ಸೋಮವಾರ, ಡಿಸೆಂಬರ್ 5, 2022
19 °C
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ‘ನೀನೊಲಿದ ಬದುಕು’ ಪುಸ್ತಕ ಬಿಡುಗಡೆ

ತಾಳ್ಮೆ ಇದ್ದರೆ ಬದುಕು ಸುಂದರ: ಬಸವರಾಜ ಬೊಮ್ಮಾಯಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಮನುಷ್ಯನಿಗೆ ಯಾವ ಯಾವ ಹಂತದಲ್ಲಿ ಏನೇನು ಕೊಡಬೇಕೋ ಅದನ್ನು ಬದುಕು ನೀಡುತ್ತದೆ. ಆದರೆ, ಅದಕ್ಕೆ ತಾಳ್ಮೆ ಇರಬೇಕು. ಎಂದೂ ಮನುಷ್ಯ ನಿರಾಶೆಯಾಗಬಾರದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ನಿವೃತ್ತ ಹಿರಿಯ ಐಎಎಸ್ ಅಧಿಕಾರಿ ಹಾಗೂ ಸಾಹಿತಿ ಡಾ. ಸಿ.ಸೋಮಶೇಖರ್ ಅವರ ಆತ್ಮಕಥೆ ‘ನೀನೊಲಿದ ಬದುಕು‘ ಕೃತಿಯನ್ನು ಶುಕ್ರವಾರ ಬಿಡುಗಡೆ ಮಾಡಿ ಅವರು ಮಾತನಾಡಿದರು.

‘ಯಾರಿಗೆ ತಾಳ್ಮೆ ಇರುತ್ತದೆ ಅವರ ಬದುಕು ಸುಂದರವಾಗಿರುತ್ತದೆ. ತಾಳ್ಮೆ ಇರದ ಮನುಷ್ಯ ಸಮಾಧಾನವಾಗಿರಲು ಸಾಧ್ಯವಿಲ್ಲ. ನಾನು ಎಂಬುದನ್ನು ಮರೆತಾಗ, ನಾವು ಎಂಬ ಭಾವ ಬಂದಾಗ ಎಲ್ಲರ ಬದುಕಿನಲ್ಲಿ ಒಲವು, ಪ್ರೀತಿ ವಿಶ್ವಾಸ ಸಿಗುತ್ತದೆ’ ಎಂದರು.

‘ಅಧಿಕಾರಿಗಳು, ಸಾಹಿತಿಗಳು, ಸ್ವಾಮೀಜಿಗಳು ಎಲ್ಲರಲ್ಲೂ ನಮ್ಮವ ಎನ್ನುವ ಭಾವವನ್ನು ಸೋಮಶೇಖರ್‌ ಹೊಂದಿದ್ದಾರೆ. ಅವರಲ್ಲಿ ಎಂದಿಗೂ ಸಕಾರಾತ್ಮಕ ಚೈತನ್ಯ ಇರುತ್ತದೆ. ಕರ್ನಾಟಕಕ್ಕೆ, ಕನ್ನಡಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಅವರ ಕ್ರಿಯಾಶೀಲತೆ ಮುಂದುವರಿಯಲಿ. ಅವರು ಸದಾಕಾಲ ನಗುತ್ತಾ ಇರಬೇಕು, ನಗಿಸುತ್ತಾ ಇರಬೇಕು’ ಎಂದು ಆಶಿಸಿದರು.

‘ಸೋಮಶೇಖರ್‌ ಅವರು ಮೊದಲು ಸಾಹಿತಿ, ಆಮೇಲೆ ಅಧಿಕಾರಿ; ಅವರನ್ನು ಸಾಹಿತ್ಯಾಧಿಕಾರಿ ಎನ್ನಬಹುದು. ಅವರು ಇಷ್ಟು ಬೇಗ ಆತ್ಮಕಥೆ ಬರೆಯಬಾರದಿತ್ತು. ಅವರ ಪ್ರೇರಣೆ ಇನ್ನಷ್ಟು ಬಹಳ ಇದೆ. ಬಹಳಷ್ಟು ಜನ ಇನ್ನೇನು ಹೋಗಬೇಕು ಎನ್ನುವ ಹಂತದಲ್ಲಿ ಆತ್ಮಕಥನ ಬರೆಯುತ್ತಾರೆ. ಬಹಳ ಸಂದರ್ಭದಲ್ಲಿ ಆತ್ಮಕಥೆಗಳಲ್ಲಿ ಅವರು ಬರೆದಿದ್ದಕ್ಕಿಂತ ಮುಚ್ಚಿಟ್ಟಿದ್ದೇ ಹೆಚ್ಚಾಗಿರುತ್ತದೆ. ಸೋಮಶೇಖರ್‌ ಅವರು ಇತರೆ ರಂಗದಲ್ಲಿ ಕೆಲಸ ಮಾಡಿರುವ ಬಗ್ಗೆಯೂ ಬರೆಯಬೇಕು’ ಎಂದರು.

ಬಸವರಾಜ ಬೊಮ್ಮಾಯಿ, ಸಚಿವ ಸೋಮಣ್ಣ ಅವರು ಸೋಮಶೇಖರ್‌ ಅವರೊಂದಿಗೆ ಸ್ಥಾಪಿಸಿದ ಬಸವ ವೇದಿಕೆ ಸೇರಿ ಹಲವು ಪ್ರಸಂಗಗಳನ್ನು ಹಂಚಿಕೊಂಡರು.

ತುಮಕೂರಿನ ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ, ಮೈಸೂರಿನ ಸುತ್ತೂರು ಮಠದ ಶಿವರಾತ್ರಿ ದೇಶಿ ಕೇಂದ್ರ ಸ್ವಾಮೀಜಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಚಂದ್ರಶೇಖರ ಕಂಬಾರ, ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನೀಲ್ ಕುಮಾರ್‌, ಸುಪ್ರೀಂಕೋರ್ಟ್‌ ನಿವೃತ್ತ ಮುಖ್ಯ ನ್ಯಾಯಮೂರ್ತಿ ಶಿವ
ರಾಜ ಪಾಟೀಲ್‌, ಸಪ್ನಾ ಬುಕ್‌ ಹೌಸ್‌ ಮಾಲೀಕ ನಿತಿನ್‌ ಷಾ, ಸಾಹಿತಿ ಮಲ್ಲೇ
ಪುರಂ ಜಿ. ವೆಂಕಟೇಶ ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು