ಭಾನುವಾರ, ಫೆಬ್ರವರಿ 23, 2020
19 °C
6 ಸಾವಿರ ಗ್ರಾಮ ಪಂಚಾಯಿತಿ ಗ್ರಂಥಾಲಯ ಮೇಲ್ವಿಚಾರಕರು

ಗ್ರಂಥಾಲಯ ಮೇಲ್ವಿಚಾರಕರಿಗೆ 38 ವರ್ಷಗಳಿಂದ ಕನಿಷ್ಠ ವೇತನ ಮರೀಚಿಕೆ

ಎಂ.ಜಿ.ಬಾಲಕೃಷ್ಣ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ರಾಜ್ಯದ ಆರು ಸಾವಿರ ಗ್ರಾಮ ಪಂಚಾಯಿತಿಗಳಲ್ಲಿರುವ ಗ್ರಂಥಾಲಯ ಮೇಲ್ವಿಚಾರಕರು ಕನಿಷ್ಠ ವೇತನಕ್ಕಾಗಿ 32 ವರ್ಷಗಳಿಂದ ಕಾಯುತ್ತಿದ್ದು, ನೂರಾರು ಮಂದಿ ಇದೇ ಕೊರಗಿನಲ್ಲಿ ವೃದ್ಧಾಪ್ಯ ಜೀವನಕ್ಕೆ ಜಾರಿದ್ದಾರೆ.

1988ರಲ್ಲಿ ಗ್ರಂಥಾಲಯ ಆರಂಭವಾದಾಗ ಇದ್ದ ಗೌರವಧನ ₹300. ಮೇಲ್ವಿಚಾರಕರು 10 ವರ್ಷ ಅದೇ ಗೌರವಧನದಲ್ಲಿ ಜೀವನ ಸಾಗಿಸಿದ್ದರು. ಬರಬರುತ್ತ ಸ್ವಲ್ಪ ಸ್ವಲ್ಪವೇ ಹೆಚ್ಚಳವಾಗಿ ಇದೀಗ ₹7 ಸಾವಿರಕ್ಕೆ ಬಂದು ನಿಂತಿದೆ.

‘ಕನಿಷ್ಠ ಸಂಬಳ ₹13 ಸಾವಿರ ನೀಡಿ ಎಂಬ ಕಾರ್ಮಿಕ ಇಲಾಖೆಯ ಸುತ್ತೋಲೆಯನ್ನು ಶಿಕ್ಷಣ ಇಲಾಖೆ ಹಿಂದೆಗೆದುಕೊಂಡಿದ್ದು, ಮೇಲ್ವಿಚಾರಕರ ಕೆಲಸದ ಅವಧಿಯನ್ನು ಇದೀಗ ನಾಲ್ಕು ಗಂಟೆಗೆ ಇಳಿಸಿ, ₹7 ಸಾವಿರ ಗೌರವಧನವನ್ನೇ ಮುಂದುವರಿಸುವ ಜಾಣತನ ತೋರಿಸಿದೆ. ನಾಲ್ಕು ಗಂಟೆಯಾದರೂ ನಾವು ದಿನವಿಡೀ ಸಮಯ ವ್ಯರ್ಥ ಮಾಡಬೇಕಾಗಿದೆ. ನಮ್ಮ ಜೀವನಕ್ಕೆ ಭದ್ರತೆ ಇಲ್ಲವಾಗಿದೆ’ ಎಂದು ಹೊನ್ನಾವರದ ಗ್ರಂಥಪಾಲಕ ಜಿ.ಕೆ.ಗೌಡ ಅಳಲು ತೋಡಿಕೊಂಡರು.

‘ಯಾವುದೇ ಕೆಲಸ ಇರಲಿ, ಮೂಲ ವೇತನ ಕೊಡಲೇಬೇಕು ಎಂದು ಸುಪ್ರೀಂ ಕೋರ್ಟ್‌ 2017 ಮತ್ತು 2018ರಲ್ಲಿ ಪ್ರತ್ಯೇಕ ತೀರ್ಪುಗಳಲ್ಲಿ ಹೇಳಿದೆ. ಆದರೂ ಜಾರಿಯಾಗಿಲ್ಲ’ ಎಂದು ಗ್ರಾಮ ಪಂಚಾಯಿತಿ ಗ್ರಂಥಾಲಯ ಮೇಲ್ವಿಚಾರಕರ ಸಂಘದ ಅಧ್ಯಕ್ಷ ಸತ್ಯನಾರಾಯಣ ರಾವ್‌ ಹೇಳಿದರು.

‘ಗ್ರಂಥಾಲಯಗಳ ನಿರ್ವಹಣೆಯ ಹೊಣೆ ಶಿಕ್ಷಣ ಇಲಾಖೆಯಿಂದ ಗ್ರಾಮೀಣಾಭಿವೃದ್ಧಿ ಇಲಾಖೆಯ ಹೆಗಲಿಗೇರಿದೆ, ಇಲಾಖೆ ಶೀಘ್ರ ಕನಿಷ್ಠ ವೇತನ ಕೊಡಿಸುವತ್ತ ಗಮನ ಹರಿಸಬೇಕು’ ಎಂದು ಒತ್ತಾಯಿಸಿದರು.

ಹೆಗ್ಗಳಿಕೆ ಏಕೆ, ಮುಚ್ಚಿಬಿಡಿ: ‘ದೇಶದಲ್ಲಿ ಕೇರಳ, ಕರ್ನಾಟಕದಲ್ಲಿ ಮಾತ್ರ ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಗ್ರಂಥಾಲಯ ಇದೆ ಎಂಬ ಹೆಗ್ಗಳಿಕೆ ಇದೆ. ಆದರೆ ರಾಜ್ಯದಲ್ಲಿ ಗ್ರಂಥಪಾಲಕರು ಮಾತ್ರ ದಿನಾ ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ. ಒಂದು ವೇಳೆ ಕನಿಷ್ಠ ವೇತನ ಕೊಡದಿದ್ದರೆ ಗ್ರಂಥಾಲಯಗಳನ್ನು ಮುಚ್ಚಿಬಿಡಿ, ಬೇರೆ ಎಲ್ಲಾದರೂ ಹೊಟ್ಟೆ ತುಂಬ ಉಣ್ಣುವುದಕ್ಕಾಗಿ ಕೆಲಸವನ್ನಾದರೂ ಮಾಡಬಹುದು’ ಎಂದು ಹಲವಾರು ಗ್ರಂಥಪಾಲಕರು ಅಳಲು ತೋಡಿಕೊಂಡರು.

ವಿಧಾನಸೌಧದಲ್ಲಿ ಆತ್ಮಹತ್ಯೆಗೆ ಯತ್ನ

‘ವಿಧಾನಸೌಧದ ಮೂರನೇ ಮಹಡಿಯಲ್ಲಿ 2019ರ ಜೂನ್‌ 24ರಂದು ಆರ್.ರೇವಣ್ಣ ಕುಮಾರ್ ಆತ್ಮಹತ್ಯೆಗೆ ಯತ್ನಿಸಿದ್ದರು. ಅವರು ಗ್ರಂಥಾಲಯ ಮೇಲ್ವಿಚಾರಕರು. ಈಗಾಗಲೇ ರಾಜ್ಯದಲ್ಲಿ ಹಲವಾರು ಮಂದಿ ಆತ್ಮಹತ್ಯೆಗೆ ಶರಣಾಗಿದ್ದಾರೆ’ ಎಂದು ಸತ್ಯನಾರಾಯಣ ರಾವ್ ಹೇಳಿದರು.

ಗ್ರಾಮ ಪಂಚಾಯಿತಿ ಗ್ರಂಥಾಲಯ ಮೇಲ್ವಿಚಾರಕರಿಗೆ ಕನಿಷ್ಠ ವೇತನ ನೀಡುವ ನಿಟ್ಟಿನಲ್ಲಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಗ್ರಂಥಾಲಯ ಇಲಾಖೆ ನಿರ್ದೇಶಕ ಸತೀಶ್‌ಕುಮಾರ್‌ ಎಸ್‌.ಹೊಸಮನಿ ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)