ಫ್ರಿಡ್ಜ್‌ನಲ್ಲಿ ಕುಳಿತು ಕುಣಿಗಲ್ ಗಿರಿ ಪರಾರಿ | ಪೊಲೀಸರಿಗೇ ಚಳ್ಳೆಹಣ್ಣು

ಗುರುವಾರ , ಜೂಲೈ 18, 2019
23 °C
ಕುಖ್ಯಾತ ಕಳ್ಳನ ಹುಟ್ಟುಹಬ್ಬ ಆಚರಣೆಯಲ್ಲಿ 266 ಯುವತಿಯರು

ಫ್ರಿಡ್ಜ್‌ನಲ್ಲಿ ಕುಳಿತು ಕುಣಿಗಲ್ ಗಿರಿ ಪರಾರಿ | ಪೊಲೀಸರಿಗೇ ಚಳ್ಳೆಹಣ್ಣು

Published:
Updated:
Prajavani

ಬೆಂಗಳೂರು: ನಗರದ ರೆಸಿಡೆನ್ಸಿ ರಸ್ತೆಯಲ್ಲಿರುವ ಡಾನ್ಸ್‌ ಬಾರೊಂದರ ಮೇಲೆ ಇತ್ತೀಚೆಗೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದ ವೇಳೆ, ಬಾರ್‌ನಲ್ಲಿದ್ದ ಫ್ರಿಡ್ಜ್‌ನಲ್ಲಿ ಅಡಗಿ ಕುಖ್ಯಾತ ಕಳ್ಳ ಕುಣಿಗಲ್ ಗಿರಿ ಎಸ್ಕೇಪ್ ಆಗಿದ್ದಾನೆ.

ಪೊಲೀಸರಿಂದ ತಲೆಮರೆಸಿಕೊಂಡು ಓಡಾಡುತ್ತಿರುವ ಕುಣಿಗಲ್ ಗಿರಿ, ತನ್ನ ಹುಟ್ಟುಹಬ್ಬದ ದಿನವಾದ ಇದೇ 16ರಂದು ರಾತ್ರಿ ಸ್ನೇಹಿತರು ಹಾಗೂ ಸಹಚರರಿಗಾಗಿ ಡಾನ್ಸ್‌ ಬಾರೊಂದರಲ್ಲಿ ಪಾರ್ಟಿ ಏರ್ಪಡಿಸಿದ್ದ. ಪಾರ್ಟಿಯಲ್ಲಿ ನೃತ್ಯ ಮಾಡಲು 266 ಯುವತಿಯರನ್ನೂ ಕರೆಸಿದ್ದ.

ಪಾರ್ಟಿ ಬಗ್ಗೆ ಮಾಹಿತಿ ಬರುತ್ತಿದ್ದಂತೆ ಬಾರ್‌ ಮೇಲೆ ದಾಳಿ ಮಾಡಿದ್ದ ಸಿಸಿಬಿ ಅಧಿಕಾರಿಗಳು, ಯುವತಿಯರನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಕಳುಹಿಸಿದ್ದರು. ಜೊತೆಗೆ, ಪಾರ್ಟಿಯಲ್ಲಿ ಪಾಲ್ಗೊಂಡಿದ್ದ 237 ಮಂದಿಯನ್ನು ವಶಕ್ಕೆ ಪಡೆದಿದ್ದರು. ಕುಣಿಗಲ್ ಗಿರಿ ಮಾತ್ರ ಸ್ಥಳದಲ್ಲಿ ಇರಲಿಲ್ಲ. ಆತ ಬಾರ್‌ನ ಗೋಡೆ ಹಾರಿ ಪರಾರಿಯಾಗಿರಬಹುದು ಎಂದು‌ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದರು.

ಆದರೆ, ಆತ ದಾಳಿ ನಡೆದ ವೇಳೆ ಬಾರ್‌ನಲ್ಲಿದ್ದ ಫ್ರಿಡ್ಜ್‌ನಲ್ಲೇ ಅಡಗಿ ಕುಳಿತಿದ್ದ. ಪೊಲೀಸರೆಲ್ಲರೂ ಸ್ಥಳದಿಂದ ಹೋದ ನಂತರ, ಅಲ್ಲಿಂದ ಹೊರಬಂದು ಎಸ್ಕೇಪ್ ಆಗಿದ್ದಾನೆ ಎಂಬ ಸಂಗತಿ ಇದೀಗ ಪೊಲೀಸರಿಗೆ ಗೊತ್ತಾಗಿದೆ.‘ರಕ್ಷಿಸಲಾದ ಯುವತಿಯರ ಪೈಕಿ ಕೆಲವರು, ದಾಳಿ ನಡೆದ ವೇಳೆ ಬಾರ್‌ನಲ್ಲಾದ ಬೆಳವಣಿಗೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ.

ಕುಣಿಗಲ್‌ ಗಿರಿ ಫ್ರಿಡ್ಜ್‌ನಲ್ಲಿ ಕುಳಿತುಕೊಂಡಿದ್ದ ಎಂಬುದನ್ನು ಯುವತಿಯರೇ ಖಾತ್ರಿಪಡಿಸಿದ್ದಾರೆ’ ಎಂದು ಸಿಸಿಬಿ ಮೂಲಗಳು ಹೇಳಿವೆ.

‘ಸಿಸಿಬಿಯ ಸಿಬ್ಬಂದಿ ಮೂರು ಗಂಟೆ ಬಾರ್‌ನಲ್ಲಿ ತಪಾಸಣೆ ಮಾಡಿದ್ದರು. ಯುವತಿಯರ ಮೇಕಪ್‌ ಕೊಠಡಿಯಲ್ಲೂ ಮಹಿಳಾ ಸಿಬ್ಬಂದಿ ಪರಿಶೀಲನೆ ನಡೆಸಿದ್ದರು. ಯಾರೊಬ್ಬರಿಗೂ ಗಿರಿ ಕಂಡಿರಲಿಲ್ಲ. ಆತ, ಮೇಕಪ್‌ ಕೊಠಡಿಯಲ್ಲೇ ಇದ್ದ ಫ್ರಿಡ್ಜ್‌ನಲ್ಲಿ ಮೂರು ಗಂಟೆ ಕುಳಿತಿದ್ದ ಎಂಬ ಸಂಗತಿ ಇದೀಗ ಗೊತ್ತಾಗಿದೆ. ತಲೆಮರೆಸಿಕೊಂಡು ಓಡಾಡುತ್ತಿರುವ ಆತನನ್ನು ಆದಷ್ಟು ಬೇಗ ಪತ್ತೆ ಮಾಡುತ್ತೇವೆ’ ಎಂದು ಮೂಲಗಳು ತಿಳಿಸಿವೆ.

ಉದ್ಯೋಗ, ಹಣದ ಆಮಿಷವೊಡ್ಡಿದ್ದ: ‘ಹೊರ ರಾಜ್ಯಗಳಿಂದ ನಗರಕ್ಕೆ ಬಂದಿರುವ ಯುವತಿಯರಿಗೆ ಉದ್ಯೋಗ ಹಾಗೂ ಹಣದ ಆಮಿಷವೊಡ್ಡಿದ್ದ ಗಿರಿ, ಅವರನ್ನು ನೃತ್ಯ ಮಾಡಲು ಕರೆಸಿದ್ದ. ಅಂದು ಪಾರ್ಟಿ ನಡೆದಿದ್ದರೆ ಹಲವು ಯುವತಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಯವ ಸಾಧ್ಯತೆಯೂ ಇತ್ತು’ ಎಂದು ಸಿಸಿಬಿ ಅಧಿಕಾರಿಯೊಬ್ಬರು ತಿಳಿಸಿದರು.

‘ದಾಳಿ ವೇಳೆ ₹ 9.82 ಲಕ್ಷ ನಗದು ಹಾಗೂ ಗಿರಿಯ ಕಾರು ಜಪ್ತಿ ಮಾಡಲಾಗಿದೆ. ವಶಕ್ಕೆ ಪಡೆದಿದ್ದ ವ್ಯಕ್ತಿಗಳನ್ನು ವಿಚಾರಣೆಗೆ ಒಳಪಡಿಸಿ ಹೇಳಿಕೆ ಪಡೆಯಲಾಗಿದೆ. ಕೆಲವರಿಂದ ಮುಚ್ಚಳಿಕೆ ಬರೆಸಿಕೊಂಡು ಬಿಟ್ಟು ಕಳುಹಿಸಲಾಗಿದೆ’ ಎಂದು ಹೇಳಿದರು.

‘ಹಲವು ಅಪರಾಧಗಳಲ್ಲಿ ಭಾಗಿಯಾಗಿರುವ ಗಿರಿ, ಇತ್ತೀಚೆಗಷ್ಟೇ ರೌಡಿ ಪರೇಡ್‌ಗೆ ಬಂದಿದ್ದ.

ಅದಾದ ನಂತರ ಆತನನ್ನು ಕ್ರಿಕೆಟ್‌ ಬೆಟ್ಟಿಂಗ್ ಪ್ರಕರಣದಲ್ಲಿ ಬಂಧಿಸಲಾಗಿತ್ತು. ಜಾಮೀನು ಮೇಲೆ ಹೊರಬಂದ ಆತ, ಕ್ರಿಕೆಟ್ ಬೆಟ್ಟಿಂಗ್ ದಂಧೆ ಮುಂದುವರಿಸಿದ್ದಾನೆ. ಆ ಸಂಬಂಧ ಹಲವು ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಬಂಧನದ ಭೀತಿಯಲ್ಲಿ ಆತ ತಲೆಮರೆಸಿಕೊಂಡು ಓಡಾಡುತ್ತಿದ್ದಾನೆ’ ಎಂದರು. 

ಗಿರಿ ಬಂಧನಕ್ಕೆ ಖಡಕ್ ಸೂಚನೆ

ಪದೇ ಪದೇ ಪರಾರಿಯಾಗುತ್ತಿರುವ ಕುಣಿಗಲ್ ಗಿರಿಯನ್ನು ಬಂಧಿಸುವಂತೆ ಸಿಸಿಬಿ ಪೊಲೀಸರಿಗೆ ಅಲೋಕ್‌ಕುಮಾರ್ ಖಡಕ್‌ ಸೂಚನೆ ನೀಡಿದ್ದಾರೆ.

‘ಅಪರಾಧ ಕೃತ್ಯ ಮುಂದುವರಿಸಿದರೆ ಪರಿಣಾಮ ನೆಟ್ಟಗಿರುವುದಿಲ್ಲ’ ಎಂದು ಕುಣಿಗಲ್ ಗಿರಿಗೆ ಅವರು ಇತ್ತೀಚೆಗೆ ಎಚ್ಚರಿಕೆ ನೀಡಿದ್ದರು.

ಬರಹ ಇಷ್ಟವಾಯಿತೆ?

 • 28

  Happy
 • 6

  Amused
 • 7

  Sad
 • 15

  Frustrated
 • 12

  Angry

Comments:

0 comments

Write the first review for this !