ಶುಕ್ರವಾರ, ಆಗಸ್ಟ್ 12, 2022
23 °C
ಕೋವಿಡ್‌ನಿಂದಾಗಿ ಸಕಾಲದಲ್ಲಿ ಚಿಕಿತ್ಸೆ ಸಿಗದೇ ತೊಂದರೆ

ಸಕಾಲದಲ್ಲಿ ಲಭಿಸದ ಚಿಕಿತ್ಸೆ: 5 ತಿಂಗಳಲ್ಲಿ 356 ತಾಯಂದಿರ ಸಾವು

ವರುಣ ಹೆಗಡೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಲಾಕ್‌ಡೌನ್ ಹಾಗೂ ಕೋವಿಡ್‌ನಿಂದಾಗಿ ಸಕಾಲದಲ್ಲಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದುಕೊಳ್ಳಲು ಗರ್ಭಿಣಿಯರಿಗೆ ಸಾಧ್ಯವಾಗಿಲ್ಲ. ಇದರಿಂದಾಗಿ ಏಪ್ರಿಲ್‌–ಆಗಸ್ಟ್‌ವರೆಗಿನ ಐದು ತಿಂಗಳ ಅವಧಿಯಲ್ಲಿ 356 ತಾಯಂದಿರು ಮೃತಪಟ್ಟಿದ್ದಾರೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ತಾಯಂದಿರ ಮರಣ ಪ್ರಮಾಣ ದರ ಕಡಿಮೆ ಮಾಡಲು ಪ್ರತಿ ವರ್ಷ ನೂರಾರು ಕೋಟಿ ರೂಪಾಯಿ ವೆಚ್ಚ ಮಾಡುತ್ತಿದೆ. ಹಾಗಿದ್ದರೂ ರಾಜ್ಯದಲ್ಲಿ ಪ್ರತಿ ವರ್ಷ ಹೆರಿಗೆ ವೇಳೆ 600ಕ್ಕೂ ಅಧಿಕ ಮಹಿಳೆಯರು ಕೊನೆಯುಸಿರೆಳೆಯುತ್ತಿದ್ದಾರೆ. ಕಳೆದ ಐದು ವರ್ಷಗಳಲ್ಲಿ 3,300ಕ್ಕೂ ಅಧಿಕ ತಾಯಂದಿರು ಸಾವಿಗೀಡಾಗಿದ್ದಾರೆ. ಕೋವಿಡ್‌ನಿಂದಾಗಿ ಈ ಸಂಖ್ಯೆ ಏರುಗತಿಯ ಹಾದಿ ಹಿಡಿದಿದೆ. ಗ್ರಾಮೀಣ ಭಾಗದ ಮಹಿಳೆಯರು ಗರ್ಭಾವಸ್ಥೆಯ ತಪಾಸಣೆಗೆ ಪರದಾಟ ನಡೆಸಬೇಕಾಗದ ಪರಿಸ್ಥಿತಿ ಇದೆ.

ಕೋವಿಡ್‌ ಪ್ರಕರಣಗಳು ಏರುಗತಿ ಪಡೆದ ಬಳಿಕ ಕೋವಿಡೇತರ ಚಿಕಿತ್ಸೆಗಳನ್ನು ಬಹುತೇಕ ಆಸ್ಪತ್ರೆಗಳು ಸ್ಥಗಿತ ಮಾಡಿದ್ದವು. ತುರ್ತು ಚಿಕಿತ್ಸೆಗಳನ್ನು ಮಾತ್ರ ನೀಡಲಾಗುತ್ತಿತ್ತು. ಲಾಕ್‌ಡೌನ್‌ ಘೋಷಣೆಯಾದ ಬಳಿಕ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಇಲ್ಲದ ಕಾರಣ ಆಸ್ಪತ್ರೆಗಳಿಗೆ ತೆರಳುವುದು ಕಷ್ಟವಾಗಿತ್ತು. ಲಾಕ್‌ಡೌನ್ ಅನ್ನು ಈಗ ಪೂರ್ಣ ಪ್ರಮಾಣದಲ್ಲಿ ತೆರವುಗೊಳಿಸದರೂ ಕೋವಿಡ್‌ ಕಾರಣ ತಪಾಸಣೆಗೆ ಆಸ್ಪತ್ರೆಗೆ ತೆರಳಲು ಕೆಲವರು ಹಿಂದೇಟು ಹಾಕುತ್ತಿದ್ದಾರೆ. ಇದರಿಂದಾಗಿ  ಸಮಸ್ಯೆ ಇನ್ನಷ್ಟು ಸಂಕೀರ್ಣವಾಗುತ್ತಿದೆ ಎಂದು ವೈದ್ಯರು ಆತಂಕ ವ್ಯಕ್ತಪಡಿಸಿದ್ದಾರೆ.

₹ 150 ಕೋಟಿ ಅನುದಾನ: ತಾಯಂದಿರ ಮರಣ ಪ್ರಮಾಣ ದರವನ್ನು ಇಳಿಕೆ ಮಾಡಲು ಜನನಿ ಸುರಕ್ಷಾ ಸೇರಿದಂತೆ ವಿವಿಧ ಯೋಜನೆಗಳು ಇವೆ. 2019–20ನೇ ಸಾಲಿನಲ್ಲಿ ತಾಯಿ ಆರೋಗ್ಯ ಕಾರ್ಯಕ್ರಮಗಳಿಗೆ ₹ 150 ಕೋಟಿ ಅನುದಾನ ಮೀಸಲಿಡಲಾಗಿತ್ತು. ಅದರಲ್ಲಿ 100 ಕೋಟಿ ಬಳಕೆ ಮಾಡಲಾಗಿದೆ.

‘ಲಾಕ್‌ಡೌನ್ ಹಾಗೂ ಕೋವಿಡ್ ನಡುವೆಯೂ ಗರ್ಭಿಣಿಯರಿಗೆ ಯಾವುದೇ ತೊಂದರೆಯಾಗದಂತೆ ರಾಜ್ಯದ ಎಲ್ಲ ಆರೋಗ್ಯ ಕೇಂದ್ರಗಳಲ್ಲಿ ಅಗತ್ಯ ವ್ಯವಸ್ಥೆ ಮಾಡಲಾಗಿತ್ತು. ಶುಲ್ಕರಹಿತ ಸಹಾಯವಾಣಿ ಮೂಲಕ ಸಂಪರ್ಕಿಸಿದವರಿಗೆ ಅಗತ್ಯ ಔಷಧ ಸಾಮಗ್ರಿಗಳನ್ನು ಸೂಕ್ತ ಸಮಯಕ್ಕೆ ತಲುಪಿಸಲಾಗಿದೆ. ಪ್ರೋತ್ಸಾಹ ಧನ ವಿತರಣೆ, ಔಷಧ ವಿತರಣೆ, ಪೌಷ್ಟಿಕ ಆಹಾರ ವಿತರಣೆ, ಸ್ಥಳಾಂತರಕ್ಕೆ ಸಾರಿಗೆ ವ್ಯವಸ್ಥೆ ಸೇರಿದಂತೆ ಹಲವು ಸೌಲಭ್ಯಗಳನ್ನು ನೀಡಲಾಗಿದೆ’ ಎಂದು ತಾಯಿ ಆರೋಗ್ಯ ಕಾರ್ಯಕ್ರಮಗಳ ಉಪನಿರ್ದೇಶಕ ಡಾ. ರಾಜ್‌ಕುಮಾರ್ ತಿಳಿಸಿದರು.

********
ಮಗುವಿನ ಓಡಾಟ ಕಡಿಮೆ, ರಕ್ತಸ್ರಾವ ಸೇರಿದಂತೆ ವಿವಿಧ ಸಮಸ್ಯೆ ಕಾಣಿಸಿಕೊಂಡಾಗ ತಪಾಸಣೆ ಮಾಡಿಸಿಕೊಳ್ಳಬೇಕು. ಕೋವಿಡ್ ಕಾರಣ ಹೆಚ್ಚಿನ ಜಾಗೃತಿ ಅಗತ್ಯ

-ಡಾ. ಗೀತಾ ಶಿವಮೂರ್ತಿ, ವಾಣಿ ವಿಲಾಸ ಆಸ್ಪತ್ರೆಯ ವೈದ್ಯ ಅಧೀಕ್ಷಕಿ

**********

ಅಧಿಕ ಮರಣ ವರದಿಯಾದ ಜಿಲ್ಲೆಗಳು (ಏಪ್ರಿಲ್–ಆಗಸ್ಟ್)

ಜಿಲ್ಲೆ; ಪ್ರಕರಣಗಳು

ಕಲಬುರ್ಗಿ; 35

ಬೆಂಗಳೂರು ನಗರ; 32

ಧಾರವಾಡ; 29

ಬೆಳಗಾವಿ; 24

ಬಳ್ಳಾರಿ; 24

ರಾಯಚೂರು; 23

ವರ್ಷವಾರು ತಾಯಂದಿರ ಮರಣ ಪ್ರಕರಣಗಳು

ವರ್ಷ; ಪ್ರಕರಣಗಳು

2014–15; 467

2015–16; 657

2016–17; 648

2017–18; 739

2018–19; 632

2019–20; 662

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.