ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಲ್‌ಬಾಗ್‌ನಲ್ಲಿ ಫಲಪುಷ್ಪ ಪ್ರದರ್ಶನ: ಹೂವಿನಲ್ಲಿ ‘ಬೆಂಗಳೂರು ದರ್ಶನ’

Last Updated 16 ಜನವರಿ 2023, 21:15 IST
ಅಕ್ಷರ ಗಾತ್ರ

ಬೆಂಗಳೂರು: ‘ಪುಷ್ಪಕಾಶಿ’ ಲಾಲ್‌ ಬಾಗ್‌ ಗಣರಾಜ್ಯೋತ್ಸವದ ಫಲಪುಷ್ಪ ಪ್ರದರ್ಶನಕ್ಕೆ ಸಜ್ಜಾಗುತ್ತಿದೆ.

ಈ ಬಾರಿ ‘ಬೆಂಗಳೂರು ನಗರದ ಇತಿಹಾಸ’ ವಿಷಯ ಆಧರಿಸಿ ಜ.20ರಿಂದ 30ರ ತನಕ ಪ್ರದರ್ಶನ ನಡೆಯಲಿದ್ದು, ಹಳೆಯ ಹಾಗೂ ಹೊಸ ಬೆಂಗಳೂರಿನ ಪರಿಚಯವು ವೀಕ್ಷಕರಿಗೆ ಆಗಲಿದೆ.

‘ಇದು 213ನೇ ಫಲಪುಷ್ಪ ಪ್ರದರ್ಶನವಾಗಿದ್ದು, ಹಲವು ವಿಶೇಷತೆಗಳನ್ನು ಒಳಗೊಂಡಿದೆ. 10 ಲಕ್ಷದಿಂದ 12 ಲಕ್ಷ ಮಂದಿ ವೀಕ್ಷಿಸುವ ಸಾಧ್ಯತೆಯಿದೆ’ ಎಂದು ತೋಟಗಾರಿಕೆ ಸಚಿವ ಎನ್‌.ಮುನಿರತ್ನ ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾಹಿತಿ ನೀಡಿದರು.

‘ವಿಜ್ಞಾನ– ತಂತ್ರಜ್ಞಾನ ನಗರಿ ಬೆಂಗಳೂರನ್ನು ಸಾಂಕೇತಿಕವಾಗಿ ಪ್ರತಿಬಿಂಬಿಸುವ ಬೃಹತ್‌ ಕಲಾಕೃತಿ ಗಾಜಿನಮನೆಯಲ್ಲಿ ಪ್ರದರ್ಶನಗೊಳ್ಳಲಿದೆ. ವಿಜ್ಞಾನ–ತಂತ್ರಜ್ಞಾನದ ಪರಿಕಲ್ಪನೆಗಳು, ಲಾಲ್‌ಬಾಗ್ ಬಂಡೆ, ವೃಷಭಾವತಿ ನದಿಯ ಮೂಲ, ಬೇಗೂರು ಶಾಸನದ ಪ್ರತಿಕೃತಿ, ಕೆಂಪೇಗೌಡರ ಕಾಲದ ಗೋಪುರಗಳು, ದೊಡ್ಡಬಸವಣ್ಣ ಹಾಗೂ ಮರಾಠರ ಕಾಲದ ಕಾಡುಮಲ್ಲೇಶ್ವರ ದೇವಾಲಯ, ಟಿಪ್ಪು ಕಾಲದ ಬೇಸಿಗೆ ಅರಮನೆ, ಬ್ರಿಟಿಷ್‌ ಕಮಿಷನರ್‌ ಆಡಳಿತಾವಧಿಯ ಹೈಕೋರ್ಟ್‌ ಕಟ್ಟಡ, ಮೈಸೂರು ಒಡೆಯರ್‌ ಆಡಳಿತದ ಅವಧಿಯ ಬೆಂಗಳೂರು ಅರಮನೆ ಹಾಗೂ ಸ್ವಾತಂತ್ರ್ಯೋತ್ತರ ಕಾಲದ ನಗರವನ್ನು ಪ್ರತಿಬಿಂಬಿಸುವಂತೆ ವಿಧಾನಸೌಧದ ಕಲಾಕೃತಿಗಳು ಬಿಂಬಿತವಾಗಲಿವೆ. ಆಂಥೋರಿಯಂ, ಲಿಲ್ಲಿ, ಜರ್‌ಬೆರಾ, ಸೇವಂತಿ, ಆರ್ಕಿಡ್ಸ್‌ ಸೇರಿ 30 ಸಾವಿರ ಬಗೆಯ ಹೂವುಗಳ ಜೋಡಣೆಯಿಂದ ಈ ಕಲಾಕೃತಿಗಳು ಕಂಗೊಳಿಸಲಿವೆ ಎಂದು ಮಾಹಿತಿ ನೀಡಿದರು.

ಪುಷ್ಪ ಪಿರಮಿಡ್‌ಗಳು, ಆಧುನಿಕ ಕಡಲ ಕಿನಾರೆ ಉದ್ಯಾನದ ಪರಿಕಲ್ಪನೆ, ಆಕರ್ಷಕ ಬೋನ್ಸಾಯ್‌ ಗಿಡಗಳ ಪ್ರದರ್ಶನ ಇರಲಿದೆ ಎಂದರು.

ವಿದೇಶಿ ಹೂವುಗಳ ಮೆರುಗು: ‘ಫಲಪುಷ್ಪ ಪ್ರದರ್ಶನಕ್ಕೆ 11 ದೇಶಗಳಿಂದ ವಿವಿಧ ತಳಿಯ ಹೂವುಗಳನ್ನು ತರಿಸಿಕೊಳ್ಳಲಾಗುತ್ತಿದೆ., ಕೊಲಂಬಿಯಾ, ಇಸ್ರೇಲ್‌, ನೆದರ್‌ಲೆಂಡ್ಸ್‌, ಬೆಲ್ಜಿಯಂ, ಕೀನ್ಯಾ, ಆಸ್ಟ್ರೇಲಿಯಾದಿಂದ ಹೂವುಗಳು ಬರಲಿದ್ದು ಪ್ರದರ್ಶನಕ್ಕೆ ಮೆರುಗು ನೀಡಲಿವೆ’ ಎಂದು ಹೇಳಿದರು.

ಉದ್ಯಾನದ ಹೂವಿನ ಕುಂಡಗಳಲ್ಲಿ ಬೆಳೆದ 65ಕ್ಕೂ ಹೆಚ್ಚು ಬಗೆಯ ಹೂವುಗಳನ್ನು ಗಾಜಿನಮನೆಯಲ್ಲಿ ಪ್ರದರ್ಶನಕ್ಕೆ ಇಡಲಾಗುವುದು. 8 ಬಗೆಯ ಸೇವಂತಿಗೆ, ಗುಲಾಬಿ, ಜರ್‌ಬೆರಾ, ಸಿಲೋಷಿಯಾ, ಕಾಸ್ಮಾಸ್‌, ಸೆಂಚೂರಿಯಾ ಹೂವುಗಳು ಕಣ್ಮನ ಸೆಳೆಯಲಿವೆ ಎಂದರು.

‘ಗಾಜಿನಮನೆಯ ಹೊರಭಾಗದಲ್ಲೂ ಪಕ್ಷಿಗಳ ಕಲಾಕೃತಿಗಳು, ಹೃದಯಾಕಾರದ ಹೂವಿನ ಕಮಾನುಗಳು, ಬಿಗೋನಿಯಾ ಹಾಗೂ ಸೆಲ್ಫಿ ಪಾಯಿಂಟ್‌, ಮುದ ನೀಡುವ ಕಾರಂಜಿಯ ಆಕರ್ಷಣೆ ಇರಲಿದೆ’ ಎಂದರು.

ಈ ಬಾರಿ ಪ್ರದರ್ಶನಕ್ಕೆ ₹ 2.50 ಕೋಟಿ ವೆಚ್ಚವಾಗಲಿದೆ. ಕಳೆದ ಪ್ರದರ್ಶನದಲ್ಲಿ ₹ 75 ಲಕ್ಷ ಲಾಭ ಬಂದಿತ್ತು ಎಂದರು.

‘ಜ.20ರಂದು ಬೆಳಿಗ್ಗೆ 10ಕ್ಕೆ ಫಲಪುಷ್ಪ ಪ್ರದರ್ಶನವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಲಿದ್ದಾರೆ. 21ರಂದು ಇಕೆಬಾನ ಹಾಗೂ ಪೂರಕ ಕಲೆಗಳ ಉದ್ಘಾಟನೆ, 28ರಂದು ಬಹುಮಾನ ವಿತರಣಾ ಸಮಾರಂಭ ನಡೆಯಲಿದೆ’ ಎಂದು ಅವರು ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದರ್‌ ಕುಮಾರ್‌ ಕಟಾರಿಯಾ, ತೋಟಗಾರಿಕೆ ಇಲಾಖೆ ನಿರ್ದೇಶಕ ಕೆ.ನಾಗೇಂದ್ರ ಪ್ರಸಾದ್ ಹಾಜರಿದ್ದರು.

ಮುನ್ನೆಚ್ಚರಿಕೆ ಕ್ರಮಗಳು
* ಲಾಲ್‌ಬಾಗ್‌ ಸಸ್ಯತೋಟಕ್ಕೆ ತಿಂಡಿ ತಿನಿಸು ತರುವಂತಿಲ್ಲ
* ಲಾಲ್‌ಬಾಗ್‌ ಒಳಗೆ ಯಾವುದೇ ಪ್ಲಾಸ್ಟಿಕ್‌ ಕೈಚೀಲ ತರುವುದು ಹಾಗೂ ಬಳಕೆ ನಿಷೇಧಿಸಲಾಗಿದೆ
* ಸಸ್ಯತೋಟದ ಗಿಡ ಹಾಗೂ ಹೂವು ಕೀಳುವಂತಿಲ್ಲ
* ಉದ್ಯಾನ ಒಳಗೆ ಆಟ ಆಡುವಂತಿಲ್ಲ

ಲಾಲ್‌ಬಾಗ್‌ನಲ್ಲೂ ‘ನಮ್ಮ ಕ್ಲಿನಿಕ್‌’
‘ಉದ್ಯಾನದಲ್ಲಿ ವಾಯುವಿಹಾರ ನಡೆಸುತ್ತಿದ್ದ ಇಬ್ಬರು ದಿಢೀರ್‌ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಅವರಿಗೆ ಸ್ಥಳದಲ್ಲಿ ಚಿಕಿತ್ಸೆ ಲಭಿಸಿದ್ದರೆ ಬದುಕುತ್ತಿದ್ದರು. ಹೀಗಾಗಿ, ಲಾಲ್‌ಬಾಗ್‌ನಲ್ಲಿ ನಮ್ಮ ಕ್ಲಿನಿಕ್‌ ಆರಂಭಿಸಲಾಗುವುದು’ ಎಂದು ಸಚಿವರು ಹೇಳಿದರು.

‘ಈ ಬಾರಿ ಯಾವುದೇ ಸಂಘ–ಸಂಸ್ಥೆಯ ನೆರವಿಲ್ಲದೆ ತೋಟಗಾರಿಕೆ ಇಲಾಖೆ ಫಲಪುಷ್ಪ ಪ್ರದರ್ಶನ ನಡೆಸುತ್ತಿದೆ. ಯಾರ ಸಹಯೋಗವೂ ಬೇಕಿಲ್ಲ. ಇಲಾಖೆಯೇ ನಡೆಸಬೇಕೆಂದು ಸರ್ಕಾರ ತೀರ್ಮಾನಿಸಿದೆ’ ಎಂದು ‘ಮೈಸೂರು ಉದ್ಯಾನ ಕಲಾ ಸಂಘ’ದ ಹೆಸರು ಪ್ರಸ್ತಾಪಿಸದೆ ಹೇಳಿದರು.

‘ಖಾಸಗಿ ಕಾರ್ಯಕ್ರಮಕ್ಕೆ ಅವಕಾಶ ಇಲ್ಲ’: ‘ಲಾಲ್‌ಬಾಗ್‌ ಸಾರ್ವಜನಿಕರ ಆಸ್ತಿ. ಖಾಸಗಿಯವರು ಕಾರ್ಯಕ್ರಮ ನಡೆಸಲು ಅವಕಾಶ ಇಲ್ಲ. ಒಬ್ಬರಿಗೆ ಅವಕಾಶ ಕೊಟ್ಟರೆ ಮತ್ತೊಬ್ಬರು ಬರುತ್ತಾರೆ. ಅದನ್ನು ಗಮನಿಸಿಯೇ ಅನುಮತಿ ನಿರಾಕರಿಸಲಾಗಿದೆ. ಸಮಸ್ಯೆಗಳ ಕುರಿತು ವರದಿ ಮಾಡಲು ಯಾವುದೇ ಅಭ್ಯಂತರ ಇಲ್ಲ’ ಎಂದು ಹೇಳಿದರು.

ವಾಹನ ನಿಲುಗಡೆಗೆ ವ್ಯವಸ್ಥೆ
* ನಾಲ್ಕು ಪ್ರವೇಶ ದ್ವಾರದಲ್ಲೂ ಮೆಟಲ್‌ ಡಿಟೆಕ್ಟರ್ಸ್‌ ಅಳವಡಿಕೆ
* ಎಲ್ಲಾ ಪ್ರವೇಶ ದ್ವಾರಗಳ ಬಳಿಯೂ ವಾಹನಗಳ ನಿಲುಗಡೆಗೆ ವ್ಯವಸ್ಥೆ
* 104 ಸಿ.ಸಿ.ಟಿವಿ ಕ್ಯಾಮೆರಾ ಅಳವಡಿಕೆ
* ಆಯ್ದ ಸ್ಥಳಗಳಲ್ಲಿ ಪ್ರತ್ಯೇಕ ಔಟ್‌ಪೋಸ್ಟ್‌ ತೆರೆಯಲು ನಿರ್ಧಾರ
* ಆಯ್ದ 10 ಸ್ಥಳಗಳಲ್ಲಿ ಎತ್ತರದ ವೇದಿಕೆಯಿಂದ ಪೊಲೀಸ್‌ ಕಣ್ಗಾವಲು
* ಮುನ್ನೆಚ್ಚರಿಕಾ ಕ್ರಮವಾಗಿ ಗಾಜಿನಮನೆಯ ಎದುರು ಅಗ್ನಿಶಾಮಕ ದಳದ ವಾಹನ ನಿಲುಗಡೆ
* 38 ಪ್ರಥಮ ಚಿಕಿತ್ಸಾ ಪೆಟ್ಟಿಗೆ ಅಳವಡಿಕೆ
* ಹಾವು, ಜೇನುಹುಳು ಹಾಗೂ ನಾಯಿಗಳ ಕಚ್ಚುವಿಕೆ ಸಂಬಂಧಿಸಿದಂತೆ ಚುಚ್ಚುಮದ್ದುಗಳ ದಾಸ್ತಾನು
* ಗಾಜಿನಮನೆ ಹಾಗೂ ಲಾಲ್‌ಬಾಗ್‌ನ ನಾಲ್ಕೂ ಪ್ರವೇಶ ದ್ವಾರದಲ್ಲಿ ಆಂಬುಲೆನ್ಸ್‌ ವ್ಯವಸ್ಥೆ
* ಬೆಳಿಗ್ಗೆ 7ರಿಂದ ಸಂಜೆ 6.30ರ ತನಕ ವೀಕ್ಷಣೆಗೆ ಅವಕಾಶ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT