ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಲ್‌ಬಾಗ್‌: ಮತ್ಸ್ಯಾಲಯಕ್ಕೆ ಬೇಕಿದೆ ಕಾಯಕಲ್ಪ

Published 4 ಡಿಸೆಂಬರ್ 2023, 23:58 IST
Last Updated 4 ಡಿಸೆಂಬರ್ 2023, 23:58 IST
ಅಕ್ಷರ ಗಾತ್ರ

ಬೆಂಗಳೂರು: ಒಂದು ಕಾಲದಲ್ಲಿ ಲಾಲ್‌ಬಾಗ್‌ಗೆ ಭೇಟಿ ನೀಡುವ ಪ್ರವಾಸಿಗರಿಗೆ ‘ಮತ್ಸ್ಯಲೋಕ’ವನ್ನು ಪರಿಚಯಿಸುತ್ತಿದ್ದ ಕೆ. ನಂಜಪ್ಪ ವಸ್ತುಸಂಗ್ರಹಾಲಯ ಈಗ ಪಾಳುಬಿದ್ದ ಕಟ್ಟಡವಾಗಿದ್ದು, ಹುಳುಹುಪ್ಪಟ್ಟೆಗಳ ತಾಣವಾಗಿದೆ.

ಲಾಲ್‌ಬಾಗ್‌ನ ಪಶ್ಚಿಮ ದ್ವಾರದಿಂದ ಮುಖ್ಯದ್ವಾರದ ಕಡೆಗೆ ಹೋಗುವ ಮಾರ್ಗದಲ್ಲಿ ಬಲಭಾಗದಲ್ಲಿ ಹುಲ್ಲು–ಗಿಡಗಳು ಬೆಳೆದುಕೊಂಡಿರುವ ವೃತ್ತಾಕಾರದಲ್ಲಿರುವ ಕಟ್ಟಡವೊಂದು ಕಾಣುತ್ತದೆ. ಅದೇ ಕೆ. ನಂಜಪ್ಪ ವಸ್ತುಸಂಗ್ರಹಾಲಯ. ಇದರೊಳಗೆ ಇದ್ದಿದ್ದೇ ಚಂದದ ಮತ್ಸ್ಯಾಲಯ.

ಇದೊಂದು ಪುರಾತನ ಕಟ್ಟಡ. ಹತ್ತು–ಹನ್ನೆರಡು ವರ್ಷಗಳ ಹಿಂದೆ ಲಾಲ್‌ಬಾಗ್‌ನ ಆಕರ್ಷಣೀಯ ಕೇಂದ್ರವಾಗಿತ್ತು. ಮತ್ಸ್ಯಾಲಯದಲ್ಲಿ ವಿವಿಧ ಜಾತಿಯ ಮೀನುಗಳಿದ್ದವು. ಲಾಲ್‌ಬಾಗ್‌ಗೆ ಬಂದವರು, ಈ ಸಂಗ್ರಹಾಲಯಕ್ಕೆ ಭೇಟಿ ನೀಡದೇ ಹೋಗುತ್ತಿರಲಿಲ್ಲ. ಮಕ್ಕಳಿಗಂತೂ ಇದು ಆಕರ್ಷಣೀಯ ತಾಣವಾಗಿತ್ತು. ನಿರ್ವಹಣೆಯ ಕೊರತೆಯ ಕಾರಣ, ಪಾರಂಪರಿಕ ಕಟ್ಟಡವೀಗ ಪಾಳು ಬಿದ್ದಿದೆ ಎಂದು ವಾಯುವಿಹಾರಿ ದಯಾನಂದ್ ಬೇಸರ ವ್ಯಕ್ತಪಡಿಸುತ್ತಾರೆ. 

‘ಈ ವಸ್ತುಸಂಗ್ರಹಾಲಯ ಕಟ್ಟಡದ ಜೀರ್ಣೋದ್ಧಾರಕ್ಕೆ ಅನುದಾನದ ಕೊರತೆ ಎದುರಾಗಿದೆ. ಇದೇ ಕಟ್ಟಡದಲ್ಲಿರುವ ಮತ್ಸ್ಯಾಲಯದ ಅಭಿವೃದ್ಧಿಗೆ ಈ ಹಿಂದೆ ಇನ್ಫೊಸಿಸ್‌ ಪ್ರತಿಷ್ಠಾನ ಅನುದಾನ ನೀಡುವುದಾಗಿ ಭರವಸೆ ನೀಡಿತ್ತು. ಆದರೆ, ಪ್ರಕ್ರಿಯೆ ಮುಂದುವರಿಯಲಿಲ್ಲ’ ಎಂಬುದು ವಾಯುವಿಹಾರಿಗಳ ದೂರು.

ದಶಕದ ಹಿಂದೆ ಲಾಲ್‌ಬಾಗ್‌ಗೆ ಭೇಟಿ ನೀಡಿದ್ದ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕೇರಳ ಸೇರಿದಂತೆ ವಿವಿಧ ರಾಜ್ಯಗಳ ಪ್ರವಾಸಿಗರು ಈಗ ಇಲ್ಲಿಗೆ ಬಂದಾಗ, ಮತ್ಸ್ಯಾಲಯದ ಬಗ್ಗೆ ವಿಚಾರಿಸುತ್ತಾರೆ. ಸದ್ಯ ಇದು ಕಾರ್ಯನಿರ್ವಹಿಸುತ್ತಿಲ್ಲ. ಪಾಳು ಬಿದ್ದಿರುವ ಕಟ್ಟಡವನ್ನು ನೋಡಿ ನಿರಾಸೆಯಿಂದಲೇ ಮರಳುತ್ತಿದ್ದಾರೆ’ ಎಂದರು.

‘ಕೆ. ನಂಜಪ್ಪ ಸ್ಮಾರಕ ಭವನ ಪಾರಂಪರಿಕ ಕಟ್ಟಡವಲ್ಲ. ಇದನ್ನು ತೆರವುಗೊಳಿಸಬಹದು ಎಂದು ಸಿವಿಲ್ ಏಡ್‌ ಟೆಕ್ನೊಕ್ರಾಟಿಕ್‌ ಸಂಸ್ಥೆಯು ತಾಂತ್ರಿಕ ವರದಿ ನೀಡಿದೆ. ಈ ಬಗ್ಗೆ ಯಲ್ಲಪ್ಪರೆಡ್ಡಿ ಅವರ ನೇತೃತ್ವದಲ್ಲಿ ನಡೆದ ಲಾಲ್‌ಬಾಗ್‌ ಮತ್ತು ಕಬ್ಬನ್‌ ಉದ್ಯಾನ ಸಲಹಾ ಸಮಿತಿಯಲ್ಲಿ ತಾಂತ್ರಿಕ ವರದಿಯಂತೆ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ. ಸುವರ್ಣ ಕರ್ನಾಟಕ ಪ್ರತಿಷ್ಠಾನದ ಸಮಿತಿಯಲ್ಲಿ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಸದ್ಯ, ಮಳೆಗೆ ಈ ಕಟ್ಟಡ ಸಂಪೂರ್ಣ ಬಿದ್ದು ಹೋಗಿದೆ. ‘ಈ ಕಟ್ಟಡ ಶಿಥಿಲಾವಸ್ಥೆಗೆ ತಲುಪಿದೆ’ ಎಂಬ ಫಲಕವನ್ನು ಅದಕ್ಕೆ ನೇತುಹಾಕಲಾಗಿದೆ.

ವಾಯುವಿಹಾರಿಗಳ ಅಭಿಪ್ರಾಯ

ಲಾಲ್‌ಬಾಗ್‌ ಮತ್ತು ಕಬ್ಬನ್‌ ಉದ್ಯಾನಗಳು ‘ಸಿಲಿಕಾನ್‌ ಸಿಟಿ’ಯ ಜನರ ಆಮ್ಲಜನಕದ ಟ್ಯಾಂಕ್‌ನಂತೆ ಕಾರ್ಯನಿರ್ವಹಿಸುತ್ತಿವೆ. ಆದರೆ ಸರಿಯಾಗಿ ನಿರ್ವಹಣೆ ಮಾಡದ ಕಾರಣ ಇಲ್ಲಿನ ಹಳೆಯ ಸ್ಮಾರಕಗಳು ಭೂತ ಬಂಗಲೆಗಳಾಗಿ ಮಾರ್ಪಟ್ಟಿವೆ. ಫಲ–ಪುಷ್ಪ ಪ್ರದರ್ಶನ ಸಂದರ್ಭದಲ್ಲಿ ಮಾತ್ರ ಲಾಲ್‌ಬಾಗ್‌ ಉದ್ಯಾನವನ್ನು ಸರಿಯಾಗಿ ನಿರ್ವಹಣೆ ಮಾಡಲಾಗುತ್ತದೆ. ಉಳಿದ ಸಮಯದಲ್ಲಿ ನಿರ್ವಹಣೆಯ ಕೊರತೆ ಇದೆ.
- ಜಯಕುಮಾರ್, ವಾಯುವಿಹಾರಿ
ಮತ್ಸ್ಯಾಲಯ ಕಟ್ಟಡ ಪಾಳು ಬಿದ್ದಿದ್ದರಿಂದ ಹುಳು–ಹುಪ್ಪಟೆಗಳ ಆವಾಸ ಸ್ಥಾನವಾಗಿ ಮಾರ್ಪಟ್ಟಿದೆ. ಜೊತೆಗೆ ಅಕ್ರಮ ಚಟುವಟಿಕೆಗಳ ತಾಣವಾಗಿದೆ. ಕಬ್ಬನ್‌ ಉದ್ಯಾನದಲ್ಲಿರುವ ಮತ್ಯ್ಸಾಲಯವನ್ನು ಅಭಿವೃದ್ಧಿಗೊಳಿಸಿರುವಂತೆ ಲಾಲ್‌ಬಾಗ್‌ನ ಮತ್ಸ್ಯಾಲಯವನ್ನು ಅಭಿವೃದ್ಧಿಗೊಳಿಸಬೇಕು. 
- ರವಿಚಂದ್ರ, ರಾಜ್ಯ ನಡಿಗೆದಾರರ ಒಕ್ಕೂಟದ ಅಧ್ಯಕ್ಷ

ಕಣ್ಮರೆಯಾದ ಮೀನು ಪ್ರಾಣಿ–ಪಕ್ಷಿಗಳ ಕಲರವ

‘ಲಾಲ್‌ಬಾಗ್‌ನ ಕೆ. ನಂಜಪ್ಪ ಸ್ಮಾರಕದಲ್ಲಿದ್ದ ಮತ್ಸ್ಯಾಲಯದಲ್ಲಿದ್ದ ಬಣ್ಣ–ಬಣ್ಣದ ಮೀನುಗಳು ಹೊರ ಆವರಣದಲ್ಲಿದ್ದ ವಿವಿಧ ಜಾತಿ ಪಕ್ಷಿಗಳು ಪ್ರತಿಯೊಬ್ಬರನ್ನು ಸೆಳೆಯುತ್ತಿದ್ದವು. ಇದು ಕಾರ್ಯನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಲಾಲ್‌ಬಾಗ್‌ಗೆ ಆಗಮಿಸುವವರ ಸಂಖ್ಯೆಯು ಹೆಚ್ಚಿತ್ತು’ ಎಂದು ವಾಯುವಿಹಾರಿ ಜಯಕುಮಾರ್‌ ತಿಳಿಸಿದ್ದಾರೆ. ‘ಈ ಕಟ್ಟಡದ ನವೀಕರಣ ಮಾಡಿ ಬಗೆಬಗೆಯ ಮೀನುಗಳು ಪ್ರಾಣಿ–ಪಕ್ಷಿಗಳನ್ನು ನೋಡುವ ಅವಕಾಶ ತೋಟಗಾರಿಕೆ ಇಲಾಖೆ ಒದಗಿಸಬೇಕು’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT