ನದಿ ಪುನಶ್ಚೇತನ ಯೋಜನೆಯ ನಿರ್ದೇಶಕ ಡಾ.ವೈ.ಲಿಂಗರಾಜು ತಿಳಿಸಿದರು.

ಜಲಸಾಕ್ಷರತೆ, ಬಹುಬೆಳೆ ಬೇಸಾಯ ಮತ್ತು ನೀರಿನ ಯೋಜಿತ ಬಳಕೆ ವಿಚಾರಗಳಲ್ಲಿ ರೈತರಿಗೆ ತರಬೇತಿ ನೀಡಲಿದೆ. ಕೆರೆಗಳ ಹೂಳು ತೆಗೆದು ಅವುಗಳ ಸಂಗ್ರಹ ಸಾಮರ್ಥ್ಯ ಹೆಚ್ಚಿಸುವ ಗುರಿಯನ್ನೂ ಕೇಂದ್ರವು ಹೊಂದಿದೆ.

ತಮ್ಮ ಹೊಲಗಳಲ್ಲಿ ಮರುಪೂರಣ ಬಾವಿಗಳನ್ನು ನಿರ್ಮಿಸಿಕೊಂಡು, ಅಲ್ಲಿಯ ಕೊಳವೆ ಬಾವಿ ಹಾಗೂ ತೆರೆದ ಬಾವಿಗಳ ನೀರಿನ ಸಂಗ್ರಹ ಸಾಮರ್ಥ್ಯವನ್ನು ಹೇಗೆ ಹೆಚ್ಚಿಸಿಕೊಳ್ಳಬೇಕು ಎಂಬ ಕುರಿತು ಕೂಡ ಜಲ ಸಾಕ್ಷರತೆ ತರಬೇತಿ ಅಡಿ ರೈತರಿಗೆ ತಿಳಿಸಿಕೊಡಲಾಗುತ್ತಿದೆ. ಜಲಸಂರಕ್ಷಣೆಗೆ ಸಂಬಂಧಿಸಿದ ಸರ್ಕಾರಿ ಯೋಜನೆಗಳ ಕುರಿತೂ ಮಾಹಿತಿ ನೀಡಲಾಗುತ್ತದೆ ಎಂದು ಅವರು ಹೇಳಿದರು.

ಕುಮುದ್ವತಿ ನದಿಯನ್ನು ಪುನಶ್ಚೇತನಗೊಳಿಸುವ ಕನಸು ಕಂಡವರು ಲಿಂಗರಾಜು ಅವರು. ‘ನೀರಿನ ಪ್ರಮುಖ ಆಕರ ಮಳೆ. ಆದ್ದರಿಂದ ಮಳೆ ನೀರನ್ನು ಸಂರಕ್ಷಿಸಿ ಅಂತರ್ಜಲ ಮರುಪೂರಣ ಮಾಡಬೇಕು. ನೀರಿನಮಿತಿಮೀರಿದ ಬಳಕೆಯಿಂದ ಉಂಟಾಗಿರುವ ಸಮಸ್ಯೆ ನಿವಾರಿಸಲು ನೀರು ಭೂಮಿಯೊಳಗೆ ಇಂಗುವಂತೆ ಮಾಡಬೇಕಾಗಿರುವುದು ಇಂದಿನ ಅಗತ್ಯ. ಈ ಕುರಿತು ರೈತರಿಗೆ ಅರಿವು ಮೂಡಿಸಲಾಗುತ್ತಿದೆ’ ಎಂದು ಲಿಂಗರಾಜು ತಿಳಿಸಿದರು.

ಮೊದಲ ಹಂತದಲ್ಲಿ ಸಿಎಸ್‌ಆರ್‌ ಅನುದಾನ ಬಳಸಿಕೊಂಡು ಸ್ವಯಂಸೇವಕರು ಹಾಗೂ ಸ್ಥಳೀಯ ನಿವಾಸಿಗಳ ನೆರವಿನಿಂದ ಮಾಗಡಿ ಹಾಗೂ ನೆಲಮಂಗಲ ತಾಲ್ಲೂಕುಗಳ26 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಕಲ್ಯಾಣಿಗಳನ್ನು ಸ್ವಚ್ಛಗೊಳಿಸಿ, ಇಂಗುಗುಂಡಿ ಹಾಗೂ ಮರುಪೂರಣ ಬಾವಿಗಳನ್ನು ನಿರ್ಮಿಸಲಾಗಿತ್ತು.

ಶಿವಗಂಗೆ ಬೆಟ್ಟದಲ್ಲಿ ಹುಟ್ಟುವ ಕುಮುದ್ವತಿ ನದಿ, 54 ಕಿ.ಮೀ. ಹರಿದು ತಿಪ್ಪಗೊಂಡನಹಳ್ಳಿ ಬಳಿ ಅರ್ಕಾವತಿ ನದಿಯನ್ನು ಸೇರುತ್ತದೆ. ಕುಮುದ್ವತಿ ನದಿಯು ತನ್ನ ವೈಭವದ ಕಾಲದಲ್ಲಿ 274 ಹಳ್ಳಿಗಳ ಜೀವನಾಡಿಯಾಗಿತ್ತು. ಅದ್ಭುತವಾದ ಜೀವವೈವಿಧ್ಯದ ನೆಲೆಯೂ ಆಗಿತ್ತು. ನಗರದ ಶೇ 30ರಷ್ಟು ನೀರಿನ ಅವಶ್ಯಕತೆ ಪೂರೈಸುತ್ತಿತ್ತು.

ಹೂವಿನ ಹಾಸಿಗೆ ಆಗಿರಲಿಲ್ಲ: ‘ಮೊದಮೊದಲಿಗೆ ಹಳ್ಳಿಯ ಜನರು ಸ್ವಯಂಸೇವಕರನ್ನು ಸಂದೇಹದಿಂದ‌ ನೋಡುತ್ತಿದ್ದರು. ನಿರ್ಮಾಣಗೊಂಡ ಮರುಪೂರಣ ರಚನೆಗಳನ್ನು ರಾತ್ರೋರಾತ್ರಿ ನಾಶಪಡಿಸುತ್ತಿದ್ದರು. ನಿರ್ಮಾಣ ಸಾಮಗ್ರಿಗಳನ್ನು ಕದ್ದೊಯ್ಯುತ್ತಿದ್ದರು. ಎಲ್ಲವನ್ನೂ ಮತ್ತೆ ಮೊದಲಿನಿಂದ ‌ಪ್ರಾರಂಭಿಸಬೇಕಾಗುತ್ತಿತ್ತು. ಯೋಜನೆ ಹಾಗೂ ನೀರಿನ ಸಂರಕ್ಷಣೆ ಬಗ್ಗೆ ಜನರಿಗೆ ಅರಿವು ಮೂಡಿಸಲಾಯಿತು. ನೀರಿನ ಸಮಸ್ಯೆಯ ಅರಿವಾಗುತ್ತಿದ್ದಂತೆ ಪುನರುಜ್ಜೀವನ ಕಾರ್ಯದಲ್ಲಿ ಅವರೂ ತೊಡಗಿಸಿಕೊಂಡರು’ ಎಂದು ಸ್ವಯಂಸೇವಕರು ಹೇಳಿದರು.

***

ಅಂಕಿ ಅಂಶ

460 ಚದರ ಕಿ.ಮೀ. – ಕುಮುದ್ವತಿ ನದಿಯ ಒಟ್ಟು ಜಲಾನಯನ ಪ್ರದೇಶ

326 ಚದರ ಕಿ.ಮೀ. – ನೆಲಮಂಗಲ ತಾಲ್ಲೂಕಿನಲ್ಲಿರುವ ಜಲಾನಯನ ಪ್ರದೇಶ

134 ಚದರ ಕಿ.ಮೀ. – ಮಾಗಡಿ ತಾಲ್ಲೂಕಿನಲ್ಲಿರುವ ಜಲಾನಯನ ಪ್ರದೇಶ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT