ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಧಾನಸೌಧ ಲೇಔಟ್: ಒಂದೂ ಬಸ್ ಬಾರದ ನಿಲ್ದಾಣ

ಬಿಎಂಟಿಸಿ ಬಸ್‌ಗಾಗಿ ಕಾದಿರುವ ಲಕ್ಷ್ಮೀದೇವಿನಗರ, ವಿಧಾನಸೌಧ ಲೇಔಟ್ ನಿವಾಸಿಗಳು
Last Updated 20 ಜನವರಿ 2021, 18:40 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನಸೌಧ ಲೇಔಟ್‌ಗೆ ಹೊಂದಿಕೊಂಡಿರುವ ಲಕ್ಷ್ಮೀದೇವಿನಗರದಲ್ಲಿ ಬಿಎಂಟಿಸಿ ಬಸ್‌ ನಿಲ್ದಾಣ ಇದೆ. ಆದರೆ, ದಿನಕ್ಕೆ ಒಂದೇ ಒಂದು ಬಸ್ ಕೂಡ ಇಲ್ಲಿಗೆ ಬರುವುದಿಲ್ಲ. ಇದ್ದೂ ಇಲ್ಲದಂತಾಗಿರುವ ನಿಲ್ದಾಣ ಈಗ ಖಾಸಗಿ ವಾಹನ ನಿಲುಗಡೆಯ ತಾಣವಾಗಿ ಮಾರ್ಪಟ್ಟಿದೆ. ಸ್ಥಳೀಯ ನಿವಾಸಿಗಳು ಬಸ್ ಹತ್ತಲು ಮೈಲಿ ದೂರ ನಡೆಯಬೇಕಾದ ಅನಿವಾರ್ಯ ಎದುರಾಗಿದೆ.

ನಂದಿನಿ ಬಡವಣೆಯಿಂದ ವರ್ತುಲ ರಸ್ತೆ ದಾಟಿಕೊಂಡು ವಿಧಾನಸೌಧ ಲೇಔಟ್‌ ಕಡೆಗೆ ಸಾಗಿದರೆ ದೊಡ್ಡ ಮೇಲ್ಸೇತುವೆಯೊಂದು ಕಾಣಿಸುತ್ತದೆ. ಸೇತುವೆ ಮೂಲಕ ಹಾದು ಕೊಂಚ ಮುಂದೆ ಸಾಗಿದರೆ ಲಕ್ಷ್ಮೀದೇವಿನಗರ ಬಸ್ ನಿಲ್ದಾಣ ಎದುರಾಗುತ್ತದೆ.

‘ದಿನಕ್ಕೆ ಹತ್ತಾರು ಬಸ್‌ಗಳು ಬಂದು ಹೋಗುತ್ತಿದ್ದ ನಿಲ್ದಾಣವೀಗ ಕಸ ಸುರಿಯುವ, ಖಾಸಗಿ ಬಸ್, ಲಾರಿಗಳ ನಿಲುಗಡೆ ತಾಣವಾಗಿದೆ. ಯಾವುದೇ ಬಸ್‌ಗಳು ಬಾರದ ಖಾಲಿ ಜಾಗ ಆಗಿರುವ ಕಾರಣ ಈ ಅವಸ್ಥೆಯಾಗಿದೆ’ ಎಂದು ದೂರುತ್ತಾರೆ ಸ್ಥಳೀಯರು.

‘ಬೆಳಿಗ್ಗೆ 6ರಿಂದ ರಾತ್ರಿ 11 ಗಂಟೆ ತನಕವೂ ಬಸ್‌ಗಳು ಕಾರ್ಯಾಚರಣೆ ಮಾಡುತ್ತಿದ್ದ ಕಾಲವಿತ್ತು. ಸುಮ್ಮನಹಳ್ಳಿ ಬಳಿ 31ನೇ ಘಟಕ ನಿರ್ಮಾಣವಾದ ನಂತರ ಒಂದೊಂದೇ ಬಸ್‌ಗಳ ಕಾರ್ಯಾಚರಣೆ ನಿಲ್ಲಿಸಲಾಯಿತು. ಈಗ ಒಂದೇ ಒಂದು ಬಸ್‌ ಕೂಡ ಈ ಬಡಾವಣೆಗೆ ಬರುತ್ತಿಲ್ಲ’ ಎಂದು ನಿವಾಸಿಗಳು ಬೇಸರ ವ್ಯಕ್ತಪಡಿಸುತ್ತಾರೆ.

‘ಲಕ್ಷ್ಮೀದೇವಿನಗರದಲ್ಲಿ ಕೊಳಚೆ ನಿರ್ಮೂಲನಾ ಮಂಡಳಿಯಿಂದ ನಿರ್ಮಿಸಿರುವ 2,500 ಮನೆಗಳು ಈ ನಿಲ್ದಾಣದ ಪಕ್ಕದಲ್ಲೇ ಇವೆ. ಪ್ರತಿನಿತ್ಯ ಸಾವಿರಾರು ಜನ ವಿವಿಧ ಉದ್ಯೋಗಕ್ಕಾಗಿ ಬೇರೆ ಬೇರೆ ಕಡೆಗೆ ತೆರಳುತ್ತಾರೆ. ಶಾಲಾ–ಕಾಲೇಜುಗಳ ಸಾವಿರಾರು ವಿದ್ಯಾರ್ಥಿಗಳೂ ಈ ಬಡಾವಣೆಯಲ್ಲಿದ್ದಾರೆ. ಬಸ್‌ ವ್ಯವಸ್ಥೆ ಇಲ್ಲದೆ ಆಟೋರಿಕ್ಷಾಗಳಲ್ಲೇ ಸಾಗಬೇಕಾದ ಅನಿವಾರ್ಯ ಇದೆ’ ಎಂದು ಇಲ್ಲಿನ ನಿವಾಸಿ ರೇಷ್ಮಾ ಹೇಳಿದರು.

ಕೆಂಪೇಗೌಡ ಬಸ್‌ ನಿಲ್ದಾಣ ಮತ್ತು ಮಾರ್ಕೇಟ್‌ನಿಂದ ಬರುವ ಬಸ್‌ಗಳು ನಂದಿನಿ ಲೇಔಟ್ ಬಸ್ ನಿಲ್ದಾಣದಿಂದಲೇ ವಾಪಸ್ ಹೋಗುತ್ತಿವೆ. ಅದರಲ್ಲಿ ಕೆಲವು ಬಸ್‌ಗಳನ್ನು ಎರಡು ಕಿಲೋ ಮೀಟರ್ ಮುಂದುವರಿಸಿದರೆ ಈ ನಿಲ್ದಾಣಕ್ಕೆ ಬಂದು ಹೋಗಬಹುದು. ನಿವಾಸಿಗಳಿಗೂ ಅನುಕೂಲ ಆಗಲಿದೆ, ಬಿಎಂಟಿಸಿಗೂ ವರಮಾನ ಬರಲಿದೆ ಎಂದರು.

‘ಲಕ್ಷ್ಮೀದೇವಿ ನಗರಕ್ಕೆ ಸಮೀಪದ ಎಂದರೆ ಮಹಾಲಕ್ಷ್ಮಿ ಮೆಟ್ರೊ ರೈಲು ನಿಲ್ದಾಣ. ಇಲ್ಲಿಗೆ ತೆರಳಬೇಕೆಂದರೂ ನಂದಿನಿ ಲೇಔಟ್‌ಗೆ ನಡೆದು ಅಥವಾ ಆಟೋರಿಕ್ಷಾ ಹಿಡಿದು ಹೋಗಬೇಕು. ಭುವನೇಶ್ವರಿನಗರದಲ್ಲಿ ಕಿರಿದಾದ ರಸ್ತೆ ಇರುವ ಕಾರಣ ಬಸ್ ಕಾರ್ಯಾಚರಣೆ ಸಾಧ್ಯವಿಲ್ಲ ಎಂದು ಅಧಿಕಾರಿಗಳು ತಪ್ಪು ಮಾಹಿತಿ ಹೇಳುತ್ತಾ ಕಾಲ ತಳ್ಳುತ್ತಿದ್ದಾರೆ. ಕಂಠೀರವ ಸ್ಟೂಡಿಯೊ, ಮಹಾಲಕ್ಷ್ಮೀ ಬಡಾವಣೆ ಮಾರ್ಗದಲ್ಲಿ ಬಸ್‌ಗಳ ಕಾರ್ಯಾಚರಣೆಗೆ ಅವಕಾಶ ಇದೆ. ಅಧಿಕಾರಿಗಳು ಪರ್ಯಾಯ ಮಾರ್ಗ ಹುಡುಕುತ್ತಿಲ್ಲ. ಬೆಳಿಗ್ಗೆ ಮತ್ತು ಸಂಜೆ ವೇಳೆ ಕೆ.ಆರ್‌.ಮಾರುಕಟ್ಟೆ ಮತ್ತು ಮೆಜೆಸ್ಟಿಕ್‌ ಮಾರ್ಗದಲ್ಲಿ ಬಸ್‌ಗಳ ಕಾರ್ಯಾಚರಣೆ ಆರಂಭಿಸಬೇಕು’ ಎಂದು ವಿಧಾನಸೌಧ ಲೇಔಟ್‌ನ ಆನಂದ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT