ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

17ನೇ ರ‍್ಯಾಂಕ್‌ಗೆ ಆಕ್ಷೇಪ: ಮೌಲ್ಯಮಾಪನ ವಿಧಾನ ಸರಿ ಇಲ್ಲ ಎಂದು ಸರ್ಕಾರದ ತಕರಾರು

Last Updated 23 ಸೆಪ್ಟೆಂಬರ್ 2020, 23:52 IST
ಅಕ್ಷರ ಗಾತ್ರ

ಬೆಂಗಳೂರು: ಸುಲಲಿತ ಉದ್ದಿಮೆ ವಹಿವಾಟಿಗೆ (ಇಒಡಿಬಿ) ಸಂಬಂಧಿಸಿದ ರ‍್ಯಾಂಕಿಂಗ್‌ನಲ್ಲಿ (ಶ್ರೇಯಾಂಕ) ಕರ್ನಾಟಕ 8ನೇ ಸ್ಥಾನದಿಂದ 17ನೇ ಸ್ಥಾನಕ್ಕೆ ಕುಸಿದಿರುವುದಕ್ಕೆ ಉದ್ಯಮ ವಲಯ ದಿಗ್ಬ್ರಮೆ ವ್ಯಕ್ತಪಡಿಸಿದ ಬೆನ್ನಲ್ಲೆ, ಈ ರ‍್ಯಾಂಕಿಂಗ್‌ಗೆ ಆಕ್ಷೇಪ ವ್ಯಕ್ತಪಡಿಸಿರುವ ರಾಜ್ಯ ಸರ್ಕಾರ, ಕೇಂದ್ರಕ್ಕೆ ಪತ್ರ ಬರೆದಿದೆ.‌

ಕೇಂದ್ರ ಸರ್ಕಾರದ ಕೈಗಾರಿಕಾ ನೀತಿ ಮತ್ತು ಉತ್ತೇಜನಾ ಇಲಾಖೆ (ಡಿಡಿಐಪಿ) ಈ ರ‍್ಯಾಂಕ್‌ ನೀಡಿತ್ತು.

‘ವ್ಯವಹಾರಕ್ಕೆ ಸಂಬಂಧಿಸಿದ ಎಲ್ಲ 187 ಸುಧಾರಣಾ ಕ್ರಮಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದ 6 ರಾಜ್ಯಗಳಲ್ಲಿ ಕರ್ನಾಟಕವೂ ಒಂದು. ಆದರೂ, 17ನೇ ಶ್ರೇಯಾಂಕ ನೀಡಲು ಕಾರಣ ಏನು’ ಎಂದೂ ಪತ್ರದಲ್ಲಿ ರಾಜ್ಯ ಸರ್ಕಾರ ಪ್ರಶ್ನಿಸಿದೆ.

ಕೇಂದ್ರ ಸಚಿವ ಪಿಯೂಷ್‌‌ ಗೋಯಲ್‌ ಅವರಿಗೆ ಪತ್ರ ಬರೆದಿರುವ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್‌, ‘ಈ ಶ್ರೇಯಾಂಕ ಜಾಗತಿಕ ಮಟ್ಟದಲ್ಲಿ ಹೂಡಿಕೆದಾರ ಸಮೂಹಕ್ಕೆ ನಕಾರಾತ್ಮಕ ಸಂದೇಶ ರವಾನಿಸಲಿದೆ. ರಾಜ್ಯದ ವರ್ಚಸ್ಸಿನ ಮೇಲೆ ಪರಿಣಾಮ ಬೀಳುತ್ತದೆ. ಹೂಡಿಕೆದಾರರನ್ನು ಆಕರ್ಷಿಸುವ ಪ್ರಯತ್ನಗಳಿಗೂ ಅಡ್ಡಿಯಾಗಲಿದೆ’ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

‘ಕೆಲವು ರಾಜ್ಯಗಳು ಸುಧಾರಣಾ ಕ್ರಮಗಳನ್ನು ಜಾರಿಗೊಳಿಸಿಲ್ಲ. ಕೆಲವು ರಾಜ್ಯಗಳು ಒಂದಿಷ್ಟು ಕ್ರಮ ಕೈಗೊಂಡಿವೆ. ಆದರೂ ಕರ್ನಾಟಕಕ್ಕಿಂತ ಉತ್ತಮ ರ‍್ಯಾಂಕ್ ಪಡೆದಿವೆ’ ಎಂದೂ ಶೆಟ್ಟರ್‌ ಆಕ್ಷೇಪಿಸಿದ್ದಾರೆ.

‘ವಿವಿಧ ರಾಜ್ಯಗಳ ಸಾಮರ್ಥ್ಯವನ್ನು ಮರು ಮೌಲ್ಯಮಾಪನ ಮಾಡಿ, ಪರಿಷ್ಕೃತ ಶ್ರೇಯಾಂಕ ಪ್ರಕಟಿಸಬೇಕು. ಪರಿಮಾಣಾತ್ಮಕ ಹಾಗೂ ಗುಣಮಟ್ಟದ ಮಾನದಂಡಗಳನ್ನು ಪರಿಗಣಿಸಿ ಮತ್ತು ಎಲ್ಲ ರಾಜ್ಯಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮೌಲ್ಯಮಾಪನ ಪದ್ಧತಿಯನ್ನೇ ಮರುಪರಿಶೀಲಿಸಬೇಕು’ ಎಂದಿದ್ದಾರೆ.

‘2020ರ ಮಾರ್ಚ್ ನಂತರ ಹಲವು ಮಹತ್ವದ ಸುಧಾರಣಾ ಕ್ರಮಗಳನ್ನು ಜಾರಿಗೊಳಿಸಿದ್ದು, ಅದು ರ‍್ಯಾಂಕಿಂಗ್‌‌ನ ಮೌಲ್ಯಮಾಪನ ಸಂದರ್ಭದಲ್ಲಿ ಪರಿಗಣನೆಯಾಗಿಲ್ಲ’ ಎಂದೂ ಹೇಳಿದ್ದಾರೆ.

‘2019ರಅಕ್ಟೋಬರ್‌ನಿಂದ 2020ರ ಮಾರ್ಚ್‌ವರೆಗೆ ಅತಿ ಹೆಚ್ಚು ವಿದೇಶಿ ನೇರ ಹೂಡಿಕೆ (ಎಫ್‌ಡಿಐ) ಆಕರ್ಷಿಸಿದ ರಾಜ್ಯಗಳ ಸಾಲಿನಲ್ಲಿ ರಾಜ್ಯ 2ನೇ ಸ್ಥಾನದಲ್ಲಿದೆ. ಈ ಅವಧಿಯಲ್ಲಿ ರಾಜ್ಯ, ₹ 31,676 ಕೋಟಿ ಎಫ್‌ಡಿಐ ಹೂಡಿಕೆ ಆಕರ್ಷಿಸಿದ್ದರೆ, ಮಹಾರಾಷ್ಟ್ರ (₹ 52,073 ಕೋಟಿ) ಮೊದಲ ಸ್ಥಾನದಲ್ಲಿದೆ. 2016 ರಿಂದ ಈಚೆಗಿನ ಹೂಡಿಕೆ ಪ್ರಸ್ತಾಪಗಳಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ’ ಎಂದೂ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT