ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಗತ್ಯ ಓಡಾಟ: 1,640 ವಾಹನ ಜಪ್ತಿ

ರೈಲು ನಿಲ್ದಾಣ ಭರ್ತಿ: ಆಹಾರ ಹಾಗೂ ನೀರಿಗಾಗಿ ಊರಿಗೆ ಹೊರಟವರ ಪರದಾಟ
Last Updated 1 ಮೇ 2021, 22:04 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಕರ್ಫ್ಯೂ ಜಾರಿಯಲ್ಲಿದ್ದರೂ ಅಗತ್ಯ ಸೇವೆಗಳ ನೆಪದಲ್ಲಿ ಜನರ ಓಡಾಟ ಮುಂದುವರಿದಿದ್ದು, ಒಂದೇ ದಿನದಲ್ಲಿ ಇಂಥವರ 1,640 ವಾಹನಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

‘ಶುಕ್ರವಾರ ಬೆಳಿಗ್ಗೆಯಿಂದ ಶನಿವಾರ ಬೆಳಿಗ್ಗೆವರೆಗೆ ನಗರದೆಲ್ಲೆಡೆ ಬಿಗಿ ಭದ್ರತೆ ಇತ್ತು. ಈ ಸಂದರ್ಭದಲ್ಲಿ 1,479 ದ್ವಿಚಕ್ರ ವಾಹನ, 91 ಆಟೊ ಹಾಗೂ 70 ಕಾರುಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಜಪ್ತಿ ಮಾಡಲಾದ ವಾಹನಗಳನ್ನು ನಿಗದಿತ ಸ್ಥಳಗಳಲ್ಲಿ ನಿಲ್ಲಿಸಲಾಗಿದೆ. ಮಾಲೀಕರು ನ್ಯಾಯಾಲಯದ ಮೂಲಕ ವಾಹನಗಳನ್ನು ಬಿಡಿಸಿಕೊಳ್ಳಬೇಕಾಗುತ್ತದೆ’ ಎಂದೂ ತಿಳಿಸಿದರು.

ರೈಲು ನಿಲ್ದಾಣ ಭರ್ತಿ: ನಗರದ ಮೆಜೆಸ್ಟಿಕ್ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹಾಗೂ ಯಶವಂತಪುರ ರೈಲು ನಿಲ್ದಾಣಗಳಲ್ಲಿ ಶನಿವಾರ ಜನಸಂದಣಿ ಇತ್ತು. ನಿಲ್ದಾಣದ ಹೊರ ಭಾಗ ಹಾಗೂ ಒಳಭಾಗ ಪ್ರಯಾಣಿಕರಿಂದ ಭರ್ತಿ ಆಗಿತ್ತು.

ಹೊರ ಜಿಲ್ಲೆ ಹಾಗೂ ಹೊರ ರಾಜ್ಯಕ್ಕೆ ಹೊರಟಿದ್ದ ಜನ, ಬೆಳಿಗ್ಗೆಯೇ ನಿಲ್ದಾಣಕ್ಕೆ ಬಂದಿದ್ದರು. ಊಟ, ಆಹಾರ ಹಾಗೂ ನೀರಿಗಾಗಿ ಪ್ರಯಾಣಿಕರು ಪರದಾಡಿದರು.

‘ರಾತ್ರಿ ರೈಲಿನಲ್ಲಿ ಪ್ರಯಾಣಿಸಲು ಟಿಕೆಟ್ ಕಾಯ್ದಿರಿಸಲಾಗಿದೆ. ಬೆಳಿಗ್ಗೆ 10ರ ನಂತರ ಪೊಲೀಸರು ರಸ್ತೆಯಲ್ಲಿ ಓಡಾಡಲು ಬಿಡುವುದಿಲ್ಲ. ಆಟೊ ಹಾಗೂ ಕ್ಯಾಬ್‌ಗಳು ಸಿಗುವುದಿಲ್ಲ. ಹೀಗಾಗಿ, ಬೆಳಿಗ್ಗೆ 10 ಗಂಟೆ ಒಳಗೆಯೇ ನಿಲ್ದಾಣಕ್ಕೆ ಬಂದಿದ್ದೇವೆ’ ಎಂದು ಉತ್ತರ ಪ್ರದೇಶದ ಕಾರ್ಮಿಕ ಬಿಜು ಹೇಳಿದರು.

‘ಸ್ನೇಹಿತರೆಲ್ಲರೂ ಸೇರಿ ಕೆಲಸಕ್ಕಾಗಿ ಬೆಂಗಳೂರಿಗೆ ಬಂದಿದ್ದೆವು. ಕರ್ಫ್ಯೂನಿಂದಾಗಿ ಕೆಲಸ ಹೋಗಿದ್ದು, ಹೀಗಾಗಿ ವಾಪಸು ಹೊರಟಿದ್ದೇವೆ. ಕರ್ಫ್ಯೂ ತೆರುವಾದ ನಂತರ ಪುನಃ ಬೆಂಗಳೂರಿಗೆ ಬರುತ್ತೇವೆ’ ಎಂದೂ ತಿಳಿಸಿದರು.

ಉದ್ಯಾನದ ಎದುರೇ ಮಾರುಕಟ್ಟೆ: ಬಸವನಗುಡಿ, ರಾಜಾಜಿನಗರ, ವಿಜಯನಗರ ಹಾಗೂ ಹಲವೆಡೆ ಮಾರುಕಟ್ಟೆಗಳನ್ನು ಪೊಲೀಸರು ಮುಂಜಾಗ್ರತಾ ಕ್ರಮವಾಗಿ ಬಂದ್ ಮಾಡಿಸಿದ್ದಾರೆ. ಹೀಗಾಗಿ, ಅದೇ ಪ್ರದೇಶಗಳ ಉದ್ಯಾನ ಎದುರೇ ವ್ಯಾಪಾರಿಗಳು ತರಕಾರಿ ಸೇರಿ ಅಗತ್ಯ ವಸ್ತುಗಳನ್ನು ಮಾರುತ್ತಿದ್ದಾರೆ.

ಜನರು ತಂಡೋಪತಂಡವಾಗಿ ಉದ್ಯಾನ ಬಳಿ ಬಂದು ಅಗತ್ಯ ವಸ್ತುಗಳನ್ನು ಖರೀದಿಸುತ್ತಿದ್ದು, ಪರಸ್ಪರ ಅಂತರವನ್ನೂ ಕಲ್ಪಿಸುತ್ತಿಲ್ಲ. ಇದು ಸೋಂಕು ಹರಡಲು ದಾರಿ ಮಾಡಿಕೊಡುತ್ತಿದೆ.

ಕ್ಯಾಬ್, ಆಟೊ ಓಡಾಟ: ಗೂಡ್ಸ್ ಹಾಗೂ ತುರ್ತು ಸೇವೆಗಳ ವಾಹನಗಳನ್ನು ಹೊರತುಪಡಿಸಿ ಎಲ್ಲ ಬಗೆಯ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ. ಆದರೆ, ಆಟೊ ಹಾಗೂ ಕ್ಯಾಬ್‌ಗಳು ನಗರದಲ್ಲಿ ನಿರಂತರವಾಗಿ ಸಂಚರಿಸುತ್ತಿವೆ.

ನಗರದ ಪ್ರತಿಯೊಂದು ರಸ್ತೆಯನ್ನೂ ಪೊಲೀಸರು ಬ್ಯಾರಿಕೇಡ್ ಹಾಕಿ ಕಾವಲು ಕಾಯುತ್ತಿದ್ದಾರೆ. ಆಟೊ ಹಾಗೂ ಕ್ಯಾಬ್‌ಗಳನ್ನು ತಡೆದು ಪರಿಶೀಲನೆ ನಡೆಸುತ್ತಿದ್ದಾರೆ. ಇಂಥ ಸಂದರ್ಭದಲ್ಲೇ ವಾಗ್ವಾದಗಳೂ ನಡೆಯುತ್ತಿದ್ದು, ನಿಯಮ ಉಲ್ಲಂಘಿಸುವವರ ಆಟೊ ಹಾಗೂ ಕ್ಯಾಬ್‌ಗಳನ್ನು ಪೊಲೀಸರು ಜಪ್ತಿ ಮಾಡುತ್ತಿದ್ದಾರೆ.

‘ವಿಮಾನ ಹಾಗೂ ರೈಲು ಪ್ರಯಾಣಿಕರಿಗೆ ಆಟೊ–ಕ್ಯಾಬ್ ಬಳಸಲು ಅನುಮತಿ ಇದೆ. ಅಷ್ಟಾದರೂ ಪೊಲೀಸರು ನಮ್ಮನ್ನು ತಡೆದು ದಂಡ ಹಾಕುತ್ತಿದ್ದಾರೆ’ ಎಂದು ಚಾಲಕರು ದೂರುತ್ತಿದ್ದಾರೆ.

ಪೊಲೀಸರು, ‘ಅನುಮತಿಯನ್ನೂ ದುರುಪಯೋಗಪಡಿಸಿಕೊಂಡು ಆಟೊ ಹಾಗೂ ಕ್ಯಾಬ್‌ಗಳನ್ನು ಓಡಿಸಲಾಗುತ್ತಿದೆ. ಸೂಕ್ತ ದಾಖಲೆ ಇಲ್ಲದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದರು.

ಕೆ.ಆರ್‌. ಮಾರುಕಟ್ಟೆಯಲ್ಲಿ ಡಿಸಿಪಿ ಸಂಚಾರ
ನಗರದ ಕೆ.ಆರ್.ಮಾರುಕಟ್ಟೆಯಲ್ಲಿ ಬೆಳಿಗ್ಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುತ್ತಿದ್ದಾರೆ. ಈ ಸ್ಥಳದಲ್ಲಿ ನಿಯಮ ಉಲ್ಲಂಘನೆ ಹೆಚ್ಚಿದ್ದು, ಇದೇ ಕಾರಣಕ್ಕೆ ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಪಾಟೀಲ ಶನಿವಾರ ಮಾರುಕಟ್ಟೆ ಸುತ್ತಿದರು.

ಎಸಿಪಿ ಹಾಗೂ ಇನ್‌ಸ್ಪೆಕ್ಟರ್ ಜೊತೆ ಮಾರುಕಟ್ಟೆಯಲ್ಲಿ ಸಂಚರಿಸಿದ ಡಿಸಿಪಿ, ಕರ್ಫ್ಯೂ ನಿಯಮಗಳನ್ನು ಪಾಲಿಸುವಂತೆ ವ್ಯಾಪಾರಿಗಳು ಹಾಗೂ ಜನರಿಗೆ ಸೂಚಿಸಿದರು. ಮಾಸ್ಕ್ ಧರಿಸದ ಹಾಗೂ ಅಂತರ ಕಾಯ್ದುಕೊಳ್ಳದವರವನ್ನು ತರಾಟೆಗೆ ತೆಗೆದುಕೊಂಡರು. ಡಿಸಿಪಿ ಭೇಟಿಯಿಂದಾಗಿ ಮಾರುಕಟ್ಟೆಯಲ್ಲಿ ವ್ಯಾಪಾರಿಗಳು ಪರಸ್ಪರ ಅಂತರ ಕಾಯ್ದುಕೊಂಡಿದ್ದು ಕಂಡುಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT