ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸಾಪಗೆ ‘ಶ್ರೇಷ್ಠತೆ’ಯ ರೋಗ ವಕ್ಕರಿಸಿರುವುದು ಅಪಾಯ: ಸಾಹಿತಿಗಳ ಕಳವಳ

ಸಾಹಿತಿಗಳ ಕಳವಳ
Last Updated 16 ಫೆಬ್ರುವರಿ 2022, 5:30 IST
ಅಕ್ಷರ ಗಾತ್ರ

ಬೆಂಗಳೂರು: ‘ಕನ್ನಡ ಸಾಹಿತ್ಯ ಪರಿಷತ್ತಿಗೆ (ಕಸಾಪ) ಶ್ರೇಷ್ಠತೆಯ ರೋಗ ವಕ್ಕರಿಸಿದೆ. ಇದು ಕನ್ನಡ, ಕನ್ನಡಿಗರು ಹಾಗೂ ಕರ್ನಾಟಕಕ್ಕೆ ಬಹುದೊಡ್ಡ ಅಪಾಯ ತಂದೊಡ್ಡಲಿದೆ. ಕನ್ನಡಿಗರು ಎಚ್ಚೆತ್ತುಕೊಳ್ಳದಿದ್ದರೆ ಕಸಾಪ, ಶ್ರೇಷ್ಠತೆಯ ವ್ಯಸನದ ಮತಾಂಧ ಸಂಘಟನೆಯ ಕಬ್ಜಾ ಆಗುವ ಅಪಾಯ ಎದುರಾಗಲಿದೆ’ ಎಂದು ಸಾಹಿತಿಗಳು ಕಳವಳ ವ್ಯಕ್ತಪಡಿಸಿದ್ದಾರೆ.

ಎಸ್.ಜಿ.ಸಿದ್ಧರಾಮಯ್ಯ‌,ಬಂಜಗೆರೆ ಜಯಪ್ರಕಾಶ್, ಚಂದ್ರಶೇಖರ್‌ ತಾಳ್ಯ, ಹಿ.ಶಿ.ರಾಮಚಂದ್ರೇಗೌಡ, ಕಾಳೇಗೌಡ ನಾಗವಾರ,ಪುರುಷೋತ್ತಮ ಬಿಳಿಮಲೆ,ರೂಪ ಹಾಸನ್,ರುದ್ರಪ್ಪ ಹನಗವಾಡಿ, ಬಿ.ಟಿ.ಲಲಿತಾನಾಯಕ್‌,ವಸುಂಧರಾ ಭೂಪತಿ, ನಲ್ಲೂರು ಪ್ರಸಾದ್‌,ಕೆ.ಪುಟ್ಟಸ್ವಾಮಿ ಹಾಗೂ ಕೆ.ಷರೀಫ ಅವರು ಈ ಕುರಿತು ಪತ್ರದ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘1 ಕೋಟಿ ಸದಸ್ಯತ್ವ ಮಾಡಹೊರಟಿರುವುದರ ಹಿಂದಿನ ಮತೀಯ ರಾಜಕಾರಣದ ಸಂಚು ಎಲ್ಲರಿಗೂ ತಿಳಿದಿದೆ. ಸದಸ್ಯರ ಮೇಲೆ ಕ್ರಮ ತೆಗೆದುಕೊಳ್ಳುವ ಅಧಿಕಾರ ಕೇಂದ್ರದ ಅಧ್ಯಕ್ಷರ ಪರಮಾಧಿಕಾರದಂತೆ ನಡೆಯ ಹೊರಟಿರುವುದು ಪ್ರಜಾಪ್ರಭುತ್ವದ ಕಗ್ಗೊಲೆಯ ಕ್ರಮ. ಸರ್ವಾಧಿಕಾರಿ ಧೋರಣೆಯ ಅಹಂಕಾರದ ವರ್ತನೆ ಸಾಹಿತ್ಯ ಲೋಕದ ಸಹತತ್ವದ ದಾರಿಯ ನಡೆಯಲ್ಲ’ ಎಂದು ಟೀಕಿಸಿದ್ದಾರೆ.

‘ಮಹೇಶ ಜೋಷಿ ಅವರು ಪಕ್ಷವೊಂದರ ಬೆಂಬಲ ಪಡೆದು ಕಸಾಪ ಚುನಾವಣೆ ಎದುರಿಸಿದಾಗಲೇ ಪರಿಷತ್ತಿನ ಸ್ವಾಯತ್ತತೆಯ ಘನತೆಗೆ ಧಕ್ಕೆ ಬಂದಿತು. ಅಧಿಕಾರ ಸ್ವೀಕರಿಸಿದಾಗಲೇ ಕಸಾಪ ರೂವಾರಿ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರ ಜನಮುಖಿ ಆಶಯ ಪರಿಷತ್ತಿನಿಂದ ಹೊರ ಬಂದಿತು. ಈಗ ಅಲ್ಲಿ ಸಾಹಿತ್ಯ ವಿರೋಧಿ ಸರ್ವಾಧಿಕಾರಿ ಧೋರಣೆ ನೆಲೆಸಿದೆ. ಸ್ವಾಯತ್ತತೆಯನ್ನು ಗೌರವಿಸಿದಂತೆ ಗೆದ್ದು ಬಂದಿರುವ ಜಿಲ್ಲಾಧ್ಯಕ್ಷರುಗಳನ್ನು ಗಣನೆಗೆ ತೆಗೆದುಕೊಳ್ಳದೆ ದಿನಕ್ಕೊಂದು ಹೇಳಿಕೆ ನೀಡಲಾಗುತ್ತಿದೆ’ ಎಂದು ದೂರಿದ್ದಾರೆ.

‘ಜನಪದ ಪರಂಪರೆಯ ವೃತ್ತಿಗಾಯಕರನ್ನು, ಜನಪದ ಕಲಾವಿದರನ್ನು ಸಾಹಿತ್ಯ ಪರಿಷತ್ತಿನಿಂದ ಹೊರಗಿಟ್ಟರೆ ಅದು ಕನ್ನಡ ಪರಂಪರೆಗೆ ಮಾಡುವ ದ್ರೋಹ. ಅನಕ್ಷರಸ್ಥರನ್ನು ಸದಸ್ಯರನ್ನಾಗಿ ಸ್ವೀಕರಿಸದ ಸಾಹಿತ್ಯ ಪರಿಷತ್ತಿನ ಯಾವ ವೇದಿಕೆಗಳಿಗೂ ಜನಪದ ಸಾಹಿತಿಗಳು, ಜನಪದ ಕಲಾವಿದರು ಭಾಗವಹಿಸದಂತೆ ಬಹಿಷ್ಕಾರ ಹಾಕಿದರೆ ಗತಿಯೇನು?’ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT