ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಂದು ಕೊರತೆ | ತಲಘಟ್ಟಪುರ ಕೆರೆ: ಸಂಸ್ಕರಿಸಿದ ಶುದ್ಧ ನೀರು ಹರಿಸಲು ಆಗ್ರಹ

Published 17 ಮಾರ್ಚ್ 2024, 16:57 IST
Last Updated 17 ಮಾರ್ಚ್ 2024, 16:57 IST
ಅಕ್ಷರ ಗಾತ್ರ

ತಲಘಟ್ಟಪುರ ಕೆರೆ: ಸಂಸ್ಕರಿಸಿದ ಶುದ್ಧ ನೀರು ಹರಿಸಿ

ಬನಶಂಕರಿ 6ನೇ ಹಂತದ 4ನೇ ‘ಟಿ’ ಬ್ಲಾಕ್‌ಗೆ ಹೊಂದಿಕೊಂಡಿರುವ ತಲಘಟ್ಟಪುರ ಕೆರೆ ಒಣಗುತ್ತಿದೆ. ಇದರಿಂದ ಸಹಜವಾಗಿಯೇ ನಮ್ಮ ಬಡಾವಣೆ ಸೇರಿದಂತೆ ಅಕ್ಕಪಕ್ಕದಲ್ಲಿದ್ದ ಕೊಳವೆಬಾವಿಗಳಲ್ಲಿ ನೀರಿನ ಪ್ರಮಾಣ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಇದು ಇಲ್ಲಿನ ನಿವಾಸಿಗಳ ಆತಂಕಕ್ಕೆ ಕಾರಣವಾಗಿದೆ. ಇದೇ ಪರಿಸ್ಥಿತಿ ಮುಂದುವರೆದರೆ ಮುಂದಿನ ದಿನಗಳಲ್ಲಿ ನೀರಿನ ಹಾಹಾಕಾರ ಹೆಚ್ಚಾಗಲಿದೆ. ಬೆಂಗಳೂರು ಜಲ ಮಂಡಳಿಯು ನಾಯಂಡಳ್ಳಿ ಕೆರೆ, ಚಿಕ್ಕಬಾಣಾವರ ಕೆರೆ, ಬೆಳ್ಳಂದೂರು, ವರ್ತೂರು, ಅಗರ ಸೇರಿದಂತೆ ಆರು ಕೆರೆಗಳಿಗೆ ಸಂಸ್ಕರಿಸಿದ ನೀರು ಹರಿಸುವುದಾಗಿ ಮಂಡಳಿಯ ಅಧ್ಯಕ್ಷ ವಿ. ರಾಮಪ್ರಸಾತ್ ಮನೋಹರ್‌ ತಿಳಿಸಿದ್ದಾರೆ. ಈ ಪಟ್ಟಿಯಲ್ಲಿ ತಲ್ಲಘಟ್ಟಪುರ ಕೆರೆ ಇಲ್ಲ. ಕೂಡಲೇ ಈ ಕೆರೆಗೂ ಸಂಸ್ಕರಿಸಿದ ಶುದ್ಧ ನೀರು ಹರಿಸಬೇಕು.

ರಾ. ಜಯಸಿಂಹ, ತಲಘಟ್ಟಪುರ

ಅನಧಿಕೃತ ಪಾರ್ಕಿಂಗ್‌ ನಿಷೇಧಿಸಿ

ಹೊಸಕೆರೆಹಳ್ಳಿ ಕೆರೆಕೋಡಿ ಪುಷ್ಪಗಿರಿನಗರ ಮುಖ್ಯರಸ್ತೆಯ ಆರಂಭದಿಂದ ಸುಮಾರು ನೂರು ಮೀಟರ್‌ವರೆಗಿನ ರಸ್ತೆಯ ಎರಡು ಬದಿಯಲ್ಲಿ ವಾಹನಗಳನ್ನು ಪಾರ್ಕಿಂಗ್‌ ಮಾಡಲಾಗುತ್ತಿದೆ. ಇದರಿಂದ ಇಲ್ಲಿನ ಬಡಾವಣೆಯ ನಿವಾಸಿಗಳ ವಾಹನ ಸಂಚಾರಕ್ಕೆ ಅಡಚಣೆ ಆಗುತ್ತಿದೆ. ಈ ರಸ್ತೆಯ ಎರಡೂ ಬದಿಗಳಲ್ಲಿ ಟೆಂಪೊ, ಟ್ಯಾಕ್ಸಿ, ಮಿನಿ ಬಸ್‌, ಶಾಲಾ ಬಸ್‌, ಸರಕು–ಸಾಗಣೆ ವಾಹನಗಳನ್ನು ಮೂರು ದಿನಗಳವರೆಗೆ ಪಾರ್ಕಿಂಗ್‌ ಮಾಡಲಾಗುತ್ತಿದೆ. ಬಿಬಿಎಂಪಿ ಇಲ್ಲಿ ‘ನೋ ಪಾರ್ಕಿಂಗ್‌’ ಫಲಕ ಅಳವಡಿಸಬೇಕು. ಅಕ್ರಮವಾಗಿ ನಿಲುಗಡೆ ಮಾಡುವ ವಾಹನಗಳಿಗೆ ದಂಡ ಹಾಕಬೇಕು. ಸ್ಥಳೀಯ ನಿವಾಸಿಗಳಿಗೆ ಆಗುತ್ತಿರುವ ತೊಂದರೆ ತಪ್ಪಿಸಬೇಕು.

ರಾಮೇಗೌಡ, ಪುಷ್ಪಗಿರಿನಗರ, ಹೊಸಕೆರೆಹಳ್ಳಿ

ರಸ್ತೆ ದುರಸ್ತಿಗೊಳಿಸಿ

ಬೈದರಹಳ್ಳಿಯ ಬಿಇಎಲ್‌ ಲೇಔಟ್‌ನ ಎರಡನೇ ಹಂತದಲ್ಲಿರುವ 60 ಅಡಿ ರಸ್ತೆಯಲ್ಲಿ ಗುಂಡಿಗಳಾಗಿದ್ದು, ಸಂಪೂರ್ಣ ಹಾಳಾಗಿದೆ. ಇದರಿಂದ, ಬಡಾವಣೆ ನಿವಾಸಿಗಳ ವಾಹನ ಸಂಚಾರಕ್ಕೆ ಸಂಚಕಾರ ಬಂದಿದೆ. ಪ್ರತಿನಿತ್ಯ ಈ ರಸ್ತೆಯಲ್ಲಿ ನೂರಾರು ವಾಹನಗಳು ಸಂಚರಿಸುತ್ತವೆ. ಆದರೆ, ರಸ್ತೆಯಲ್ಲಿ ದೊಡ್ಡ–ದೊಡ್ಡ ಗುಂಡಿಗಳು ಬಿದ್ದಿರುವ ಪರಿಣಾಮ ಅಪಘಾತಗಳು ಸಂಭವಿಸಿವೆ. ಬೆಳಗಿನ ಹಾಗೂ ಸಂಜೆ ವೇಳೆಯಲ್ಲಿ ಸಂಚಾರ ದಟ್ಟಣೆ ಆಗುತ್ತಿದೆ. ಇದರಿಂದ, ಕಚೇರಿ, ಶಾಲೆಗೆ ಹೋಗುವ ವಿದ್ಯಾರ್ಥಿಗಳ ತಡವಾಗಿ ತಲಪುತ್ತಿದ್ದಾರೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಈ ರಸ್ತೆ ದುರಸ್ತಿಗೊಳಿಸಿ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು.

ಬ್ರಿಜೇಶ್, ಬಿಇಎಲ್‌ ಲೇಔಟ್‌

ರಸ್ತೆ ಗುಂಡಿ ಮುಚ್ಚಿ

ಹೊಸಕೋಟೆ–ಚಿಂತಾಮಣಿ ರಸ್ತೆಯ ಸಿದ್ಧಾರ್ಥನಗರ ಬಳಿಯ ರಸ್ತೆಯಲ್ಲಿ ದೊಡ್ಡ ಗಾತ್ರದ ಗುಂಡಿಯಾಗಿದ್ದು, ಇದರಿಂದ ವಾಹನ ಸಂಚಾರಕ್ಕೆ ಅನನುಕೂಲವಾಗಿದೆ. ಈ ರಸ್ತೆಯಲ್ಲಿ ಅರ್ಧ ಅಡಿಯಷ್ಟು ಗುಂಡಿಯಾಗಿ ವರ್ಷಗಳೇ ಕಳೆದರೂ ಇಲ್ಲಿನ ಶಾಸಕರು ಅಥವಾ ಹೆದ್ದಾರಿ ಪ್ರಾಧಿಕಾರದವರಾಗಲಿ ಈ ರಸ್ತೆಯಲ್ಲಾಗಿರುವ ಗುಂಡಿ ದುರಸ್ತಿಗೊಳಿಸಲು ಮುಂದಾಗಿಲ್ಲ. ಇದರಿಂದ, ವಾಹನ ದಟ್ಟಣೆ ಆಗುತ್ತಿದೆ. ಜೊತೆಗೆ ಹಲವಾರು ಬೈಕ್‌ ಸವಾರರು ಬಿದ್ದು ಗಾಯಗೊಂಡಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಈ ಗುಂಡಿ ಮುಚ್ಚಲು ಕ್ರಮ ಕೈಗೊಳ್ಳಬೇಕು.

ದೀಪುರಾವ್, ಕೆಂಚನಪುರ

ಬಸ್‌ ತಂಗುದಾಣ: ಕುಸಿದ ಚಾವಣಿ

ಕೃಷ್ಣರಾಜಪುರ ವಿಧಾನಸಭೆ ಕ್ಷೇತ್ರದ ದೇವಸಂದ್ರ ವಾರ್ಡ್‌ಗೆ ಸೇರಿದ ಕೃಷ್ಣರಾಜಪುರ ಬಸ್‌ ತಂಗುದಾಣದ ಚಾವಣಿ ಶಿಥಿಲಗೊಂಡು ಕುಸಿದುಬಿದ್ದಿದೆ. ಸರಿಯಾದ ನಿರ್ವಹಣೆಯ ಕೊರತೆಯಿಂದ ಗಬ್ಬೆದ್ದು ನಾರುತ್ತಿದೆ. ಇದರ ಪಕ್ಕದಲ್ಲಿ ಬಿಬಿಎಂಪಿ ಕಚೇರಿ ಮತ್ತು ಸಾರ್ವಜನಿಕ ಆಸ್ಪತ್ರೆ ಇದೆ. ಪ್ರಯಾಣಿಕರು ಬಿಸಿಲಲ್ಲೇ ಬಸ್‌ಗಾಗಿ ಕಾಯುವ ಪರಿಸ್ಥಿತಿ ಎದುರಾಗಿದೆ. ಕೂಡಲೇ ಸ್ಥಳೀಯ ಶಾಸಕರು ಹಾಗೂ ಅಧಿಕಾರಿಗಳು ಈ ತಂಗುದಾಣದ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು.

ಕಿರಣ್ ಕುಮಾರ್ ಜೆ, ಮೇಡಹಳ್ಳಿ (ಕೃಷ್ಣರಾಜಪುರ)

ಪುಷ್ಪಗಿರಿನಗರ ಮುಖ್ಯರಸ್ತೆಯಲ್ಲಿ ಅನಧಿಕೃತವಾಗಿ ಪಾರ್ಕ್ ಮಾಡಿರುವ ವಾಹನಗಳು.
ಪುಷ್ಪಗಿರಿನಗರ ಮುಖ್ಯರಸ್ತೆಯಲ್ಲಿ ಅನಧಿಕೃತವಾಗಿ ಪಾರ್ಕ್ ಮಾಡಿರುವ ವಾಹನಗಳು.
ಬಿಇಎಲ್‌ ಲೇಔಟ್‌ನ 2ನೇ ಹಂತದ ರಸ್ತೆ ದುಸ್ಥಿತಿ.
ಬಿಇಎಲ್‌ ಲೇಔಟ್‌ನ 2ನೇ ಹಂತದ ರಸ್ತೆ ದುಸ್ಥಿತಿ.
ರಸ್ತೆಯ ದುಸ್ಥಿತಿ
ರಸ್ತೆಯ ದುಸ್ಥಿತಿ
ಕೃಷ್ಣರಾಜಪುರದ ಬಸ್‌ ತಂಗುದಾಣದ ಸ್ಥಿತಿ
ಕೃಷ್ಣರಾಜಪುರದ ಬಸ್‌ ತಂಗುದಾಣದ ಸ್ಥಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT