ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾ ಕಾಲೇಜ್‌ನಲ್ಲಿ ಸ್ಥಳೀಯರಿಗೆ ಶೇ 25 ಸೀಟು: ಸಿಎಂಗೆ ಜಿ.ಸಿ.ಚಂದ್ರಶೇಖರ್‌ ಪತ್ರ

Last Updated 30 ಸೆಪ್ಟೆಂಬರ್ 2020, 19:47 IST
ಅಕ್ಷರ ಗಾತ್ರ

ಬೆಂಗಳೂರು: ರಾಷ್ಟ್ರೀಯ ಕಾನೂನು ಶಾಲೆಯಲ್ಲಿ ಸ್ಥಳೀಯ ವಿದ್ಯಾರ್ಥಿಗಳಿಗೆ ಶೇ 25ರಷ್ಟು ಪ್ರಾತಿನಿಧ್ಯ ಮೀಸಲಿಡಬೇಕು ಎಂಬ ರಾಜ್ಯ ಸರ್ಕಾರದ ಆದೇಶ ಅನುಷ್ಠಾನಕ್ಕೆ ಹೈಕೋರ್ಟ್‌ ತಡೆ ನೀಡಿರುವ ಬಗ್ಗೆ ಕಾನೂನು ತಜ್ಞರ ಜೊತೆ ಸಮಾಲೋಚಿಸಿ ಕನ್ನಡಿಗರಿಗೆ ನ್ಯಾಯ ಒದಗಿಸಬೇಕು’ ಎಂದು ಆಗ್ರಹಿಸಿ ಮುಖ್ಯಮಂತ್ರಿಗೆ ರಾಜ್ಯಸಭೆ ಕಾಂಗ್ರೆಸ್‌ ಸದಸ್ಯ ಜಿ.ಸಿ. ಚಂದ್ರಶೇಖರ್‌ ಪತ್ರ ಬರೆದಿದ್ದಾರೆ.

‘ಶೇ 25 ಸೀಟು ಮೀಸಲಿಡುವಂತೆ ಕಳೆದ ಸಂಸತ್‌ ಅಧಿವೇಶನದಲ್ಲಿ ನಾನು ಒತ್ತಾಯಿಸಿದ್ದೆ. ಶಿಕ್ಷಣ ವ್ಯವಸ್ಥೆ ಇತ್ತೀಚೆಗೆ ಕೇಂದ್ರೀಕರಣವಾಗುತ್ತಿದ್ದು, ಇದು ಒಕ್ಕೂಟ ವ್ಯವಸ್ಥೆಗೆ ಮಾರಕ. ಐಐಟಿ, ಐಐಎಂ, ಏಮ್ಸ್, ಎನ್‌ಐಡಿ, ಐಐಐಡಿ, ಐಸಿಎಆರ್ ಮತ್ತಿತರ ಕೋರ್ಸ್‌ಗಳ ಪ್ರವೇಶಕ್ಕೆ ರಾಷ್ಟ್ರೀಯ ಮಟ್ಟದಲ್ಲಿ ಪರೀಕ್ಷೆಗಳು ನಡೆಯುವುದರಿಂದ ನಗರ ಪ್ರದೇಶದ ವಿದ್ಯಾರ್ಥಿಗಳ ಜತೆ ಹಳ್ಳಿಯ ವಿದ್ಯಾರ್ಥಿಗಳಿಗೆ ಸ್ಪರ್ಧಿಸಲು ಕಷ್ಟವಾಗುತ್ತಿದೆ. ಹೀಗಾಗಿ ಅವಕಾಶ ವಂಚಿತರಾಗುತ್ತಿದ್ದಾರೆ’ ಎಂದೂ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

‘ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆಯಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿಗೆ 160 ಸೀಟುಗಳಿದ್ದರೂ ಕಳೆದ ವರ್ಷ 8 ಸೀಟು ಮಾತ್ರ ಸ್ಥಳೀಯ ವಿದ್ಯಾರ್ಥಿಗಳಿಗೆ ಸಿಕ್ಕಿದೆ. ಧಾರವಾಡದ ಐಐಟಿಯಲ್ಲಿ 120 ಸೀಟ್‌ ಇದ್ದರೂ 6 ಸೀಟ್‌ ಸ್ಥಳೀಯರಿಗೆ ಸಿಕ್ಕಿದೆ. ಬೇರೆ ರಾಜ್ಯಗಳಲ್ಲಿ ಶೇ 25ರಷ್ಟು ಸೀಟು ಸ್ಥಳೀಯರಿಗೆ ಮೀಸಲಿಡಲಾಗಿದೆ. ಹೀಗಾಗಿ, ಈ ವಿಷಯದಲ್ಲಿ ಕಾನೂನು ತಜ್ಞರ ಸಮಿತಿ ರಚಿಸಿ, ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣ ಇತ್ಯರ್ಥವಾಗುವಂತೆ ಮಾಡಬೇಕು’ ಎಂದೂ ಪತ್ರದಲ್ಲಿ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT