ಬೆಂಗಳೂರು: "ಇತ್ತೀಚೆಗಷ್ಟೇ ನಿಧನ ಹೊಂದಿದ ರಾಜ್ಯ ಹೈಕೋರ್ಟ್ ನ ಹಿರಿಯ ವಕೀಲ ಎ.ಜಿ.ಶಿವಣ್ಣ, ವಕೀಲರ ವೃತ್ತಿ ಮತ್ತು ಕಾನೂನಿನ ಬೆಳವಣಿಗೆಗೆ ನೀಡಿರುವ ಕೊಡುಗೆ ಅಪಾರ" ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರೂ ಆದ ಹೈಕೋರ್ಟ್ ನ ಹಿರಿಯ ವಕೀಲ ಎ.ಎಸ್.ಪೊನ್ನಣ್ಣ ಸ್ಮರಿಸಿದರು.
ಶಿವಣ್ಣನವರ ಆಪ್ತ ವಕೀಲ ಬಳಗ ಗುರುವಾರ ನಗರದಲ್ಲಿ ಆಯೋಜಿಸಿದ್ದ "ನುಡಿ-ನಮನ" ಕಾರ್ಯಕ್ರಮದಲ್ಲಿ ಮಾತನಾಡಿದ ಪೊನ್ನಣ್ಣ, ವೃತ್ತಿಯಲ್ಲಿ ಕಾಳಜಿ ಇದ್ದಂತಹ ವ್ಯಕ್ತಿಯಾಗಿದ್ದ ಶಿವಣ್ಣನವರು ನೇರ ನುಡಿಯ ವ್ಯಕ್ತಿತ್ವ ಹೊಂದಿದ್ದರು. ಅವರ ಆಶಯದಂತೆ ನಾವೆಲ್ಲಾ ವೃತ್ತಿ ಘನತೆ ಎತ್ತಿ ಹಿಡಿಯುವ ಕೆಲಸವನ್ನು ಮುಂದುವರಿಸಿಕೊಂಡು ಹೋಗಬೇಕಿದೆ" ಎಂದರು.
ಮಾಜಿ ಸಂಸದ ವಿ.ಎಸ್.ಉಗ್ರಪ್ಪ, "ನಂಬಿದ ತತ್ವ ಹಾಗೂ ಮೌಲ್ಯಗಳನ್ನು ಉಳಿಸಿಕೊಂಡು ಪಾಲಿಸಿಕೊಂಡು ಜೀವಿಸಿದ ಶಿವಣ್ಣ ವಕೀಲರಿಗೆ ಮಾದರಿಯಾಗಿದ್ದರು" ಎಂದರು.
ಕಾರ್ಯಕ್ರಮದಲ್ಲಿ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ, ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಪಿ.ವಿಶ್ವನಾಥ ಶೆಟ್ಟಿ ಹಾಗೂ ಬಿ. ಮನೋಹರ್, ಪಿಎಸ್ಐ ನೇಮಕಾತಿ ಹಗರಣ ಕುರಿತ ವಿಚಾರಣಾ ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ಬಿ.ವೀರಪ್ಪ, ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿದ್ದ ಎಂ.ಬಿ.ನರಗುಂದ, ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ ಹೆಗ್ಡೆ, ಮಾಜಿ ಅಧ್ಯಕ್ಷರುಗಳಾದ ಸಿ.ಎಸ್.ದ್ವಾರಕನಾಥ್ ಹಾಗೂ ಎಚ್.ಕಾಂತರಾಜ್, ಅಡ್ವೊಕೇಟ್ ಜನರಲ್ ಕೆ.ಶಶಿಕಿರಣ ಶೆಟ್ಟಿ, ಹೆಚ್ಚುವರಿ ಅಡ್ವೊಕೇಟ್ ಜನರಲ್ ವಿ.ಜಿ.ಭಾನುಪ್ರಕಾಶ್, ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ ರೆಡ್ಡಿ, ಮಾಜಿ ಅಧ್ಯಕ್ಷ ಜಗದೀಶ್, ಖಜಾಂಚಿ ಎಂ.ಟಿ. ಹರೀಶ್, ರಾಜ್ಯ ವಕೀಲರ ಪರಿಷತ್ ನ ಮಾಜಿ ಅಧ್ಯಕ್ಷ ಸಿ.ಆರ್.ಗೋಪಾಲಸ್ವಾಮಿ, ಸೇರಿದಂತೆ ಹಿರಿಯ-ಕಿರಿಯ ವಕೀಲರು ಹಾಜರಿದ್ದರು.