ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Bangalore Lit Fest | ಅವನತಿಯತ್ತ ಸಾಗುತ್ತಿವೆ ಸಣ್ಣ ಭಾಷೆಗಳು: ತಜ್ಞರ ಕಳವಳ

ಬೆಂಗಳೂರು ಸಾಹಿತ್ಯ ಉತ್ಸವದಲ್ಲಿ ಸರ್ಕಾರದ ನಡೆಯ ಬಗ್ಗೆ ಭಾಷಾ ತಜ್ಞರ ಕಳವಳ
Last Updated 4 ಡಿಸೆಂಬರ್ 2022, 1:07 IST
ಅಕ್ಷರ ಗಾತ್ರ

ಬೆಂಗಳೂರು: ‘ಭಾಷಾ ರಾಜಕಾರಣದೇಶದಲ್ಲಿ ಗಂಭೀರ ಸ್ವರೂಪ ಪಡೆದಿದೆ. ‘ಹಿಂದಿ ಪಡಾವೋ’ ಎಂದು ಹೇಳುವ ಮೂಲಕ ಪ್ರಬಲ ಭಾಷೆಗಳನ್ನು ಪ್ರೋತ್ಸಾಹಿಸುತ್ತಿರುವ ಸರ್ಕಾರಗಳು, ಸಣ್ಣ ಭಾಷೆಗಳನ್ನು ವಿನಾಶದತ್ತ ನೂಕುತ್ತಿವೆ’ ಎಂದು ಲೇಖಕ ಪುರುಷೋತ್ತಮ ಬಿಳಿಮಲೆ ಕಳವಳ ವ್ಯಕ್ತಪಡಿಸಿದರು.

ಬೆಂಗಳೂರು ಸಾಹಿತ್ಯ ಉತ್ಸವದ 11ನೇ ಆವೃತ್ತಿಯ ಮೊದಲ ದಿನವಾದ ಶನಿವಾರ ‘ಸಣ್ಣ ಭಾಷೆಗಳ ಸಬಲೀಕರಣ’ ಗೋಷ್ಠಿಯಲ್ಲಿ ಭಾಗವಹಿಸಿ, ಮಾತನಾಡಿದರು. ‘ಭಾರತದ ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿ ಇರುವ 22ಭಾಷೆಗಳಲ್ಲಿ 18 ಭಾಷೆಗಳು ಉತ್ತರ ಭಾರತದ್ದಾಗಿವೆ.ದಕ್ಷಿಣ ಭಾರತದ 4 ಭಾಷೆಗಳಿಗೆ ಮಾತ್ರ ಸ್ಥಾನ ಸಿಕ್ಕಿದೆ. ಇದೊಂದು ಅಪಾಯಕಾರಿಯಾದ ಪ್ರಾದೇಶಿಕ ಅಸಮತೋಲನವಾಗಿದೆ.ತುಳು, ಕೊಡವದಂತಹ ನೂರಾರು ಸಣ್ಣ ಭಾಷೆಗಳ ಮುಂದೆ ಇಂದು ಹಲವಾರು ಸವಾಲುಗಳಿವೆ’ ಎಂದು ಹೇಳಿದರು.

‘2011ರ ಜನಗಣತಿಯ ಪ್ರಕಾರ ಭಾರತದಲ್ಲಿ 19,569 ಮಾತೃಭಾಷೆಗಳಿವೆ. 99 ಭಾಷೆಗಳು ಸಂವಿಧಾನದ ಎಂಟನೇ ಪರಿಚ್ಛೇದ ಸೇರಲು ಹೋರಾಟ ನಡೆಸುತ್ತಿವೆ. ಆದರೆ, ಸರ್ಕಾರಗಳು ಭಾಷಾ ಬಲವರ್ಧನೆಯ ಬಗ್ಗೆ ಆಸಕ್ತಿ ಹೊಂದಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಅರೆಭಾಷೆಯ ಬಗ್ಗೆ ಮಾತನಾಡಿದ ಸ್ಮಿತಾ ಅಮೃತರಾಜ್, ‘ಅರೆ ಭಾಷೆಯು ಕನ್ನಡದ ಉಪ ಭಾಷೆಯಾಗಿದೆ. ಕೊಡಗು ಮತ್ತು ದಕ್ಷಿಣ ಕನ್ನಡದಲ್ಲಿ ಗೌಡ ಸಮುದಾಯದವರು ಈ ಭಾಷೆಯಲ್ಲಿ ಮಾತನಾಡುತ್ತಾರೆ. ಈ ಭಾಷೆ ಸಾಂಸ್ಕೃತಿಕವಾಗಿ ಸಂಪದ್ಭರಿತವಾಗಿದೆ. 3ರಿಂದ 4 ಲಕ್ಷ ಮಂದಿ ಅರೆಭಾಷೆಯನ್ನು ಬಳಸುತ್ತಾರೆ. ಆದರೆ, ಈ ಭಾಷೆ ಸಾಹಿತ್ಯಿಕವಾಗಿ ಮುಂದುವರೆದಿರಲಿಲ್ಲ. 10 ವರ್ಷದ ಹಿಂದೆ ಅಕಾಡೆಮಿಯ ಮಾನ್ಯತೆ ಸಿಕ್ಕ ಬಳಿಕ ಭಾಷೆಯು ಕಲೆಯ ಮೂಲಕ ಅಭಿವ್ಯಕ್ತವಾಯಿತು’ ಎಂದು ಹೇಳಿದರು.

ಬ್ಯಾರಿಗಳು ತುಳುವರು:ಬ್ಯಾರಿ ಭಾಷೆಯ ಬಗ್ಗೆ ಮಾತನಾಡಿದಮುಹಮ್ಮದ್ ಕುಳಾಯಿ, ‘ಈ ಭಾಷೆಯನ್ನು 25 ಲಕ್ಷ ಮಂದಿ ಮಾತನಾಡುತ್ತಾರೆ.ಬ್ಯಾರಿ ಎಂಬ ಪದವು ತುಳುವಿನ ಬ್ಯಾರ ಎಂಬ ಶಬ್ದದಿಂದ ಉದ್ಭವಗೊಂಡಿದೆ. ಈ ಭಾಷೆಯಲ್ಲಿ ತಮಿಳು, ಅರೇಬಿಕ್, ಪರ್ಷಿಯನ್, ತುಳು,ಮಲಯಾಳಂ, ಕನ್ನಡ ಸೇರಿ ವಿವಿಧ ಭಾಷೆಗಳ ಪದಗಳಿವೆ. ಆದ್ದರಿಂದ ಇದೊಂದು ವಿಶೇಷವಾದ ಭಾಷೆಯಾಗಿದೆ. ತುಳು ಸಮುದಾಯದ ಎಲ್ಲ ಆಚಾರಣೆಗಳು ಬ್ಯಾರಿಗಳಲ್ಲಿ ಇವೆ. ಹಾಗಾಗಿ, ಬ್ಯಾರಿಗಳೂ ತುಳುವರು’ ಎಂದರು.

ಕೊಂಕಣಿ ಭಾಷೆಯ ಕವಿ ಮೆಲ್ವಿನ್ ರೊಡ್ರಿಗಸ್‌ ಹಾಗೂ ತುಳು ಭಾಷೆಯ ಕವಿ ಕಾತ್ಯಾಯಿನಿ ಕುಂಜಿಬೆಟ್ಟು ಅವರು ಕವಿತೆಗಳನ್ನು ವಾಚಿಸಿದರು.

‘ಸವಾಲಾದ ಭಾಷಾ ರಾಜಕೀಯ’

‘ಯಾವುದೇ ಭಾಷೆ ರಾಜ್ಯದ ಅಧಿಕೃತ ಭಾಷೆಯೆಂದು ಘೋಷಣೆಯಾದ ಬಳಿಕ ಸಹಜವಾಗಿ ಎಂಟನೇ ಪರಿಚ್ಛೇದಕ್ಕೆ ಸೇರುತ್ತದೆ. ಆದರೆ,2003ರಲ್ಲಿ ಭಾರತದ ಸಂವಿಧಾನದಲ್ಲಿ 92ನೇ ಬದಲಾವಣೆ ಮಾಡಿ, ಯಾವುದೇ ರಾಜ್ಯದ ಅಧಿಕೃತ ಭಾಷೆಗಳಲ್ಲದ ಬೋಡೋ, ಡೋಗ್ರಿ, ಸಂತಾಲಿ ಮತ್ತು ಮೈಥಿಲಿ ಭಾಷೆಯನ್ನು ಸೇರಿಸಲಾಯಿತು. ಇದು ಭಾಷಾ ರಾಜಕೀಯಕ್ಕೆ ಉತ್ತಮ ಉದಾಹರಣೆ’ ಎಂದು ಪುರುಷೋತ್ತಮ ಬಿಳಿಮಲೆ ಹೇಳಿದರು.

‘ಸಣ್ಣ ಭಾಷೆಗಳ ಅಭಿವೃದ್ಧಿಯ ಕುರಿತು ರಾಜ್ಯ ಸರ್ಕಾರವಾಗಲೀ, ಕೇಂದ್ರ ಸರ್ಕಾರವಾಗಲೀ ಗಂಭೀರವಾಗಿ ಯೋಚಿಸುತ್ತಿಲ್ಲ.2001ರ ಜನಗಣತಿ ಪ್ರಕಾರ 1.66 ಲಕ್ಷ ಮಂದಿ ಕೊಡವ ಭಾಷೆಯನ್ನು ಮಾತನಾಡುತ್ತಿದ್ದರು. ಆ ಸಂಖ್ಯೆ 2011ರ ಜನಗಣತಿ ಪ್ರಕಾರ 1.36 ಲಕ್ಷಕ್ಕೆ ಇಳಿಕೆಯಾಗಿದೆ. ಸಮುದಾಯ, ಭಾಷೆ ಅವನತಿಯ ಹಾದಿ ಹಿಡಿದಿರುವುದನ್ನು ಇದು ತೋರಿಸುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT