ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾರಿಗೆ ನಿಗಮ ಖಾಸಗೀಕರಣ: ಕೇಂದ್ರ ಸರ್ಕಾರದ ಆದೇಶ, ಧ್ವನಿ ಎತ್ತದ ರಾಜ್ಯ ಸರ್ಕಾರ

Published 10 ಏಪ್ರಿಲ್ 2024, 23:30 IST
Last Updated 10 ಏಪ್ರಿಲ್ 2024, 23:30 IST
ಅಕ್ಷರ ಗಾತ್ರ

ಬೆಂಗಳೂರು: ಪರಿಸರ ಮಾಲಿನ್ಯ ಕಡಿಮೆ ಮಾಡಲು ಎಲೆಕ್ಟ್ರಿಕ್‌ ಬಸ್‌ಗಳನ್ನು ಹೆಚ್ಚಿಸುವ ನೆಪದಲ್ಲಿ ಸಾರಿಗೆ ನಿಗಮಗಳಿಗೆ ಖಾಸಗಿಯವರ ಪ್ರವೇಶಕ್ಕೆ ಕೇಂದ್ರದ ಬೃಹತ್‌ ಕೈಗಾರಿಕಾ ಸಚಿವಾಲಯ ಅವಕಾಶ ಮಾಡಿಕೊಟ್ಟಿದೆ. ಇದರ ವಿರುದ್ಧ ಜನಪ್ರತಿನಿಧಿಗಳು ಗಟ್ಟಿಯಾಗಿ ಧ್ವನಿ ಎತ್ತುತ್ತಿಲ್ಲ ಎಂದು ಸಾರಿಗೆ ನಿಗಮಗಳ ನೌಕರರು, ಒಕ್ಕೂಟಗಳು ಆರೋಪಿಸುತ್ತಿವೆ. 

ಬಿಎಂಟಿಸಿಯನ್ನು ಭಾಗಶಃ ಖಾಸಗಿಯವರಿಗೆ ನೀಡಲು ಒಂದೂವರೆ ದಶಕದ ಹಿಂದೆ ಆಗಿನ ರಾಜ್ಯ ಸರ್ಕಾರದ ಸಾರಿಗೆ ಸಚಿವರು ನಿರ್ಧರಿಸಿದ್ದರು. ಆಗ ನಿಗಮಗಳ ನೌಕರರು, ವಿವಿಧ ಕಾರ್ಮಿಕ ಸಂಘಟನೆಗಳು ಪ್ರತಿಭಟನೆ ನಡೆಸಿದ್ದರಿಂದ ಖಾಸಗಿಯವರಿಗೆ ಒಪ್ಪಿಸುವ ನಿರ್ಧಾರವನ್ನು ಕೈಬಿಡಲಾಗಿತ್ತು. ಅಂದು ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರಕ್ಕೆ ಆಗದ ಕೆಲಸವನ್ನು ಈಗಿನ ಕೇಂದ್ರ ಸರ್ಕಾರ ಮಾಡಲು ಹೊರಟಿದೆ.

ನಿಗಮಕ್ಕಿಲ್ಲ ಸಬ್ಸಿಡಿ: ಎಲೆಕ್ಟ್ರಿಕ್‌ ವಾಹನಗಳನ್ನು ಪ್ರೋತ್ಸಾಹಿಸಲು ಬೃಹತ್‌ ಕೈಗಾರಿಕಾ ಸಚಿವಾಲಯವು ಫೇಮ್‌–2 ಯೋಜನೆ ರೂಪಿಸಿತ್ತು. ಈ ಯೋಜನೆಯಡಿ ಬಸ್‌ಗಳಿಗೆ ₹ 39 ಲಕ್ಷದಿಂದ ₹ 50 ಲಕ್ಷದವರೆಗೆ ಸಬ್ಸಿಡಿ ಸಿಗುತ್ತದೆ. ಆದರೆ, ಈ ಸಬ್ಸಿಡಿ ಖಾಸಗಿ ಕಂಪನಿಗಳಿಗಷ್ಟೇ ಸಿಗಲಿದ್ದು, ಸಾರಿಗೆ ನಿಗಮಗಳಿಗೆ ಇಲ್ಲ. ಮಾತ್ರವಲ್ಲ, ಉತ್ಪಾದನಾ ಕಂಪನಿಗಳಿಗೇ ಮುಂದೆ ಬಸ್‌ಗಳನ್ನೂ ನಿರ್ವಹಿಸಲು ಅವಕಾಶ ನೀಡಲಾಗಿದೆ.

ಈಗಾಗಲೇ ಬಿಎಂಟಿಸಿಯಲ್ಲಿ 513 ಇವಿ ಬಸ್‌ಗಳು ಕಾರ್ಯಾಚರಣೆ ಮಾಡುತ್ತಿವೆ. ಕೆಎಸ್‌ಆರ್‌ಟಿಸಿಗೆ 50 ಇವಿ ಬಸ್‌ಗಳು ಬಂದಿವೆ. ಮುಂದೆ 300 ಹವಾನಿಯಂತ್ರಣ ರಹಿತ, 200 ಹವಾನಿಯಂತ್ರಿತ ಬಸ್‌ಗಳು ಬರಲಿವೆ. ಈಗ ದೂರದ ಊರಿಗೆ ಎಸಿ ಬಸ್‌ಗಳಿವೆ. ಎಲೆಕ್ಟ್ರಿಕ್‌ ಬಸ್‌ಗಳು ಬಂದರೆ ಕೆಎಸ್‌ಆರ್‌ಟಿಸಿಯಿಂದಲೂ ಹತ್ತಿರದ ನಗರಗಳಿಗೆ ಎಸಿ ಬಸ್‌ಗಳು ಸಂಚರಿಸಲಿವೆ. ಈ ಬಸ್‌ಗಳಲ್ಲಿ ನಿರ್ವಾಹಕರು ಮಾತ್ರ ನಿಗಮದವರಾಗಿರುತ್ತಾರೆ. ಚಾಲಕ, ತಾಂತ್ರಿಕ ಸಿಬ್ಬಂದಿ, ವಾಹನ ನಿರ್ವಹಣೆ ಎಲ್ಲವೂ ಖಾಸಗಿ ಕಂಪನಿಯದ್ದಾಗಿರುತ್ತದೆ.

ಮುಚ್ಚಲಿವೆ ಕಾರ್ಯಾಗಾರಗಳು: ‘ಹಿಂದೆ ಟಾಟಾ, ಲೈಲೆಂಡ್ ಸೇರಿದಂತೆ ಯಾವುದೇ ಕಂಪನಿಯಿಂದ ಬಸ್‌ ಚಾಸಿಗಳನ್ನು ಮಾತ್ರ ಖರೀದಿಸಲಾಗುತ್ತಿತ್ತು. ಆಯಾ ನಿಗಮಗಳ ಕಾರ್ಯಾಗಾರದಲ್ಲಿ ಅದಕ್ಕೆ ‘ಬಾಡಿ’ ಕಟ್ಟಲಾಗುತ್ತಿತ್ತು. ಕಾರ್ಯಾಚರಣೆ ಆರಂಭವಾದ ಮೇಲೆ ಏನೇ ತೊಂದರೆ ಕಾಣಿಸಿಕೊಂಡರೂ ಈ ಕಾರ್ಯಾಗಾರಗಳಲ್ಲಿಯೇ ರಿಪೇರಿ ಮಾಡಲಾಗುತ್ತಿತ್ತು. ಆದರೆ, ಈಗ ಪೂರ್ಣ ತಯಾರಾದ ಎಲೆಕ್ಟ್ರಿಕ್‌ ಬಸ್‌ಗಳನ್ನು ಒಡಂಬಡಿಕೆಯ ಆಧಾರದಲ್ಲಿ ನಿಗಮಗಳಿಗೆ ತೆಗೆದುಕೊಳ್ಳಲಾಗುತ್ತಿದೆ. ನಿಗಮಗಳ ಕಾರ್ಯಾಗಾರಗಳಲ್ಲಿ ಈ ಬಸ್‌ಗಳಿಗೆ ಸಂಬಂಧಿಸಿದ ಯಾವುದೇ ಕೆಲಸಗಳು ನಡೆಯುವುದಿಲ್ಲ. ಇವಿ ಬಸ್‌ಗಳು ಹೆಚ್ಚಾದಂತೆ ಒಂದೊಂದೇ ಕಾರ್ಯಾಗಾರ ಮುಚ್ಚಲಿದೆ ಎಂದು ತಾಂತ್ರಿಕ ಸಿಬ್ಬಂದಿ ಆತಂಕ ವ್ಯಕ್ತಪಡಿಸಿದ್ದಾರೆ.

ಅಧಿಕ ಪಾವತಿ: ಒಂದು ಬಿಎಂಟಿಸಿ ಬಸ್‌ ಒಂದು ಕಿ.ಮೀ.ಗೆ ಸರಾಸರಿ ₹ 35ರಿಂದ ₹ 36 ಆದಾಯ ಗಳಿಸುತ್ತದೆ. ಎಲೆಕ್ಟ್ರಿಕ್‌ ಬಸ್‌ಗಳಿಗೆ ಈಗಿನ ಒಪ್ಪಂದದ ಪ್ರಕಾರ ಕಿ.ಮೀ.ಗೆ ₹ 41 ಪಾವತಿಸಬೇಕು. ಅಂದರೆ ಆದಾಯಕ್ಕಿಂತ ಕನಿಷ್ಠ ₹ 5 ಹೆಚ್ಚು ಪಾವತಿ ಮಾಡಬೇಕು. ‘ಹೀಗೆಯೇ ಮುಂದುವರಿದರೆ ನಿಗಮಗಳಲ್ಲಿ ಬಸ್‌ಗಳ ಕಾರ್ಯಾಚರಣೆ ನಷ್ಟದ ಕಾರ್ಯ ಎಂದು ಕೆಲವೇ ವರ್ಷಗಳಲ್ಲಿ ಬಿಂಬಿತವಾಗಲಿದೆ. ಖಾಸಗಿಯವರಿಗೆ ಹಸ್ತಾಂತರಿಸುವ ಕೆಲಸ ಸುಲಭವಾಗಲಿದೆ‘ ಎಂದು ಆಲ್‌ ಇಂಡಿಯಾ ರೋಡ್‌ ಟ್ರಾನ್ಸ್‌ಪೋರ್ಟ್‌ ವರ್ಕರ್ಸ್‌ ಫೆಡರೇಶನ್‌ ರಾಜ್ಯ ಸಂಚಾಲಕ ಕೆ. ಪ್ರಕಾಶ್‌ ವಿಶ್ಲೇಷಿಸುತ್ತಾರೆ.

ಖಾಸಗಿ ಕೈಗೆ ಡಿಪೊ: ಬಿಎಂಟಿಸಿಗೆ ಇವಿ ಬಸ್‌ಗಳನ್ನು ಟಾಟಾ ಮೋಟಾರ್ಸ್‌ ಕಂಪನಿ ಪೂರೈಸುತ್ತಿದೆ. ಅವರಿಗೆ ಈಗಾಗಲೇ 10 ಡಿಪೊಗಳನ್ನು ಬಿಟ್ಟು ಕೊಡಲಾಗಿದೆ. ಬಿಎಂಟಿಸಿ, ಕೆಎಸ್‌ಆರ್‌ಟಿಸಿ, ಕೆಕೆಆರ್‌ಟಿಸಿ, ಎನ್‌ಡಬ್ಲ್ಯುಆರ್‌ಟಿಸಿ ಈ ನಾಲ್ಕು ನಿಗಮಗಳು ದೇಶದಲ್ಲಿಯೇ ಉತ್ತಮ ನಿಗಮಗಳಾಗಿವೆ. ಹೀಗೆ ಖಾಸಗೀಕರಣ ಮುಂದುವರಿದರೆ ಮುಂದಿನ ದಿನಗಳಲ್ಲಿ ಉತ್ತರ ಭಾರತದ ನಿಗಮಗಳಂತೆ ದುರ್ಬಲಗೊಳ್ಳಲಿವೆ ಎಂದು ಅವರು ದೂರಿದರು.

ಒತ್ತಡ ಹೇರದ ರಾಜ್ಯ ಸರ್ಕಾರ

ವಿವಿಧ ಸಾರಿಗೆ ಒಕ್ಕೂಟಗಳು ಈ ಬಗ್ಗೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿವೆ. ಎಲೆಕ್ಟ್ರಿಕ್ ಬಸ್‌ಗಳನ್ನು ನಿಗಮಗಳೇ ಖರೀದಿ ಮಾಡಬೇಕು ಎಂದು ಒಕ್ಕೂಟಗಳ ಸದಸ್ಯರು ಒತ್ತಾಯಿಸಿದ್ದಾರೆ. ಆ ಸಂದರ್ಭದಲ್ಲಿ ‘ಖರೀದಿಗೆ ನಮಗೆ ಅವಕಾಶ ನೀಡಬೇಕು. ಸಬ್ಸಿಡಿಯನ್ನು ನಮಗೆ ಒದಗಿಸಲು ಕೇಂದ್ರ ಸರ್ಕಾರವನ್ನು ಒತ್ತಾಯಿಸಬೇಕು’ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪ್ರತಿಕ್ರಿಯಿಸಿದ್ದರು. ಇದನ್ನು ಹೊರತುಪಡಿಸಿ ಕೇಂದ್ರ ಸರ್ಕಾರದ ಆದೇಶವನ್ನು ರದ್ದುಪಡಿಸಲು ಒತ್ತಡ ಹೇರುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಿಲ್ಲ ಎಂದು ಸಾರಿಗೆ ಒಕ್ಕೂಟದ ಪದಾಧಿಕಾರಿಗಳು ದೂರಿದರು.

ಬಿಎಂಟಿಸಿಗೆ ನೀಡಲಾಗಿರುವ ಎಲೆಕ್ಟ್ರಿಕ್‌ ಬಸ್‌
ಬಿಎಂಟಿಸಿಗೆ ನೀಡಲಾಗಿರುವ ಎಲೆಕ್ಟ್ರಿಕ್‌ ಬಸ್‌
ಖಾಸಗಿಯವರಿಗಷ್ಟೇ ಬೆಂಬಲ ನೀಡಲು ಬೃಹತ್‌ ಕೈಗಾರಿಕಾ ಸಚಿವಾಲಯ ರೂಪಿಸಿರುವ ಫೇಮ್‌–2 ಯೋಜನೆ ಕಾಯ್ದೆ ರೂಪದಲ್ಲಿ ಬಂದಿರುವಂಥದ್ದಲ್ಲ. ಇಲಾಖೆಯ ಒಂದು ಆದೇಶದಿಂದ ಜಾರಿಯಾಗಿದೆ. ಹಾಗಾಗಿ ಇನ್ನೊಂದು ಆದೇಶ ಹೊರಡಿಸಿ, ಅದರಲ್ಲಿ ‘ನಿಗಮಗಳು ಖರೀದಿ ಮಾಡಿದರೂ ಸಬ್ಸಿಡಿ ನೀಡಲಾಗುವುದು’ ಎಂಬ ಒಂದು ವಾಕ್ಯ ಸೇರಿಸಿದರೂ ಸಾಕಾಗುತ್ತದೆ. ಈ ಬಗ್ಗೆ ಅಧಿಕಾರಿಗಳ ಮಟ್ಟದಲ್ಲಿ ಇಲ್ಲಿಂದ ಕೇಂದ್ರಕ್ಕೆ ಪತ್ರ ಬರೆಯಲಾಗಿದೆ. ಇದು ಸಾಕಾಗುವುದಿಲ್ಲ. ರಾಜ್ಯ ಸರ್ಕಾರವು ಇದನ್ನು ಒಂದು ಆಂದೋಲನದ ರೂಪದಲ್ಲಿ ಕೊಂಡೊಯ್ದರೆ ನಿಗಮಗಳು ನಷ್ಟದ ಕಡೆಗೆ ಹೋಗುವುದನ್ನು, ಖಾಸಗೀಕರಣಗೊಳ್ಳುವುದನ್ನು ತಪ್ಪಿಸಬಹುದು. ಅಂಥ ಇಚ್ಛಾಶಕ್ತಿಯನ್ನು ಪ್ರದರ್ಶಿಸುತ್ತಿಲ್ಲ.
-ಕೆ. ಪ್ರಕಾಶ್‌, ರಾಜ್ಯ ಸಂಚಾಲಕ, ಆಲ್‌ ಇಂಡಿಯಾ ರೋಡ್‌ ಟ್ರಾನ್ಸ್‌ಪೋರ್ಟ್‌ ವರ್ಕರ್ಸ್‌ ಫೆಡರೇಶನ್‌
ಎಲೆಕ್ಟ್ರಿಕ್‌ ಬಸ್‌ ಖರೀದಿಗೆ ನಮ್ಮ ವಿರೋಧವಿಲ್ಲ. ಆದರೆ, ಅದನ್ನು ಖಾಸಗಿಯವರಿಗೆ ವಹಿಸುವುದಕ್ಕೆ ಮಾತ್ರ ವಿರೋಧವಿದೆ. ಈ ಬಗ್ಗೆ ರಾಜ್ಯ ಸರ್ಕಾರ, ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಅಧಿಕ ಬೆಲೆಯ ಓಲ್ವೊ ಬಸ್‌ಗಳನ್ನೇ ನಮ್ಮ ಚಾಲಕರು, ನಿರ್ವಾಹಕರು, ತಾಂತ್ರಿಕ ಸಿಬ್ಬಂದಿ ನಿರ್ವಹಿಸಿದ್ದಾರೆ. ಎಲೆಕ್ಟ್ರಿಕ್‌ ಬಸ್‌ಗಳನ್ನು ನಿರ್ವಹಿಸುವುದು ಕಷ್ಟವಾಗುವುದಿಲ್ಲ. ಹಿಂದಿನ ಸರ್ಕಾರವು ಖಾಸಗಿ ಕಂಪನಿಗಳ ಜೊತೆಗೆ ಒಡಂಬಡಿಕೆ ಮಾಡಿದೆ. ಅದರ ಪ್ರಕಾರ ಬಸ್‌ಗಳು ಬರುತ್ತಲೇ ಇವೆ. ಈಗಿನ ಸರ್ಕಾರ ಒಡಂಬಡಿಕೆಯನ್ನು ಬದಲಾಯಿಸುವ ಪ್ರಯತ್ನ ಮಾಡಿಲ್ಲ. ಬಿಡದಿ, ಯಲಹಂಕ, ಶಾಂತಿನಗರ, ಹೆಣ್ಣೂರು ಸಹಿತ ನಮ್ಮ ಹಲವು ಡಿಪೊಗಳನ್ನು ಖಾಸಗಿಯವರಿಗೆ ನೀಡಲಾಗಿದೆ. ಆ ಡಿಪೊಗಳಿಗೆ ಉಚಿತ ವಿದ್ಯುತ್‌ ಸೇರಿದಂತೆ ಎಲ್ಲ ಸೌಲಭ್ಯಗಳನ್ನು ಒದಗಿಸಲಾಗಿದೆ. ಅಲ್ಲಿದ್ದ ನಮ್ಮ ಚಾಲಕರು, ತಾಂತ್ರಿಕ ಸಿಬ್ಬಂದಿಯನ್ನು ಬೇರೆಡೆಗೆ ವರ್ಗ ಮಾಡಿದ್ದಾರೆ.
-ಜಗದೀಶ ಎಚ್.ಆರ್‌., ರಾಜ್ಯಾಧ್ಯಕ್ಷ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಸಂಘ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT