ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಿಡಿಎ ಸ್ವಾಧೀನದ ಜಾಗ ಖಾಸಗಿಗೆ ಮಾರಾಟ!

Published 8 ಡಿಸೆಂಬರ್ 2023, 0:06 IST
Last Updated 8 ಡಿಸೆಂಬರ್ 2023, 0:06 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಸ್ವಾಧೀನಪಡಿಸಿಕೊಂಡ ಕೋಟ್ಯಂತರ ಮೌಲ್ಯದ ಭೂಮಿಗೆ ಬಿಡಿಎ, ಬಿಬಿಎಂಪಿ, ಕಂದಾಯ ಇಲಾಖೆ ಅಧಿಕಾರಿಗಳು ‘ನಕಲಿ ದಾಖಲೆ’ಗಳನ್ನು ಸೃಷ್ಟಿಸಿಕೊಟ್ಟು, ಖಾಸಗಿಯವರಿಗೆ ಮಾರಾಟ ಮಾಡಲು ನೆರವಾಗಿದ್ದಾರೆ.

ಬಿಡಿಎ ಭೂಸ್ವಾಧೀನಾಧಿಕಾರಿ, ‘ಸ್ವಾಧೀನ ಪ್ರಕ್ರಿಯೆಯಿಂದ ಭೂಮಿಯನ್ನು ಕೈಬಿಟ್ಟಿಲ್ಲ’ ಎಂಬ ಸ್ಪಷ್ಟ ಮಾಹಿತಿ ನೀಡಿದ್ದರೂ, ಇಂದಿಗೂ ಬಿಡಿಎ ಜಮೀನನ್ನು ತನ್ನ ವಶಕ್ಕೆ ತೆಗೆದುಕೊಂಡಿಲ್ಲ. ಅಲ್ಲಿ  ಕೆಲವು ತಿಂಗಳ ಹಿಂದಿನಿಂದ ವಾಣಿಜ್ಯ ಕಟ್ಟಡ ನಿರ್ಮಾಣವಾಗುತ್ತಿದ್ದರೂ ‘ನಿವೃತ್ತ ಐಎಎಸ್‌ ಅಧಿಕಾರಿ’ಯ ಭಯದಿಂದ ಕ್ರಮ
ಕೈಗೊಳ್ಳದೆ ಅಧಿಕಾರಿಗಳು ಸುಮ್ಮನಿದ್ದಾರೆ. 1980ರಲ್ಲಿ ಎಚ್‌ಆರ್‌ಬಿಆರ್‌ ಬಡಾವಣೆ ನಿರ್ಮಾಣಕ್ಕಾಗಿ ಬಾಣಸವಾಡಿ ಗ್ರಾಮದ ಸರ್ವೆ ನಂ. 260ಮತ್ತು 261ರ ಪೂರ್ಣ ಜಮೀನನ್ನು ಬಿಡಿಎ ಸ್ವಾಧೀನಪಡಿಸಿ
ಕೊಂಡಿದೆ. 1984ರಲ್ಲಿ ಭೂ ಮಾಲೀಕರಿಗೆ ಪರಿಹಾರನೀಡಿದೆ. 1986ರಲ್ಲಿ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿ ಹೆಚ್ಚುವರಿ ಪರಿಹಾರವನ್ನೂ ಭೂ ಮಾಲೀಕರಾದ ಬಿ.ಸಿ. ರಾಜುರತ್ನಮ್ಮ ಪಡೆದುಕೊಂಡಿದ್ದಾರೆ. ಇಷ್ಟಾದ ಮೇಲೂ 7,000 ಚದರ ಅಡಿ ವಿಸ್ತೀರ್ಣದಲ್ಲಿ ಶೀಟ್‌ ಮನೆಯನ್ನು ನಿರ್ಮಿಸಿ, ಮನೆಗಳನ್ನು ಸಕ್ರಮ ಮಾಡಿಕೊಡುವಂತೆ ಹೈಕೋರ್ಟ್‌ಗೆ ಮನವಿ ಸಲ್ಲಿಸಿದ್ದರು.

ಎರಡು ಬಾರಿ ಪರಿಹಾರವನ್ನು ಪಡೆದುಕೊಂಡಿರುವುದರಿಂದ ಮನೆಯನ್ನು ಸಕ್ರಮಗೊಳಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್‌ 1995ರಲ್ಲಿ ಮನವಿಯನ್ನು ತಿರಸ್ಕರಿಸಿದೆ.

ಈ ಮಧ್ಯೆ 1992ರಲ್ಲಿ ಸರ್ವೆ ನಂಬರ್‌ ದಾಖಲಿಸದೆ 6.5 ಗುಂಟೆ ಜಮೀನನ್ನು ವೆಂಕಟಮ್ಮ ಅವರಿಗೆ ಮಾರಾಟ ಮಾಡಲಾಗಿದೆ. ಕೆ.ಆರ್‌. ಪುರ ಉಪನೋಂದಣಾಧಿಕಾರಿ ಕಚೇರಿಯಲ್ಲಿ (6319–93–94) ಕ್ರಯಪತ್ರವಾಗಿದೆ.

2014ರಲ್ಲಿ ಬಿಡಿಎ ಉತ್ತರ ವಿಭಾಗದ ಕಾರ್ಯಪಾಲಕ ಎಂಜಿನಿಯರ್‌ ಅವರು ಬಾಣಸವಾಡಿ ಗ್ರಾಮದ ಸರ್ವೆ ನಂ. 261ರಲ್ಲಿ 6.5 ಗುಂಟೆ ವಿಸ್ತೀರ್ಣದ ನಿವೇಶನವನ್ನು ಬಿಡಿಎ ವಶಪಡಿಸಿಕೊಂಡಿಲ್ಲ ಎಂಬ ಪತ್ರವನ್ನು ಬಿಬಿಎಂಪಿ ಪೂರ್ವ ವಲಯದ ಸಹಾಯಕ ಕಂದಾಯ ಅಧಿಕಾರಿ (ಎಆರ್‌ಒ) ಅವರಿಗೆ ನೀಡುತ್ತಾರೆ. ಇದನ್ನು ನಮೂದಿಸಿ, ಬಾಣಸವಾಡಿ 88ನೇ ವಾರ್ಡ್‌ನಲ್ಲಿ 1085/2 ಸಂಖ್ಯೆಗೆ ಎಆರ್‌ಒ ಖಾತಾ ದೃಢೀಕರಣ ಪತ್ರ ನೀಡಿದ್ದಾರೆ. ಇದರ ಆಧಾರದ ಮೇಲೆ, ಬೆಂಗಳೂರು ಉತ್ತರ ಉಪವಿಭಾಗಾಧಿಕಾರಿ ‘ಕಂದಾಯ ಅಧಿಕಾರಿ, ಸರ್ವಜ್ಞ ನಗರದವರು ನಂಬರ್‌ ಇಲ್ಲದ ಹಿಂಬರಹ ನೀಡಿದ್ದು, ಅದನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲು’ ಸೂಚಿಸಿದ್ದಾರೆ. ಇಂತಹ ಸೂಚನೆ ಇದ್ದರೂ, ಕಂದಾಯ ಅಧಿಕಾರಿಗಳು ಪಹಣಿಯಲ್ಲಿ 6.5 ಗುಂಟೆ ಜಮೀನು ವೆಂಕಟಮ್ಮ ಅವರದ್ದೆಂದು ನಮೂದಿಸಿದ್ದಾರೆ.

‘ಕಂದಾಯ ಅಧಿಕಾರಿಗಳು ಬಿಬಿಎಂಪಿ ಎಆರ್‌ಒ ನೀಡಿದ ಖಾತಾ ಪರಿಗಣಿಸಿ ಪಹಣಿ ಬದಲಾಯಿಸಿದ್ದಾರೆ. ಬಿಡಿಎ ಇಇ ನೀಡಿದ ಪತ್ರದ ಮೇಲೆ ಬಿಬಿಎಂಪಿ ಎಆರ್‌ಒ ಖಾತಾ ನೀಡಿದ್ದಾರೆ. ಆದರೆ, ತಮ್ಮ ವ್ಯಾಪ್ತಿಯಲ್ಲಿಲ್ಲ ಪತ್ರ, ಹಿಂಬರಹಗಳನ್ನು ಈ ಅಧಿಕಾರಿಗಳು ಅಕ್ರಮವಾಗಿ ನೀಡಿದ್ದಾರೆ’ ಎಂದು ಸಾಮಾಜಿಕ ಕಾರ್ಯಕರ್ತ ಎಂ. ಮುನಿರಾಜು ದೂರಿದರು.

ಬಾಣಸವಾಡಿ ಸರ್ವೆ ನಂ. 261ರ 1 ಎಕರೆ 32 ಗುಂಟೆ ಪೂರ್ಣ ಭೂಸ್ವಾಧೀನದ ಅಂತಿಮ ಅಧಿಸೂಚನೆಯಲ್ಲಿದೆ ಎಂಬ ಬಿಡಿಎ ಹೆಚ್ಚುವರಿ ಭೂಸ್ವಾಧೀನಾಧಿಕಾರಿ ಟಿಪ್ಪಣಿ
ಬಾಣಸವಾಡಿ ಸರ್ವೆ ನಂ. 261ರ 1 ಎಕರೆ 32 ಗುಂಟೆ ಪೂರ್ಣ ಭೂಸ್ವಾಧೀನದ ಅಂತಿಮ ಅಧಿಸೂಚನೆಯಲ್ಲಿದೆ ಎಂಬ ಬಿಡಿಎ ಹೆಚ್ಚುವರಿ ಭೂಸ್ವಾಧೀನಾಧಿಕಾರಿ ಟಿಪ್ಪಣಿ

ನಿವೃತ್ತ ಐಎಎಸ್‌ ಅಧಿಕಾರಿ ಕೈವಾಡ!

‘ಬಿಬಿಎಂಪಿ ಆಯುಕ್ತರಾಗಿದ್ದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯೂ ಆಗಿದ್ದ ನಿವೃತ್ತ ಐಎಎಸ್‌ ಅಧಿಕಾರಿಯೊಬ್ಬರು ಬಿಡಿಎ ಬಿಬಿಎಂಪಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳ ಮೇಲೆ ಒತ್ತಡ ಹಾಕಿ ಬೆದರಿಕೆವೊಡ್ಡಿ ಜಮೀನನ್ನು ಬೇನಾಮಿ ಹೆಸರಿನಲ್ಲಿ ಕಬಳಿಸಿದ್ದಾರೆ. ವಾಣಿಜ್ಯ ಕಟ್ಟಡ ಕಾಮಗಾರಿ ಆರಂಭಿಸಿದ್ದು ಆ ಅಧಿಕಾರಿಯ ಬೆದರಿಕೆಯಿಂದ ಬಿಡಿಎ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ’ ಎಂದು ಮುನಿರಾಜು ದೂರಿದರು. ‘ಕ್ರಯಪತ್ರ ಪಹಣಿ ಖಾತಾಗಳು ಅಕ್ರಮವಾಗಿದ್ದರೂ ಬಿಡಿಎ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ಇದೀಗ ನಾಲ್ಕಾರು ತಿಂಗಳಿಂದ ಅಲ್ಲಿ ವಾಣಿಜ್ಯ ಕಟ್ಟಡ ನಿರ್ಮಿಸಲಾಗುತ್ತಿದೆ. ಈ ಬಗ್ಗೆ ಆಯುಕ್ತರು ಅಧ್ಯಕ್ಷರಿಗೆ ಮನವಿ ಸಲ್ಲಿಸಲಾಗಿದೆ. ಭೂಮಿಯನ್ನು ಬಿಡಿಎ ವಶಕ್ಕೆ ತೆಗೆದುಕೊಳ್ಳಬೇಕು. ಅಕ್ರಮವೆಸಗಿದ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲೂ ಆಗ್ರಹಿಸಲಾಗಿದೆ’ ಎಂದು ತಿಳಿಸಿದರು.

ಉಪ ಕಾರ್ಯದರ್ಶಿಯಿಂದ ಕ್ರಮವಾಗಿಲ್ಲ!

‘ಬಾಣಸವಾಡಿ ಗ್ರಾಮ ಸರ್ವೆ ನಂ. 261ರಲ್ಲಿ 1 ಎಕರೆ 32 ಗುಂಟೆ ಜಮೀನಿದ್ದು ಎಚ್‌ಆರ್‌ಬಿಆರ್‌ ಬಡಾವಣೆ ನಿರ್ಮಾಣಕ್ಕೆ ಪ್ರಾರಂಭಿಕ ಹಾಗೂ ಅಂತಿಮ ಅಧಿಸೂಚನೆಯಾಗಿದೆ. (ಎಚ್‌ಯುಡಿ/49/ಎಂಎನ್‌ಜೆ/78– ದಿನಾಂಕ 14.05.1980). ಬಿ.ಸಿ. ರಾಜುರತ್ನಮ್ಮ ಅವರು ಅಧಿಸೂಚಿತ ಖಾತೆದಾರರಾಗಿರುತ್ತಾರೆ. ಈ ಜಮೀನಿನ ಸ್ವಾಧೀನ 1984ರ ಮೇ 24ರಂದು ಪ್ರಾಧಿಕಾರದ ತಾಂತ್ರಿಕ ವಿಭಾಗಕ್ಕೆ ಹಸ್ತಾಂತರಿಸಲಾಗಿದೆ. ಜಮೀನು ಪ್ರಾಧಿಕಾರದ ಸ್ವತ್ತಾಗಿರುತ್ತದೆ. ಎಲ್‌.ಎ.ಸಿ ಕಡತದಲ್ಲಿರುವ ದಾಖಲೆಗಳಂತೆ ಈ ಸರ್ವೆ ನಂಬರಿನಲ್ಲಿ ಯಾವುದೇ ವಿಸ್ತೀರ್ಣವನ್ನು ಯಾರಿಗೂ ಬಿಟ್ಟಿರುವುದಿಲ್ಲ. ಹೆಚ್ಚುವರಿ ಭೂಸ್ವಾಧೀನಾಧಿಕಾರಿಗಳ ವಿಭಾಗದಿಂದ ಯಾವುದೇ ಹಿಂಬರಹ ನೀಡಿರುವುದಿಲ್ಲ’ ಎಂದು ಬಿಡಿಎ ಹೆಚ್ಚುವರಿ ಭೂಸ್ವಾಧೀನಾಧಿಕಾರಿ 2023ರ ಜುಲೈ 18ರಂದು ಟಿಪ್ಪಣಿ ಬರೆದಿದ್ದಾರೆ. ನಂತರ ಉಪ ಕಾರ್ಯದರ್ಶಿ–4 ಅವರು ಸ್ವಾಧೀನಕ್ಕೆ ಕ್ರಮ ಕೈಗೊಳ್ಳಬೇಕಿತ್ತು. ನಾಲ್ಕು ತಿಂಗಳಾದರೂ ಯಾವುದೇ ಪ್ರಕ್ರಿಯೆ ನಡೆದಿಲ್ಲ.

ಕೂಡಲೇ ವಶಕ್ಕೆ: ಆಯುಕ್ತ ಜಯರಾಮ್‌

‘ಬಾಣಸವಾಡಿ ಸರ್ವೆ ನಂ. 261ರಲ್ಲಿ ಬಿಡಿಎ ಸ್ವಾಧೀನಪಡಿಸಿಕೊಂಡಿರುವ ಜಾಗದಲ್ಲಿ ಖಾಸಗಿ ಒತ್ತುವರಿಯನ್ನು ಪರಿಶೀಲಿಸಿ ಕೂಡಲೇ ವಶಕ್ಕೆ ಪಡೆಯಲಾಗುವುದು. ಭೂಸ್ವಾಧೀನವಾಗಿಲ್ಲ ಎಂದು ಅಕ್ರಮವಾಗಿ ಪತ್ರ ನೀಡಿರುವ ಕಾರ್ಯಪಾಲಕ ಎಂಜಿನಿಯರ್‌ ಹಾಗೂ ಇದಕ್ಕೆ ಕಾರಣರಾದ ಎಲ್ಲರ ಮೇಲೂ ಶಿಸ್ತುಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಬಿಡಿಎ ಆಯುಕ್ತ ಎನ್‌. ಜಯರಾಮ್‌ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT