ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗೂಗಲ್‌ಪೇ, ಫೋನ್‌ಪೇ ಮೂಲಕ ಲಂಚ?

ನೆಲಮಂಗಲ: ವಿವಿಧ ಕಚೇರಿಗಳಿಂದ ವಿವರ ಕೇಳಿದ ಉಪ ಲೋಕಾಯುಕ್ತ
Published 5 ಸೆಪ್ಟೆಂಬರ್ 2024, 0:03 IST
Last Updated 5 ಸೆಪ್ಟೆಂಬರ್ 2024, 0:03 IST
ಅಕ್ಷರ ಗಾತ್ರ

ಬೆಂಗಳೂರು: ನೆಲಮಂಗಲ ನಗರಸಭೆ ಕಚೇರಿ, ತಾಲ್ಲೂಕು ಕಚೇರಿ ಮತ್ತು ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಯ ಸಿಬ್ಬಂದಿ ಗೂಗಲ್‌ಪೇ, ಫೋನ್‌ಪೇನಂತಹ ಯುಪಿಐ ಆ್ಯಪ್‌ಗಳ ಮೂಲಕ ಲಂಚ ಪಡೆಯುತ್ತಿದ್ದಾರೆಯೇ ಎಂಬುದರ ಪತ್ತೆಗೆ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಅವರು ವಿಚಾರಣೆ ಆರಂಭಿಸಿದ್ದಾರೆ.

ನೆಲಮಂಗಲದ ಹಸಿರುವಳ್ಳಿ ಡೀಮ್ಡ್‌ ಅರಣ್ಯದಲ್ಲಿ ಬುಧವಾರ ನಡೆದ ವನಮಹೋತ್ಸವದಲ್ಲಿ ಭಾಗಿಯಾಗಿದ್ದ ಅವರು, ತಾಲ್ಲೂಕಿನ ವಿವಿಧ ಕಚೇರಿ, ವಿದ್ಯಾರ್ಥಿ ನಿಲಯ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ ಸೇರಿ 14 ಸ್ಥಳಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು.

‘ನಗರಸಭೆ, ಭೂ ದಾಖಲೆಗಳ ಕಚೇರಿ ಮತ್ತು ತಾಲ್ಲೂಕು ಕಚೇರಿಗಳಲ್ಲಿ ಲಂಚ ಪಡೆಯುತ್ತಿರುವ ಬಗ್ಗೆ ದೂರು ಇತ್ತು. ಇದನ್ನು ಪರಿಶೀಲಿಸುವ ಸಲುವಾಗಿ ಸಿಬ್ಬಂದಿಯ ಫೋನ್‌ಗಳಲ್ಲಿ ಇದ್ದ ಯುಪಿಐ ಆ್ಯಪ್‌ಗಳಲ್ಲಿ ಆಗಿರುವ ಹಣ ವರ್ಗಾವಣೆಗಳನ್ನು ಪರಿಶೀಲಿಸಲಾಯಿತು. ಹಲವು ಸಿಬ್ಬಂದಿಯ ತಿಂಗಳ ವೇತನಕ್ಕಿಂತ ಮೂರು ಪಟ್ಟು ಹೆಚ್ಚು ಮೊತ್ತ ಯುಪಿಐನಲ್ಲಿ ಅನುಮಾನಾಸ್ಪದವಾಗಿ ವರ್ಗಾವಣೆ ಆಗಿರುವುದು ಪತ್ತೆಯಾಯಿತು’ ಎಂದು ನ್ಯಾಯಮೂರ್ತಿ ವೀರಪ್ಪ ಮಾಹಿತಿ ನೀಡಿದರು.

‘ಈ ಸಂಬಂಧ ಕರ್ನಾಟಕ ಲೋಕಾಯುಕ್ತ ಕಾಯ್ದೆಯಡಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆ ಎಲ್ಲ ಸಿಬ್ಬಂದಿಯ ಯುಪಿಐ ಆ್ಯಪ್‌ಗಳಲ್ಲಿ ಆಗಿರುವ ಹಣಕಾಸು ವರ್ಗಾವಣೆಯ ವಿವರ ಮತ್ತು ಆ ಹಣ ಎಲ್ಲಿಂದ ಬಂತು ಎಂಬುದರ ವಿವರಗಳನ್ನು ಒಳಗೊಂಡ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ’ ಎಂದು ಅವರು ತಿಳಿಸಿದರು.

ಬಾಲಕರ ವಿದ್ಯಾರ್ಥಿನಿಲಯ, ಮೆಟ್ರಿಕ್‌ ಪೂರ್ವ ಮತ್ತು ಮೆಟ್ರಿಕ್‌ ನಂತರದ, ಅಲ್ಪಸಂಖ್ಯಾತರ ಮೆಟ್ರಿಕ್‌ ನಂತರದ ವಿದ್ಯಾರ್ಥಿನಿಲಯಗಳಿಗೆ ಭೇಟಿ ನೀಡಿದ ಅವರು, ವಿದ್ಯಾರ್ಥಿಗಳ ಅಹವಾಲುಗಳನ್ನು ಆಲಿಸಿದರು. ನೆಲಮಂಗಲ ಸಂಚಾರ ಪೊಲೀಸ್ ಠಾಣೆಗೆ ಭೇಟಿ ನೀಡಿ ಪರಿಶೀಲಿಸಿದರು ಎಂದು ಲೋಕಾಯಕ್ತ ಮಾಹಿತಿ ನೀಡಿದೆ.

ಅವಧಿ ಮುಗಿದ ಔಷಧಗಳು...

ತಾಲ್ಲೂಕಿನ ಮಂಡಿಗೆರೆ ಆಯುಷ್ಮಾನ್‌ ಆರೋಗ್ಯ ಮಂದಿರಕ್ಕೆ ಭೇಟಿ ನೀಡಿದ್ದ ವೇಳೆ ಅಲ್ಲಿ ಅವಧಿ ಮುಗಿದ ಔಷಧಗಳು ಇರುವುದು ಪತ್ತೆಯಾಗಿದೆ. ‘ಆರೋಗ್ಯ ಮಂದಿರದಲ್ಲಿರುವ ಔಷಧಗಳ ಸಂಗ್ರಹ ಮಾಹಿತಿಯನ್ನು ಪರಿಶೀಲಿಸಲಾಯಿತು. ಆದರೆ ಕಡತದಲ್ಲಿ 2022ರ ಏಪ್ರಿಲ್‌ನಿಂದ 2023ರ ಜನವರಿವರೆಗಿನ ಮಾಹಿತಿ ಮಾತ್ರ ಇತ್ತು. ಅಲ್ಲಿದ್ದ ಸಿಬ್ಬಂದಿಯನ್ನು ಕರೆದು ಅವಧಿ ಮುಗಿದಿರುವ ಔಷಧಗಳನ್ನು ಕೂಡಲೇ ನಾಶಪಡಿಸಲು ಸೂಚಿಸಲಾಯಿತು. ಇದು ಮರುಕಳಿಸಬಾರದು ಎಂದು ಸಿಬ್ಬಂದಿಗೆ ಎಚ್ಚರಿಕೆ ನೀಡಲಾಯಿತು’ ಎಂದು ನ್ಯಾಯಮೂರ್ತಿ ಬಿ. ವೀರಪ್ಪ ಅವರು ತಿಳಿಸಿದರು. ‘ತಾಲ್ಲೂಕಿನ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಗಳನ್ನು ಉಪ ಲೋಕಾಯುಕ್ತರು ಪರಿಶೀಲಿಸಿದರು. ವಾರ್ಡ್‌ಗಳಿಗೆ ಭೇಟಿ ನೀಡಿ ರೋಗಿಗಳ ಜತೆಗೆ ಮಾತನಾಡಿದರು. ಅಲ್ಲಿನ ಅವ್ಯವಸ್ಥೆಗಳನ್ನು ಸರಿಪಡಿಸುವಂತೆ ಸಿಬ್ಬಂದಿಗೆ ಸೂಚಿಸಿದರು’ ಎಂದು ಲೋಕಾಯುಕ್ತವು ಮಾಹಿತಿ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT