ಬೆಂಗಳೂರು: ಕರ್ನಾಟಕ ಲಲಿತಕಲಾ ಅಕಾಡೆಮಿಯು ‘ಮನೆಗೊಂದು ಕಲಾಕೃತಿ’ ಯೋಜನೆಯಡಿ ಪ್ರದರ್ಶನ ಮತ್ತು ಮಾರಾಟಕ್ಕೆ ಇರಿಸಿದ್ದ 700 ಕಲಾಕೃತಿಗಳಲ್ಲಿ ಕೇವಲ 65 ಕಲಾಕೃತಿಗಳು ಮಾತ್ರ ಮಾರಾಟವಾಗಿವೆ. ಇದರಿಂದಾಗಿ ಉಳಿದ ಕಲಾಕೃತಿಗಳು ಮತ್ತೆ ಅಕಾಡೆಮಿಯ ದಾಸ್ತಾನು ಕೇಂದ್ರಕ್ಕೆ ಮರಳಿವೆ.

ಕಲಾಕೃತಿಗಳು ಕೈಗೆಟುಕುವ ದರದಲ್ಲಿ ಸಿಗುವ ಜತೆಗೆ, ಮನೆಗಳ ಗೋಡೆಯನ್ನು ಅಲಂಕರಿಸುವಂತಾಗಬೇಕು ಎಂಬ ಉದ್ದೇಶದಿಂದ ಅಕಾಡೆಮಿಯು ಈ ಯೋಜನೆಯನ್ನು ಪ್ರಾರಂಭಿಸಿದೆ. ಅಕಾಡೆಮಿ ನಡೆಸಿದ ತರಬೇತಿ, ಕಾರ್ಯಾಗಾರ, ಶಿಬಿರಗಳಲ್ಲಿ ಯುವ ಕಲಾವಿದರು ರಚಿಸಿದ ಅತ್ಯುತ್ತಮ ಕಲಾಕೃತಿಗಳನ್ನು ಆಯ್ಕೆ ಮಾಡಿ, ಅವುಗಳ ಪ್ರದರ್ಶನ ಮತ್ತು ಮಾರಾಟವನ್ನು ಇದೇ 18ರಿಂದ 21ರವರೆಗೆ ಕುಮಾರಕೃಪಾ ರಸ್ತೆಯಲ್ಲಿರುವ ಕರ್ನಾಟಕ ಚಿತ್ರಕಲಾ ಪರಿಷತ್ತಿನ ನಾಲ್ಕು ಗ್ಯಾಲರಿಗಳಲ್ಲಿ ಹಮ್ಮಿಕೊಳ್ಳಲಾಗಿತ್ತು. ಮೊದಲ ದಿನವೇ ₹ 3 ಲಕ್ಷದಷ್ಟು ವಹಿವಾಟು ನಡೆದಿತ್ತು. ಇದರಿಂದಾಗಿ ಬಹುತೇಕ ಎಲ್ಲ ಕಲಾಕೃತಿಗಳು ಮಾರಾಟವಾಗುವ ನಿರೀಕ್ಷೆಯನ್ನು ಅಕಾಡೆಮಿ ಕಾರ್ಯಕಾರಿ ಸಮಿತಿ ಹೊಂದಿತ್ತು. ಆದರೆ, ವಾರಾಂತ್ಯದಲ್ಲಿ ಮಳೆಯ ಕಾರಣ ಪ್ರದರ್ಶನವು ಕಲಾಸಕ್ತರ ಬರ ಎದುರಿಸಿತು. ಪರಿಣಾಮ ನಾಲ್ಕು ದಿನಗಳಲ್ಲಿ ₹ 6.05 ಲಕ್ಷದಷ್ಟು ಮಾತ್ರ ವಹಿವಾಟು ನಡೆದಿದೆ.

ಅಕಾಡೆಮಿ ನಡೆಸಿದ ತರಬೇತಿ, ಕಾರ್ಯಾಗಾರ, ಶಿಬಿರಗಳಲ್ಲಿ ನೂರಾರು ಕಲಾವಿದರಿಂದ ಸಾವಿರಾರು ಕಲಾಕೃತಿಗಳು ರಚಿಸಲ್ಪಟ್ಟಿವೆ. ಅವುಗಳು ಅಕಾಡೆಮಿಯಲ್ಲಿಯೇ ದೂಳು ಹಿಡಿಯುತ್ತಿದ್ದರಿಂದ, ಹಾಲಿ ಕಾರ್ಯಕಾರಿ ಸಮಿತಿಯು ಸುಸ್ಥಿತಿಯಲ್ಲಿರುವ ಕಲಾಕೃತಿಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಈ ಯೋಜನೆ ರೂಪಿಸಿತ್ತು. ಇವುಗಳನ್ನು ಇರಿಸಲು ಸ್ಥಳಾವಕಾಶದ ಕೊರತೆಯೂ ಎದುರಾಗಿತ್ತು. ಪ್ರದರ್ಶನ ಮತ್ತು ಮಾರಾಟಕ್ಕೆ ಆಯ್ಕೆ ಮಾಡಲಾದ ಕಲಾಕೃತಿಗಳಲ್ಲಿ ಡ್ರಾಯಿಂಗ್ಗಳಿಗೆ ₹ 1 ಸಾವಿರದಿಂದ ₹ 2 ಸಾವಿರ ನಿಗದಿಪಡಿಸಿದರೆ, ಪೇಂಟಿಂಗ್ಗಳಿಗೆ ₹ 3 ಸಾವಿರದಿಂದ ₹ 30 ಸಾವಿರದವರೆಗೆ ದರ ಗೊತ್ತುಪಡಿಸಲಾಗಿತ್ತು. 3x3 ಅಡಿವರೆಗಿನ ಅಳತೆಯ ಕಲಾಕೃತಿಗಳೂ ಇದ್ದವು. ಜಲವರ್ಣ, ಆ್ಯಕ್ರಿಲಿಕ್, ಮಧುಬನಿ, ತೈಲವರ್ಣ ಸೇರಿ ವಿವಿಧ ಪ್ರಕಾರದ ಕಲಾ ಕೃತಿಗಳು ಪ್ರದರ್ಶನದಲ್ಲಿ ಗಮನ ಸೆಳೆದಿದ್ದವು.

ಕಲಾಗ್ರಾಮದಲ್ಲಿ ದಾಸ್ತಾನು: ಪ್ರದರ್ಶನದಲ್ಲಿ ಮಾರಾಟವಾಗದ ಕಲಾಕೃತಿಗಳನ್ನು ಕಲಾಗ್ರಾಮದಲ್ಲಿರುವ ಅಕಾಡೆಮಿ ಕೇಂದ್ರದಲ್ಲಿ ದಾಸ್ತಾನು ಮಾಡಲಾಗಿದೆ. ಸದ್ಯ ಅಕಾಡೆಮಿ ಸ್ಥಳಾವಕಾಶದಲ್ಲಿ ಪ್ರದರ್ಶನ ಮತ್ತು ಮಾರಾಟಕ್ಕೆ ಅವಕಾಶ ಇರದಿದ್ದರಿಂದ ಹಾಗೇ ಇರಿಸಲು ಕಾರ್ಯಕಾರಿ ಸಮಿತಿ ನಿರ್ಧರಿಸಿದೆ. ‘ಮನೆಗೊಂದು ಕಲಾಕೃತಿ’ ಯೋಜನೆಯಡಿ ನಡೆದ ಪ್ರದರ್ಶನದಿಂದ ಬಂದ ಹಣವನ್ನು ಕಲಾ ವಿದ್ಯಾರ್ಥಿಗಳಿಗೆ ಸ್ಪರ್ಧೆ ಏರ್ಪಡಿಸಲು ಹಾಗೂ ಕಲಾಕೃತಿಗಳ ರಕ್ಷಣೆಗೆ ಬಳಸಿಕೊಳ್ಳಲು ಅಕಾಡೆಮಿ ಮುಂದಾಗಿದೆ.

‘ಕಲಾ ಪ್ರದರ್ಶನಗಳಿಗೆ ಸಾಮಾನ್ಯವಾಗಿ ವಾರಾಂತ್ಯದಲ್ಲಿಯೇ ಹೆಚ್ಚಿನ ಜನರು ಕುಟುಂಬ ಸಮೇತ ಬರುತ್ತಾರೆ. ಆದರೆ, ಪ್ರದರ್ಶನದ ಅವಧಿಯ ಭಾನುವಾರ ಮಳೆ–ಮೋಡ ಕವಿದ ವಾತಾವರಣದಿಂದಾಗಿ ಕಲಾಸಕ್ತರು ಬರಲಿಲ್ಲ. ಉಳಿದ ದಿನಗಳು ಹಲವರು ಪ್ರದರ್ಶನವನ್ನು ವೀಕ್ಷಿಸಿ, ಸಂಭ್ರಮಿಸಿದರು. ಕಲಾಕೃತಿಗಳನ್ನು ಕಲಾಗ್ರಾಮದಲ್ಲಿರುವ ಕೇಂದ್ರದಲ್ಲಿ ಜೋಪಾನವಾಗಿ ಇರಿಸಲಾಗಿದೆ. ಮುಂದಿನ ದಿನಗಳಲ್ಲಿ ಇದನ್ನು ಮತ್ತೆ ಪ್ರದರ್ಶನ ಮತ್ತು ಮಾರಾಟಕ್ಕೆ ಇರಿಸಲಾಗುತ್ತದೆ. ಪ್ರದರ್ಶನ ಮುಗಿದ ಬಳಿಕವೂ ಹಲವು ಮಂದಿ ಕಲಾಕೃತಿಯ ಲಭ್ಯತೆ ಬಗ್ಗೆ ವಿಚಾರಿಸಿದ್ದಾರೆ’ ಎಂದು ಅಕಾಡೆಮಿ ಅಧ್ಯಕ್ಷ ಪ.ಸ.ಕುಮಾರ್ ತಿಳಿಸಿದರು.

ಒಂದಷ್ಟು ಕಲಾಕೃತಿಗಳನ್ನಾದರೂ ಕಲಾಭಿಮಾನಿಗಳ ಮನೆಗಳಿಗೆ ತಲುಪಿಸಿದ ತೃಪ್ತಿಯಿದೆ. ಈ ಪ್ರದರ್ಶನವು ಜನರಲ್ಲಿ ಕಲಾ ಅಭಿರುಚಿ ಬೆಳೆಸಲು ಸಹಕಾರಿಯಾಗಿದೆ
ಪ.ಸ.ಕುಮಾರ್ ಕರ್ನಾಟಕ ಲಲಿತಕಲಾ ಅಕಾಡೆಮಿ ಅಧ್ಯಕ್ಷ

ವಲಯವಾರು ಕಲಾಕೃತಿಗಳ ಪ್ರದರ್ಶನ

ಅಕಾಡೆಮಿಯ ‘ಮನೆಗೊಂದು ಕಲಾಕೃತಿ’ ಯೋಜನೆಯಡಿ ಆಯ್ದ ಕಲಾಕೃತಿಗಳ ಪ್ರದರ್ಶನ ಮತ್ತು ಮಾರಾಟವನ್ನು ರಾಜ್ಯದ ನಾಲ್ಕೂ ವಲಯಗಳಲ್ಲಿ ಹಮ್ಮಿಕೊಳ್ಳಲು ಕಾರ್ಯಕಾರಿ ಸಮಿತಿ ನಿರ್ಧರಿಸಿದೆ. ಕಲಾಗ್ರಾಮದಲ್ಲಿ ಇರಿಸಲಾಗಿರುವ ಕಲಾಕೃತಿಗಳನ್ನು ಈ ಪ್ರದರ್ಶನಗಳಿಗೆ ಕೊಂಡೊಯ್ಯಲಾಗುತ್ತದೆ. ಬೆಂಗಳೂರಿನಲ್ಲಿ ಆರು ತಿಂಗಳ ಬಳಿಕ ಮತ್ತೊಮ್ಮೆ ಪ್ರದರ್ಶನ ಮತ್ತು ಮಾರಾಟ ನಡೆಸಲು ಯೋಜನೆ ರೂಪಿಸಿದೆ. ಮಕ್ಕಳು ಹಾಗೂ ವಿವಿಧ ವಯೋಮಾನದವರಲ್ಲಿ ಕಲಾ ಅಭಿರುಚಿ ಬೆಳೆಸುವ ಉದ್ದೇಶ ಈ ಪ್ರದರ್ಶನಗಳ ಹಿಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.