ಶುಕ್ರವಾರ, ಜುಲೈ 30, 2021
28 °C
ಮಾರತ್ತಹಳ್ಳಿಯಲ್ಲಿ ದುರ್ಘಟನೆ | ಅಗ್ನಿಶಾಮಕ ದಳದ ಸಿಬ್ಬಂದಿ, ಪೊಲೀಸರಿಂದ ಹುಡುಕಾಟ

ಬೆಳ್ಳಂದೂರು ಬಳಿಯ ರಾಜಕಾಲುವೆಯಲ್ಲಿ ಕೊಚ್ಚಿ ಹೋದ ಬಾಲಕಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಬೆಂಗಳೂರು: ಬೆಳ್ಳಂದೂರು ಬಳಿಯ ರಾಜಕಾಲುವೆಯಲ್ಲಿ ಮೊನಾಲಿಕಾ ಎಂಬ ಆರು ವರ್ಷದ ಬಾಲಕಿ ಕೊಚ್ಚಿ ಹೋಗಿದ್ದು, ಆಕೆ ಪತ್ತೆಗಾಗಿ ಕಾರ್ಯಾಚರಣೆ ನಡೆಸಲಾಗುತ್ತಿದೆ.

ಅಸ್ಸಾಂನ ನಿತ್ಯಾನಂದ ದಂಪತಿ ಮಗಳಾದ ಮೊನಾಲಿಕಾ, ಶುಕ್ರವಾರ ಮಧ್ಯಾಹ್ನ ರಾಜಕಾಲುವೆ ಬಳಿ ಆಟವಾಡುತ್ತಿದ್ದಳು. ಅದೇ ವೇಳೆ ಆಯತಪ್ಪಿ ರಾಜಕಾಲುವೆಯೊಳಗೆ ಬಿದ್ದು ನೀರಿನೊಂದಿಗೆ ಕೊಚ್ಚಿ ಹೋಗಿದ್ದಾಳೆ.

ಅದನ್ನು ಗಮನಿಸಿದ್ದ ಸ್ಥಳೀಯರು, ಮಾರತ್ತಹಳ್ಳಿ ಠಾಣೆಗೆ ಮಾಹಿತಿ ನೀಡಿದ್ದರು. ಅಗ್ನಿಶಾಮಕ ದಳದ ಸಿಬ್ಬಂದಿ ಜೊತೆ ಸ್ಥಳಕ್ಕೆ ಬಂದ ಪೊಲೀಸರು, ಬಾಲಕಿ ಪತ್ತೆಗಾಗಿ ಕಾರ್ಯಾಚರಣೆ ಆರಂಭಿಸಿದ್ದರು. ರಾತ್ರಿ 7 ಗಂಟೆಯಾದರೂ ಬಾಲಕಿ ಪತ್ತೆಯಾಗಲಿಲ್ಲ.

ಕತ್ತಲಾಗಿದ್ದರಿಂದ ಕಾರ್ಯಚರಣೆ ಸ್ಥಗಿತಗೊಳಿಸಲಾಗಿದ್ದು, ಶನಿವಾರ ಬೆಳಿಗ್ಗೆ ಪುನಃ ಕಾರ್ಯಾಚರಣೆ ಆರಂಭಿಸುವುದಾಗಿ ಪೊಲೀಸರು ಹೇಳಿದ್ದಾರೆ.

ಕಸ, ಹೂಳು ತುಂಬಿರುವ ಕಾಲುವೆ; ಅಪಾರ್ಟ್‌ಮೆಂಟ್‌ ಸಮುಚ್ಚಯವೊಂದರ ಬಳಿ ರಾಜಕಾಲುವೆ ಇದ್ದು, ಕಸ ಹಾಗೂ ಹೂಳು ತುಂಬಿಕೊಂಡಿದೆ.

ರಾಜಕಾಲುವೆ ದಡಕ್ಕೆ ಸಮೀಪದಲ್ಲೇ ಕಾರ್ಮಿಕರು ಶೆಡ್‌ ನಿರ್ಮಿಸಿಕೊಂಡು ವಾಸವಿದ್ದಾರೆ. ರಾಜಕಾಲುವೆಗೆ ಸೂಕ್ತ ತಡೆಗೋಡೆ ಇರಲಿಲ್ಲ. ತಾತ್ಕಾಲಿಕವಾಗಿ ತಂತಿ ಬೇಲಿ ಹಾಕಲಾಗಿತ್ತು. ಬೇಲಿಯನ್ನು ಕೆಲವೆಡೆ ಕಿತ್ತುಹಾಕಿದ್ದ ಕಾರ್ಮಿಕರು, ರಾಜಕಾಲುವೆ ದಡದಲ್ಲಿ ಓಡಾಡುತ್ತಿದ್ದರು. ಮಕ್ಕಳು ಸಹ ಆಟವಾಡುತ್ತಿದ್ದರು.

‘ರಾಜಕಾಲುವೆ ಬಳಿ ಬಾಲಕಿ ಆಟವಾಡುತ್ತಿದ್ದ ಸಂಗತಿ ಪೋಷಕರಿಗೂ ಗೊತ್ತಿತ್ತು. ಬಾಲಕಿ ಕಾಲುವೆಗೆ ಬೀಳುತ್ತಿದ್ದಂತೆ ಓಡಿಬಂದಿದ್ದ ಪೋಷಕರು, ಮಗಳಿಗಾಗಿ ಹುಡುಕಾಟ ನಡೆಸಿದರೂ ಪ್ರಯೋಜನವಾಗಲಿಲ್ಲ’ ಎಂದು ಪೊಲೀಸರು ತಿಳಿಸಿದರು.

‘ಗುರುವಾರ ರಾತ್ರಿ ಜೋರು ಮಳೆ ಆಗಿದ್ದರಿಂದ ಕಾಲುವೆಯಲ್ಲಿ 18 ಅಡಿಯಷ್ಟು ನೀರು ಹರಿಯುತ್ತಿದೆ. ಕಸ ಹಾಗೂ ಹೂಳು ಸಹ ತುಂಬಿಕೊಂಡಿದೆ. ಹೀಗಾಗಿ, ಕಾಲುವೆಗೆ ಬಿದ್ದ ಕೂಡಲೇ ಬಾಲಕಿ ನೀರಿನೊಂದಿಗೆ ಕೊಚ್ಚಿ ಹೋಗಿರುವ ಸಾಧ್ಯತೆ ಇದೆ’ ಎಂದೂ ತಿಳಿಸಿದರು.

‘ಬಾಲಕಿಯ ಪೋಷಕರು, ಕಟ್ಟಡ ನಿರ್ಮಾಣ ಕಾರ್ಮಿಕರು. ಕೊರೊನಾ ಸೋಂಕು ಹೆಚ್ಚಾಗಿದ್ದರಿಂದ ಬಹುತೇಕ ಕಾರ್ಮಿಕರು ಈಗಾಗಲೇ ಊರಿಗೆ ಹೋಗಿದ್ದಾರೆ. ಆದರೆ, ಇವರು ಹೋಗಿರಲಿಲ್ಲ. ನಗರದಲ್ಲೇ ಉಳಿದುಕೊಂಡಿದ್ದರು’ ಎಂದು ಪೊಲೀಸರು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು