ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೈ’ ಹಿಡಿದ ಕುಸುಮಾ; ಆರ್‌.ಆರ್‌. ನಗರದ ಟಿಕೆಟ್‌ ಮೇಲೆ ಕಣ್ಣು

Last Updated 4 ಅಕ್ಟೋಬರ್ 2020, 11:36 IST
ಅಕ್ಷರ ಗಾತ್ರ

ಬೆಂಗಳೂರು: ಜೆಡಿಎಸ್‌ ಮುಖಂಡ ಹನುಮಂತರಾಯಪ್ಪ, ಅವರ ಮಗಳು ಕುಸುಮಾ ರವಿ ಮತ್ತು ಶಿರಾ ಕ್ಷೇತ್ರದ 90ಕ್ಕೂ ಹೆಚ್ಚು ವಕೀಲರು ಭಾನುವಾರ ಕಾಂಗ್ರೆಸ್‌ ಸೇರಿದರು. ಕುಸುಮಾ ಅವರು ಆರ್‌.ಆರ್‌. ನಗರ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯೂ ಆಗಿದ್ದಾರೆ.

ಕಳೆದ ಚುನಾವಣೆಯಲ್ಲಿ ಟಿಕೆಟ್ ಸಿಗದ ಕಾರಣಕ್ಕೆ ಹನುಮಂತರಾಯಪ್ಪ ಅವರು ಕಾಂಗ್ರೆಸ್‌ ತ್ಯಜಿಸಿ ಜೆಡಿಎಸ್ ಸೇರಿದ್ದರು. ಇದೀಗ, ಅವರು ಮಗಳನ್ನು ಕಾಂಗ್ರೆಸ್‌ ಪಕ್ಷದಿಂದ ಕಣಕ್ಕಿಳಿಸಲು ಮುಂದಾಗಿದ್ದಾರೆ.

ಈ ವೇಳೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ‘ಉಪ ಚುನಾವಣೆಗೆ ಈಗಾಗಲೇ ಪೂರ್ವ ತಯಾರಿ ಮಾಡಿದ್ದೇವೆ. ಆರ್‌.ಆರ್‌. ನಗರ ಮತ್ತು ಶಿರಾ ಕ್ಷೇತ್ರದ ಅಭ್ಯರ್ಥಿಗಳ ಹೆಸರನ್ನು ಹೈಕಮಾಂಡ್‌ಗೆ ಶಿಫಾರಸು ಮಾಡುತ್ತೇವೆ’ ಎಂದರು.

‘ಪಕ್ಷದ ಬಲವರ್ಧನೆಗಾಗಿ ಅನೇಕ ಸಿದ್ದತೆ ಮಾಡುತ್ತಿದ್ದೇವೆ. ಇಡೀ ತುಮಕೂರು ಜಿಲ್ಲೆ ಒಗ್ಗಟ್ಟಿನಿಂದ ಈ ಚುನಾವಣೆ ಎದುರಿಸಲಿದೆ. ಅನೇಕ ಹಿರಿಯ ನಾಯಕರನ್ನು ಕಾಂಗ್ರೆಸ್‌ಗೆ ಸೇರ್ಪಡೆ ಮಾಡಿಕೊಳ್ಳುತ್ತಿದ್ದೇವೆ. ಶಿರಾ ಚುನಾವಣೆ ಫಲಿತಾಂಶವನ್ನೇ ಬದಲಿಸುವ ನಾಯಕರನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಿದ್ದೇವೆ. ಮುಂದಿನ ದಿನಗಳಲ್ಲಿ ರಾಜ್ಯಕ್ಕೆ ಕಾಂಗ್ರೆಸ್ ಪಕ್ಷ ಮಾತ್ರ ಅನಿವಾರ್ಯ. ಶಿರಾ ಕ್ಷೇತ್ರದ 96 ವಕೀಲರು ಸೇರಿದಂತೆ ಅನೇಕ ಮುಖಂಡರು ಕಾಂಗ್ರೆಸ್ ಸೇರಿದ್ದಾರೆ’ ಎಂದರು.

‘ಉಪಚುನಾವಣೆಯನ್ನು ಗೆಲ್ಲುವುದಾಗಿ ಸರ್ಕಾರ ಘೋಷಣೆ ಮಾಡಿದೆ. ಬೇರೆ ಪಕ್ಷಗಳು ಯಾವ ರಣತಂತ್ರ ಮಾಡಿದರೂ ಗೆಲುವು ನಮ್ಮದೆ’ ಎಂದೂ ಅವರು ವಿಶ್ವಾಸ ವ್ಯಕ್ತಪಡಿಸಿದರು.

ಸಿದ್ದರಾಮಯ್ಯ ಮಾತನಾಡಿ, ‘ಕಳೆದ ಚುನಾವಣೆಯಲ್ಲಿ ರಾಜ್ಯದ ಜನ ಯಾರಿಗೂ ಬಹುಮತ ಕೊಡಲಿಲ್ಲ. ಬಿಜೆಪಿ ಹೆಚ್ಚು ಸ್ಥಾನಗಳನ್ನು ಪಡೆದ ಪಕ್ಷವಾಯಿತು. ಯಡಿಯೂರಪ್ಪ ಬಹುಮತ ಸಾಬೀತು ಮಾಡಲಾಗಲಿಲ್ಲ. ಹೀಗಾಗಿ ಸಮ್ಮಿಶ್ರ ಸರ್ಕಾರ ರಚನೆ ಮಾಡಿದೆವು. ಕುಮಾರಸ್ವಾಮಿಯನ್ನೇ ಮುಖ್ಯಮಂತ್ರಿ ಮಾಡಿದೆವು. ಆದರೆ, ಕುಮಾರಸ್ವಾಮಿಗೆ ಸರ್ಕಾರ ಉಳಿಸಿಕೊಳ್ಳಲು ಆಗಲಿಲ್ಲ. ಯಡಿಯೂರಪ್ಪನವರು ಅಧಿಕಾರ ದಾಹದಿಂದ ನೂರಾರು ಕೋಟಿ ಖರ್ಚು ಮಾಡಿದರು. ಒಬ್ಬೊಬ್ಬ ಶಾಸಕನಿಗೆ ₹ 25 ಕೋಟಿ‌ ಖರ್ಚು ಮಾಡಿ ರಾಜೀನಾಮೆ ಕೊಡಿಸಿದರು. ಆ ಮೂಲಕ, ಸರ್ಕಾರ ರಚಿಸಿದರು. ಅಧಿಕಾರದ ಆಸೆ, ಹಣದಾಸೆ ತೋರಿಸಿ ಸರ್ಕಾರ ಮಾಡಿದರು’ ಎಂದು ದೂರಿದರು.

‘ಅಂದು ಮುನಿರತ್ನ ರಾಜೀನಾಮೆ ಕೊಟ್ಟು ಬಿಜೆಪಿ ಸೇರಿದ್ದರು. ಆರ್.ಆರ್. ನಗರಕ್ಕೆ ಒಂದು ವರ್ಷ ಶಾಸಕರೇ ಇರಲಿಲ್ಲ. ಈಗ ಉಪ ಚುನಾವಣೆ ಘೋಷಣೆ ಆಗಿದೆ. ಜೆಡಿಎಸ್‌ನವರು ಇನ್ನೊಬ್ಬರ ಹೆಗಲ ಮೇಲೆ ಕುಳಿತು ಅಧಿಕಾರಕ್ಕೆ ಬರುತ್ತಾರೆ. ಅವರು ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರುವುದಿಲ್ಲ. ನನ್ನ ಪ್ರಕಾರ ಜೆಡಿಎಸ್ ಒಂದು ರಾಜಕೀಯ ಪಕ್ಷವೇ ಅಲ್ಲ’ ಎಂದರು.

‘ಉಪಚುನಾವಣೆಯಲ್ಲಿ ಜೆಡಿಎಸ್, ಬಿಜೆಪಿ ಎರಡು ಪಕ್ಷಗಳನ್ನು ಸೋಲಿಸಬೇಕು. ಜೆಡಿಎಸ್ ಸ್ವಂತ ಶಕ್ತಿ ಮೇಲೆ ಅಧಿಕಾರಕ್ಕೆ ಬರುವ ಸಾಮರ್ಥ್ಯ ಹೊಂದಿಲ್ಲ, ಬೇರೆಯವರ ಬೆಂಬಲ ಪಡೆದು ಸರ್ಕಾರ ಮಾಡಲು ಹವಣಿಸುವ ಪಕ್ಷ ಜೆಡಿಎಸ್. ಶಿರಾದಲ್ಲಿ ಕುಮಾರಸ್ವಾಮಿ ಯಾಕೆ ಕಣ್ಣೀರು ಹಾಕಿದ್ರೊ ನನಗೆ ಗೊತ್ತಾಗಲಿಲ್ಲ‌. ದೇವೇಗೌಡರ ಕಾಲದಿಂದಲೂ ಈ ನಾಟಕ ನಡೆದುಕೊಂಡು ಬಂದಿದೆ. ಜನರು ಇದಕ್ಕೆ ಮರುಳಾಗಬೇಡಿ’ ಎಂದರು.

‘ಜಯಚಂದ್ರ ಶಿರಾದಲ್ಲಿ ಉತ್ತಮ ಕೆಲಸ ಮಾಡಿದ್ದಾರೆ. ಜೆಡಿಎಸ್‌ನವರು ಬಿಜೆಪಿ ಜೊತೆ ಒಳ ಒಪ್ಪಂದ ಮಾಡಿಕೊಳ್ಳುತ್ತಾರೆ. ಕಾರ್ಯಕರ್ತರು ಈ ಬಗ್ಗೆ ಎಚ್ಚರಿಕೆಯಿಂದ ಕೆಲಸ ಮಾಡಬೇಕು’ ಎಂದರು.‌

‘ಯಡಿಯೂರಪ್ಪ ಬಹಳ ಸಾಹಸ ಮಾಡಿ ನಾಲ್ಕನೇ ಬಾರಿ ಸ್ವಲ್ಪ ದಿವಸ ಉಳಿದುಕೊಳ್ಳುವ ಮುಖ್ಯಮಂತ್ರಿ ಆಗಿದ್ದಾರೆ. ಒಂದು ವರ್ಷ ನಾಲ್ಕು ತಿಂಗಳು ಎಂತಹ ಆಡಳಿತ ಕೊಟ್ಟಿದ್ದಾರೆ ಎಂಬುದು ಗೊತ್ತಿದೆ. ಕೋವಿಡ್‌ನಿಂದ ಜನ ಸಾಯುತ್ತಿದ್ದಾರೆ. ಆರ್ಥಿಕ ವ್ಯವಸ್ಥೆ ಬುಡಮೇಲಾಗಿದೆ. ಇಂಥ ಕಷ್ಟದ ಸಮಯದಲ್ಲಿ ಕೊರೊನಾ ‌ಹೆಸರಿನಲ್ಲೂ ಭ್ರಷ್ಟಾಚಾರ ಮಾಡುತ್ತಿದ್ದಾರೆ. ಇದಕ್ಕಿಂತ ದುರಂತ ಇದೆಯಾ. ಪಿಪಿಇ ಕಿಟ್, ಮಾಸ್ಕ್ ಖರೀದಿಯಲ್ಲಿ ದುಡ್ಡು ಹೊಡೆದಿದ್ದಾರೆ. ಆಂಬುಲೆನ್ಸ್ ಬಾಡಿಗೆ ಕೊಡುವ ವಿಷಯದಲ್ಲಿ ದುಡ್ಡು ಮಾಡುತ್ತಿದ್ದಾರೆ. ವರ್ಗಾವಣೆಗೂ ದುಡ್ಡು, ಸಣ್ಣ ಪುಟ್ಟ ಕೆಲಸಕ್ಕೂ ದುಡ್ಡು ಕೊಡಬೇಕು. ನಾನು ಇಂಥ ಭ್ರಷ್ಟ ಸರ್ಕಾರವನ್ನು ನೋಡಿಲ್ಲ’ ಎಂದರು

ಶಿರಾ ಕ್ಷೇತ್ರದ ಕಾಂಗ್ರೆಸ್ ‌ಅಭ್ಯರ್ಥಿ ಟಿ.ಬಿ. ಜಯಚಂದ್ರ, ಮಧುಗಿರಿ ರಾಜಣ್ಣ ಸೇರಿದಂತೆ ಹಲವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT