ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Lalbagh Flower Show | ಲಾಲ್‌ಬಾಗ್‌ ಫಲಪುಷ್ಪ ಪ್ರದರ್ಶನದಲ್ಲಿ ‘ವಚನ ಸಾಹಿತ್ಯ’

ಲಾಲ್‌ಬಾಗ್‌ನಲ್ಲಿ 18ರಿಂದ 28ರವರೆಗೆ ಫಲಪುಷ್ಪ ಪ್ರದರ್ಶನ
Published 13 ಡಿಸೆಂಬರ್ 2023, 15:39 IST
Last Updated 13 ಡಿಸೆಂಬರ್ 2023, 15:39 IST
ಅಕ್ಷರ ಗಾತ್ರ

ಬೆಂಗಳೂರು: ಈ ಬಾರಿ ಗಣರಾಜ್ಯೋತ್ಸವದ ಅಂಗವಾಗಿ ತೋಟಗಾರಿಕೆ ಇಲಾಖೆವತಿಯಿಂದ ಆಯೋಜಿಸುವ ಲಾಲ್‌ಬಾಗ್‌ ಫಲಪುಷ್ಪ ಪ್ರದರ್ಶನದಲ್ಲಿ ‘ವಿಶ್ವಗುರು ಬಸವಣ್ಣ’ ಅವರ ಹೂವಿನ ಪ್ರತಿಕೃತಿ ಕಣ್ಮನ ಸೆಳೆಯಲಿದೆ.

ಗಣರಾಜ್ಯೋತ್ಸವದ ಅಂಗವಾಗಿ 2024ರ ಜನವರಿ 18 ರಿಂದ 28ರವರೆಗೆ ಲಾಲ್‌ಬಾಗ್‌ನಲ್ಲಿ ಫಲಪುಷ್ಪ ಪ್ರದರ್ಶನ ನಡೆಯಲಿದೆ. 12 ನೇ ಶತಮಾನದಲ್ಲಿ ಬಸವಣ್ಣನವರು ವಚನಗಳ ಮೂಲಕ ಸಮಾಜದಲ್ಲಿ ಕ್ರಾಂತಿ ಮಾಡಿದ್ದರು. ಅಂಥ ವಚನ ಸಾಹಿತ್ಯವನ್ನು ಪುಷ್ಪಗಳಲ್ಲಿ ಅರಳಿಸಲು ತೋಟಗಾರಿಕೆ ಇಲಾಖೆ ಸಿದ್ದತೆ ನಡೆಸಿದೆ.  

‘ಬಸವಣ್ಣನವರು 12ನೇ ಶತಮಾನದಲ್ಲಿ ಲಿಂಗ ತಾರತಮ್ಯ ಹಾಗೂ ಮೂಢನಂಬಿಕೆಗಳನ್ನು ವಿರೋಧಿಸಿದ್ದರು. ಬಸವಣ್ಣನವರ ಚಿಂತನೆ, ಕಾಯಕ ವೈಖರಿಗಳು ಇಂದಿನ ಸಮಾಜಕ್ಕೆ ಮಾದರಿ. ಆದ್ದರಿಂದ, ಈ ಬಾರಿ ಬಸವಣ್ಣ ಮತ್ತು ‘ವಚನ ಸಾಹಿತ್ಯ’ದ ಕುರಿತು ಪುಷ್ಪ ಮಾದರಿಗಳನ್ನು ನಿರ್ಮಿಸಲಾಗುತ್ತಿದೆ’ ಎಂದು ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಎಂ. ಜಗದೀಶ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಅಲ್ಲಮ್ಮ ಪ್ರಭು, ಅಕ್ಕಮಹಾದೇವಿ, ಮಡಿವಾಳ ಮಾಚಯ್ಯ ಸೇರಿದಂತೆ ವಚನಕಾರರ ಪ್ರತಿಮೆಗಳು, ಅವರ ವಚನಗಳು, ಅಂಕಿತನಾಮ ಗಳನ್ನು ಹೂವಿನ ಲೋಕದಲ್ಲಿ ಪ್ರಸ್ತುತಪಡಿಸಲಾಗುವುದು. ಈ ಬಗ್ಗೆ ವಚನ ಸಾಹಿತ್ಯದ ಸಂಶೋಧಕರು, ತಜ್ಞರು, ಸಾಹಿತಿಗಳು ಹಾಗೂ ಪ್ರಾಧ್ಯಪಕರ ಸಲಹೆ ಮತ್ತು ಮಾರ್ಗದರ್ಶನ ಪಡೆಯಲಾಗುತ್ತಿದೆ’ ಎಂದು ತಿಳಿಸಿದರು.

‘ಪುಷ್ಪಗಳಲ್ಲಿ ಬಸವಣ್ಣನವರ ಪ್ರತಿಮೆ ಮತ್ತು 12ನೇ ಶತಮಾನದ ಅನುಭವ ಮಂಟಪವನ್ನು ರಚಿಸುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಈಗಾಗಲೇ ಇಲಾಖೆಯಿಂದ ತಯಾರಿ ಪ್ರಾರಂಭಿಸಲಾಗಿದೆ. ಪ್ರದರ್ಶನಕ್ಕೆ ಬೇಕಾದ ಹೂವುಗಳನ್ನು ಸಂಗ್ರಹಿಸುವ ಕೆಲಸ ನಡೆಯುತ್ತಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT