ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಲೋಕಾಯುಕ್ತ ದಾಳಿ ವೇಳೆ ತಹಶೀಲ್ದಾರ್ ಕಚೇರಿಗಳ ಕಳ್ಳಾಟ ಬಯಲು

ಒಂಬತ್ತು ಕಚೇರಿಗಳಲ್ಲಿ ಲೋಕಾಯುಕ್ತ ಅಧಿಕಾರಿಗಳ ತಪಾಸಣೆ
Published 20 ಜನವರಿ 2024, 22:39 IST
Last Updated 20 ಜನವರಿ 2024, 22:39 IST
ಅಕ್ಷರ ಗಾತ್ರ

ಬೆಂಗಳೂರು: ತಹಶೀಲ್ದಾರ್‌ ಸೇರಿದಂತೆ ಕಂದಾಯ ಇಲಾಖೆಯ ತಾಲ್ಲೂಕು ಮಟ್ಟದ ಅಧಿಕಾರಿಗಳು ಕೆಲಸದ ಅವಧಿಯಲ್ಲಿ ಅನಧಿಕೃತವಾಗಿ ಹೊರ ಹೋಗುವುದು, ಆಟೋಟಗಳಲ್ಲಿ ಪಾಲ್ಗೊಂಡು, ಕೆಲಸ ಮಾಡಿಕೊಡಲು ಜನರನ್ನು ಸತಾಯಿಸುತ್ತಿರುವುದು ಲೋಕಾಯುಕ್ತ ಅಧಿಕಾರಿಗಳು ಶನಿವಾರ ನಡೆಸಿದ ದಿಢೀರ್‌ ತಪಾಸಣೆಯಲ್ಲಿ ಪತ್ತೆಯಾಗಿದೆ.

ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ತಹಶೀಲ್ದಾರ್‌ ಕಚೇರಿಗಳಲ್ಲಿ ಸಾರ್ವಜನಿಕರಿಗೆ ಸರ್ಕಾರಿ ಸೇವೆ ಒದಗಿಸಲು ಉದ್ದೇಶಪೂರ್ವಕ ವಿಳಂಬ ಮಾಡುತ್ತಿರುವುದು, ವ್ಯಾಪಕ ಭ್ರಷ್ಟಾಚಾರದಲ್ಲಿ ತೊಡಗಿರುವ ದೂರುಗಳು ಲೋಕಾಯುಕ್ತರಿಗೆ ಬಂದಿದ್ದವು. ಈ ಕುರಿತು ಲೋಕಾಯುಕ್ತ ಕಾಯ್ದೆಯಡಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿರುವ ಲೋಕಾಯುಕ್ತರು, ಎರಡೂ ಜಿಲ್ಲೆಗಳ ಒಂಬತ್ತು ತಹಶೀಲ್ದಾರ್ ಕಚೇರಿಗಳಲ್ಲಿ ದಿಢೀರ್‌ ತಪಾಸಣೆಗೆ ಆದೇಶಿಸಿದ್ದರು.

ಲೋಕಾಯುಕ್ತದ ಪೊಲೀಸ್‌ ಅಧಿಕಾರಿಗಳು ಮತ್ತು ನ್ಯಾಯಾಂಗ ಅಧಿಕಾರಿಗಳನ್ನು ಒಳಗೊಂಡ ಒಂಬತ್ತು ತಂಡಗಳು ಈ ಎಲ್ಲ ತಹಶೀಲ್ದಾರ್‌ ಕಚೇರಿಗಳ ಮೇಲೆ ಶನಿವಾರ ಏಕಕಾಲಕ್ಕೆ ದಾಳಿ ಮಾಡಿ, ಶೋಧ ನಡೆಸಿದವು. ಹಲವು ಕಚೇರಿಗಳಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಜರಾತಿ ಕಡತಕ್ಕೆ ಸಹಿ ಮಾಡಿ ಹರ ಹೋಗಿರುವುದು ಕಂಡುಬಂದಿದೆ. ಸಾರ್ವಜನಿಕರು ಕಾಯುತ್ತಾ ಕುಳಿತಿದ್ದರೂ ಕಚೇರಿಗೆ ಬಾರದೇ ಹೊರಗೆ ಅಡ್ಡಾಡುತ್ತಿದ್ದ ಹಲವು ಅಧಿಕಾರಿಗಳ ವಿವರಗಳನ್ನು ತನಿಖಾ ತಂಡಗಳು ಸಂಗ್ರಹಿಸಿವೆ.

ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ ಮತ್ತು ಯಲಹಂಕ ತಾಲ್ಲೂಕು ಕಚೇರಿಗಳಿಗೆ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ ಖುದ್ದಾಗಿ ಭೇಟಿನೀಡಿ ಕಾರ್ಯಾಚರಣೆ ಪರಿಶೀಲಿಸಿದರು. ದೊಡ್ಡಬಳ್ಳಾಪುರ ಸೇರಿದಂತೆ ಕೆಲವು ತಾಲ್ಲೂಕು ಕಚೇರಿಗಳಿಗೆ ಭೇಟಿ ನೀಡಿದ ಉಪ ಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್‌. ಫಣೀಂದ್ರ ಕಾರ್ಯಾಚರಣೆಯ ಮಾಹಿತಿ ಪಡೆದರು.

ಸಂಪರ್ಕಕ್ಕೆ ಸಿಗದ ತಹಶೀಲ್ದಾರ್‌:

‘ಬೆಂಗಳೂರು ಉತ್ತರ ತಾಲ್ಲೂಕು ಕಚೇರಿಗೆ ನಾನು ಖುದ್ದಾಗಿ ಭೇಟಿನೀಡಿ ಪರಿಶೀಲಿಸಿದೆ. ಅಲ್ಲಿನ ತಹಶೀಲ್ದಾರ್‌ ವಿಜಯಕುಮಾರ್‌ ಬೆಳಿಗ್ಗೆಯಿಂದಲೂ ಕಚೇರಿಯಲ್ಲಿ ಇರಲಿಲ್ಲ. ನಮ್ಮ ಪೊಲೀಸ್‌ ಅಧಿಕಾರಿಗಳು ಮೊಬೈಲ್‌ಗೆ ಕರೆ ಮಾಡಿದರೂ ಸ್ವೀಕರಿಸಲಿಲ್ಲ. ಕಚೇರಿಯಿಂದ ಹೊರ ಹೋಗುವ ಕುರಿತು ಅಧಿಕೃತವಾದ ಮಾಹಿತಿಯನ್ನು ದಾಖಲು ಮಾಡಿರಲಿಲ್ಲ’ ಎಂದು ಬಿ.ಎಸ್‌. ಪಾಟೀಲ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಕರ್ತವ್ಯದ ಅವಧಿಯಲ್ಲಿ ಅನಧಿಕೃತವಾಗಿ ಕಚೇರಿಯಿಂದ ಹೊರ ಹೋಗಿರುವ ಕುರಿತು ತಹಶೀಲ್ದಾರ್‌ ಅವರಿಂದ ವಿವರಣೆ ಪಡೆಯಲಾಗುವುದು. ಅಲ್ಲಿ ಕೆಲವು ಕಡತಗಳನ್ನು ವಶಕ್ಕೆ ಪಡೆದಿದ್ದು, ಆ ಬಗ್ಗೆಯೂ ವಿಚಾರಣೆ ನಡೆಸಲಾಗುವುದು ಎಂದರು.

ಕ್ರಿಕೆಟ್‌ ಆಟಕ್ಕೆ ಹಾಜರು: ಯಲಹಂಕ ತಾಲ್ಲೂಕು ಕಚೇರಿಗೆ ಲೋಕಾಯುಕ್ತರು ಭೇಟಿನೀಡಿದಾಗ ಅಲ್ಲಿನ 14 ಅಧಿಕಾರಿಗಳು, ಸಿಬ್ಬಂದಿ ಕರ್ತವ್ಯದಲ್ಲಿ ಇರಲಿಲ್ಲ. ಎಲ್ಲರೂ ಹಾಜರಾತಿ ಪುಸ್ತಕಕ್ಕೆ ಸಹಿ ಮಾಡಿ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಭಾಗವಹಿಸಲು ತೆರಳಿದ್ದರು ಎಂಬ ಮಾಹಿತಿ ತನಿಖಾ ತಂಡಕ್ಕೆ ಲಭಿಸಿದೆ.

‘ಯಲಹಂಕ ತಾಲ್ಲೂಕು ಕಚೇರಿಯಲ್ಲಿ 35ಕ್ಕೂ ಹೆಚ್ಚು ಮಂದಿ ಸಾರ್ವಜನಿಕರು ತಮ್ಮ ಕೆಲಸಗಳಿಗಾಗಿ ಕಾಯುತ್ತಿದ್ದರು. ಅಧಿಕಾರಿಗಳು ಮತ್ತು ಸಿಬ್ಬಂದಿ ಮಾತ್ರ ಅಲ್ಲಿರಲಿಲ್ಲ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಈ ರೀತಿ ಜನರನ್ನು ಸತಾಯಿಸುವವರ ವಿರುದ್ಧ ಕ್ರಮ ಜರುಗಿಸಲಾಗುವುದು’ ಎಂದು ಲೋಕಾಯುಕ್ತರು ತಿಳಿಸಿದರು.

ಇನ್ನೂ ಕೆಲವು ತಾಲ್ಲೂಕು ಕಚೇರಿಗಳಲ್ಲಿ  ಅಧಿಕಾರಿಗಳು, ಸಿಬ್ಬಂದಿ ಅನಧಿಕೃತವಾಗಿ ಕಚೇರಿಯಿಂದ ಹೊರ ಹೋಗಿರುವುದು ಪತ್ತೆಯಾಗಿದೆ. ಕೆಲವೆಡೆ ಸಾರ್ವಜನಿಕರ ಅರ್ಜಿಗಳನ್ನು ವಿಲೇವಾರಿ ಮಾಡದೆ ಸತಾಯಿಸುತ್ತಿರುವ ದೂರುಗಳು ಬಂದಿವೆ. ಕೆಲವು ದೂರುಗಳನ್ನು ಸ್ಥಳದಲ್ಲೇ ಇತ್ಯರ್ಥಪಡಿಸಲಾಗಿದೆ. ಹಲವು ಕಡತಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಲೋಕಾಯುಕ್ತದ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT