ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕಾಲುವೆಗೆ ಕೊಳಚೆ ನೀರು ಹರಿವು ತಪ್ಪಿಸಿ

ಕೆರೆ– ರಾಜಕಾಲುವೆ ಸಂಪರ್ಕ ಕೊರತೆ: ಸಿಎಜಿ ವರದಿಯಲ್ಲಿ ಆಕ್ಷೇಪ
Last Updated 15 ಸೆಪ್ಟೆಂಬರ್ 2021, 20:39 IST
ಅಕ್ಷರ ಗಾತ್ರ

ಬೆಂಗಳೂರು: ರಾಜಕಾಲುವೆಗಳಲ್ಲಿ ಕೊಳಚೆ ನೀರಿನ ಹರಿವು ತಪ್ಪಿಸಲು ಕಾಲಮಿತಿಯ ಕಾರ್ಯಯೋಜನೆಯನ್ನು ಬಿಬಿಎಂಪಿ ಹಾಗೂ ಜಲಮಂಡಳಿ ಜಂಟಿಯಾಗಿ ಸಿದ್ಧಪಡಿಸಬೇಕು ಎಂದು ಲೆಕ್ಕನಿಯಂತ್ರಕರು ಮತ್ತು ಮಹಾಲೇಖಪಾಲರ (ಸಿಎಜಿ) ವರದಿ ಶಿಫಾರಸು ಮಾಡಿದೆ.

ಕೆರೆಗಳು ಮತ್ತು ನೈಸರ್ಗಿಕ ಚರಂಡಿ ವ್ಯವಸ್ಥೆ ಮತ್ತಷ್ಟು ಕ್ಷೀಣಿಸುವುದನ್ನು ಬಿಬಿಎಂಪಿ ತಡೆಯಬೇಕು. ಪರಿಸರ ವ್ಯವಸ್ಥೆಯ ಮತ್ತು ಅಂತರ್ಜಲದ ಸಂರಕ್ಷಣೆಯ ದೃಷ್ಟಿಯಿಂದ ಕೆರೆಗಳ ಅಂತರ್‌ಸಂಪರ್ಕವನ್ನು ಖಚಿತಪಡಿಸಿಕೊಳ್ಳಬೇಕು ಎಂದು ವರದಿಯಲ್ಲಿ ಸಲಹೆ ನೀಡಲಾಗಿದೆ.

ಕೆರೆಗಳು ಹಾಗೂ ರಾಜಕಾಲುವೆಗಳು ಕಣ್ಮರೆಯಾಗಿದ್ದರಿಂದಲೇ ಅವುಗಳ ಪರಸ್ಪರ ಸಂಪರ್ಕ ಕಡಿದು ಹೋಗಿದೆ. ಕೆರೆಗಳ ಜೊತೆ ರಾಜಕಾಲುವೆಗಳ ಸಂಪರ್ಕವನ್ನು ಖಾತರಿಪಡಿಸಿಕೊಳ್ಳುವಲ್ಲಿ ಬಿಬಿಎಂಪಿ ವಿಫಲವಾಗಿತ್ತು. ನಗರದಲ್ಲಿ ಹಲವಾರು ಕೆರೆಗಳು ಒಣಗಲು ಇದು ಕೂಡ ಕಾರಣವಾಯಿತು. ಕೆರೆಗಳ ಆಕಾರ ಮತ್ತು ವಿಸ್ತೀರ್ಣಗಳಲ್ಲಿ ಗಮನಾರ್ಹ ಬದಲಾವಣೆಗಳಾದವು. ಕೆರೆಗಳನ್ನು ಬಸ್‌ ನಿಲ್ದಾಣ, ಕ್ರೀಡಾಂಗಣ, ರಾಷ್ಟ್ರೀಯ ಕ್ರೀಡಾ ಗ್ರಾಮ, ವಸತಿ ಸಂಕೀರ್ಣ, ವಸತಿ ಉದ್ದೇಶಗಳಿಗೆ ಬಳಸುವುದಕ್ಕೂ ಇದು ಕಾರಣವಾಗಿದೆ ಎಂದು ವಿಶ್ಲೇಷಿಸಲಾಗಿದೆ.

ಮರುಪೂರಣಕ್ಕೇನು ವ್ಯವಸ್ಥೆ?

ಕೊಳಚೆ ನೀರು ಹರಿಯುತ್ತಿರುವ ಅನೇಕ ರಾಜಕಾಲುವೆಗಳು ‌ಕೆರೆಯನ್ನು ಸಂಪರ್ಕಿಸುವುದನ್ನು ತಪ್ಪಿಸಲಾಗಿದೆ ಎಂದು ಸರ್ಕಾರವೇ ಹೇಳಿದೆ. ಕೊಳಚೆನೀರು ರಾಜಕಾಲುವೆ ಸೇರುವುದನ್ನು ತಪ್ಪಿಸುವ ಕಾರ್ಯವನ್ನು ಜಲಮಂಡಳಿ ಮಾಡುತ್ತಿದ್ದರೂ ಇದು ಸಂಪೂರ್ಣ ನಿಂತಿಲ್ಲ. ನಗರದ 210 ಕೆರೆಗಳಲ್ಲಿ ಬಿಬಿಎಂಪಿ 89 ಕೆರೆಗಳನ್ನು ಅಭಿವೃದ್ಧಿಪಡಿಸಿದ್ದು, 39 ಕೆರೆಗಳ ಅಭಿವೃದ್ಧಿ ಪ್ರಗತಿಯಲ್ಲಿದೆ. ಹೂಳೆತ್ತುವಿಕೆ, ಬದುಗಳ ರಚನೆ, ಒಳಹರಿಸುವ ಸುಧಾರಣೆ, ಕೊಳಚೆ ನೀರು ಬೇರ್ಪಡಿಸುವಿಕೆಗೆ ಚರಂಡಿ ರಚನೆ, ನಡಿಗೆ ಮಾರ್ಗ ರಚನೆ ಭದ್ರತಾ ಕೊಠಡಿ ರಚನೆಯಂತಹ ಚಟುವಟಿಕೆಗಳು ಕೆರೆಗಳ ಪುನಃಶ್ಚೇತನಕ್ಕೆ ಅನುವು ಮಾಡಿಕೊಡುವುದೇನೋ ನಿಜ. ಆದರೆ, ಕೆರೆ ಮರು‍ಪೂರಣ ಚಟುವಟಿಕೆಯನ್ನು ಸರ್ಕಾರ ಕೈಗೆತ್ತಿಕೊಳ್ಳುತ್ತಿಲ್ಲ ಎಂಬುದನ್ನೂ ವರದಿಯಲ್ಲಿ ಬೊಟ್ಟುಮಾಡಲಾಗಿದೆ.

ಒಣಗಿದ ಕೆರೆಗಳಿಗೆ ಶುದ್ಧೀಕರಿಸಿ ಕೊಳಚೆ ನೀರನ್ನು ಹರಿಸಿ ಅವುಗಳನ್ನು ತುಂಬಿಸಬಹುದು. ಕೆರೆಗಳು ಒಣಗುವುದನ್ನು ಹಾಗೂ ಅವುಗಳ ಸಂಭಾವ್ಯ ಒತ್ತುವರಿ ತಡೆಯಲು ಇದು ಸಹಕಾರಿ. ಸಂಸ್ಕರಿಸಿದ ನೀರು ಮಳೆನೀರಿನ ಜೊತೆ ಸೇರಿ ಅಂತರ್ಜಲ ಮಟ್ಟವನ್ನೂ ಹೆಚ್ಚಿಸಲಿದೆ ಎಂದು ಸಲಹೆ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT