ಸೋಮವಾರ, ಜನವರಿ 25, 2021
27 °C
ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಪ್ರಕಟ

‘ಕುವೆಂಪು ಸಾಹಿತ್ಯ ಸರಣಿ’ ಸಂಪುಟ ವಾಪಸ್‌ ಪಡೆಯಲು ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಹಂಪಿ ಕನ್ನಡ ವಿಶ್ವವಿದ್ಯಾಲಯ ಹೊರತಂದಿರುವ ‘ಕುವೆಂಪು ಸಾಹಿತ್ಯ ಸರಣಿ’ ಸಂಪುಟಗಳ ಸಂಪಾದನೆಯಲ್ಲಿ ಭಾರಿ ಅಚಾತುರ್ಯಗಳಾಗಿದ್ದು, ಈ ಸಂಪುಟಗಳನ್ನು ವಾಪಸ್‌ ಪಡೆಯಬೇಕು’ ಎಂದು ಸಾಹಿತಿ ‘ಪುಸ್ತಕ ಮನೆ’ಯ ಹರಿಹರಪ್ರಿಯ ಆಗ್ರಹಿಸಿದ್ದಾರೆ.

‘ರಾಷ್ಟ್ರಕವಿ ಕುವೆಂಪು ಹೆಸರಿನಲ್ಲಿ 12 ಸಂಪುಟಗಳನ್ನು ಗಜಗರ್ಭದಿಂದ ಇದೀಗ ಹೊರತೆಗೆದು ಮಾರಾಟಕ್ಕೆ ಇಡಲಾಗಿದೆ. ಅಂದರೆ, 2017ರಿಂದ 2020ರವರೆಗೆ ಪ್ರಕಟಿಸಿಯೂ ಮೂಲೆಪಾಲು ಆಗಲು ವಿಶ್ವವಿದ್ಯಾಲಯದಲ್ಲಿ ರಾಜಕೀಯ ಸಂಘರ್ಷ ಕಾರಣವಾಯಿತೇ? ಇಷ್ಟಾಗಿಯೂ ಕುವೆಂಪು ಅವರ ಮಹಾಕಾವ್ಯ, ಮಹಾ ಕಾದಂಬರಿ ಇತ್ಯಾದಿ ಕೃತಿಗಳ ಮೇಲೆ ಯಾವ ಪುರುಷಾರ್ಥಕ್ಕಾಗಿ ಈ ಸಂಪಾದಕರ ಹೆಸರು ಬಳಸಲಾಗಿದೆ’ ಎಂದು ಅವರು ಪ್ರಕಟಣೆಯಲ್ಲಿ ಖಾರವಾಗಿ ಪ್ರಶ್ನಿಸಿದ್ದಾರೆ.

‘ಈ ಹಿಂದೆಯೇ 2013ರಲ್ಲಿ ಕುಪ್ಪಳ್ಳಿಯ ‘ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ’ದವರು ಹೊರತಂದ ಸಮಗ್ರ ಕೃತಿಗಳಿಗೂ ಇದೀಗ ಕನ್ನಡ ವಿಶ್ವವಿದ್ಯಾಲಯದ ಸಮಗ್ರ ಕೃತಿ ಯಾವ ರೀತಿಯಲ್ಲಿ ಭಿನ್ನ. ಸಂಪಾದಕರ ತೆವಲಿಗೆ, ಕನ್ನಡ ವಿಶ್ವವಿದ್ಯಾಲಯದ ಮೂರ್ಖತನಕ್ಕೆ ಸಂಪುಟಗಳನ್ನು ಭಾರೀ ಮೊತ್ತ ತೆತ್ತು ತೆಗೆದಿಟ್ಟುಕೊಳ್ಳಬೇಕೇ. ಏನೋ ಸಂಶೋಧನೆ ಮಾಡಿರಬಹುದು ಎಂಬ ಭ್ರಮೆಗೆ, ಬಿಡಿ ಬಿಡಿ ಪುಸ್ತಕಗಳ ಮಾರಾಟಕ್ಕೆ ಸಿಗದೇ ಇರುವುದರಿಂದ ನಾಡಿನ ಓದುಗರ ಮೇಲೆ, ಗ್ರಂಥಾಲಯಗಳ ಮೇಲೆ ಮಾಡಿದ ಮೋಸ, ವಂಚನೆ, ದೌರ್ಜನ್ಯವಲ್ಲವೇ’ ಎಂದೂ ಅವರು ಕೇಳಿದ್ದಾರೆ.

‘ಕುವೆಂಪು ಅವರ ಅನೇಕ ಮುನ್ನುಡಿಗಳನ್ನು ಯಥಾವತ್‌ ಬಳಸಿಕೊಳ್ಳಲಾಗಿದೆ. ಕುಪ್ಪಳ್ಳಿ ಆವೃತ್ತಿಯನ್ನೇ ಕನ್ನಡ ವಿಶ್ವವಿದ್ಯಾಲಯದ ಆವೃತ್ತಿಯಲ್ಲಿಯೂ ಬಳಸಿಕೊಳ್ಳಲಾಗಿದೆ. ಕುವೆಂಪು ಅವರ ಅನೇಕ ಕೃತಿಗಳು, ಲೇಖನಗಳು ಸಮಗ್ರವಾಗಿದೆ ಎನ್ನುವ ಈ ಸರಣಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ಪ್ರಕಟಿಸಿರುವ ‘ವಿಜ್ಞಾನ ದೃಷ್ಟಿ’ ಇದರಲ್ಲಿ ಎಲ್ಲಿದೆ. ಒಟ್ಟಿನಲ್ಲಿ ಕನ್ನಡ ವಿಶ್ವವಿದ್ಯಾಲಯದಿಂದ ಅಚಾತುರ್ಯವಾಗಿದೆ. ಹೀಗಾಗಿ, ಈ ‘ಕುವೆಂಪು ಕೃತಿ ಸರಣಿ’ ಸಂಪುಟಗಳ ಮಾರಾಟವನ್ನು ಸ್ಥಗಿತಗೊಳಿಸಿ, ಈಗಾಗಲೇ ಕೊಂಡವರ ಹಣ ಹಿಂದಿರುಗಿಸಬೇಕು’ ಎಂದೂ ಅವರು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು