ಬೆಂಗಳೂರು: ‘ಕಾಲೇಜು ಶಿಕ್ಷಣದಷ್ಟೇ ಬದುಕಿನ ಅನುಭವದ ಶಿಕ್ಷಣವನ್ನು ಪಡೆಯುವ ಮೂಲಕ ವಿದ್ಯಾರ್ಥಿಗಳು ಮುಂದೆ ಎದುರಾಗುವ ನೈಜ ಸಮಸ್ಯೆಗಳನ್ನು ಎದುರಿಸಲು ಸಿದ್ಧರಾಗಬೇಕು’ ಎಂದು ಟ್ಯಾಕ್ಸಿಫಾರ್‌ಶ್ಯೂರ್ ಮತ್ತು ಕೂ ಸಂಸ್ಥೆಯ ಸ್ಥಾಪಕ ಅಪ್ರಮೇಯ ರಾಧಾಕೃಷ್ಣ ಸಲಹೆ ನೀಡಿದರು.
ಬುಧವಾರ ನಡೆದ ರಾಮಯ್ಯ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನ 28ನೇ ವರ್ಷದ ಪದವಿ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗೊಂದಲ ಮತ್ತು ಅನಿಶ್ಚಿತತೆಯಿಂದ ಕೂಡಿದ ಜಗತ್ತಿನಲ್ಲಿ ಎದುರಾಗುವ ಸಮಸ್ಯೆಗಳ ಬಗ್ಗೆ ತರಗತಿಗಳಲ್ಲಿ ಹೇಳಿಕೊಡುವುದಿಲ್ಲ. ಅಂಥ ಪರಿಸ್ಥಿತಿಯನ್ನು ಎದುರಿಸಿ ಮುನ್ನುಗ್ಗುವ ಛಾತಿಯನ್ನು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
‘ನಾನು ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡು ಟ್ಯಾಕ್ಸಿಫಾರ್‌ಶ್ಯೂರ್ ಆರಂಭಿಸಿರಲಿಲ್ಲ. ಏರೋಪ್ಲೇನ್, ಬಸ್ ಮತ್ತು ಟ್ರೈನ್‌ಗಳಿಗೆ ಅಗ್ರಿಗೇಟರ್‌ಗಳಿದ್ದ ಹಾಗೆಯೇ ಕಾರ್‌ಗಳಿಗೂ ಮಾಡೋಣ ಎಂದು ಪ್ರಾರಂಭಿಸಿದ್ದೆ. ನಮ್ಮ ಯೋಜನೆ ಗ್ಲಾಮರಸ್ ಆಗಿರಲಿಲ್ಲ, ಆದರೆ ಜನರ ಸಾರಿಗೆ ಸಮಸ್ಯೆಯನ್ನು ಪರಿಹರಿಸುವ ಉದ್ದೇಶ ಹೊಂದಿತ್ತು. ನಮ್ಮ ಮೇಲೆ ನಮಗೆ ನಂಬಿಕೆ ಇದ್ದಾಗ ಯೋಜನೆಗಳು ಯಶಸ್ವಿಯಾಗುತ್ತದೆ ಎಂಬುದಕ್ಕೆ ಸಾಕ್ಷಿಯಾಗಿ ನಿಮ್ಮ ಮುಂದೆ ನಿಂತಿದ್ದೇನೆ’ ಎಂದು ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.
‘ಸೋಷಿಯಲ್ ಮೀಡಿಯಾವನ್ನು ಅಮೆರಿಕದ ಕಂಪನಿಗಳು ಆಳುತ್ತಿವೆ. ಅದರಿಂದ ಪ್ರೇರಣೆ ಪಡೆದು ನಾವು ಭಾರತ ಮೂಲದ ಕೂ ಸಂಸ್ಥೆಯನ್ನು ಸ್ಥಾಪಿಸಿದೆವು. ಇದೊಂದು ಸವಾಲಿನ ಪ್ರಯಾಣ. ಉದ್ಯಮಶೀಲತೆ ಎಂದಾಗ ವ್ಯವಹಾರ ಮಾತ್ರ ಮುಖ್ಯವಲ್ಲ, ಉದ್ದೇಶವೂ ಅಗತ್ಯ’ ಎಂದರು.
ಗೋಕುಲ ಎಜುಕೇಶನ್ ಫೌಂಡೇಶನ್‌ನ ಮುಖ್ಯ ಶೈಕ್ಷಣಿಕ ಸಲಹೆಗಾರ ಕರಿಸಿದ್ದಪ್ಪ ಮಾತನಾಡಿ, ‘ಪ್ರತಿ ವಿದ್ಯಾರ್ಥಿಯು ವಿಭಿನ್ನವಾಗಿ ರೂಪುಗೊಳ್ಳಬೇಕು. ದೇಶಕ್ಕೆ ಹೆಮ್ಮೆ ತರುವ ಪ್ರಜೆಯಾಗಿ ಬಾಳಬೇಕು’ ಎಂದು ಹೇಳಿದರು.
292 ವಿದ್ಯಾರ್ಥಿಗಳಿಗೆ ಬ್ಯುಸಿನೆಸ್ ಮ್ಯಾನೇಜ್‌ಮೆಂಟ್‌ನಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಪದವಿ ಪ್ರದಾನ ಮಾಡಲಾಯಿತು.
ಗೋಕುಲ ಎಜುಕೇಶನ್ ಫೌಂಡೇಶನ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಚ್.ವಿ. ಪಾರ್ಶ್ವನಾಥ , ಜೆಇಎಫ್ ಡಾಕ್ಟರಲ್ ಕಾರ್ಯಕ್ರಮಗಳ ನಿರ್ದೇಶಕ ಎ.ಎಚ್. ರಾಜಾಸಾಬ್, ಸಂಸ್ಥೆಯ ನಿರ್ದೇಶಕಿ ಮಾನಸಾ ನಾಗಭೂಷಣಂ, ರಿಜಿಸ್ಟ್ರಾರ್ (ಮೌಲ್ಯಮಾಪನ) ಸವಿತಾ ರಾಣಿ ರಾಮಚಂದ್ರನ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.